ಕಲಬುರಗಿ ನಗರದಲ್ಲಿ ಕುಡಿಯುವ ನೀರು ಸರಬರಾಜು ಅವ್ಯವಸ್ಥೆಯಿಂದ ಕೂಡಿದ್ದು, ಕೂಡಲೇ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಮುಂದಾಗಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಮುಬೀನ್ ಆಗ್ರಹಿಸಿದರು.
ಕಲಬುರಗಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ವಾರದಲ್ಲಿ ಒಂದೆರಡು ಬಾರಿ ಮಾತ್ರ ಕುಡಿಯುವ ಮಾತ್ರ ಸರಬರಾಜು ಮಾಡುತ್ತಾರೆ. ಅದರಲ್ಲೂ ಆ ನೀರು ಕಲುಷಿತವಾಗಿದ್ದು, ಜನರು ಬಳಸಲು ಯೋಗ್ಯವಾಗಿಲ್ಲ. ಸಾರ್ವಜನಿಕರು ದಿನಂಪ್ರತಿ 50-60 ರೂಪಾಯಿ ನೀಡಿ ಕುಡಿಯುವ ನೀರು ಖರೀದಿಸುತ್ತಿದ್ದಾರೆ. ಇದು ಜನಸಾಮಾನ್ಯರಿಗೆ ಮತ್ತಷ್ಟು ಭಾರವಾಗುತ್ತದೆ” ಎಂದರು.
ಕುಡಿಯುವ ನೀರಿನ ಸಮಸ್ಯೆ ಕುರಿತು ಸರ್ಕಾರದ ಗಮನಕ್ಕೆ ತಂದಾಗ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಅವರು ಸಭೆ ನಡೆಸಿ ಉನ್ನತಾಧಿಕಾರಿಗಳನ್ನು ಕರೆದು ತ್ವರಿತವಾಗಿ ಈ ಸಮಸ್ಯೆ ಪರಿಹರಿಸಬೇಕೆಂದು ಹೇಳಿದ್ದರು. ಅದು ಅನುಷ್ಠಾನವಾಗುತ್ತಿಲ್ಲ. ಎಲ್ ಆಂಡ್ ಟಿ ಕಂಪನಿ ಇದರ ಗುತ್ತಿಗೆ ಪಡೆದುಕೊಂಡಿದ್ದು, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಪ್ರತಿ ದಿನ ನೀರು ಸರಬರಾಜು ಮಾಡಿ ಈ ಕುಡಿಯುವ ನೀರಿನ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಮುಂದಾಗಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಪೌರಕಾರ್ಮಿಕರ ಹಕ್ಕೊತ್ತಾಯ ಈಡೇರಿಸುವಂತೆ ಆಗ್ರಹ
ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಂ ಎ ಕದೀರ್, ಉಪಾಧ್ಯಕ್ಷ ಸಿದ್ದಣ್ಣ ಚಕರಾ, ರಾಜ್ಯ ಕಾರ್ಯದರ್ಶಿ ಮುಬೀನ್ ಹಾಗೂ ಜಿಲ್ಲಾ ಕಾರ್ಯದರ್ಶಿ ಮುನೀರ್ ಹಾಶ್ಮಿ ಇದ್ದರು.