ಕಲಬುರಗಿ | ತೊಗರಿ ಬೆಳೆ ಹಾನಿ, ಆರ್ಥಿಕ ಹೊರೆ; ಒಂದೇ ತಿಂಗಳಲ್ಲಿ ಆರು ಮಂದಿ ರೈತರ ಆತ್ಮಹತ್ಯೆ

Date:

Advertisements

ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆ ಹಾನಿ ಮತ್ತು ಅತಿಯಾದ ಆರ್ಥಿಕ ಹೊರೆ ಸೇರಿದಂತೆ ಹಲವು ಕಾರಣಗಳಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರೆದಿದ್ದು, ಒಂದು ತಿಂಗಳಲ್ಲಿ ಸುಮಾರು ಆರು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತ ಸಮುದಾಯಕ್ಕೆ ಸರ್ಕಾರದ ಬೆಂಬಲವಿಲ್ಲದೆ ಪರಿಸ್ಥಿತಿ ಭೀಕರವಾಗಿದೆ. ಬೆಳೆಗಳು ನಿರಂತರವಾಗಿ ವಿಫಲವಾಗುತ್ತಿವೆ. ಆದ್ದರಿಂದ ರೈತರು ಸಾಲಗಳನ್ನು ಮರುಪಾವತಿಸಲು ಅಧಿಕ ಒತ್ತಡವನ್ನು ಎದುರಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಲೆಯೂ ಸಿಗದೆ ಅಸಮರ್ಪಕ ಬೆಲೆಗಳು ಸಿಗುತ್ತಿವೆ. ಹಾಗಾಗಿ ಜಿಲ್ಲೆಯ ಕೃಷಿ ಸಮುದಾಯ ಹಲವು ಸವಾಲುಗಳನ್ನು ಎದುರಿಸುತ್ತಿದೆ.

ಈ ಪರಿಸ್ಥಿತಿಯಲ್ಲಿ, ಯುವಕರು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಉತ್ತೇಜಿಸುವ ರಾಜಕೀಯ ಹೇಳಿಕೆಗಳು ನಿಜವಾದ ಆಶಾವಾದವನ್ನು ಹೊರತರುವಲ್ಲಿ ವಿಫಲವಾಗಿವೆ.

Advertisements

“ತೊಗರಿಯ ನಾಡು ಎಂದೇ ಹೆಸರಾಗಿರುವ ಕಲಬುರಗಿ ಜಿಲ್ಲೆಯಲ್ಲಿ ರೈತರು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ತೊಗರಿ ಬೆಳೆ ಪ್ರಾಥಮಿಕ ವಾಣಿಜ್ಯ ಬೆಳೆಯಾಗಿದೆ. ಹಾಗಾಗಿ ಅನುಕೂಲಕರ ಮಳೆಯನ್ನು ಅನುಸರಿಸಿ, ಸರಿಸುಮಾರು 6.3 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆಯನ್ನು ಬೆಳೆಯಲಾಗಿತ್ತು. ತದನಂತರ, ಹಿಂಗಾರಿನಲ್ಲಿ ಭಾರೀ ಮಳೆಯಾದ್ದರಿಂದ ಶೇ.50ರಷ್ಟು ಬೆಳೆ ನಾಶವಾಯಿತು” ಎಂದು ರೈತ ಹೋರಾಟಗಾರ ಶರಣಬಸಪ್ಪ ಮಮಶೆಟ್ಟಿಯವರು ಈ ದಿನ.ಕಾಮ್‌ಗೆ ತಿಳಿಸಿದರು.

“ಮಾರುಕಟ್ಟೆ ಬೆಲೆಗಳು ಕುಸಿಯುತ್ತಿರುವುದರಿಂದ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಇನ್ನೂ ಕೆಲವರು ತೀವ್ರ ಕ್ರಮಗಳನ್ನು ತೆಗೆದುಕೊಳ್ಳುವಂತಾಗಿದ್ದು, ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದೆ. ಸಂಕಷ್ಟದಲ್ಲಿರುವ ರೈತರ ಪರವಾಗಿ ಯಾವುದೇ ಜನಪ್ರತಿನಿಧಿ ಧ್ವನಿ ಎತ್ತುತ್ತಿಲ್ಲ. ಕೇಂದ್ರ, ರಾಜ್ಯ ಯಾವುದೇ ಸರ್ಕಾರವೂ ರೈತರ ಕುರಿತು ಕಾಳಜಿ ವಹಿಸುತ್ತಿಲ್ಲ. ಸಂತ್ರಸ್ತ ರೈತರಿಗೆ ಪರಿಹಾರ ನೀಡುತ್ತಿಲ್ಲ, ಇಲ್ಲವೇ ಬೆಂಬಲ ಬೆಲೆಯನ್ನೂ ನೀಡುತ್ತಿಲ್ಲ” ಎಂದು ಆರೋಪಿಸಿದರು.

ತೊಗರಿ ಬೆಳೆಹಾನಿಯಿಂದ ರೈತರ ಆತ್ಮಹತ್ಯೆ

“ಬೆಳಗಾವಿ ಅಧಿವೇಶನದ ವೇಳೆ ಕೃಷಿ ಸಚಿವ ಚಲುವನಾರಾಯಣ ಸ್ವಾಮಿ ಅವರಿಗೆ ಮನವಿ ಕೊಟ್ಟಿದ್ದೇವೆ. ಸರ್ಕಾರಕ್ಕೆ ಪತ್ರ ಬರೆಯುತ್ತೇವೆಂದು ಹೇಳಿ ನುಗುಚಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಸ್ಪತ್ರೆ ಉದ್ಘಾಟನೆಗೆಂದು ಕಲಬುರಗಿಗೆ ಬಂದಾಗ ಅವರಿಗೂ ಮನವಿ ಕೊಟ್ಟೆವು, ಬೆಳೆಯ ವರದಿ ತರಿಸಿಕೊಂಡು ಪರಿಹಾರ ನೀಡಲು ಪ್ರಯತ್ನ ಮಾಡುವೆʼನೆಂದು ಹೇಳಿದ್ದರು. ವರದಿ ನೀಡಿದರೂ ಈವರೆಗೆ ಚಕಾರವೆತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ರೈತ ವಿರೋಧಿ ನಿಲುವುಗಳನ್ನು ತಾಳುತ್ತಿದ್ದಾರೆಯೇ ಹೊರತು ರೈತಪರ ಕಾಳಜಿ ವಹಿಸುತ್ತಿಲ್ಲ. ಕಾರ್ಪೊರೇಟ್‌ಗಳ ಪರವಾಗಿ ಬಜೆಟ್‌ ಮಂಡನೆ ಮಾಡುತ್ತಾರೆ, ರೈತರ ಪರ ಧ್ವನಿ ಎತ್ತುವುದಿಲ್ಲ. ರೈತರಪರ ಬಜೆಟ್‌ ಮಂಡಿಸುವುದಿಲ್ಲ” ಎಂದು ದೂರಿದರು.

“ತೊಗರಿ ಬೆಳೆ ಹಾನಿಯನ್ನು ಪರಿಹರಿಸುವ ಸಲುವಾಗಿ ಅಧಿವೇಶನದಲ್ಲಿ ಧ್ವನಿ ಎತ್ತುವಲ್ಲಿ ಜಿಲ್ಲೆಯ ಪ್ರತಿನಿಧಿಗಳು ವಿಫಲರಾಗಿದ್ದಾರೆ. ತೊಗರಿ ಕೃಷಿಯು ಸಮೃದ್ಧಿಯನ್ನು ತರುತ್ತದೆ ಎಂಬ ಸಾಂಪ್ರದಾಯಿಕ ನಂಬಿಕೆಗೆ ಈ ಪರಿಸ್ಥಿತಿ ವಿರುದ್ಧವಾಗಿದೆ. ರೈತ ಸಮುದಾಯವು ನಿರಾಶೆಗೊಂಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತೊಗರಿ ಆಮದು
2024ರ ಏಪ್ರಿಲ್‌ ನಿಂದ ಅಕ್ಟೋಬರ್‌ವರೆಗೆ ತೊಗರಿ ಆಮದು ಮಾಡಿಕೊಂಡಿರುವ ಮಾಹಿತಿ

“ಒಂದು ಎಕರೆಯಲ್ಲಿ ತೊಗರಿ ಬೆಳೆಯಬೇಕಾದರೆ ಕನಿಷ್ಠವೆಂದರೂ ₹15,000ದಿಂದ ₹20,000 ಖರ್ಚು ಬರುತ್ತದೆ. ಬಿತ್ತನೆ ಬೀಜ, ಗೊಬ್ಬರ, ಔಷಧಿ, ಇತರೆ ಕೃಷಿ ಚಟುವಟಿಕೆ ದರ ದುಬಾರಿಯಾಗಿದೆ. ಅಲ್ಲದೆ ಹೂ ಬಿಡುವ ಸಮಯದಲ್ಲಿ ಕಾಳುಗಟ್ಟುವ ಸಮಯದಲ್ಲಿ ನೀರಿನ ಕೊರತೆ ಉಂಟಾಗಿ ನೆಟೆರೋಗಕ್ಕೆ ತುತ್ತಾಗಿ ಬೆಳೆಹಾನಿ ಒಂದೆಡೆಯಾದರೆ, ಇನ್ನೊಂದೆಡೆ ಬಂದ ಬೆಳೆಗೆ ಬೆಲೆಯಿಲ್ಲದಂತಾಗಿದೆ. ರೈತರ ಫಸಲಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಅಲ್ಲದೆ, ಈ ಬಾರಿ 8 ಲಕ್ಷ ಟನ್‌ ತೊಗರಿಯನ್ನು ಆಮದು ಮಾಡಿಕೊಂಡಿರುವುದರಿಂದ ನಮ್ಮ ನಾಡಿನ ತೊಗರಿ ಬೆಲೆ ನೆಲಕಚ್ಚಿದೆ. ಈಗ ಕ್ವಿಂಟಾಲ್‌ಗೆ ₹6,500ರಿಂದ ₹6,800 ಬೆಲೆಯಿದ್ದು, ನಮ್ಮ ನಾಡಿನ ರೈತರ ಫಸಲಿಗೆ ಬೆಲೆ ಇಲ್ಲದಂತಾಗಿದೆ” ಎಂದರು.

ತೊಗರಿ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರ ಆತ್ಮಹತ್ಯೆ
ತೊಗರಿ ಬೆಳೆಗೆ ಸರಿಯಾದ ಬೆಲೆ ಇಲ್ಲದಿರುವುದರಿಂದ, ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಳ

ಏಕಾಏಕಿ ಆರಂಭವಾದ ‘ಒಣ ಬೇರು ಕೊಳೆತ ರೋಗ’ ಸುಮಾರು 1.8 ಲಕ್ಷ ಹೆಕ್ಟೇರ್ ಮೇಲೆ ಪರಿಣಾಮ ಬೀರಿದ್ದು, ಇದು ಸುಮಾರು 5 ಲಕ್ಷ ಎಕರೆ ಕೃಷಿ ಪ್ರದೇಶಕ್ಕೆ ಸಮನಾಗಿದೆ ಎಂಬುದು ಅಧಿಕೃತ ಅಂಕಿಅಂಶಗಳಿಂದ ತಿಳಿದುಬಂದಿದೆ.

“ಜಿಲ್ಲೆಯಲ್ಲಿ ತೊಗರಿ ಬೆಳೆ ಹಾನಿಯು ಸರಿಸುಮಾರು ಶೇ.30ಕ್ಕೆ ತಲುಪಿದೆ. ಇದು ರೈತರ ಆತ್ಮಹತ್ಯೆಗಳಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿದೆ. ಸರ್ಕಾರದ ವಿರುದ್ಧ ರೈತರ ಅಸಮಾಧಾನವನ್ನು ವ್ಯಕ್ತಪಡಿಸಲು ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಮೂರು ದಿನಗಳ ರಸ್ತೆ ತಡೆ ಮತ್ತು ವಿವಿಧ ಸಂಘಟನೆಗಳು ನಾಲ್ಕು ತಿಂಗಳ ಕಾಲ ನಡೆಸಿದ ನಿರಂತರ ಪ್ರತಿಭಟನೆಗಳನ್ನು ನಡೆಸಿದರೂ ಕೂಡಾ ಯಾವುದೇ ರೀತಿಯ ಪ್ರತಿಕ್ರಿಯೆಗಳು ದೊರೆತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಹೋರಾಟಗಾರ ಶರಣಬಸಪ್ಪ ಮಮಶೆಟ್ಟಿ ನೇತೃತ್ವದಲ್ಲಿ ಹೋರಾಟ
ರೈತ ಹೋರಾಟಗಾರ ಶರಣಬಸಪ್ಪ ಮಮಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ

“ಕೇಂದ್ರ ಸರ್ಕಾರ, ಫಸಲ್‌ ಭೀಮಾ ಯೋಜನೆಯಡಿ ಒಂದು ಎಕರೆಗೆ ರೈತರಿಂದ ₹750 ಬೆಳೆವಿಮೆ ಕಟ್ಟಿಸಿಕೊಳ್ಳುತ್ತದೆ. ಆದರೆ ಒಂದು ಹೆಕ್ಟೇರ್‌ ಪ್ರದೇಶ ಅಂದರೆ ಎರಡೂವರೆ ಎಕರೆಯಲ್ಲಿ ಬೆಳೆದ ತೊಗರಿಗೆ ₹2,000 ಪರಿಹಾರ ಕೊಡುತ್ತದೆ. ಬೆಳೆಗಳಿಗೆ ಆಧಾರವಾಗಿ, ಮೂರು ತಿಂಗಳ ಬೆಳೆ, ಆರು ತಿಂಗಳ ಬೆಳೆ, ಒಂದು ವರ್ಷದ ಬೆಳೆ ಹೀಗೆ ಬೆಳೆಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎನ್ನುವುದು ನಮ್ಮ ಒತ್ತಾಯ. ಆದರೆ ಅಧಿಕಾರಿಗಳಾಗಲಿ, ಸರ್ಕಾರವಾಗಲಿ ಬೆಳೆಗಳ ಸಮೀಕ್ಷೆ ನಡೆಸುವುದು ಹೆಕ್ಟೇರ್‌ ಲೆಕ್ಕದಲ್ಲಿ ಪರಿಹಾರ ನೀಡುವುದು ಅಸಂಬದ್ಧವಾಗಿದೆ” ಎಂದರು.

ಬೆಳೆವಿಮೆ ಮಾಹಿತಿ
2024-25ನೇ ಸಾಲಿನ ಬೆಳೆವಿಮೆ ನೋಂದಣಿ ವಿವರಗಳು

ಉದಾಹರಣೆಗೆ ಜಿಲ್ಲೆಯಲ್ಲಿ 100 ಮಂದಿ ರೈತರು ಬೆಳೆವಿಮೆಗೆ ಅರ್ಜಿ ಹಾಕಿದರೆ, ಅದರಲ್ಲಿ 20ರಿಂದ 25 ಮಂದಿ ರೈತರಿಗೆ ಬೆಳೆಪರಿಹಾರ ಬರುವದೇ ದೊಡ್ಡ ವಿಷಯ. ಆಗ ಉಳಿದ ರೈತರ ಗತಿಯೇನು?. ತೊಗರಿಯನ್ನೇ ವಾಣಿಜ್ಯ ಬೆಳೆಯನ್ನಾಗಿ ನಂಬಿರುವ ರೈತರು ಲಾಭದ ನಿರೀಕ್ಷೆಯಿಂದ ತೊಗರಿ ಬೆಳೆದರೆ, ಅತಿವೃಷ್ಠಿ, ಅನಾವೃಷ್ಠಿಗಳಿಂದ ಬೆಳೆಹಾನಿಯಾಗುತ್ತದೆ. ಬಂದ ಫಸಲಿಗೆ ಬೆಲೆ ಇರುವುದಿಲ್ಲ. ಇದನ್ನೇ ನಂಬಿ ಸಾಲ ಸೋಲ ಮಾಡಿ, ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ, ಮದುವೆ ಇಂತಹ ಖರ್ಚುಗಳನ್ನೆಲ್ಲ ನಿಭಾಯಿಸಿರುತ್ತಾರೆ. ಇಂತಹ ಸಂದರ್ಭದಲ್ಲಿ, ಬೆಳೆಹಾನಿಯ ಪರಿಹಾರವೂ ಇಲ್ಲದೆ, ಬಂದ ಬೆಳೆಗೆ ಬೆಲೆಯೂ ಇಲ್ಲದೆ ಹೋದರೆ, ರೈತರು ತಮ್ಮ ಸಂಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕು?” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಆತ್ಮಹತ್ಯೆ
2024-25ನೇ ಸಾಲಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣದ ಮಾಹಿತಿ

“ನೆರವಾಗಬೇಕಾದ ಸರ್ಕಾರಗಳೇ ಕಿವುಡಾಗಿರುವಾಗ ತಮ್ಮ ಕೂಗನ್ನು ಆಲಿಸದಿರುವವರ ಎದುರು ಬಾಯಿ ಬಡಿದುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ನಿಶ್ಚಯಿಸಿಕೊಂಡ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಜಿಲ್ಲೆಯು ಸಾಪ್ತಾಹಿಕ ರೈತರ ಆತ್ಮಹತ್ಯೆಗಳ ದುಃಖಕರ ಸ್ಥಿತಿಗೆ ಬಂದು ತಲುಪಿದೆ. ರೈತರು ಎದುರಿಸುತ್ತಿರುವ ಗಂಭೀರ ಪರಿಸ್ಥಿತಿಯನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಇದಕ್ಕೆಲ್ಲ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳೇ ನೇರ ಹೊಣೆ” ಎಂದು ಆರೋಪಿಸಿದರು.

ಕಳೆದ ನವೆಂಬರ್‌ನಲ್ಲಿ 7 ಮಂದಿ, ಡಿಸೆಂಬರ್‌ನಲ್ಲಿ 6 ಮಂದಿ, ಜನವರಿಯಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಂತೆ 2023ರಲ್ಲಿ 88 ಮಂದಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದರೆ, ಕಳೆದ ವರ್ಷ 62 ಮಂದಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.

ಕಲಬುರಗಿ ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರು:

* ಕಲಬುರಗಿ ತಾಲೂಕಿನ ಸಂಕ್ರೋಂಡಗಿ ಗ್ರಾಮದ ಬಸವರಾಜ ಎಂಬ ರೈತ ಮಾರ್ಚ್ 11ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

* ಆಳಂದ ತಾಲೂಕಿನ ಯಲಿನವಾಡಗಿ ಗ್ರಾಮದ ಮಾಣಿಕರಾವ್ ಅಶೋಕ ಸುತಾರ ಎಂಬುವವರು ಮಾರ್ಚ್ 11ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

* ಕಾಳಗಿ ತಾಲೂಕಿನ ಕೊಡದೂರು ಗ್ರಾಮದ ದತ್ತಾತ್ರೇಯ ಹುಣಸಪ್ಪ ಎಂಬುವವರು ಮಾರ್ಚ್ 8ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

* ಕಾಳಗಿ ತಾಲೂಕಿನ ಹುಲಗೇರಾ ಗ್ರಾಮದ ಪ್ರಕಾಶ್ ರವೀಂದ್ರ ಎಂಬುವವರು ಫೆಬ್ರವರಿ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

* ಕಮಲಾಪುರ ತಾಲೂಕಿನ ಸೂರ್ಯಕಾಂತ ಅಂಬಾರಾಯ ಮತ್ತು ಆಳಂದ ತಾಲೂಕಿನ ಬಬಳದ ಗ್ರಾಮದ ರೇವಣಸಿದ್ದ ಬಂಗಾರಗಿ ಎಂಬ ರೈತರು ಜನವರಿ 31ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರೆಲ್ಲರೂ ತೊಗರಿ ಬೆಳೆಗಾರರೆ ಆಗಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ರೈತವಿರೋಧಿ ನಿಲುವನ್ನು ಕೈಬಿಟ್ಟು, ರೈತರ ಪರವಾಗಿ ನಿಲ್ಲಬೇಕು, ಸಾಲ ಮನ್ನಾ ಮಾಡಬೇಕು, ಹಾನಿಯಾಗಿರುವ ಬೆಳೆಗೆ ಸೂಕ್ತ ಬೆಳೆ ಪರಿಹಾರ ನೀಡಬೇಕು, ಬಂದ ಫಸಲಿಗೆ ಬೆಂಬಲ ಬೆಲೆ ನೀಡಿ ರೈತರಿಗೆ ನೆರವಾಗುವ ಮೂಲಕ ರೈತರ ಆತ್ಮಹತ್ಯೆ ತಡೆಯಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಜಮೀನು ವಿಚಾರಕ್ಕೆ ಜಗಳ; ಮಹಿಳೆಯನ್ನು‌ ವಿವಸ್ತ್ರಗೊಳಿಸಿ ಹಲ್ಲೆ

“ಆರು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡರೂ ಕೂಡಾ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ನೊಂದ ಕುಟುಂಬಗಳಿಗೆ ಸೌಜನ್ಯಕ್ಕಾದರೂ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ. ಇಂಥವರಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ?” ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್‌ ಕಲಬುರಗಿಯ ಜಂಟಿ ಕೃಷಿ ನಿರ್ದೇಶಕರನ್ನು ಸಂಪರ್ಕಿಸಿದೆ, ಆದರೆ ಅವರು ಕರೆಗೆ ಲಭ್ಯವಾಗಿಲ್ಲ.

ಆತ್ಮಹತ್ಯೆ ಪರಿಹಾರವಲ್ಲ 13
WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

Download Eedina App Android / iOS

X