ಕಲ್ಯಾಣ ಕರ್ನಾಟಕ ಭಾಗದಲ್ಲಿ, ವಿಶೇಷವಾಗಿ ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡು ಜಿಲ್ಲೆಗಳ ಬರ ಪರಿಸ್ಥಿತಿಯನ್ನು ಮರುಪರಿಶೀಲಿಸಿ ಅರ್ಹ ಪ್ರದೇಶಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕಲಂ 371(ಜೆ) ಸಮಗ್ರ ಅನುಷ್ಠಾನ ಹೋರಾಟ ಸಮಿತಿ, ಕಲ್ಯಾಣ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಹೆಸರಿಗೆ ಬರೆದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಸುರೇಖಾ ಅವರಿಗೆ ಸಲ್ಲಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದರೆ ರೈತರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಮಿತಿಯ ಪ್ರಮುಖರು ಎಚ್ಚರಿದ್ದಾರೆ.
“ಮಳೆಯ ಕೊರತೆ, ಅಂತರ್ಜಲ ಕುಸಿತ, ಕುಡಿಯುವ ನೀರಿನ ಅಭಾವ ಹಾಗೂ ಬೆಳೆ ನಷ್ಟದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಸುಮಾರು 70ರಷ್ಟು ಮಳೆಯ ಕೊರತೆಯಿಂದ ಬಿತ್ತನೆ ಸಾಧ್ಯವಾಗದೆ, ಬಿತ್ತನೆ ಮಾಡಿದ ಬೆಳೆಗಳೂ ಒಣಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಸಮಿತಿ ತಿಳಿಸಿದೆ.
“ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿ ಬರ ಪರಿಸ್ಥಿತಿಯನ್ನು ಮರುಮೌಲ್ಯಮಾಪನ ಮಾಡಬೇಕು. ಬೆಳೆ ನಷ್ಟಕ್ಕೆ ಪರಿಹಾರ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು-ನೀರಿನ ವ್ಯವಸ್ಥೆ ಕಲ್ಪಿಸಬೇಕು. ಫಸಲ್ ಭೀಮಾ ಯೋಜನೆಯ ಕ್ರಾಪ್ ಕಟಿಂಗ್ ಸಮೀಕ್ಷೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ : ವಚನ ಕಲ್ಯಾಣ | ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ?
ಈ ಸಂದರ್ಭದಲ್ಲಿ ಕಲಂ 371(ಜೆ) ಸಮಗ್ರ ಅನುಷ್ಠಾನ ಹೋರಾಟ ಸಮಿತಿ, ಕಲ್ಯಾಣ ಕರ್ನಾಟಕದ ಅಧ್ಯಕ್ಷ ಅಶೋಕ ಮಾನುರೆ, ವಿಲಾಸ ಪಾಟೀಲ ಬಸವನಗರ, ಬೀದರ್, ರೇವಣಶಿದ್ದಪ್ಪಾ ಜಲಾದೆ, ಜಂಟಿ ಕಾರ್ಯದರ್ಶಿ ರಮೇಶ ನೇಳಗೆ, ವಕೀಲರು, ಬೀದರ್, ಹಾಗೂ ಗುರುಪುತ್ರ ಬಿರಾದಾರ ಸೇರಿದಂತೆ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.





