ಲೈಂಗಿಕ ದೌರ್ಜನ್ಯ ಪ್ರಕರಣ; ಸಂತ್ರಸ್ತೆಯರ ಪರ ಇಡೀ ಸಮಾಜವೇ ನಿಲ್ಲಬೇಕಿದೆ

Date:

ಇಷ್ಟರಲ್ಲಾಗಲೇ ಸರ್ಕಾರದ ಪ್ರತಿನಿಧಿಗಳು ಹಾಸನಕ್ಕೆ ತೆರಳಿ ನಾಗರಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿತ್ತು. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ, ಧೈರ್ಯವಾಗಿರಿ ಎಂಬ ಅಭಯ ನೀಡಬೇಕಿತ್ತು. ಇನ್ನಾದರೂ ಇದು ಮಹಿಳೆಯರ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ, ಮಹಾಲಕ್ಷ್ಮಿ ಯೋಜನೆ ಜಾರಿ ಮಾಡುತ್ತಿರುವ ಸರ್ಕಾರದ ಆದ್ಯತೆಯಾಗಬೇಕು.

 

ವಿಕೃತ ಕಾಮಿ ಸಂಸದ ಪ್ರಜ್ವಲ್‌ ರೇವಣ್ಣನ ಕಾಮಕಾಂಡ ಬಯಲಾದ ನಂತರ ಎರಡು ವಾರದಿಂದ ನಡೆಯುತ್ತಿರುವ ರಾಜಕೀಯ ಕೆಸರೆರಚಾಟ ಗಮನಿಸಿದರೆ ಈ ಹೀನ ಕೃತ್ಯದಿಂದ ರಾಜಕೀಯ ನಾಯಕರಾರೂ ದಿಗ್ಭ್ರಾಂತಿಗೆ ಒಳಗಾಗಿಲ್ಲ. ರಾಜ್ಯದ ಮಾನ, ಹೆಣ್ಣುಮಕ್ಕಳ ಮಾನ–ಪ್ರಾಣದ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ.

ರಾಷ್ಟ್ರ ಮಟ್ಟದ ನಾಯಕರಿಂದ ಹಿಡಿದು, ತಳಮಟ್ಟದ ನಾಯಕರವರೆಗೂ ಈ ಪ್ರಕರಣವನ್ನು ವ್ಯಕ್ತಿಯೊಬ್ಬನ ಹೀನ ಕೃತ್ಯವಾಗಿ, ಸಮಾಜವೇ ತಲೆತಗ್ಗಿಸುವ ಘಟನೆಯಾಗಿ ನೋಡದೇ, ʼಯಾರದ್ದೋ ಷಡ್ಯಂತ್ರ, ಯಾರನ್ನೋ ರಾಜಕೀಯವಾಗಿ ಹಣಿಯಲು ಹೆಣೆಯಲಾಗಿರುವ ಕುತಂತ್ರ, ರಾಜಕೀಯ ಸೇಡಿನ ಸಂಚುʼ, ಎನ್ನುತ್ತಿರುವುದು ನಾಚಿಕೆಗೇಡು. ಸಂವೇದನಾರಹಿತ ಕೃತ್ಯ. ಶತಮಾನಗಳಿಂದ ಬೇರು ಬಿಟ್ಟಿರುವ ಪುರುಷ ಪಾರಮ್ಯದ ಮತ್ತೊಂದು ಮುಖ. ನಾಗರಿಕ ಸಮಾಜವು ನಾಚಿಕೆಯಿಂದ ತಲೆ ತಗ್ಗಿಸಲು, ಅಪರಾಧಿಯೆಂದು ಒಪ್ಪಿ ನ್ಯಾಯದ ಕಟಕಟೆಯಲ್ಲಿ ನಿಲ್ಲಲು ಇದಕ್ಕಿಂತ ಇನ್ನೂ ಹೆಚ್ಚಿನ ಘೋರವೇನು ನಡೆಯಬೇಕಿದೆ!?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಏಪ್ರಿಲ್‌ 22ರಂದು ಪ್ರಜ್ವಲನ ಕಾಮಪುರಾಣದ ವಿಡಿಯೊವಿರುವ ಪೆನ್‌ಡ್ರೈವ್‌ ಹಾಸನದ ಹಾದಿ ಬೀದಿಗಳಲ್ಲಿ ಸಿಗುವ ಮೂಲಕ ದೇಶವೇ ಕಂಡು ಕೇಳರಿಯದ ಬ್ರಹ್ಮಾಂಡ ಲೈಂಗಿಕ ಹಗರಣ ಬಹಿರಂಗಗೊಂಡಿತ್ತು. . 25 ರಂದು ರಾಜ್ಯ ಮಹಿಳಾ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಈ ಪ್ರಕರಣವನ್ನು ಎಸ್‌ಐಟಿ ಮೂಲಕ ತನಿಖೆ ನಡೆಸಬೇಕು ಎಂದು ಮನವಿ ಮಾಡಿತ್ತು. ಏಪ್ರಿಲ್‌ 26ರಂದು ರಾಜ್ಯದಲ್ಲಿ ಹಾಸನ ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿತ್ತು. 27ರಂದು ಸರ್ಕಾರ ಎಸ್‌ಐಟಿ ಮೂಲಕ ತನಿಖೆ ನಡೆಸುವ ತೀರ್ಮಾನ ಮಾಡಿತ್ತು. ಅಷ್ಟರಲ್ಲಾಗಲೇ ಸರಣಿ ಅತ್ಯಾಚಾರದ ಆರೋಪಿ ಪ್ರಜ್ವಲ್‌ ರೇವಣ್ಣ ಸಂಸದನ ವಿಶೇಷಾಧಿಕಾರದ ಪಾಸ್‌ಪೋರ್ಟ್ ಬಳಸಿ ಪರಾರಿಯಾಗಿದ್ದ. ಜರ್ಮನಿಯಲ್ಲಿ ಲ್ಯಾಂಡ್‌ ಆಗಿದ್ದ. ಪ್ರಜ್ವಲ್‌ ವಿರುದ್ಧ ರಾಜ್ಯದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ

ಪ್ರಜ್ವಲ್‌ ಲೈಂಗಿಕ ದೌರ್ಜನ್ಯದ ವಿಡಿಯೊ ಹೊರಬಂದ ನಂತರ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದ್ದ ವಿಚಾರವೆಂದರೆ ಆತ ತನ್ನ ತಾಯಿಗೆ ತಾಯಿಯಾಗಬಹುದಿದ್ದ ಸುಮಾರು 65 ವಯಸ್ಸಿನ ವೃದ್ದೆಯೊಬ್ಬರನ್ನು ಬಲತ್ಕರಿಸಿ ಅತ್ಯಾಚಾರ ಎಸಗಿರುವ ಮತ್ತು, ಆಕೆ ಬೇಡವೆಂದು ಪ್ರಜ್ವಲ್ ನ ಕಾಲಿಗೆ ಬಿದ್ದು ಬಿಟ್ಟುಬಿಡುವಂತೆ ಅಂಗಲಾಚುವ ದೃಶ್ಯ ಇದೆ ಎಂದು ವಿಡಿಯೊ ನೋಡಿದ ಹಲವರು ಬಹಿರಂಗವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದಾರೆ. ವಿಡಿಯೊದಲ್ಲಿ ಹಲವು ಮಹಿಳೆಯರು ಯಾವುದೋ ಆಮಿಷ, ಒತ್ತಡಕ್ಕೊಳಗಾಗಿ ಆತನ ಕಾಮವಾಂಛೆಗೆ ಸಹಕರಿಸಿದಂತೆ ಮೇಲುನೋಟಕ್ಕೆ ಕಂಡು ಬರುತ್ತದೆ. ಇನ್ನು ವೃದ್ಧ ಮಹಿಳೆಯ ಮೇಲೆ ಪ್ರಜ್ವಲನ ಅತ್ಯಾಚಾರಕ್ಕೆ ಬಲವಾದ ಸಾಕ್ಷಿ ವಿಡಿಯೊದಲ್ಲಿದೆ. ಈ ವಾಸ್ತವವನ್ನು ಅರಿತ ಆರೋಪಿಗಳು ಆ ವೃದ್ಧ ಮಹಿಳೆಯನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು. ಈ ಪ್ರಕರಣದಲ್ಲಿ ರೇವಣ್ಣ ಬಂಧನಕ್ಕೊಳಗಾಗಿದ್ದಾರೆ.

ಈ ಅಪ್ಪ ಮಗನ ಜೋಡಿ ಎಳೆ ವಯಸ್ಸಿನ ಹೆಣ್ಣುಮಕ್ಕಳಿಂದ ಹಿಡಿದು ವೃದ್ಧೆಯರವರೆಗೆ ಯಾರೊಬ್ಬರಲ್ಲೂ ಸಹೋದರಿಯರನ್ನು, ತಾಯಂದಿರನ್ನು ಕಂಡಿಲ್ಲ. ಅವರೆಲ್ಲರನ್ನೂ ಭೋಗದ ವಸ್ತುವಾಗಿ ಕಾಮಲಾಲಸೆಯಿಂದ ಮಾತ್ರ ಕಂಡಿದ್ದಾರೆ. ಈ ಪ್ರವೃತ್ತಿ ಅವರ ಮನೋವಿಕಾರಕ್ಕೆ ಹಿಡಿದ ಕನ್ನಡಿಯಾಗಿದೆ. ಅಷ್ಟೇ ಅಲ್ಲ ಫ್ಯೂಡಲ್‌ ಮನಸ್ಥಿತಿಯ ಪ್ರತೀಕ. ಇದರಾಚೆಗಿನ ರಾಜಕೀಯ ಕೆಸರೆರಚಾಟ ಮತ್ತಷ್ಟು ಹೇಸಿಗೆಯದು. “ಉಪ್ಪು ತಿಂದವರು ನೀರು ಕುಡಿಯಲೇ ಬೇಕುಎಂದು ಆರಂಭಿಕ ಪ್ರತಿಕ್ರಿಯೆ ನೀಡಿದ್ದ ಜೆಡಿಎಸ್‌ ಅಧ್ಯಕ್ಷರು ನಂತರ ದಿನಕ್ಕೊಂದು ಬಗೆಯ ಹೇಳಿಕೆ ನೀಡುತ್ತಿದ್ದಾರೆ. ಅವರ ಪಕ್ಷದ ಕಾರ್ಯಕರ್ತರು ರಾಜ್ಯಾದ್ಯಂತ ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದನ್ನು ನಾಡೇ ನೋಡಿದೆ. ತಮ್ಮ ಕುಲಪುತ್ರನ ಹೇಸಿಗೆ ಕೃತ್ಯವನ್ನು ಖಂಡಿಸದೆ, ಆತ ತಲೆಮರೆಸಿ ತಪ್ಪಿಸಿಕೊಂಡು ಹೋಗಿರುವ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಸೋಗಲಾಡಿ ಹೇಳಿಕೆ ನೀಡುತ್ತ ನಿರ್ಲಜ್ಜೆಯಿಂದ ವರ್ತಿಸುತ್ತಿದ್ದಾರೆ. ಆದರೆ ಸಂತ್ರಸ್ತ ಮಹಿಳೆಯರ ರಕ್ಷಣೆಯ ಬಗ್ಗೆ, ಆ ಹೆಣ್ಣುಮಕ್ಕಳ ಘನತೆ ಮಣ್ಣು ಪಾಲಾಗಿರುವ ಬಗ್ಗೆ ಒಂದೇ ಒಂದು ಹೇಳಿಕೆ ಅವರಿಂದ ಹೊರಬಿದ್ದಿಲ್ಲ.

H D Revanna
ಎಚ್‌ ಡಿ ರೇವಣ್ಣ

ಸಂತ್ರಸ್ತರಲ್ಲಿ ಅಥವಾ ದೌರ್ಜನ್ಯಕ್ಕೆ ಒಳಗಾದವರಲ್ಲಿ ಜೆಡಿಎಸ್‌ ಪಕ್ಷದ ಗೆಲುವಿಗಾಗಿ ಕರಪತ್ರ ಹಿಡಿದು ಮನೆಮನೆಗೆ ಹೋಗಿ ವೋಟು ಕೇಳಿದ ಕಾರ್ಯಕರ್ತೆಯರೂ ಇದ್ದಾರೆ. ವೋಟು ಹಾಕಿದವರೂ ಇದ್ದಾರೆ. ಅಷ್ಟೇ ಅಲ್ಲ ತಮ್ಮದೇ ಒಕ್ಕಲಿಗ ಸಮುದಾಯದ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಂಧುಬಳಗ ಸಂಬಂಧಿಗಳೂ ಇದ್ದಾರೆ. ಅತ್ಯಾಚಾರಕ್ಕೊಳಗಾದ ವೃದ್ಧೆ ಭವಾನಿ ರೇವಣ್ಣ ಅವರ ಸಂಬಂಧಿ! ಆದರೂ, ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಬಿಜೆಪಿಜೆಡಿಎಸ್‌ ಪ್ರತಿಭಟನೆ ಮಾಡುವ ಬದಲು ಕಾಂಗ್ರೆಸ್‌ ಷಡ್ಯಂತ್ರ, ಗೌಡರ ಕುಟುಂಬಕ್ಕೆ ಕಳಂಕ ತರುವ ಹುನ್ನಾರ ಎಂಬ ಪ್ರಾಯೋಜಿತ ಪ್ರತಿಭಟನೆಗೆ ಮತ್ತೆ ತಮ್ಮದೇ ಸಮುದಾಯ, ಪಕ್ಷದ ಕಾರ್ಯಕರ್ತರನ್ನು ಬಳಸುತ್ತಿದ್ದಾರೆ ಎಂಬುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಇದು ಪಾಳೇಗಾರಿಕೆ, ಗಂಡಾಳ್ವಿಕೆಯ ಮದದಲ್ಲಿ ಮೆರೆಯುತ್ತಿದ್ದ ರಾಜಕೀಯ ಕುಟುಂಬವೊಂದರ ದಬ್ಬಾಳಿಕೆಯ ಪ್ರಶ್ನೆಯೂ ಹೌದು.

SIT ತನಿಖೆ ವಿರುದ್ಧ ಜೆಡಿಎಸ್‌ ಕಾರ್ಯಕರ್ತರ ಪ್ರತಿಭಟನೆ

ಮೂರು ಸಾವಿರಕ್ಕೂ ಹೆಚ್ಚು ಅಶ್ಲೀಲ ವಿಡಿಯೊಗಳಿವೆ ಎಂದು ಹೇಳಲಾಗುತ್ತಿದೆ. ಸುಮಾರು ಮುನ್ನೂರು ಹೆಣ್ಣುಮಕ್ಕಳ ಮೇಲೆ ಪ್ರಜ್ವಲ್‌ ಲೈಂಗಿಕ ವಿಕಾರ ಮೆರೆದಿದ್ದಲ್ಲದೇ ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿಟ್ಟುಕೊಂಡು ಇಂದು ಅವು ಸಾರ್ವಜನಿಕಗೊಂಡು ಆ ಹೆಣ್ಣುಮಕ್ಕಳು ಸಮಾಜದಲ್ಲಿ ಘನತೆ, ಗೌರವದಿಂದ ಬದುಕುವ ಹಕ್ಕನ್ನು ಕಿತ್ತುಕೊಂಡ ವ್ಯವಸ್ಥೆ, ದುರಾಡಳಿತದ ಬಗ್ಗೆ ಜನ ಮಾತನಾಡಬೇಕಿದೆ. ಇದು ಸಾಮಾಜಿಕ ಶೀಲದ ಪ್ರಶ್ನೆಯೂ ಆಗಿದೆ. ಯಾಕೆಂದರೆ ಆಯಾ ಪಕ್ಷದ ಕಾರ್ಯಕರ್ತರು ಸ್ಪರ್ಧೆಗೆ ಬಿದ್ದವರಂತೆ ಬೇರೆ ಪಕ್ಷದ ನಾಯಕರ ಅಶ್ಲೀಲ ವಿಡಿಯೊ, ತಿರುಚಿದ ಹಳೆಯ ಚಿತ್ರಗಳನ್ನು ಮುಲಾಜಿಲ್ಲದೇ, ಕಾನೂನಿನ ಭಯವಿಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಲು ಶುರು ಮಾಡಿದ್ದಾರೆ. ಅವರಿಗೆ ಹೆಣ್ಣಿನ ಘನತೆ, ಸಾಮಾಜಿಕ ಶೀಲ ಯಾವುದೂ ಮುಖ್ಯ ಅಲ್ಲ.

ಅನೇಕ ಮಹಿಳೆಯರು ಸ್ವಂತ ಅಥವಾ ಕುಟುಂಬದ ಲಾಭಕ್ಕಾಗಿ ಪ್ರಜ್ವಲನ ಬಳಿ ಹೋಗಿದ್ದಾರೆ. ಆತನ ಲಾಲಸೆ ಈಡೇರಿಸಿದ್ದಾರೆ. ಅಧಿಕಾರಿಗಳು, ಬೇರೆ ಬೇರೆ ಕ್ಷೇತ್ರದ ಮಹಿಳೆಯರು, ಸರ್ಕಾರಿ ಉದ್ಯೋಗಿಗಳು ಆತನ ಕಾಮವಾಂಛೆಗೆ ಬಲಿಯಾಗಿದ್ದಾರೆ” ಎಂಬ ಮಾತುಗಳು ಕೇಳಿಬಂದಿವೆ. ಎಸ್‌ಐಟಿಗೆ ಹೇಳಿಕೆ ನೀಡಿರುವ ಇಬ್ಬರು ಸಂತ್ರಸ್ತ ಪೊಲೀಸ್‌ ಸಿಬ್ಬಂದಿ ಇದೇ ಆರೋಪ ಮಾಡಿದ್ದಾರೆ. ವರ್ಗಾವಣೆಗೆ ಸಂಸದರ ನೆರವು ಕೇಳಲು ಹೋದರೆ ಫೋನ್‌ ಸಂಪರ್ಕದಲ್ಲಿ ಇರುವಂತೆ ಹೇಳಿದ್ದಲ್ಲದೇ, ರಾತ್ರಿ ವೇಳೆ ವಿಡಿಯೊ ಕಾಲ್‌ ಮಾಡಿ ಕಾಮಪ್ರಚೋದಕ ಮಾತುಗಳನ್ನಾಡುತ್ತಾ ಬೆತ್ತಲಾಗುವಂತೆ ಪ್ರಚೋದಿಸಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಸಂಸದನಾಗಿ ಆತನಿಗೆ ಇರುವ ಅಧಿಕಾರ, ಪ್ರಭಾವಳಿ ಬಳಸಿಕೊಂಡು ವರ್ಗಾವಣೆ, ಗುತ್ತಿಗೆ, ನೇಮಕಾತಿ, ವೃತ್ತಿಪರ ಕಾಲೇಜುಗಳಲ್ಲಿ ಸೀಟುಗಳು ಮುಂತಾದ ಸಹಾಯ ಕೇಳಿಕೊಂಡು ಬಂದವರನ್ನು ಬಳಸಿಕೊಂಡಿದ್ದಾನೆ. ಆತನಿಗೆ ಅಂತಹ ಚಟ ಇಲ್ಲದಿದ್ದರೆ ಇಷ್ಟೊಂದು ಹೆಣ್ಣುಮಕ್ಕಳು ಇವತ್ತು ಅಪಮಾನದಿಂದ ನರಳುವ ಸ್ಥಿತಿ ಬರುತ್ತಿರಲಿಲ್ಲ. ಆ ಮಹಿಳೆಯರನ್ನು ಇಂತಹ ಸ್ಥಿತಿಗೆ ತಳ್ಳಿದ ವ್ಯವಸ್ಥೆ ಎಂತದ್ದು ಎಂದು ಚಿಂತಿಸಬೇಕಾಗಿದೆ.

ಇಡೀ ದೇಶವೇ ಬೆಚ್ಚಿ ಬಿದ್ದಿರುವ ಈ ಪ್ರಕರಣದ ಆರೋಪಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ʼಮಾಸ್‌ ರೇಪಿಸ್ಟ್‌ʼ ಕುಖ್ಯಾತಿಯ, ಕರ್ನಾಟಕಕ್ಕೆ ಬಹುದೊಡ್ಡ ಕಳಂಕ ತಂದ ಅಪ್ಪ –ಮಗನ ಮೇಲೆ ಮುಲಾಜಿಲ್ಲದ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಒತ್ತಡವೋ, ಆಮಿಷವೋ ಇಲ್ಲವೇ ಭಯದ ಕಾರಣಗಳಿಗಾಗಿ ಅತ್ಯಾಚಾರಕ್ಕೊಳಗಾದ ಮಹಿಳೆಯರು ಧೈರ್ಯದಿಂದ ಎಸ್‌ಐಟಿ ಮುಂದೆ ಬಂದು ದೂರು ಕೊಡುವಂತಹ ಭದ್ರತೆಯ ವಾತಾವರಣ ನಿರ್ಮಿಸಬೇಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನದ ಮಹಿಳೆಯರಿಗೆ ನೈತಿಕ ಧೈರ್ಯ ತುಂಬುವ ನಿಟ್ಟಿನಲ್ಲಿ ಯಾವುದೇ ಸಂದೇಶ ನೀಡಿಲ್ಲ ಎಂಬ ಆರೋಪ ಪ್ರಗತಿಪರ ವಲಯದಲ್ಲಿ ಕೇಳಿ ಬಂದಿದೆ. ಇದು ಸಹಜ. ಇಷ್ಟರಲ್ಲಾಗಲೇ ಸರ್ಕಾರದ ಪ್ರತಿನಿಧಿಗಳು ಹಾಸನಕ್ಕೆ ತೆರಳಿ ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ, ಧೈರ್ಯವಾಗಿರಿ ಎಂಬ ಅಭಯ ನೀಡಬೇಕಿತ್ತು. ಇದು ಮಹಿಳೆಯರ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ, ಮಹಾಲಕ್ಷ್ಮಿ ಯೋಜನೆ ಜಾರಿ ಮಾಡುತ್ತಿರುವ ಸರ್ಕಾರದ ಆದ್ಯತೆಯಾಗಬೇಕು.

ಸಂತ್ರಸ್ತರಲ್ಲಿ ಅನೇಕರು ತಮ್ಮ ಊರು ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅವರಿಗೂ ತಂದೆ, ತಾಯಿ, ಪತಿ, ಮಕ್ಕಳು, ಒಡ ಹುಟ್ಟಿದವರು, ನೂರಾರು ಸಂಬಂಧಿಗಳು, ಸ್ನೇಹಿತರು ಇರುತ್ತಾರೆ. ಅವರಿಗೆ ಈ ವಿಷಯ ಗೊತ್ತಾದರೆ ಅರಗಿಸಿಕೊಳ್ಳಲು ಸಾಧ್ಯವೇ? ಪತ್ನಿಯ ಇಂತಹ ವಿಡಿಯೊ ಸಾರ್ವಜನಿಕಗೊಂಡಾಗ ಪತಿ, ಆತನ ಕುಟುಂಬದ ಪ್ರತಿಕ್ರಿಯೆ ಹೇಗಿರುತ್ತದೆ? ಮಕ್ಕಳ ಮೊಬೈಲ್‌ಗೆ ಅಮ್ಮನ ವಿಡಿಯೊ ಬಂದರೆ ಆ ಮಕ್ಕಳಿಗೆ ಎಂತಹ ಮಾನಸಿಕ ಆಘಾತವಾಗಬಹುದು? ಅಕ್ಕಪಕ್ಕದ ಮನೆಯವರು ನೋಡುವ ದೃಷ್ಟಿ ಹೇಗಿರುತ್ತದೆ? ತನಿಖಾಧಿಕಾರಿಗಳ ಮುಂದೆ ಹೋಗಿ ಹೇಳಿಕೊಳ್ಳುವುದು ಕೂಡಾ ಮುಜುಗರದ ವಿಚಾರವೇ. ಅವೆಲ್ಲವನ್ನೂ ಆಕೆಯೊಬ್ಬಳೇ ನಿಭಾಯಿಸಬೇಕು. ಎಲ್ಲೋ ನೌಕರಿ ಮಾಡುತ್ತಿದ್ದರೆ, ಆಕೆ ಮುಂದೆ ಅಲ್ಲಿ ಮುಂದುವರಿಯಲು ಸಾಧ್ಯವೇ? ಸಾಧ್ಯವಾಗುವಂತೆ ಮಾಡಲು ಇಡೀ ಸಮಾಜ ಒಂದಾಗಬೇಕಿದೆ.

ಮನೆ ಕೆಲಸದವರು, ಸರ್ಕಾರಿ ಉದ್ಯೋಗಿಗಳು, ನಟಿಯರು, ಪಕ್ಷದ ಕಾರ್ಯಕರ್ತೆಯರು, ಮಾಧ್ಯಮದ ಆ್ಯಂಕರ್‌ಗಳು, ಮಾಡೆಲ್‌ಗಳು ಇದ್ದಾರೆ ಎಂದು ವರದಿಯಾಗಿದೆ. ಯಾರೇ ಆಗಿದ್ದರೂ ಅವರ ಖಾಸಗಿ ಕ್ಷಣಗಳ ವಿಡಿಯೊಗಳನ್ನು ಸಿಕ್ಕ ಸಿಕ್ಕವರು ನೋಡುವಂತಾಗುವುದು ಅವರ ಖಾಸಗಿ ಬದುಕಿಗೆ ಕೊಳ್ಳಿ ಇಟ್ಟಂತೆಯೇ ಸರಿ. ವಿಡಿಯೊಗಳು ಬಹುಕಾಲ ಜೀವಂತವಾಗಿ ಇರಲಿವೆ. ಎಂದೋ, ಯಾವುದೋ ಘಳಿಗೆಯಲ್ಲಿ ಕಿಡಿಗೇಡಿ ಮಂದಿ ಅವುಗಳನ್ನು ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿ ಸಾರ್ವಜನಿಕಗೊಳಿಸಬಹುದು ಎಂಬ ಆತಂಕದಲ್ಲೇ ಬದುಕುವ ಪರಿಸ್ಥಿತಿ ಸಂತ್ರಸ್ತೆಯರದು. ಈ ವಿಡಿಯೊಗಳು ಪೋರ್ನ್‌ ವೆಬ್‌ಸೈಟ್‌ಗಳಲ್ಲಿ ಬಳಕೆಯಾದರೆ ಎಂಬ ಆತಂಕವೂ ಇದೆ. ಆ ಬಗ್ಗೆ ಎಚ್ಚರ ವಹಿಸುವ ಜವಾಬ್ದಾರಿ ಸರ್ಕಾರದ್ದು.

ಅನೇಕ ಮಹಿಳೆಯರನ್ನು ಯಾವುದೋ ಗುತ್ತಿಗೆ ಪಡೆಯಲು, ಬಿಲ್‌ ಕ್ಲಿಯರ್‌ ಮಾಡಿಸಲು, ಅಕ್ರಮ ಮುಚ್ಚಿಡಲು, ಮಕ್ಕಳಿಗೆ ಮೆಡಿಕಲ್‌ ಸೀಟು ಪಡೆಯಲು ಆಕೆಯ ಪತಿಯೋ, ಕುಟುಂಬದವರೋ ಗೊತ್ತಿದ್ದೇ ಕಳುಹಿಸಿದ್ದಾರೆ ಎಂಬ ಮಾತುಗಳು ಕೇಳುವುದೇ ಆಘಾತಕಾರಿ. ಕುಟುಂಬವೇ ಆಕೆಯನ್ನು ಇಂತಹ ದೌರ್ಜನ್ಯದ ಕೂಪಕ್ಕೆ ತಳ್ಳಿದ್ದರೆ ಅದಕ್ಕಿಂತ ಪಾಪ ಇನ್ನೇನಿದೆ. ಆಕೆಗೆ ಸುರಕ್ಷತೆ ಇನ್ನೆಲ್ಲಿದೆ? ರಾಜಕಾರಣಿಯಿಂದ ಲಾಭ ಪಡೆದುಕೊಳ್ಳಲು ತಮ್ಮ ಮನೆಯ ಮಗಳನ್ನೇ ಕಳುಹಿಸುತ್ತಾರೆ ಎಂದರೆ ಅವರೂ ಪ್ರಜ್ವಲನಷ್ಟೇ ವಿಕೃತ ಮನಸ್ಸಿನವರು ಅಲ್ವೇ? ಈ ಹೇಳಿಕೆಗಳು ಎಷ್ಟು ನಿಜವೋ ಗೊತ್ತಿಲ್ಲ, ಆದರೆ ಹೆಣ್ಣುಮಕ್ಕಳ ಅಸಹಾಯಕತೆಯನ್ನು ಆತ ತನ್ನ ದೌರ್ಬಲ್ಯದ ಪಾಪಕೃತ್ಯಕ್ಕೆ ಬಲಿ ಪಡೆದಿದ್ದಾನೆ. “ಇದು ಕೇವಲ ಲೈಂಗಿಕ ಹಗರಣವಲ್ಲ, ಘನಘೋರ ಲೈಂಗಿಕ ಹತ್ಯಾಕಾಂಡಎಂಬ ಸಾಮಾಜಿಕ ಹೋರಾಟಗಾರ್ತಿ ರೂಪಾ ಹಾಸನ ಅವರ ಹೇಳಿಕೆ ಇಡೀ ಪ್ರಕರಣದ ತೀವ್ರತೆಯನ್ನು ತಿಳಿಸುತ್ತದೆ. ನಾವು ಇಲ್ಲಿ ಆ ಮಹಿಳೆಯರ ಅಂದಿನ ಪರಿಸ್ಥಿತಿ ಏನಿತ್ತು ಮತ್ತು ಈಗಿನ ಅವರ ಮಾನಸಿಕ ಸ್ಥಿತಿ ಹೇಗಿರಬಹುದು ಎಂಬುದನ್ನು ಅರ್ಥ ಮಾಡಿಕೊಂಡು ಒಂದು ನಾಗರಿಕ ಸಮಾಜವಾಗಿ ನಾವೇನು ಮಾಡಬಹುದು ಎಂಬ ದಿಕ್ಕಿಗೆ ಅಡಿಯಿಡಬೇಕಿದೆ.

ಹೆಣ್ಣಿನ ದೇಹ ರಾಜಕೀಯ ಕೆಸರೆರಚಾಟದ ರಣರಂಗವಾಗಬಾರದು, ಅಧಿಕಾರಸ್ಥರ ಮೇಲಾಟದ ದಾಳವಾಗಬಾರದು. ಆದರೆ, ಶತಮಾನಗಳಿಂದ ಇದು ಘಟಿಸುತ್ತಲೇ ಬಂದಿದೆ. ಈಗ ಈ ಪ್ರಕರಣದಲ್ಲಿ ಒಬ್ಬ ಗಂಡಸು ಮಾತ್ರ ಇದ್ದಾನೆ. ಆದರೆ, ಆತನ ವಿಕೃತ ಮನಸ್ಥಿತಿಯಿಂದಾಗಿ ಲೆಕ್ಕವಿಲ್ಲದಷ್ಟು ಹೆಣ್ಣುಮಕ್ಕಳ ಮಾನ ಹರಾಜಾಗಿದೆ. ಆತ ತನ್ನ ತೆವಲು ತೀರಿಸಿಕೊಳ್ಳುವಾಗ ಮಾಡಿಕೊಂಡ ವಿಡಿಯೊ ಮುಂದೆ ತಮ್ಮ ಬದುಕಲ್ಲಿ ದೊಡ್ಡದೊಂದು ಕೋಲಾಹಲ ಸೃಷ್ಟಿಸುತ್ತದೆ ಎಂಬ ಅರಿವು ಆ ಮಹಿಳೆಯರಿಗೆ ಖಂಡಿತಾ ಇದ್ದಿರಲಾರದು.

ಆದರೆ ಈಗ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ, ರಾಜಕೀಯ ನಾಯಕರು ಮಾಡುತ್ತಿರುವ ಆರೋಪಗಳನ್ನು ನೋಡಿದರೆ ಅವರಿಗೆ ಮಹಿಳೆಯರ ಖಾಸಗಿತನದ ರಕ್ಷಣೆ, ಸಾಮಾಜಿಕ ಪರಿಣಾಮದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಅಂತಹ ಸೂಕ್ಷ್ಮತೆ ಇರುವವರು ಯಾವುದೇ ಪಕ್ಷದಲ್ಲಿ ಕಾಣುತ್ತಿಲ್ಲ. ಆರೋಪಿ ಪ್ರಜ್ವಲ್‌ ಪ್ರತಿನಿಧಿಸುತ್ತಿರುವ ಪಕ್ಷದ ಮುಖಂಡರು ಕಾರ್ಯಕರ್ತರು ವರ್ತಸುತ್ತಿರುವುದು ನೋಡಿದರೆ ಆರೋಪಿ ವಿದೇಶದಿಂದ ಬಂದಾಗ ಹೂ ಹಾರ ಹಾಕಿ ಸ್ವಾಗತಿಸಿದರೂ ಅಚ್ಚರಿ ಪಡಬೇಕಿಲ್ಲ.

ಪೆನ್‌ಡ್ರೈವ್
ಅಶ್ಲೀಲ ವಿಡಿಯೊ ಇದೆ ಎಂದು ಮೊದಲು ಹೇಳಿದ್ದ ದೇವರಾಜೇಗೌಡ ಮತ್ತು ಪ್ರಜ್ವಲ್‌ ಡ್ರೈವರ್‌ ಕಾರ್ತಿಕ್‌

ಸಾಮಾಜಿಕ ಕಳಂಕ, ಮುಜುಗರದಿಂದ ನೂರಾರು ಹೆಣ್ಣುಮಕ್ಕಳು ನರಳುವಂತಾದ ಈ ಸ್ಥಿತಿಗೆ ಅತ್ಯಾಚಾರಿ ಎಷ್ಟು ಕಾರಣವೋ ಅಷ್ಟೇ ಈ ಸಮಾಜವೂ ಕಾರಣ. ಅಶ್ಲೀಲ ವಿಡಿಯೊಗಳನ್ನು ಕದ್ದು ಬೀದಿಗೆ ಎಸೆದವರು ಒಂದು ಕ್ಷಣ ತಮ್ಮ ಅಮ್ಮಂದಿರನ್ನು, ಸೋದರಿಯರನ್ನು ನೆನಪು ಮಾಡಿಕೊಳ್ಳಬೇಕಿತ್ತು. ಆ ಹೆಣ್ಣುಮಕ್ಕಳ ಮುಖಗಳನ್ನು ಬ್ಲರ್ಮಾಡಿ ಅವರ ಗುರುತನ್ನು ಅಳಿಸಿ ಹಾಕಲೇಬೇಕಿತ್ತು. ಒಂದು ವೇಳೆ ತಮ್ಮ ಮನೆಯ ಹೆಣ್ಣುಮಕ್ಕಳು ಇಂತಹದೊಂದು ಜಾಲದಲ್ಲಿ ಸಿಲುಕಿದಾಗಲೂ ಹೀಗೆಯೇ ಬೇಕಾಬಿಟ್ಟಿ ಧೋರಣೆ ತಳೆದು ವರ್ತಿಸುತ್ತಿದ್ದರಾ? ಅವರಿಗೆ ಹೆಣ್ಣುಮಕ್ಕಳ ಮೇಲೆ ಕಿಂಚಿತ್ತಾದರೂ ಗೌರವದ ಭಾವ ಇದ್ದಿದ್ದರೆ ಅವರು ಈ ವಿಡಿಯೊಗಳನ್ನು ಬಹಿರಂಗಗೊಳಿಸದೇ ಪೊಲೀಸ್‌ ಇಲಾಖೆಗೆ ಅಥವಾ ಸರ್ಕಾರಕ್ಕೆ ಕೊಟ್ಟು ಕಾನೂನು ಕ್ರಮಕ್ಕೆ ಒತ್ತಾಯಿಸಬಹುದಿತ್ತು. ತನ್ನ ಸ್ವಾರ್ಥಕ್ಕಾಗಿ, ವೈಯಕ್ತಿಕ ದ್ವೇಷಕ್ಕಾಗಿ ಹೆಣ್ಣುಮಕ್ಕಳ ವಿವರಗಳು ಗೊತ್ತಾಗುವಂತೆ ಮಾಡಿದವರೂ ಅಷ್ಟೇ ವಿಕೃತ ಮನಸ್ಥಿತಿಯವರು.‌

ಇದನ್ನೂ ಓದಿ ಈ ದಿನ ಸಂಪಾದಕೀಯ | ಇದು ಜೆಡಿಎಸ್-ಬಿಜೆಪಿ ಜಂಟಿ ಕೃತ್ಯ, ಘನಘೋರ ಲೈಂಗಿಕ ಹತ್ಯಾಕಾಂಡ

ಆರೋಪಿಗೆ ಶಿಕ್ಷೆಯಾಗಬಹುದು, ಈ ಪ್ರಕರಣ ದೇಶದ ಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಹಾಕಿದೆ. ದೇಶದಲ್ಲಿ ಇನ್ನೊಂದು ಇಂತಹ ಪ್ರಕರಣ ಬಯಲಿಗೆ ಬಂದಾಗಲೆಲ್ಲ ಹಾಸನ ಫೈಲ್‌ ದೂಳು ಕೊಡವಿ ಮೇಲೆದ್ದು ಬರಲಿದೆ.

ಆರೋಪಿಗೆ ಶಿಕ್ಷೆಯಾಗಲಿ. ಆತನ ವಿಕೃತ ಕೃತ್ಯಕ್ಕೆ ಬಲಿಯಾದ ಸಂತ್ರಸ್ತೆಯರಿಗೆ ಸಮಾಜ ನೈತಿಕ ಬೆಂಬಲ ನೀಡಿ “ತಲೆ ಮರೆಸಿಕೊಳ್ಳುವ ಅಗತ್ಯವಿಲ್ಲ” ಎಂದು ಧೈರ್ಯ ಹೇಳುವ ಅಗತ್ಯವಿದೆ. ಅವರನ್ನು ಮಾನಸಿಕ ಆಘಾತದಿಂದ ಹೊರ ತರುವ ಕೆಲಸ ಸರ್ಕಾರ ಮಾತ್ರವಲ್ಲ ಸಾಮಾಜಿಕ ಸಂಘಟನೆಗಳು ಒಂದಾಗಿ ಮಾಡಬೇಕಿದೆ. ಕುಟುಂಬಗಳೂ ಸಂತ್ರಸ್ತರ ಜೊತೆ ನಿಂತು ಕಾನೂನು ಹೋರಾಟದ ಮೂಲಕ ಗಂಡಾಳ್ವಿಕೆಯ ಅಹಂಗೆ ತಕ್ಕ ಪಾಠ ಕಲಿಸಬೇಕಿದೆ. ಜೊತೆಗೆ ಇಂತಹ ರಾಜಕಾರಣಿಗಳಿಂದ ಕೆಲಸ ಮಾಡಿಸಿಕೊಳ್ಳುವ, ಸಹಾಯ ಪಡೆಯುವ ಮುನ್ನ ಎಚ್ಚರ ವಹಿಸುವುದು ಅಷ್ಟೇ ಮುಖ್ಯ ಎಂಬ ಜಾಗೃತಿ ಮೂಡಿಸಬೇಕಿದೆ.

ಹೇಮಾ ವೆಂಕಟ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸನ್ಮಾನ್ಯ ಮುಖ್ಯಮಂತ್ರಿಗಳೇ… ಹಿರಿಯಕ್ಕನ ಚಾಳಿ ರಾಜ್ಯಕ್ಕೂ ಬೇಡ

'ಗ್ಯಾರಂಟಿ'ಗಳು ರಾಜ್ಯ ಸರ್ಕಾರಕ್ಕೆ ಸಂಕಟ ತಂದಿವೆ ಎಂಬ ವಾದವೇ ಒಪ್ಪತಕ್ಕದ್ದಲ್ಲ. ಏಕೆಂದರೆ,...

ಪೋಕ್ಸೊ ಪ್ರಕರಣ; ಯಡಿಯೂರಪ್ಪನವರ ರಕ್ಷಣೆಗೆ ಇಡೀ ವ್ಯವಸ್ಥೆ ನಿಂತಂತಿದೆ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲಿನ ಪ್ರಕರಣ ಪೋಕ್ಸೊ ಅಡಿ ದಾಖಲಾಗಿದೆ....

ಬಕ್ರೀದ್ ಹಬ್ಬ | ಹಜ್ಜ್‌ಗೆ ತೆರಳುವ ಮುಸಲ್ಮಾನ ‘ಹಾಜಿ’ಯಾಗುತ್ತಾನೆ; ಹಾಜಿ ಹೇಗಿರಬೇಕು?

ಜೂನ್ 17ರ ಸೋಮವಾರ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದುಲ್ ಅಝ್‌ಹಾ...

ನಟ ದರ್ಶನ್‌ ಅಂಧಾಭಿಮಾನಿಗಳು ಕೊಡುತ್ತಿರುವ ಸಂದೇಶವೇನು?

ಕೊಲೆ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಕನ್ನಡ ಚಲನಚಿತ್ರ ನಟ ದರ್ಶನ್‌ ತೂಗುದೀಪ ಅವರ...