ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ದೇವಂತಗಿ ಗ್ರಾಮದಲ್ಲಿ ಅಪ್ರಾಪ್ತೆಯ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಿ, ಬಾವಿಯಲ್ಲಿ ಎಸೆದಿದ್ದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲೆಯಾದ್ಯಂತ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಕಲಬುರಗಿ ಜಿಲ್ಲೆಯ ಹಲವು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದ್ದಾರೆ.
“ಜಿಲ್ಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆಗಳು ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ, ಆಘಾತಕಾರಿ ಸಂಗತಿಯಾಗಿದೆ. ಇದೇ ಶನಿವಾರದಂದು ಆಳಂದ ತಾಲೂಕಿನ ದೇವಂತಗಿ ಗ್ರಾಮದಲ್ಲಿ ಹನ್ನೊಂದು ವರ್ಷದ ಬಾಲೆಯು ತನ್ನ ಚಿಕ್ಕಮ್ಮನ ಮನೆಗೆ ಹೋಗುವಾಗ ದುಷ್ಟ ಕಾಮುಕರು ಎಳೆದೊಯ್ದು ಅತ್ಯಾಚಾರಗೈದು, ಬರ್ಬರವಾಗಿ ಕೊಲೆ ಮಾಡಿ ಬಾವಿಗೆ ಎಸೆದ ಘಟನೆ ನಡೆದಿದ್ದು, ಳಂದ ತಾಲೂಕಿನಲ್ಲಿ ನಡೆದ ಮೂರನೇ ಘಟನೆಯಾಗಿದೆ” ಎಂದು ಸಂಘಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

“ಬಾಲಕಿ ಅತ್ಯಾಚಾರ ಪ್ರಕರಣ ಹೆಣ್ಣು ಹೆತ್ತವರ ಎದೆಯಲ್ಲಿ ಜ್ವಾಲೆ ಮತ್ತು ತೀವ್ರ ಚಿಂತೆಯನ್ನು ಹುಟ್ಟುಹಾಗಿದೆ. ಮಕ್ಕಳನ್ನು ಹೀಗೆ ನೋಡ ನೋಡುತ್ತಲೇ ಕಳೆದುಕೊಳ್ಳುವುದು ಅಂದರೆ ಏನರ್ಥ?. ಈ ಬಾಲೆಯನ್ನು ಅತ್ಯಾಚಾರಗೈದು ಕೊಂದು ಹಾಕಿದ ಕ್ರೂರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಪೋಕ್ಸೊ ಕಾಯ್ದೆಯಡಿ ಬಂಧಿಸಿ ತೀವ್ರ ಶಿಕ್ಷೆಗೆ ಒಳಪಡಿಸಬೇಕು” ಎಂದು ಜಿಲ್ಲೆಯ ಎಲ್ಲ ಪ್ರಗತಿಪರ ಸಂಘಟನೆಗಳು ಒತ್ತಾಯಿಸಿವೆ.
“ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗಳು ಏನು ಮಾಡುತ್ತಿವೆ?. ಈ ರೀತಿಯ ಅತ್ಯಾಚಾರ, ಕೊಲೆಗಳನ್ನು ತಡೆಗಟ್ಟುವ ದಿಕ್ಕಿನಲ್ಲಿ ಅವುಗಳ ಕಾರ್ಯಯೋಜನೆ ಏನು ಎಂಬುದನ್ನು ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು.
“ಆತಂಕ, ತಲ್ಲಣವನ್ನು ಹುಟ್ಟು ಹಾಕುತ್ತಿರುವ ಇಂತಹ ಕೃತ್ಯಗಳನ್ನು ತಡೆಯುವುದು ಯಾವುದೇ ನಾಗರಿಕ ಸಮಾಜದ ಮತ್ತು ಪ್ರಜಾಪ್ರಭುತ್ವದ ಜವಾಬ್ದಾರಿಯಾಗಿದೆ. ಆದ್ದರಿಂದ ನಾಡಿನ ಸಮಸ್ತ ಜನತೆಯು ಇಂತಹ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಬೇಕು. ಇಂತಹ ಪ್ರಕರಣಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು” ಎಂದರು.

“ಪ್ರಜಾಪ್ರಭುತ್ವವು ಈ ಕುರಿತು ದುಷ್ಕರ್ಮಿಗಳನ್ನು ಸದೆ ಬಡಿಯಲು ಕೂಡಲೇ ಕಾರ್ಯತಂತ್ರ ರೂಪಿಸಬೇಕು. ಯುದ್ಧೋಪಾದಿಯಲ್ಲಿ ಜಾರಿಗೊಳಸಲು ಜಿಲ್ಲಾಡಳತ ಸಜ್ಜಾಗಬೇಕು. ಸಂಬಂಧಪಟ್ಟ ಇಲಾಖೆಗಳು ಈ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಜಿಲ್ಲೆಯಲ್ಲಿ ಲಿಂಗ ಭೇದ ನೀತಿಯು ಪ್ರಖರವಾಗಿದೆ. ಹೆಂಗಸರು-ಹೆಣ್ಣುಮಕ್ಕಳ ಬಗ್ಗೆ ಸಮಾಜದಲ್ಲಿ ತಿರಸ್ಕಾರದ ಭಾವನೆಯೂ ಇದೆ. ಇಂತಹ ಸಂದರ್ಭದಲ್ಲಿ ಇಡೀ ಸಮಾಜವನ್ನೇ ಲಿಂಗಸಂವೇದನಾಶೀಲಗೊಳಿಸುವ ದಿಕ್ಕಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಮತ್ತು ಪೋಷಕರನ್ನೊಳಗೊಂಡು ಸಮಾಜವನ್ನು ಲಿಂಗ ಸಮಾನತೆಯ ವಿವೇಕದತ್ತ ಸಜ್ಜುಗೊಳಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅತ್ಯಾಚಾರ ಪ್ರಕರಣ; ಸಮಗ್ರ ತನಿಖೆಗೆ ಒತ್ತಾಯ
ಜೇವರ್ಗಿ ತಾಲೂಕು ಕರ್ನಾಟಕ ಪ್ರದೇಶ ಕುರುಬ ಸಂಘ (ಯುವ ಘಟಕ), ಸಂಗೊಳ್ಳಿ ರಾಯಣ್ಣ ಯುವಕ ಸಂಘ ಜೇವರ್ಗಿ ಹಾಗೂ ತಾಲೂಕಿನ ವಿವಿಧ ಸಂಘಗಳು, ಪ್ರಗತಿಪರ ಸಂಘಟನೆಗಳ ಒಕ್ಕೂಟ ಕಲಬುರಗಿ, ಸ್ಲಂ ಜನಾಂದೋಲನ ಜಿಲ್ಲಾ ಘಟಕ ಕಲಬುರಗಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘ ತಾಲೂಕು ಸಮಿತಿ ಆಳಂದ, ದಲಿತ ಹಕ್ಕುಗಳ ತಾಲೂಕು ಸಮಿತಿ ಆಳಂದ ಸೇರಿದಂತೆ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಿದರು.