ಧಮ್ಮ ಮೈತ್ರಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾತೆ ರಮಾಬಾಯಿ ಅಂಬೇಡ್ಕರ್ ಅವರ 127ನೇ ಜಯಂತ್ಯುತ್ಸವ ಕಾರ್ಯಕ್ರಮವು ಕಲಬುರಗಿ ಜಿಲ್ಲೆಯ ಶರಣ ಸಿರಸಗಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟಿಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಹಣಮಂತರಾವ ದೊಡ್ಡಮನಿ ಮಾತನಾಡಿ,
“ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬೆಳವಣಿಗೆಯ ಹಿಂದೆ ಮಾತೆ ರಮಾಬಾಯಿ ಅವರ ಶ್ರಮ, ತ್ಯಾಗ ತುಂಬಾ ಇದೆ. ಅಂಬೇಡ್ಕರ್ ಅವರು ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವಾಗ ತಮ್ಮ ಎರಡು ಮಕ್ಕಳು ತೀರಿಕೊಂಡರು ಸಹ ಸಹಿಸಿಕೊಂಡು ಅವರ ಓದಿಗೆ ಸಮಸ್ಯೆಯಾಬಾರದಂತೆ ನೋಡಿಕೊಂಡರು. ರಮಾಬಾಯಿ ಅಂಬೇಡ್ಕರ್ ಅವರು ಆ ನಂತರ ಪತ್ರದ ಮೂಲಕ ಮಕ್ಕಳು ತೀರಿಕೊಂಡ ವಿಷಯವನ್ನು ಅಂಬೇಡ್ಕರ್ ಅವರಿಗೆ ತಿಳಿಸುತ್ತಾರೆ. ಅಂತಹ ಮಹಾನ ತ್ಯಾಗಮಯಿ ರಮಾತಾಯಿಯನ್ನು ನಾವು ಇಂದು ಸ್ಮರಿಸಿಕೊಳ್ಳುವ ಅವಶ್ಯಕತೆ ಇದೆ” ಎಂದರು.
ಸರಕಾರಿ ಅಭಿಯೋಜಕರಾದ ರಾಜಮಹೇಂದ್ರ ಮಾತನಾಡಿ, ನಮ್ಮ ಮಕ್ಕಳ ಬೆಳವಣಿಗೆಯ ಕಡೆಗೆ ಹಾಗೂ ವಿದ್ಯಾಭ್ಯಾಸದ ಕಡೆಗೆ ನಾವು ಪಾಲಕರು ಗಮನ ಹರಿಸಬೇಕಿದೆ. ಬರೀ ವಿದ್ಯಾವಂತರಾದರೆ ಸಾಲದು ಜೊತೆಗೆ ಅವರಿಗೆ ಒಳ್ಳೆಯ ಸಂಸ್ಕಾರ ನೀಡಬೇಕಾಗಿದೆ. ಇಂತಹ ಟ್ರಸ್ಟ್‌ಗಳ ವತಿಯಿಂದ ಶಿಬಿರಗಳು ಹಾಗೂ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಹಮ್ಮಿಕೊಳ್ಳಬೇಕು ಮತ್ತು ಯುವ ಜನತೆಗೆ ಹೋರಾಟಗಾರರ ಜೀವನ ಚರಿತ್ರೆ ಹಾಗೂ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಕಂಡ ಕಷ್ಟದ ದಿನಗಳು ಅರಿವು ಮೂಡಿಸಬೇಕು ಎಂದು ಮಾತೆ ರಮಾತಾಯಿಯ ಕಷ್ಟದ ದಿನಗಳನ್ನು ವಿವರಿಸಿದರು.
ಇದನ್ನು ಓದಿದ್ದೀರಾ? ದುಷ್ಟ ಶಕ್ತಿಗಳ ನಿವಾರಣೆಗೆ ‘ಗಣಹೋಮ’ದ ಮೊರೆಹೋದ ಉಡುಪಿ ವಕೀಲರ ಸಂಘ!
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರಕಾರಿ ಅಭಿಯೋಜಕರಾದ ರಾಜಮಹೇಂದ್ರ, ನಗರದ ಮುಖಂಡರಾದ ಶಿವಮೂರ್ತಿ ನಡಗೇರಿ, ಶ್ರೀಮತಿ ಭಾರತಬಾಯಿ ಬಬಲಾದ, ಪ್ರೊಫೆಸರ್ ಶಾಂತಪ್ಪ ಹಾದಿಮನಿ ಅವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಮ್ಮ ಮೈತ್ರಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಿದ್ದರಾಮ ನಡಗೇರಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಹಣಮಂತರಾವ ದೊಡ್ಡಮನಿ ಹಾಗೂ ಸರಕಾರಿ ಅಭಿಯೋಜಕರಾದ ರಾಜಮಹೇಂದ್ರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಗರದ ಗಣ್ಯರು, ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.