ಕಲಬುರಗಿ ಜಿಲ್ಲೆಯಲ್ಲಿ ರಾಜಕೀಯ ವೈಷಮ್ಯಗಳಿಂದಾಗಿ ನಡೆಯುವ ಗಲಾಟೆಗಳು ಹೆಚ್ಚುತ್ತಿವೆ. ಈ ಹಿಂದೆ, ಅಂಬೇಡ್ಕರ್ ಜಯಂತಿ ವೇಳೆ ಯುವಕನೊಬ್ಬನನ್ನು ಹತ್ಯೆ ಮಾಡಲಾಗಿತ್ತು. ಇದೀಗ, ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದ ಕಾರಣಕ್ಕೆ ಯುವಕನೊಬ್ಬನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಜಿಲ್ಲೆಯ ಅಫಜಲಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಜಾವೀದ್ ಚಿನ್ನವಳ್ಳಿ ಎಂಬ ಯುವಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಮೃತದೇಹವನ್ನು ಬಾವಿಗೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರವಷ್ಟೇ ಕಲಬುರಗಿಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಗಿದಿತ್ತು. ಮತದಾನ ಮುಗಿದ ಒಂದು ದಿನದ ಬಳಿಕ, ಬುಧವಾರ ಸಂಜೆ ದುಷ್ಕರ್ಮಿಗಳು ಜಾವೀದ್‌ನನ್ನು ಪಾರ್ಟಿ ಮಾಡಲೆಂದು ಕರೆದೊಯ್ದಿದ್ದಾರೆ.
ಅಲ್ಲಿ, ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದರ ಬಗ್ಗೆ ಚರ್ಚೆ ನಡೆದಿದ್ದು, ಜಾವಿದ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ. ಗಾಣಗಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಏಪ್ರಿಲ್ ತಿಂಗಳಿನಲ್ಲಿ ಕಲಬುರಗಿಯ ಅಶೋಕ್ ನಗರದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ವೇಳೆ ಅಶೋಕ್ ಎಂಬ ಯುವಕನನ್ನು ಹತ್ಯೆ ಮಾಡಲಾಗಿತ್ತು. ಕೃತ್ಯ ಎಸಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೆ, ಈ ಘಟನೆಗೂ ಕೆಲ ದಿನಗಳ ಹಿಂದೆ, ಕಲಬುರಗಿಯ ಬಿಜೆಪಿ ಸಂಸದ ಉಮೇಶ್ ಜಾಧವ್ ಆಪ್ತ ಗಿರೀಶ್ ಚಕ್ರ ಎಂಬಾತನನ್ನು ಕೊಲೆ ಮಾಡಲಾಗಿತ್ತು.