ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದು, ಬಾಡಿಗೆ ಹಣವನ್ನು ಕೊಡದೇ ಇರುವುದರಿಂದ ಖಾಲಿ ಮಾಡಿಸಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ ಅನುದಾನ ಮಂಜೂರಿಯಾಗಿದೆ. ಹಾಗಾಗಿ ಹೊಸದಾಗಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಮಾಡಿಸಬೇಕು ಎಂದು ಒತ್ತಾಯಿಸಿ ದಲಿತ ಸೇನೆ ಕಾರ್ಯಕರ್ತರು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
“ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಬಿದರಚೆಡ್ ಗ್ರಾಮದಲ್ಲಿ ಅಂಗನವಾಡಿ ಕೇಂದ್ರವಿದ್ದು, ಅದರಲ್ಲಿ ಮುಳ್ಳುಗಿಡಗಂಟಿ ಬೆಳೆದಿರುವುದರಿಂದ ಕಳೆದ 2 ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ನಡೆಸುತ್ತಿದ್ದರು. ಬಾಡಿಗೆ ನೀಡದಿರುವ ಕಾರಣ ಮಾಲೀಕರು ಅಂಗನವಾಡಿ ಕೇಂದ್ರ ನಡೆಸದಂತೆ ಖಾಲಿ ಮಾಡಿಸಿದ್ದಾರೆ. ಇದರಿಂದ ಅಂಗನವಾಡಿ ಮಕ್ಕಳು ಬೀದಿಗೆ ಬಂದಿದ್ದಾರೆ. ಹಾಗಾಗಿ ಅಂಗನವಾಡಿ ಕೇಂದ್ರಕ್ಕೆ ಮಿಸಲಾಗಿರುವ ಸ್ಥಳದಲ್ಲಿ ಸ್ವಚ್ಚಗೊಳಿಸಿ, ಹಳೇ ಕಟ್ಟಡವನ್ನು ಕೆಡವಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡಿಯುವ ನೀರು ಒದಗಿಸುವಂತೆ ಸಂಘಟನೆಗಳ ಆಗ್ರಹ
”ಅಂಗನವಾಡಿ ನಿರ್ಮಾಣಕ್ಕೆ ಈಗಾಗಲೇ ಸರ್ಕಾರದಿಂದ ಅನುದಾನ ಮಂಜೂರಾಗಿದ್ದು, ಸದರಿ ಅಂಗನವಾಡಿ ಕೇಂದ್ರಕ್ಕೆ ಮಂಜೂರಾದ ಅನುದಾನದಿಂದ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೈಲಾರಿ ಎಚ್ ಕಾಸ್ಕರ್, ದಶರಥ ಮಾಧವಾರ, ನರಸಿಂಹ, ಪರಮೇಶ್ವರ್, ಲಕ್ಷ್ಮಣ, ಸಾಯಪ್ಪ, ನೆರಲ್ ಮಾಧವರ್ ಇದ್ದರು.