ಬೇಸಿಗೆಯ ಸಮಯದಲ್ಲಿ ಭೀಮಾ ನದಿ ನೀರಿನಿಂದ ಕಬ್ಬು ಬೆಳೆಯುವ ರೈತರಿಗೆ ನದಿ ನೀರು ಬಳಸದಂತೆ ಕಲಬುರಗಿ ಸೂಚನೆ ನೀಡಲು ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಲಬುರಗಿ ಜಿಲ್ಲೆಯ ತಹಸೀಲ್ದಾರರುಗಳಿಗೆ ಪತ್ರ ಬರೆದಿದೆ.
ಭೀಮಾ ನದಿಗೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ, ಅಲ್ಮೇಲ್, ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ, ಕಲಬುರಗಿ ಮತ್ತು ಚಿತ್ತಾಪುರ ತಾಲೂಕುಗಳ ತಹಸೀಲ್ದಾರ್‌ಗಳಿಗೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಪತ್ರ ಬರೆದಿದ್ದು, ನೀರನ್ನು ಕಬ್ಬು ಬೆಳೆಗೆ ಹರಿಸದಿರುವಂತೆ ಎಚ್ಚರಿಸಿದ್ದಾರೆ.
ಬೇಸಿಗೆಗಾಗಿ ನೀರು ಉಳಿಸಬೇಕಿದ್ದು, ರೈತರು ತಮ್ಮ ಬೆಳೆಗಳಿಗೆ ನದಿಯಿಂದ ನೀರು ಹರಿಸಿದರೆ ಕಲಬುರಗಿ, ಅಫಜಲಪುರ, ಜೇವರ್ಗಿ ಮುಂತಾದ ನಗರಗಳಿಗೆ ಕುಡಿಯುವ ನೀರು ಪೂರೈಸುವಲ್ಲಿ ತೊಂದರೆಯಾಗುತ್ತದೆ. ಬೇಸಿಗೆಯಲ್ಲಿ ರೈತರಿಗೆ ಆಸರೆಯಾಗಿರುವ ಏಕೈಕ ಬೆಳೆ ಕಬ್ಬು. ಇದಕ್ಕೆ ನೀರು ಬೇಕೇ ಬೇಕು. ಆದರೆ, ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾವು ಕಷ್ಟಪಟ್ಟು ಕಬ್ಬು ಬೆಳೆದಿದ್ದೇವೆ, ಇಳುವರಿ ಕಡಿಮೆಯಾಗಿದೆ. ಈ ವರ್ಷ ಮಳೆಯಾಗದೇ ನಾವು ಸಂಕಷ್ಟದಲ್ಲಿದ್ದೇವೆ. ಈ ಬೇಸಿಗೆಯಲ್ಲಿ ಬೆಳೆ ಉಳಿಸಲು ಹೋರಾಡುತ್ತಿದ್ದೇವೆ. ನಮ್ಮಲ್ಲಿ ವಿದ್ಯುತ್ ಸಂಪರ್ಕಕೂಡ ಸ್ಥಗಿತಗೊಂಡಿದೆ ಎಂದು ಹೇಳುತ್ತಾರೆ ಅಫಜಲಪುರದ ರೈತರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅಫಜಲಪುರ ತಹಸೀಲ್ದಾರ್ ಸಂಜೀವಕುಮಾರ ದಾಸರ್, ಶಾಸಕ ಎಂ.ವೈ.ಪಾಟೀಲ್ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿದ್ದು, ನದಿ ದಡದಲ್ಲಿರುವ ಹೊಲಗಳಿಗೆ ಸಂಪೂರ್ಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಯೋಚಿಸಲಾಗಿದೆ. ಭೀಮಾ ಮದಿಗೆ ಅಡ್ಡಲಾಗಿ ಸುಮಾರು ನಾಲ್ಕು ಬ್ಯಾರೇಜ್‌ಗಳಿವೆ. ನದಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.
ಒಟ್ಟಿನಲ್ಲಿ, ಭೀಮಾ ನದಿ ದಡದಲ್ಲಿರುವ ರೈತರು ಬೆಳೆಯುಳಿಸಿಕೊಳ್ಳಲು ಒದ್ದಾಡುತ್ತಿದ್ದರೆ, ಅಧಿಕಾರಿಗಳು ಕುಡಿಯುವ ನೀರನ್ನು ಉಳಿಸಿ ಬಳಸಲು ಯೋಚಿಸುತ್ತಿದ್ದಾರೆ.
