ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆಯವರು ಸೋತಿದ್ದರಿಂದ ಖರ್ಗೆಯವರಿಗೆ ಹೆಚ್ಚು ನಷ್ಟ ಆಗಲಿಲ್ಲ. ಇವರ ಸೋಲಿನಿಂದ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಬಹಳ ದೊಡ್ಡ ನಷ್ಟವಾಗಿದೆ. ಈ ಬಾರಿ ಮತ್ತೆ ತಪ್ಪಾಗಬಾರದು. ಅಭಿವೃದ್ಧಿ ಪರವಾಗಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರ ಪರವಾಗಿ ಕಲಬುರಗಿಯ ಅಫಜಲಪೂರ ತಾಲೂಕನಲ್ಲಿ ನಡೆದ ಬೃಹತ್ ಜನಸಮಾವೇಶವನ್ನು ಉದ್ಘಾಟಿಸಿ, ಪಕ್ಷಕ್ಕೆ ಸೇರ್ಪಡೆಗೊಂಡ ಬಿಜೆಪಿ ಮುಖಂಡರುಗಳನ್ನು ಸ್ವಾಗತಿಸಿ ಅವರು ಮಾತನಾಡಿದರು.
371ಜೆ ಜಾರಿ ಆಗುವುದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಮುಖ ಕಾರಣರು. ಇವರ ಹೋರಾಟ, ಶ್ರಮದಿಂದಾಗಿ ಈ ಭಾಗಕ್ಕೆ 371ಜೆ ಜಾರಿಯಾಗಿ ಲಕ್ಷಾಂತರ ಕುಟುಂಬಗಳಿಗೆ ದೊಡ್ಡ ಮಟ್ಟದ ವರದಾನವಾಗಿದೆ ಎಂದರು.
ಬಿಜೆಪಿಯವರು 371ಜೆ ಕೊಡಲು ಖಡಾಖಂಡಿತವಾಗಿ ನಿರಾಕರಿಸಿದ್ದರು. ಆದರೆ ಖರ್ಗೆಯವರ ಕಾರಣದಿಂದ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ಮಲ್ಲಿಕಾರ್ಜುನ ಖರ್ಗೆಯವರ ಸೋಲಿನಿಂದ ಈ ಭಾಗಕ್ಕೆ ಬಹಳ ನಷ್ಟ ಆಗಿದೆ. ಈ ಬಾರಿ ಅದಕ್ಕೆ ಅವಕಾಶ ಕೊಡಬಾರದು ಎಂದರು.
ಕೆ.ಕೆ.ಆರ್.ಡಿ.ಬಿ ಮೂಲಕ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ 5,000 ಕೋಟಿ ರೂ. ನೀಡಲಾಗಿದೆ. ಎಲ್ಲಾ ಜಾತಿ, ಎಲ್ಲಾ ಧರ್ಮದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ ಜೊತೆಗೆ ನುಡಿದಂತೆ ನಡೆದು, ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದರು.
ಬಿಜೆಪಿ ಸಂಸದರ ಅಸಮರ್ಥತೆಯ ಕಾರಣದಿಂದ ರಾಜ್ಯಕ್ಕೆ ಬರಬೇಕಾದ ಬರಗಾಲದ ಪಾಲನ್ನು ಪಡೆಯಲು ನಾವು ಸುಪ್ರೀಂಕೋರ್ಟ್ ಹೋಗಬೇಕಾಯಿತು. ಬರಗಾಲದ ಅನುದಾನದ ವಿಚಾರದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಚಿವ ಅಮಿತ್ ಶಾ ರಾಜ್ಯದ ಜನರಿಗೆ ದೊಡ್ಡ ಸುಳ್ಳು ಹೇಳಿದ್ದರು. ಆದರೆ, ಸುಪ್ರೀಂ ಕೋರ್ಟ್ ನಲ್ಲಿ ಸತ್ಯ ಒಪ್ಪಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ಸಚಿವ ಶರಣಪ್ರಕಾಶ್ ಪಾಟೀಲ್, ಡಾ. ಅಜಯ್ ಸಿಂಗ್, ಬಾಬುರಾವ್ ಚಿಂಚನಸೂರ, ಮಾಲೀಕಯ್ಯ ಗುತ್ತೇದಾರ, ಅಲ್ಲಮಪ್ರಭು ಪಾಟೀಲ್, ಎಮ್.ವೈ. ಪಾಟೀಲ್, ಪಕ್ಷದ ಕಾರ್ಯಕರ್ತರು, ಸದ್ಯಸರು ಇನ್ನಿತರರು ಉಪಸ್ಥಿತರಿದ್ದರು.
