ಬಡವರು ತಮ್ಮ ಕಲೆಯನ್ನು ಪ್ರದರ್ಶನ ಮಾಡಿ ಕೊಂಚ ಹಣ ಗಳಿಸಿ ಹೊಟ್ಟೆ ಪಾಡು ನಡೆಸುವ ಕಾಲದಲ್ಲಿ ಅಭಿಮಾನಿ ಒಬ್ಬರು ತಮ್ಮ ಸ್ವಂತ ಹಣದಲ್ಲಿ ಕಲಾವಿದರನ್ನು ಕರೆಸಿ ಮೆರವಣಿಗೆಗೆ ರಂಗು ತಂದು, ಅಪಾರ ಅಭಿಮಾನ ಮೆರೆದಿದ್ದಾರೆ.
ಚಿತ್ತಾಪುರ ಪಟ್ಟಣದಲ್ಲಿ ಕಳೆದ 25ನೇ ತಾರೀಕಿನಂದು ಸಂಸದ ರಾಧಾಕೃಷ್ಣ ದೊಡ್ಮನಿ ಅವರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಪ್ರಿಯಾಂಕ್ ಖರ್ಗೆ ಮತ್ತು ರಾಧಾಕೃಷ್ಣ ದೊಡ್ಮನಿ ಅವರ ಅಪ್ಪಟ ಅಭಿಮಾನಿ ಬುಡಗ ಜಂಗಮ ಸಮಾಜದ ಜಿಲ್ಲಾ ಅಧ್ಯಕ್ಷ ಪಂಡಿತ್ ಶಿರವಾಟಿ ಅವರು, ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕಿನಲ್ಲಿರುವ ಅಲೆಮಾರಿ ಜನಾಂಗದವರಾದ ಬುಡಗ ಜಂಗಮರು, ಸುಡುಗಾಡು ಸಿದ್ದರನ್ನು ಅಭಿಮಾನಕ್ಕಾಗಿ ತಮ್ಮ ಸ್ವಂತ ಹಣದಲ್ಲಿ ಕರೆಯಿಸಿ ವಿವಿಧ ವೇಷ ಭೂಷಣಗಳನ್ನು ಧರಿಸಿ ಕುಣಿದು ಅದ್ದೂರಿ ಮೆರವಣಿಗೆಯಲ್ಲಿ ರಂಗು ತಂದಿದ್ದಾರೆ.
ಕಲಬುರ್ಗಿ, ರಾಯಚೂರು, ಯಾದಗಿರಿ, ಸೇಡಂ, ಶಹಾಬಾದ ಚಿತ್ತಾಪುರ ಸೇರಿದಂತೆ ವಿವಿಧ ಕಡೆಗಳಿಂದ ಬಂದ ಸುಮಾರು 50ಕ್ಕೂ ಹೆಚ್ಚು ಕಲಾವಿಧರು ಮೆರವಣಿಗೆಯಲ್ಲಿ ರಾಮಾಯಣದ ರಾಮ, ಸೀತೆ, ಲಕ್ಷಣ, ಆಂಜನೇಯ, ರಾವಣ, ಕುಂಭಕರ್ಣ, ಶೂರ್ಪನಖಿ ಅವರ ಛದ್ಮವೇಷ ಧರಿಸಿದ ಬುಡ್ಗ ಜಂಗಮ ಕಲಾವಿದರು ಮೆರವಣಿಗೆ ಸಾಗುತ್ತಿದ್ದ ರಸ್ತೆಯಲ್ಲಿ ಅಲ್ಲಲ್ಲಿ ರಾಮಾಯಣದ ವಿವಿಧ ಸನ್ನಿವೇಶಗಳನ್ನು ಆಕರ್ಷಕವಾಗಿ ಅಭಿನಯಿಸಿ ನೆರೆದ ಜನರನ್ನು ಮನರಂಜಿಸಿದರು.

ಕಲಾವಿದರಾದ ಭೀಮಾಶಂಕರ ಕಟ್ಟಿಮನಿ ಯಡ್ರಾಮಿ, ಸಿದ್ರಾಮ ಶಿರವಾಟಿ, ಚೆನ್ನು ಪ್ಯಾರಲ್, ಸಾಯಪ್ಪ ಬೈಲಪಾಟಿ ಸೇಡಂ, ಲಕ್ಷ್ಮಣ ಸಿರಿಗಿರಿ ಸೇಡಂ, ನಿಂಗಣ್ಣ ಪಾಮತೀರ್ಥ, ರಮೇಶ ಕವಿತಾಳ, ಬುರ್ರಾಕತೆ ಕಲಾವಿದರಾದ ಶಾಂತಮ್ಮ ಪಾಮತೀರ್ಥ, ಬಸಮ್ಮ ರಾಮತೀರ್ಥ, ಅಂಜಮ್ಮ ಚಿತ್ತಾಪುರ, ಶರಣಮ್ಮ ಚಿತ್ತಾಪುರ, ಯಲ್ಲಮ್ಮ ಕಲಬುರಗಿ,ಶಿವಮ್ಮ ಕಲಬುರಗಿ, ನಿರ್ಮಲಾ. ಶಿರವಾಟಿ, ಮೋನಮ್ಮ ಶಿರವಾಟಿ, ಭೀಮಬಾಯಿ ಚಿತ್ತಾಪುರ, ಮಲ್ಲಮ್ಮ ಚಿತ್ತಾಪುರ, ಶಿವು ಶಹಾಬಾದ್, ಮಾರುತಿ ಶಹಾಬಾದ್, ಉದಯಕುಮಾರ ಮಾರುತಿ, ಪ್ರಶಾಂತ ಶಿರವಾಟಿ ಸೇರಿದಂತೆ ಅನೇಕ ಕಲಾವಿದರು ಮೆರವಣಿಗೆಯಲ್ಲಿ ಕಲೆ ಪ್ರದರ್ಶನ ಮಾಡಿದರು.
200ರಕ್ಕೂ ಹೆಚ್ಚು ಜನರು ಭಾಗಿಯಾಗಿ ಮೆರಗು ತಂದರು.
ಇವರ ಅಭಿಮಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್, ರಾಧಾಕೃಷ್ಣ ದೊಡ್ಮನಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ: ಅನಂತ್ ದೇಶಪಾಂಡೆ, ವಾಲೆಂಟಿಯರ್
