ಕಲಬುರಗಿ ದಕ್ಷಿಣ ಕ್ಷೇತ್ರದ ಹಡಗಿಲಹಾರುತಿ ಗ್ರಾಮದಲ್ಲಿನ ಚರಂಡಿಗಳು ಕಸ ಮತ್ತು ಕೊಳಚೆ ನೀರಿನಿಂದ ಕೆಸರಿನ ಮಡುವಿನಂತಾಗಿದ್ದರೂ ಕೂಡ ಹಲವು ವರ್ಷಗಳಿಂದ ಚರಂಡಿಗಳ ದುರಸ್ತಿಯಾಗಿಲ್ಲ. ಚರಂಡಿಯ ಕೊಳಚೆ ನೀರು ಮಳೆಗಾಲದಲ್ಲಿ ಮನೆಗಳಿಗೆ ನುಗ್ಗುತ್ತಿದೆ. ಅಲ್ಲದೇ ಮನೆಗಳ ಮುಂದೆ ಮಡುಗಟ್ಟಿ ನಿಂತಿರುವ ಕೊಳಚೆ ನೀರಿನಿಂದ ಅಲ್ಲಿಯ ಇಡೀ ಪ್ರದೇಶ ಕೆರೆಯಂತೆ ಕಾಣುತ್ತದೆ.
“ಗ್ರಾಮದ ಈ ಭಾಗದಲ್ಲಿ ಮೊದಲು 2 ದೊಡ್ಡ ಒಳಚರಂಡಿಗಳಿದ್ದವು. ಇದೀಗ ಅವುಗಳನ್ನು ಮುಚ್ಚಿ ಹಾಕಿದ್ದಾರೆ. ಉಳಿದ ಚರಂಡಿಗಳನ್ನು ನೇರವಾಗಿ ಮಾಡದೇ ಓರೆಯಾಗಿರುವುದರಿಂದ ನೀರು ಹೋಗಲು ಸಂಪರ್ಕ ಕಡಿತಗೊಂಡಿದೆ. ಇಳಿಜಾರು ಪ್ರದೇಶದಲ್ಲಿ ದಲಿತ ಕೇರಿ ಇದೆ. ಚರಂಡಿಯ ನೀರು ಸರಾಗವಾಗಿ ಹರಿಯಲು ಸ್ಥಳಾವಕಾಶ ಇಲ್ಲದ ಕಾರಣ ದಲಿತ ಕೇರಿಯಲ್ಲಿ ನಿಲ್ಲುತ್ತದೆ. ಅಲ್ಲದೆ ಮುಖ್ಯ ರಸ್ತೆಯ ಬದಿಯಲ್ಲಿ ಒಂದು ದೊಡ್ಡ ಚರಂಡಿ ಇದ್ದು, ರಸ್ತೆ ನಿರ್ಮಾಣ ಮಾಡುವಾಗ ಅದನ್ನು ಒಡೆದು ಹಾಕಿದ್ದಾರೆ. ರಸ್ತೆ ನಿರ್ಮಾಣವಾದ ಬಳಿಕ ಒಡೆದ ಚರಂಡಿಯನ್ನು ಹಾಗೆ ಬಿಟ್ಟಿದ್ದಾರೆ. ಇದರಿಂದ ನೀರು ಮನೆಯ ಮುಂದೆ ನಿಲ್ಲುತ್ತದೆ” ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.

ಸ್ಥಳೀಯ ನಿವಾಸಿ ನಾಗಮ್ಮ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಡಿಗಲಹಾರುತಿ ಗ್ರಾಮದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ವರ್ಷವೇ ಕಳೆದಿದೆ. ಅವುಗಳು ತುಂಬಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡ ಈವರೆಗೆ ದುರಸ್ತಿ ಕಾರ್ಯ ನಡೆಸಿಲ್ಲ. ಸೂಕ್ತ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
“ನಮ್ಮ ಮನೆ ರಸ್ತೆ ಪಕ್ಕದ ತಗ್ಗು ಪ್ರದೇಶದಲ್ಲಿದೆ. ರಸ್ತೆ ಎತ್ತರಕ್ಕೆ ಇದೆ. ನಿತ್ಯವೂ ನೀರು ಸಂಗ್ರಹವಾಗಿ ಮನೆ ಮುಂದೆ ನಿಲ್ಲುತ್ತದೆ. ಮಳೆಗಾಲದಲ್ಲಂತೂ ಹಳ್ಳದ ಹಾಗೆ ನೀರು ಹರಿದು ಮನೆಗೆ ನುಗ್ಗಿ ಮನೆಯಲ್ಲಿದ್ದ ದವಸ ಧಾನ್ಯ ಹಾಳಾಗಿ ತಿಪ್ಪೆ ಪಾಲಾದವು. ರಾತ್ರಿಯೆಲ್ಲಾ ನಿದ್ದೆ ಇಲ್ಲದೆ, ಮಲಗಲು ಜಾಗವಿಲ್ಲದೆ ಪರದಾಡಿದ್ದೀವಿ. ಸಾಕಿದ ಕೋಳಿ, ಆಕಳು ನೀರಿನಲ್ಲಿ ಮುಳ್ಳುಗಿ ಸತ್ತು ಹೋಗಿವೆ. 20 ವರ್ಷದಿಂದ ಹೀಗೆ ಈ ಕೊಳಚೆ ನೀರಿನ ವಾಸನೆ ಕುಡಿಯುತ್ತ ಜೀವನ ಮಾಡುತ್ತಿದ್ದೇವೆ. ಕಾಲರಾ, ಮಲೇರಿಯಾದಂತಹ ರೋಗ ರುಜಿನಗಳು ಬಂದರೆ ಯಾರು ಹೊಣೆ?” ಎಂದು ತಮ್ಮ ಅಳಲು ತೋಡಿಕೊಂಡರು.
ಇದನ್ನೂ ಓದಿದ್ದೀರಾ? ಕಲಬುರಗಿ | ಕಾಮಗಾರಿಗಳಲ್ಲಿ ಅಕ್ರಮ; ಮೂವರು ಎಂಜಿನಿಯರ್‌ಗಳ ಅಮಾನತು
“ಅಧಿಕಾರಿಗಳು ಜನಪ್ರತಿನಿಧಿಗಳು ಬರುತ್ತಾರೆ. ಸರಿಪಡಿಸುತ್ತೇವೆಂದು ಆಶ್ವಾಸನೆ ಕೊಟ್ಟು ಹೋಗುತ್ತಾರೆ ಅಷ್ಟೇ. ಈವರೆಗೆ ಯಾರೂ ಕೂಡ ದುರಸ್ತಿಪಡಿಸಿಲ್ಲ” ಎಂದು ಗ್ರಾಮಸ್ಥರು ಆರೋಪಿಸಿದರು.
ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ ಅವರು “ನೀವು ಈ ವಿಚಾರ ನನ್ನ ಗಮನಕ್ಕೆ ತಂದಿದ್ದು, ಒಳಿತಾಯಿತು. ನಾನು ಬೆಂಗಳೂರಿಗೆ ಹೋಗುತ್ತಿರುವೆ. ಬಂದ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ” ಎಂದು ಭರವಸೆ ನೀಡಿದರು.