ಕಲಬುರಗಿ | ‘ಅಂಬೇಡ್ಕರ್ ಮತ್ತು ಗಾಂಧೀಜಿ – ಒಂದು ನದಿಯ ಎರಡು ದಡಗಳು’

Date:

Advertisements

ಬಾಬಾ ಸಾಹೇಬ್ ಅವರ 133ನೇ ಜಯಂತಿಯ ದಿನದಂದ ನಾವು ಹೆಚ್ಚೆಚ್ಚು ಎಷ್ಟೇ ಕಷ್ಟವಾದರೂ ಸರಿಯೇ ಮನುಷ್ಯತ್ವವನ್ನು, ಮಾನವೀಯತೆ, ಸ್ನೇಹ ಪ್ರೀತಿಯನ್ನು ಹಂಚುವ ಕೆಲಸಕ್ಕೆ ತುರ್ತಾಗಿ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಕಳೆದ ಕೆಲ ತಿಂಗಳ ಹಿಂದೆ ಗಾಂಧಿ ವಿರುದ್ಧ ಅಂಬೇಡ್ಕರ್ ಎಂಬ ಧ್ವೇಷ ಭಾವನೆಯನ್ನು ಹರಡುತ್ತಿದ್ದರು. ಆದರೆ, ಅವರ ಇಬ್ಬರ ನಡುವಿನ ಸ್ನೇಹ, ಸಂಬಂಧ ಹೇಗಿತ್ತು ಎಂಬುದು ಬಹುತೇಕರು ಅರಿಯದೆ ಇರುವುದು ಕಾರಣ ಇರಬಹುದು.

ಗಾಂಧಿ ಮತ್ತು ಅಂಬೇಡ್ಕರ್‌ರವರು ಶತ್ರುಗಳು ಎಂಬ ಭ್ರಮೆಯನ್ನು ಕುಟಿಲ ವರ್ಗವೊಂದು  ಜನ ಮಾನಸದಲ್ಲಿ ಬಿತ್ತಿದೆ. ಇದರ  ಪರಿಣಾಮವಾಗಿ ಇವತ್ತು ನಾವುಗಳು ಅವರ ವಿಚಾರ ಮಂತ್ರಗಳನ್ನು ದೂರವಿಟ್ಟು ಹಗೆ ಸಾಧಿಸುತಿದ್ದೇವೆ. ಒಂದು ನದಿಯು ಎರಡು ದಡವಿಲ್ಲದೆ ಹರಿಯಲು ಸಾಧ್ಯವಿಲ್ಲ. ಅದರಂತೆ ಅವರಿಬ್ಬರು ಎರಡು ದಡದಲ್ಲಿನ ನದಿಯಾಗಿ ಹರಿಯುತ್ತಾರೆ. ಇದನ್ನು ಗುರುತಿಸುವಲ್ಲಿ ನಾವು ವಿಫಲವಾಗಿದ್ದೇವೆಂದು ಪೂರ್ವ ಆರ್.ಎಸ್.ಎಸ್ ನಾಯಕ, ದಲಿತ ಹೋರಾಟದಲ್ಲಿ ಮುಂದಿರುವ ರಾಜಸ್ಥಾನದ, ಭನವರ್ ಮೇಘಾವನ್ಸಿ ಮತ್ತು ಗಣೇಶ್ ದೇವಿ ಅವರ ಜೊತೆ ಚರ್ಚೆ ಮಾಡಿದಾಗ ತಿಳಿದು ಬಂತು. ಈ ಸಂವಾದದ ತಿರುಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಗಾಂಧೀಜಿ ಮತ್ತು ಅಂಬೇಡ್ಕರ್‌ರವರ ಹಿಂಬಾಲಕರು ಒಬ್ಬರನ್ನು ಇನ್ನೊಬ್ಬರು ಬೈಯುತ್ತಾ, ಒಬ್ಬರನ್ನು ಒಬ್ಬರಗಿಂತ ಶ್ರೇಷ್ಠ ವ್ಯಕ್ತಿ ಎಂದು ಬಿಂಬಿಸಿ ಅವರಲ್ಲಿ ಇರದಿದ್ದ ದ್ವೇಷ ಭಾವನೆಯನ್ನು ತಾವು ಹೊದ್ದುಕೊಂಡರೆ ಹೇಗೆ ತಾನೇ ಸಮಾಜ ನೆಮ್ಮದಿಯಿಂದ ಬದುಕಬಹುದು. ಅವರಲ್ಲಿನ ವೈಚಾರಿಕ ಸಂಘರ್ಷವನ್ನು ಶತ್ರುತ್ವದಲ್ಲಿ ತಾಳೆ ಹಾಕುವುದು ಎಷ್ಟು ಸರಿ. ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನು ಒಂದೇ ಗೆರೆಯಲ್ಲಿ ತರುವುದು ನನ್ನ ಉದ್ದೇಶವಲ್ಲ. ಆದರೆ, ಒಂದು ಗೆರೆಯ ಎರಡು ತುದಿಗಳಾಗಿ ಬಡ, ಬಲ್ಲಿದ, ದಿನ, ದಲಿತರಿಗಾಗಿ ದುಡಿದ ಇವರನ್ನು ಸರಿಯಾಗಿ ಅರಿಯಬೇಕಿದೆ. ನಾವು ಅವರಂತೆ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದು ನನ್ನ ಆಶಯ.

Advertisements

ಗಾಂಧಿಜೀ ಮತ್ತು ಅಂಬೇಡ್ಕರ್ ಅವರ ಜೀವನದಲ್ಲಿನ ಸಾಮ್ಯತೆಗಳನ್ನು ನೋಡಿ ಅಚ್ಚರಿ ಪಟ್ಟೆ. ಗಾಂಧಿಯ ತಂದೆ ಪೋರಬಂದರ್‌ನ ದಿವಾನರಾಗಿದ್ದರು, ಅಂಬೇಡ್ಕರ್ ಅವರ ಅಜ್ಜ ಸೈನ್ಯದಲ್ಲಿದ್ದರು. ತಂದೆ ಬರೋಡ ಗಾಯಕವಾಡ ಸೈನ್ಯದಲ್ಲಿ ಸುಬೇದಾರ್ ಆಗಿದ್ದರು. ಇಬ್ಬರ ಕುಟುಂಬವು ರಾಜರ ಆಸ್ಥಾನದಲ್ಲಿ ಕೆಲಸ ಮಾಡಿದೆ. ಅಂಬೇಡ್ಕರ್ ಅವರಿಗೆ ವಿದ್ಯಾರ್ಥಿ ವೇತನ ಸಿಗಲು ಇದು ಕೂಡ ಕಾರಣವಾಗಿದೆ.

ಮೋಹನದಾಸ್ ವೈಷ್ಣವ ಸನಾತನಿ ಪರಿವಾರದ ಸಗುಣ  ಪರಂಪರೆಯಲ್ಲಿ ಜನಿಸಿದರು. ಭೀಮರಾವ್ ಮಹರ್ ಜನಾಂಗದ ನಿರ್ಗುಣ ಮತ್ತು ವಿಧ್ರೋಹಿ ಪರಂಪರೆಯಲ್ಲಿ ಜನಿಸಿ, ಕಬೀರ್ ಗೀತೆಯನ್ನು ಕೆಳುತ್ತು ಬೆಳೆದರು.

ಸನಾತನಿ ಧರ್ಮದಲ್ಲಿ ಸಮುದ್ರಯಾನ ನಿಷಿದ್ಧವಾಗಿತ್ತು. ಅದನ್ನು ಧಿಕ್ಕರಿಸಿ ಗಾಂಧಿ ಲಂಡನ್‌ಗೆ ಹೋದರು, ಅಂಬೇಡ್ಕರ್ ಜಾತಿಯ ಅವಮಾನವನ್ನು ಸಹಿಸಿಕೊಂಡು, ಅದನ್ನು ಮೆಟ್ಟಿನಿಂತು  ಹೆಚ್ಚಿನ ಅಧ್ಯಯನಕ್ಕೆ ವಿದೇಶಕ್ಕೆ ಹೋದರು. ಗಾಂಧಿ ಬ್ಯಾರಿಸ್ಟರ್ ಆಗಿ ಬಂದರು. ಬಾಬಾ ಸಾಹೇಬ್ ಅರ್ಥಶಾಸ್ತ್ರ, ಮಾನವ ಶಾಸ್ತ್ರ, ಸಮಾಜ ಶಾಸ್ತ್ರದ ಜೊತೆಗೆ ಬ್ಯಾರಿಸ್ಟರ್ ಪದವಿಯನ್ನು ಗಳಿಸಿಕೊಂಡು ಹಿಂದಿರುಗಿದರು.

ಗಾಂಧೀಜಿ ಸೌತ್ ಆಫ್ರಿಕಾದಲ್ಲಿ ವಕೀಲ ವೃತ್ತಿಯೊಂದಿಗೆ ವರ್ಣ ಬೇಧ ನೀತಿಯ ಶೋಷಣೆಯ ವಿರುದ್ಧ ಸತ್ಯಾಗ್ರಹ ದಾರಿ ಹಿಡಿದರು. ಭಾರತಕ್ಕೆ ಹಿಂದಿರುಗಿ ಆಂಗ್ಲರಿಂದ ದೇಶವನ್ನು ಮುಕ್ತಗೊಳಿಸುವ ಪಣ ತೊಟ್ಟರು. ಅಂಬೇಡ್ಕರ್ ಬರೋಡಾದ ಆಸ್ಥಾನದಲ್ಲಿ ಸೈನ್ಯ ಸಚಿವರಾಗಿ ವೃತ್ತಿ ಆರಂಭಿಸಿದರು. ಜಾತಿಯತೆಯ ಅವಮಾನದಿಂದ ಮುಂಬೈಗೆ ಬಂದರು. ಕಾಲೇಜ್ ಅಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು. ಅವರಿಗೆ ಉಪನ್ಯಾಸ ವೃತ್ತಿಗಿಂತ ಅವರು ವಕೀಲ ವೃತ್ತಿಯಲ್ಲಿ ಮುಂದುವರಿದು ಸಮಾಜ ಬಹಿರವಾಗಿದ್ದ ಅಸ್ಪೃಶ್ಯತೆಯ ಶಾಪಕ್ಕೆ ಬೆಂದು ರೋಸಿ ಹೋಗಿದ್ದ ಸಹೋದರ, ಸಹೋದರಿಯರನ್ನು ಈ ಗುಲಾಮಗಿರಿಯಿಂದ ಮುಕ್ತಗೊಳಿಸಬೇಕೆಂದು ಛಲ ತೊಟ್ಟರು.

ಗಾಂಧೀಜಿ 1921-22ರಲ್ಲಿ ಗುಜರಾತಿ ಪತ್ರಿಕೆಯಾದ ನವಜೀವನದಲ್ಲಿ ವರ್ಣ ಆಶ್ರಮ ಮತ್ತು ಜಾತಿ ಸರಿಯಿದೆ ಮತ್ತು ಸಹ ಭೋಜನ ಹಾಗೂ ಅಂತರ್ ಜಾತಿ ವಿವಾಹವನ್ನು ಒಪ್ಪುವುದಿಲ್ಲ. ಗಾಂಧಿ ನಿಂತ ನೀರಲ್ಲ. ಆತನೊಬ್ಬ ಸಂಶೋಧಕ ಹರಿಯುವ ನದಿಯಂತೆ ಸತ್ಯದ ಶೋಧಕ. ಮುಂದೆ ಗಾಂಧಿ ತನ್ನ ಸೇವಾಗ್ರಾಮ ಆಶ್ರಮದಲ್ಲಿ ದಲಿತರಿಗೆ ಪ್ರವೇಶ ಕೊಟ್ಟರು, ಸಹ ಭೋಜನಕ್ಕೆ ಪ್ರೋತ್ಸಾಹ ಕೊಟ್ಟರು. ಇಷ್ಟಕ್ಕೆ ನಿಲ್ಲದೆ ಆಶ್ರಮದಲ್ಲಿ ದಲಿತ ಮಹಿಳೆ ಅಥವಾ ಪುರುಷನಿಲ್ಲದೆ ಹೋದರೆ ಮದುವೆಗೆ ಅವಕಾಶ ಕೊಡಲಿಲ್ಲ. ಅಂತರ್ ಜಾತಿಗೆ ತನ್ನ ಆಶ್ರಮದಲ್ಲೇ ಅವಕಾಶ ಕೊಟ್ಟು ತನ್ನ ತಪ್ಪನ್ನು ತಿದ್ದಿಕೊಂಡ ವ್ಯಕ್ತಿ.ಕೊನೆ ಕೊನೆಗೆ ಈ ದೇಶದ ಬ್ರಾಹ್ಮಣ್ಯ ಬರಿ ಕಿವಿ ಮಾತಿಗೆ ಬಗ್ಗುವುದಿಲ್ಲ, ಮತ್ತು ಬದಲಾಗುವುದಿಲ್ಲ ಎಂದು ಅರಿತು ಅಂತರ್ ಜಾತಿ ಮದುವೆಗಳಿಗೆ ಮಾತ್ರ ಹೋಗಿ ಹಾರೈಸಿ ಬರುವ ಸಂಕಲ್ಪ ಮಾಡಿದರು.

ಇಲ್ಲಿಂದ ಗಾಂಧಿ, ಬಾಪು ಆದರು. ಅಂಬೇಡ್ಕರ್ ಬಾಬಾ ಸಾಹೇಬ್ ಆದರು. ಇವರಲ್ಲಿ ಮತಬೇಧ ಇತ್ತು. ಆದರೆ, ವೈಯಕ್ತಿಕ ಗೌರವಕ್ಕೆ ಕಿಂಚಿತ್ತೂ ಕಡಿಮೆ ಇರಲಿಲ್ಲ. ಈ ಮತಬೇಧಕ್ಕೆ ಗೌರವ ಕೊಡುತ್ತಾ ಇಬ್ಬರನ್ನೂ ಅರಿಯಬೇಕಿದೆ. ಮಹಾಡ್ ಕೆರೆಯ ಸತ್ಯಾಗ್ರಹದಲ್ಲಿ ಒಂದೇ ಒಂದು ಫೋಟೋ ಹಾಕಲಾಗಿತ್ತು ಅದು ಗಾಂಧೀಜಿಯದು. ಬಾಪೂವಿನ ಪ್ರೇರಣೆಯಿಂದ ಆರಂಭವಾಗಿದ್ದ ʼಹರಿಜನ ಸೇವಕʼ ಸಂಘದ ಕಚೇರಿಯಲ್ಲಿ ಅಂಬೇಡ್ಕರ್ ಅವರ ಫೋಟೋ ನೇತು ಹಾಕಲಾಗಿತ್ತು.

ಬಾಬಾ ಸಾಹೇಬ್ ಮನುಸ್ಮೃತಿಯನ್ನು ಸುಡಲಿಲ್ಲ ಬದಲಿಗೆ ಇವರ ಸಮರ್ಥಕರದ ಎ.ವಿ ಚಿತ್ರೆ, ಜಿ.ಎನ್ ಸಹಸ್ರ ಬುದ್ದೆ, ಸುರೇಂದ್ರ ನಾಥ್ ಟಿಪಾನಿಸ್ ಎಂಬ ಈ  ಮೂರು ಬ್ರಾಹ್ಮಣ ಪಂಡಿತರು ಅದನ್ನು ಸುಟ್ಟರು. ಅದಕ್ಕೆ ಅಂಬೇಡ್ಕರ್ ಅವರು ಸಂಪೂರ್ಣ ಸಹಮತ ನೀಡಿದ್ದರು. ಕಾಲಾ ರಾಮಮಂದಿರ ಪ್ರವೇಶದ ಹೋರಾಟದ ನಂತರ ಅಂಬೇಡ್ಕರ್ ಮಂದಿರ ಪ್ರವೇಶ ನಿಲ್ಲಿಸಿದರು. ಗಾಂಧೀಜಿ ಮೊದಲು ಇದನ್ನು ವಿರೋಧಿಸಿದ್ದರು. ನಂತರ ಅವರು ದಲಿತರಿಗೆ ಮಂದಿರ ಪ್ರವೇಶಕ್ಕೆ ಅವಕಾಶ ಕೊಟ್ಟು ನಾವು ಮಾಡಿದ ದೌರ್ಜನ್ಯದ ಪ್ರತಿಯಾಗಿ ನಮ್ಮ ದೇಹದ ಚರ್ಮದಿಂದ ಚಪ್ಪಲಿ ಮಾಡಿ ತೊಡಿಸಿದರು ನಮ್ಮ ಪಾಪ ಕಡಿಮೆಯಾಗುವುದಿಲ್ಲ. ಎಂದು ಒತ್ತಿ ಹೇಳಿದರು. ಸವರ್ಣೀಯರು ಸಾರ್ವಜನಿಕ ಕ್ಷೇಮ ಕೇಳಬೇಕಂದು ಸಂದೇಶ ನೀಡುತ್ತಾರೆ.

ಕಟವಾಡದ ಒಬ್ಬ ದಲಿತ ಸಹೋದರ ಗಾಂಧಿಗೆ ಬರೆದ ಪತ್ರದಲ್ಲಿ ನಮಗೆ ಅಚ್ಯುತ್ ಎಂದು ಕರೆಯುವುದು ನೋವು ತರುತ್ತೆ, ಅದಕ್ಕೆ ನರೇಶ್ ಮೆಹತಾ ಅವರ ಭಜನೆಯಲ್ಲಿ ಬಳಸಿದ್ದ ಹರಿಜನ ಶಬ್ದದ ಬಗ್ಗೆ ಗಾಂಧಿಗೆ ತಿಳಿಸುತ್ತಾರೆ. ಬಾಪೂ ಅಚ್ಯುತ್ ಬದಲಿಗೆ ಹರಿಜನ ಎಂದು ಕರೆಯುತ್ತಾರೆ. ಆವಾಗ ಬಾಬಾ ಸಾಹೇಬ್ ಈ ಹೆಸರು ಶೋಷಿತರನ್ನು ಬ್ರಾಹ್ಮಣ್ಯದ ಕೆಳಗೆ ಮತ್ತೆ ಬದುಕವಂತೆ ಮಾಡುತ್ತೆ ಎನ್ನುತ್ತಾರೆ. ಗಾಂಧೀಜಿ ಈಶ್ವರನ ಭಕ್ತ, ಎಂದು ಬೋಧಿಸದೆ ಅದನ್ನು ಈಶ್ವರನ ಆತ್ಮೀಯ ಪ್ರೀತಿಪಾತ್ರರು ಎಂದು ಸಂಬೋಧಿಸುತ್ತಾರೆ.

ಬಾಬಾ ಸಾಹೇಬ್ ಕೋಟು ತೊಟ್ಟಿದ್ದು , ಗಾಂಧೀಜಿ ಅಂಗಿ ಕಳಚಿದ್ದು ದಲಿತ, ದಮನಿತರ ಉದ್ದಾರದ ಸಂಕೇತವಾಗಿದೆ. ದೇಶದ ಅಸ್ಪೃಶ್ಯ, ದಲಿತ, ಬಡ ಜನರು ಮೈ ಮುಚ್ಚಿಕೊಳ್ಳಲು ಸಶಕ್ತರಾಗುವವರೆಗೂ ಗಾಂಧಿ ಅಂಗಿಯನ್ನು ತೋಡುವುದಿಲ್ಲವೆಂದು ಸಾರಿದರು. ತನ್ನ ಅರೆ ಮೈಯಲ್ಲಿ ಬ್ರಿಟಿಷ್ ರಾಣಿಯ ಮುಂದೆಯೂ ದಿಟ್ಟವಾಗಿ ನಿಂತ ಈ ಮನುಷ್ಯ, ಬಿಸಿಲು, ಗಾಳಿ, ಮಳೆಗೆ ತಮ್ಮ ಅರೆ ಮೈಯನ್ನು ಪರೀಕ್ಷೆಗೆ ಒಳಪಡಿಸಿದರು. ಬಾಬಾ ಸಾಹೇಬ್ ತನ್ನ ದೇಶದ ಜನ ಒಳ್ಳೆಯ ಬಟ್ಟೆ ಹಾಕಿಕೊಂಡು ಘನತೆಯಿಂದ ಬದುಕಬೇಕೆಂಬ ಆಶಯ ವ್ಯಕ್ತಪಡಿಸಿದ್ದರು. ಇವರುಗಳ ಉದ್ದೇಶ ಒಂದೇ ದೇಶದ ದಲಿತ, ಹಿಂದುಳಿದ ಸಮುದಾಯದ ಜನರು ಘನತೆಯ ಜೀವನ ನಡೆಸಬೇಕು ಎಂಬುದಾಗಿತ್ತು, ಎಂಬುದನ್ನು ಮರೆಯಬಾರದು.

ಯರವಾಡ ಜೈಲಿನಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರಿಗೆ ಪೂನಾ ಒಪ್ಪಂದವಾಯಿತು. ಗಾಂಧಿ ಕಟ್ಟರ್ ಸಂಪ್ರದಾಯವಾದಿಗಳನ್ನು  ಮನವೊಲಿಸಿದ್ದು ಕೂಡ ಪವಾಡ. ಪೂನಾ ಒಪ್ಪಂದ ಗಾಂಧಿಯ ಒಪ್ಪಿಗೆಯ ಮೇರೆಗೆ ಮಧನ್ ಮೋಹನ್ ಮಾಳವೀಯ ಅವರೊಂದಿಗೆ ಆಗಿದೆ. ಇದರಲ್ಲಿ ಹೆಚ್ಚು ರಾಜಕೀಯ ಲಾಭವೂ ಆಗಿದೆಯೆಂದು ಅಂಬೇಡ್ಕರ್ ಹೇಳುತ್ತಾರೆ. ಆದರೆ, ಮೂಲ ವಿಚಾರದಲ್ಲಿ ಇಬ್ಬರಿಗೂ ಭಿನ್ನಾಭಿಪ್ರಾಯ ಇತ್ತು. ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ ಇವತ್ತಿನ ದಿನದಲ್ಲಿ ಸಪ್ರೆಟ್ ಎಲೆಕ್ಟರೇಟ್ಸ್ (ಪ್ರತ್ಯೇಕ ಮತದಾರರು) ಈ ವ್ಯವಸ್ಥೆ ಇವತ್ತಿನ ಸನ್ನಿವೇಶದಲ್ಲಿ ಎಲ್ಲ ವರ್ಗಗಳ ನಡುವೆ ಹೆಚ್ಚು ಕಂದಕ ಉಂಟು ಮಾಡ್ತಾ ಇತ್ತು.

ಗಾಂಧೀಜಿ ಗ್ರಾಮೀಣ ಪ್ರದೇಶದ ಉದ್ದಾರಕ್ಕೆ ಗ್ರಾಮ ಸ್ವರಾಜ್ಯ ಸಾಧಿಸಬೇಕು ಎಂದರು. ಬಾಬಾಸಾಹೇಬ್ ದಲಿತ, ಅಸ್ಪೃಶ್ಯ ಸಮಾಜ ನಗರಕ್ಕೆ ವಲಸೆ ಬಂದು ಬೇರೆ ಬೇರೆ ಉದ್ಯೋಗದಲ್ಲಿ ತೊಡಗಬೇಕು ಎಂದರು. ಇಬ್ಬರ ಮಾತು ಬೇರೆ ಬೇರೆ ದೃಷ್ಟಿಯಲ್ಲಿ ಸರಿಯಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಜಾತೀಯತೆ, ಅಸ್ಪೃಶ್ಯತೆ ಆಚರಣೆ ಇರುವುದು ಸತ್ಯ ಅದನ್ನು ಕಳಚಲು ನಗರಕ್ಕೆ ಹೋಗುವಂತೆ ಬಾಬಾ ಸಾಹೇಬ್ ಕರೆ ನೀಡಿದ್ದರು. ಇವತ್ತಿನ ನಗರಗಳಲ್ಲಿ ಈ ಬಡ ಜನಗಳು ಇರುವ ಪ್ರದೇಶ ಸ್ಲಂ ಆಗಿ ಪರಿವರ್ತನೆಗೊಂಡಿದೆ. ಅವರ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ಗಾಂಧೀಜಿ ಹೇಳಿದ ಗ್ರಾಮಾಭಿವೃದ್ಧಿಯನ್ನು ಮರು ಸ್ಥಾಪಿಸಲು ಭೀಮರಾವ್ ಅವರ ಶಾಸನಗಳನ್ನು ಗಟ್ಟಿಗೊಳಿಸಿ ಬಳಿಸಿಕೊಳ್ಳಬೇಕು.

ಬ್ರಿಟಿಷ್ ಭಾರತ ದ್ವಿರಾಷ್ಟ್ರ ಆಗುವುದು ಆದರ್ಶ ಮತ್ತು ಆಶಾವಾದಿ ಆಗಿದ್ದ ಬಾಪುವಿಗೆ ಕಿಂಚಿತ್ ಇಷ್ಟವಿರಲಿಲ್ಲ. ಕೋಮುವಾದಿಗಳು ನದಿಯಂತೆ ಹರಿಸಿದ ರಕ್ತಪಾತ ನೋಡಿ ಹಿಂಸೆಯನ್ನು ತಡೆಗಟ್ಟಲು ವಲ್ಲದ ಮನಸ್ಸಿನಿಂದ ಒಪ್ಪುತ್ತಾರೆ. ಬಾಬಾ ಸಾಹೇಬ್ ಅವರು ತಾರ್ಕಿಕ ಚಿಂತಕರು. ಅವರ ಸೂಚನೆ ಬೇರೆಯೇ ಆಗಿತ್ತು. ಕಾಶ್ಮೀರ್ ದ ವಿಚಾರದಲ್ಲಿ ಇವತ್ತೂ ಯಾರಿಗೂ ಮಾತನಾಡುವ ದೈರ್ಯವಿಲ್ಲ. ಆದರೆ, ಅಂಬೇಡ್ಕರ್ ಅವರ ಆಲೋಚನೆ ವಿಭಿನ್ನವಾಗಿತ್ತು. ಅವತ್ತಿನ ಸಂದರ್ಭದ ಪ್ರಶ್ನೆಗಳಿಗೆ ಇವತ್ತು ಉತ್ತರ ಸಿಗದು. ಇವತ್ತಿನ ಸನ್ನಿವೇಶದಲ್ಲಿ ಮಾನವ ಒಳತಿಗೆ ಯಾವುದು ಸರಿ ಅನಿಸುತ್ತೋ ಅದನ್ನ ತಾರ್ಕಿಕ ಆಲೋಚನೆಯಿಂದ ಮನುಷ್ಯತ್ವದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಗಾಂಧೀಜಿ ಹತ್ಯೆಗೀಡಾದ ಸುದ್ಧಿ ತಿಳಿದು ಕುಸಿದು ಹೋದರು. ಅವರ ಪಾರ್ಥಿವ ಶರೀರದ ಮುಂದೆ ಕಣ್ಣಿರು ಸುರಿಸಿದ್ದಲ್ಲದೆ, ಶುಗರ್ ಪೇಷಂಟ್ ಆಗಿದ್ದ ಬಾಬಾ ಸಾಹೇಬ್ ಎರಡು ಕಿ.ಮೀ ದೂರ ಶವಯಾತ್ರೆಯಲ್ಲಿ ನಡೆದು ನಂತರ ಕಾರಿನಲ್ಲಿ ಅಂತಿಮ ಸಂಸ್ಕಾರದ ಸ್ಥಳಕ್ಕೆ ತಲುಪಿ ಅಂತಿಮ ನಮನ ಸಲ್ಲಿಸುತ್ತಾರೆ.

ಸವಿತಾ ಅಂಬೇಡ್ಕರ್ ಅವರ ಜೊತೆ ಮದುವೆಯಾದಾಗ, ಬಾಪು ಇದಿದ್ದರೆ ತುಂಬಾ ಖುಷಿ ಪಡ್ತಾ ಇದ್ದರು ಎಂದು ಸರ್ದಾರ್ ಅವರ ಪತ್ರಕ್ಕೆ ಬಾಬಾ ಸಾಹೇಬ್ ಉತ್ತರ ಕೊಡ್ತಾರೆ. ಇದು ಬಾಬಾ ಸಾಹೇಬ್ ಅವರಿಗೆ ಬಾಪುವಿನ ಮೇಲೆದ್ದ ಗೌರವ ಮತ್ತು ಮಿತೃತ್ವದ ಪ್ರತೀಕವಾಗಿದೆ.

ಗಾಂಧಿಯಂತೆ ಅಂಬೇಡ್ಕರ್ ಸತ್ಯಾಗ್ರಹಿ, ಅಹಿಂಸಾವಾದಿ ಆಗಿದ್ದರು. ಇವತ್ತು ಇವರನ್ನು ಆರಾಧನೆ ಮಾಡುವ ಜನರು ಅವರ ಆಲೋಚನೆಗಳನ್ನು ಎಳ್ಳಷ್ಟೂ ಓದದೇ, ತಿಳಿಯದೆ ಅವರ ಹೆಸರುಗಳನ್ನು ಹಿಂಸೆಗೆ ಬಳಸಿಕೊಂಡು ಉದ್ದಟತನ ಮುಂದುವರೆಸಿದ್ದು ಶೋಚನೀಯವಾಗಿದೆ. ಬಿಳಿ ಖಾದಿ ಬಟ್ಟೆ, ಬಿಳಿ ಟೋಪಿ ಹಾಕಿ, ನೀಲಿ ಬಟ್ಟೆ, ಸಂವಿಧಾನ ಪುಸ್ತಕ ಕೈಯಲ್ಲಿಡಿದು, ಮೋಸ ವಂಚನೆ, ದರುಡೆ, ಸುಳ್ಳು, ದ್ವೇಷ ಬಿತ್ತಿ ಇವರುಗಳ ಆಲೋಚನೆ ಲಹರಿಯ ತದ್ವಿರುದ್ಧವಾಗಿ ಹೆಜ್ಜೆ ಹಾಕುತ್ತಾ, ಕೇಕೆ ಹೊಡೆಯುವರು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಓದಿದಾಗ ಅವರ ಮಧ್ಯೆ ದ್ವೇಷ ಭಾವನೆ ಸಿಗುವುದಿಲ್ಲ. ಆದರೆ, ಬೇರೆ ಅವರ ಬರಹಗಳನ್ನು ಓದಿದರೆ ಹಗೆಯನ್ನು ಧ್ರುವೀಕರಣಗೊಳಿಸಿ ದ್ವೇಷ ಜ್ವಾಲೆಯಾಗಿದೆ ಎಂದು ಬಿಂಬಿಸಲಾಗಿದೆ. ಅವರ ಮೂಲ ಕೃತಿಗಳನ್ನು ಓದಿ. ಗಾಂಧೀಜಿಯ ಶಾಂತಿ, ಅಹಿಂಸಾ, ಸತ್ಯಾಗ್ರಹ ಅಂಬೇಡ್ಕರ್ ಅವರ ಹರಿತವಾದ ಲೇಖನಿ, ಸಂವಿಧಾನದ ದಾರಿಯಲ್ಲಿ ಮಾನವೀಯತೆಯನ್ನು ಉಳಿಸಲು ಹೋರಾಟವನ್ನು ಜೀವಂತವಾಗಿಸಬೇಕು. ಇಲ್ಲದೆ ಹೋದರೆ ಮತ್ತೆ ಈ ದೇಶವಾಸಿಗಳು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಗಾಂಧಿ ವಿರುದ್ಧ ಅಂಬೇಡ್ಕರ್ ಅನ್ನದೆ ಅಂಬೇಡ್ಕರ್ ಮತ್ತು ಗಾಂಧಿ ಎಂದು ಸಾಗಿದ್ದಲ್ಲಿ ಮಾತ್ರ ದೇಶಕ್ಕೆ ಭವಿಷ್ಯವಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X