ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ? ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ? ಮಾಡ ಬನ್ನಿ ದಿನ ಶಿವರಾತ್ರಿಯ, ಕೇಳ ಬನ್ನಿ ಶಿವಾನುಭವವ, ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ.
ಜೀವನ ಎಂದರೆ ದಿನಗಳನ್ನು ಕಳೆಯುವುದಷ್ಟೇ ಅಲ್ಲ. ಪ್ರತಿದಿನಕ್ಕೂ ಒಂದು ಅರ್ಥ ಅಮೂಲ್ಯವಾಗಿದೆ. ಬರೀ ಉಣ್ಣುವುದು, ಮಲಗುವುದು, ಸಂಸಾರ, ಮಕ್ಕಳು ಅಷ್ಟೇ ಅಲ್ಲ. ಬದುಕಿನ ಸಾರ್ಥಕತೆಗೆ ನಮ್ಮಲ್ಲಿ ಸಮಾಜಮುಖಿ ಮೌಲ್ಯಗಳು ಹೊಕ್ಕಬೇಕು. ಸುಖಾಸುಮ್ಮನೆ ಅಮೂಲ್ಯ ದಿನಗಳು ಸದುಪಯೋಗಪಡಿಸಿಕೊಳ್ಳದೆ ವ್ಯರ್ಥವಾಗಿ ಕಳೆದರೆ ಬದುಕು ನಶ್ವರ ಎನಿಸುತ್ತದೆ. ಪ್ರತಿಕ್ಷಣ, ಅನುದಿನದ ಮಹತ್ವವನ್ನು ಎಂಟು ಶತಮಾನಗಳ ಹಿಂದೆಯೇ ಶರಣೆ ಮುಕ್ತಾಯಕ್ಕ ತಮ್ಮ ವಚನದ ಮೂಲಕ ಸಮಾಜದ ಮುಂದಿಟ್ಟಿದ್ದಾರೆ.
ಶರಣರ ಸಂಕುಲದಲ್ಲಿ ಮುಕ್ತಾಯಕ್ಕ ವಿಶಿಷ್ಟ ಅನುಭಾವಿ ಶರಣೆ. ಮೂಲತಃ ಗದಗ ಜಿಲ್ಲೆಯ ಲಕ್ಕುಂಡಿ ಮುಕ್ತಾಯಕ್ಕನ ಜನಿಸಿದ ಊರು, ಗಂಡನ ಊರು ದೇವದುರ್ಗ ತಾಲೂಕಿನ ಮೊಸರಕಲ್ಲು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಶರಣ ಅಜಗಣ್ಣ ಮುಕ್ತಾಯಕ್ಕನ ಸಹೋದರ ಹಾಗೂ ಗುರುವೂ ಆಗಿದ್ದರು. ಅಜಗಣ್ಣನ ಮಾರ್ಗದರ್ಶನ ಮತ್ತು ಅನುಭಾವದ ಪ್ರಭಾವ ಮುಕ್ತಾಯಕ್ಕನ ವಚನಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಸಹೋದರ ʼಅಜಗಣ್ಣʼ ಹೆಸರಿನ ಅಂಕಿತದಲ್ಲಿ ಮುಕ್ತಾಯಕ್ಕ ರಚಿಸಿರುವ 37 ವಚನಗಳು ಲಭ್ಯವಾಗಿವೆ.
ಮಹಾಜ್ಞಾನಿ ಮುಕ್ತಾಯಕ್ಕ ಹಾಗೂ ಅಜಗಣ್ಣನವರ ಅವಿನಾಭಾವ ಸಂಬಂಧ ಶರಣ ಪರಂಪರೆಯಲ್ಲಿ ತುಂಬಾ ವಿಶಿಷ್ಟವಾಗಿದೆ. ಸಹೋದರ ಅಜಗಣ್ಣ ನಿಧನರಾದಾಗ ಆತನ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಶೋಕಿಸುತ್ತಾಳೆ ಮುಕ್ತಾಯಕ್ಕ. ಆ ವೇಳೆ ಅಲ್ಲಮಪ್ರಭು ಸಮಧಾನಪಡಿಲು ಪ್ರಯತ್ನಿಸುತ್ತಾನೆ. ಈ ವೇಳೆ ಮುಕ್ತಾಯಕ್ಕ ಅಲ್ಲಮಪ್ರಭುವನ್ನೇ ಪ್ರಶ್ನಿಸುತ್ತಿರುವ ಬಗ್ಗೆ ಶೂನ್ಯ ಸಂಪಾದನೆಯಿಂದ ಗೊತ್ತಾಗುತ್ತದೆ.
ಅಂಗೈಯಲ್ಲಿ ಮೊಬೈಲ್ ಹಿಡಿದ ಆಧುನಿಕ ಮನುಷ್ಯ ಕ್ಷಣಕ್ಷಣಕ್ಕೂ ಜಗತ್ತಿನ ಮಾಹಿತಿ ಅರಿಯುತ್ತಿದ್ದೇವೆ. ಇದು ಬದುಕಿಗೆ ಉಪಯುಕ್ತವೊ ಅಥವಾ ಸಮಯ ವ್ಯರ್ಥವೊ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಬದುಕು ಎಂದರೆ ಬರೀ ಉಣ್ಣುವುದು, ಮಲಗುವುದು, ಸಂಸಾರ ನಡೆಸುವುದು, ಸಂಪಾದಿಸುವುದು ಇಷ್ಟಕ್ಕೆ ಸೀಮಿತವಾಗುವುದಿಲ್ಲ. ಮುಕ್ತಾಯಕ್ಕನವರ ಚಿಂತನೆಯ ಕೇಂದ್ರದಲ್ಲಿ ಮನುಷ್ಯನ ಆತ್ಮಜಾಗೃತಿ ಮತ್ತು ಸಾರ್ಥಕ ಬದುಕು ಇದೆ. ಸಮಯದ ಅರಿವು ಬೇಕು. ಗುರಿಯ ಅರಿವು ಬೇಕು. ಶಿಸ್ತು ಬೇಕು. ನಂಬಿಕೆ ಬೇಕು ಎಂಬರ್ಥದಲ್ಲಿ ಹೇಳುತ್ತಾಳೆ ಮುಕ್ತಾಯಕ್ಕ.
ʼಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲʼ, ಮಾತು ಆಡಿದರೆ ಹೊಯ್ತು, ಮುತ್ತು ಒಡೆದರೆ ಹೊಯ್ತುʼ ಎಂಬ ಗಾದೆಯಂತೆ ಒಮ್ಮೆ ಬಾಯಿಂದ ಹೊರಬಂದ ಮಾತು, ಒಡೆದ ಮುತ್ತು ಮತ್ತು ಕಳೆದುಹೋದ ಸಮಯ. ವಾಪಸ್ ಪಡೆಯಲು ಸಾಧ್ಯವಿಲ್ಲ. ಬಾಯಿಂದ ಒಂದು ಮಾತು ಫಲ ನೀಡಬಹುದು, ಜಗಳಕ್ಕೂ ಕಾರಣವಾಗಬಹುದು. ಹಾಗಾಗಿ ಒಂದು ಮಾತಿಗೂ ಬೆಲೆಯಿದೆ, ಮಾತಾಡುವ ಮುನ್ನ ಯೋಚಿಸುವುದು ನಮ್ಮ ಸಮಯ ಪ್ರಜ್ಞೆ, ದೂರದೃಷ್ಟಿ, ಚಿಂತನಾಕ್ರಮಕ್ಕೆ ಸಾಕ್ಷಿಯಾಗುತ್ತದೆ. ಪ್ರತಿಕ್ಷಣ, ಪ್ರತಿ ಹೆಜ್ಜೆಯೂ ಎಚ್ಚರಿಕೆಯಿಂದ ಕೂಡಿರಬೇಕು.
ಬದುಕಿನ ಬಾಲ್ಯ, ಯೌವನ ಹಾಗೂ ವೃದಾಪ್ಯದ ಪ್ರತಿಕ್ಷಣವೂ ಅಮೂಲ್ಯವೇ ಆಗಿದೆ. ಅಂದಿನ ಕೆಲಸ ಅಂದೇ ಮಾಡದಿದ್ದರೆ ನಾಳೆ ಮಾಡಲು ಅಸಾಧ್ಯವೂ ಆಗಬಹುದು. ಇಂದು ಮಾಡಬೇಕಾದ ಕೆಲಸವನ್ನು ಈಗಲೇ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಗುರು ಮತ್ತು ಗುರಿ ಎರಡೂ ಮುಖ್ಯ. ಗುರು ದಾರಿ ತೋರಿಸುತ್ತಾನೆ, ಗುರಿ ನಮ್ಮ ಹೆಜ್ಜೆಗಳಿಗೆ ದಿಕ್ಕು ನೀಡುತ್ತದೆ. ದಿಕ್ಕಿಲ್ಲದ ಬದುಕು ಎಷ್ಟೇ ವೇಗವಾಗಿ ಸಾಗಿದರೂ ಅದು ಗಮ್ಯ ತಲುಪುವುದಿಲ್ಲ.
ಪ್ರತಿದಿನವೂ ಶುಭ ದಿನವೇ ಎಂಬುದು ಶರಣರ ಅಭಿಪ್ರಾಯ. ಒಂದೊಂದು ಧರ್ಮದವರಿಗೆ ಕೆಲವೊಂದು ವಾರ, ಒಂದು ತಿಂಗಳು ಬಹಳ ವಿಶೇಷ ಎನಿಸುತ್ತವೆ. ಕೆಲವರಿಗೆ ಕೆಲ ವಾರ ಅಪಶಕುನ ಎಂಬಂತೆಯೂ ಇದೆ. ಇದು ಮೌಢ್ಯದ ಪರಮಾವಧಿ ಎನ್ನಬಹುದು. ವಾರ, ತಿಂಗಳಲ್ಲಿ ಯಾವುದೇ ಶುಭವಾರ, ಕೆಟ್ಟವಾರ ಇರುವುದಿಲ್ಲ. ಅದೆಲ್ಲವೂ ಮಾನವ ನಿರ್ಮಿತ ಅಘೋಷಿತ ಪದ್ಧತಿ ಅಷ್ಟೇ. ಬದುಕು ಕೇವಲ ವೈಯಕ್ತಿಕ ಸಂಪತ್ತು, ಅಧಿಕಾರ, ಪ್ರತಿಷ್ಠೆಗೆ ಸೀಮಿತವಾಗಬಾರದು. ತನ್ನ ಬದುಕಿನಿಂದ ಮತ್ತೊಬ್ಬರಿಗೆ ಬೆಳಕು ಸಿಗಬೇಕು. ಸಮಾಜಕ್ಕೆ ಒಳಿತಾಗಬೇಕು. ತನ್ನ ಅಸ್ತಿತ್ವ ಮತ್ತೊಬ್ಬರ ಬದುಕಿಗೆ ನೆರವಾಗಬೇಕು. ಇದೇ ಶರಣರ ಬದುಕಿನ ಮಹತ್ವದ ಸಂದೇಶವಾಗಿತ್ತು.
ಮೇಲಿನ ವಚನದಲ್ಲಿʼ ಶಿವರಾತ್ರಿʼ ಎಂಬುದು ಬಹಳ ವಿಶೇಷವಾಗಿದೆ. ಶಿವರಾತ್ರಿ ಎಂದರೆ ಒಂದು ದಿನದ ಆಚರಣೆ ಅಲ್ಲ. ಪ್ರತಿದಿನವೂ ನಮ್ಮೊಳಗಿನ ಅಜ್ಞಾನವನ್ನು ದೂರಮಾಡಿಕೊಂಡು, ಅರಿವಿನ ಬೆಳಕಿನತ್ತ ಸಾಗುವುದೇ ನಿಜವಾದ ಶಿವರಾತ್ರಿ. ಪ್ರತಿದಿನವೂ ನಮ್ಮ ನಡೆ-ನುಡಿ ಸಿದ್ಧಾಂತವನ್ನು ಒರೆಗೆ ಹಚ್ಚಿ ಪರಿಶೀಲಿಸಿಕೊಳ್ಳುವುದು. ತಪ್ಪು ಆಗುವುದು ಸಹಜ, ಆದರೆ ಆ ತಪ್ಪು ಮತ್ತೆ ಆಗದಂತೆ ತಿದ್ದಿಕೊಳ್ಳುವುದು, ಸತ್ಯದ ದಾರಿಯಲ್ಲಿ ನಡೆಯುವುದು. ದುರ್ಜನರ ಸಂಗದಿಂದ ಹೊರಬಂದು ಸಜ್ಜನರ ಸಂಗ ಬೆಳೆಸುವುದು. ಇದು ಬದುಕಿನ ನಿತ್ಯದ ಪ್ರಕ್ರಿಯೆ, ತಪಸ್ಸು. ಶರಣರ ದೃಷ್ಟಿಯಲ್ಲಿ ಶಿವಾನುಭವ ಎಂದರೆ ಧಾರ್ಮಿಕ ಆಚರಣೆಯಲ್ಲ ಅಷ್ಟೇ ಅಲ್ಲ. ಅನುಭಾವ, ಚಿಂತನೆ ಮತ್ತು ಬದುಕಿನ ಮೌಲ್ಯಗಳನ್ನು ಅರಿತುಕೊಳ್ಳುವುದು. ಶರಣರು ಇದನ್ನೇ ಶಿವಾನುಭವ ಎಂದು ಕರೆದಿದ್ದಾರೆ.
ವಚನ ಸಾಹಿತ್ಯದಲ್ಲಿ ಶಾಂತಿ, ಪ್ರೀತಿ, ದಯೆ, ಕರುಣೆ, ಚರ್ಚೆಯಿದೆ, ಪರಿಹಾರವಿದೆ, ಹೊಸ ಚಿಂತನೆ ದಾರಿ ಇದೆ. ಎಲ್ಲದಕ್ಕೂ ಮಿಗಿಲಾಗಿ ವೈಚಾರಿಕ, ವೈಜ್ಞಾನಿಕ ಅರಿವು ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಜೊತೆಗೆ ಪ್ರಶ್ನಿಸುವ ಶಕ್ತಿ ಇದೆ. ಶರಣರು ಕೇವಲ ನುಡಿದವರಲ್ಲ, ನುಡಿದಂತೆ ನಡೆದು ಸಮಾಜಕ್ಕೆ ಆದರ್ಶವಾದವರು. ವಚನಕಾರರ ಬದುಕು-ಬರಹ ಒಂದೇ ಆಗಿತ್ತು. ಅದಕ್ಕೆ ವಚನ ಸಾಹಿತ್ಯ ವಾಸ್ತವಕ್ಕೆ ಬಹು ಸಮೀಪ ಎನಿಸುತ್ತದೆ. ಬಾಹ್ಯ ಆಚರಣೆಯ ಕಟ್ಟುಪಾಡು ನಮ್ಮ ಆಲೋಚನೆಯ ಕ್ರಮ ಸೀಮಿತ ಚೌಕಟ್ಟಿನಲ್ಲಿಡುತ್ತದೆ. ಅಂತರಂಗ ಶುದ್ಧಿಗೆ ವಚನ ಅಧ್ಯಯನ ಅಗತ್ಯವಿದೆ. ಅಷ್ಟೇ ಅಲ್ಲದೆ ಅದರ ಅನುಷ್ಠಾನ ಮುಖ್ಯವಾಗಿದೆ.
ಮುಕ್ತಾಯಕ್ಕನನ್ನು ಶರಣ ಸಂಕುಲದಲ್ಲಿ ಎಲ್ಲರೂ ʼಅಕ್ಕʼ ಎಂದೇ ಕರೆಯುತ್ತಿದ್ದರು. ʼಎನ್ನ ಸಲಹಿದರಯ್ಯಾ ಅಮ್ಮವ್ವೆ ಕೊಡಗೂಸುಚೋಳಿಯಕ್ಕ ನಿಂಬವ್ವೆ ನೀಲಮ್ಮ ಮಹಾದೇವಿ ಮುಕ್ತಾಯಕ್ಕಗಳುʼ ಎಂದು ಶರಣ ಕೋಲ ಶಾಂತಯ್ಯ ಸ್ಮರಿಸಿದರೆ, ʼಮಹಾದೇವಿಯಕ್ಕನೆನ್ನ ಜ್ಞಾನʼ ಶರಣ ಆದಯ್ಯ ಹೇಳಿಕೊಳ್ಳುತ್ತಾರೆ. ಆಯ್ದಕ್ಕಿ ಲಕ್ಕಮ್ಮ ʼಮುಕ್ತಾಯಕ್ಕಗಳ ಪ್ರಸಾದವಕೊಂಡು ಎನ್ನ ಬಹಿರಂಗ ಶುದ್ಧವಾಯಿತ್ತಯ್ಯಾʼ ಎಂದು ಸ್ಮರಿಸುತ್ತಾರೆ.
ಮುಕ್ತಾಯಕ್ಕ ಅಲ್ಲಮಪ್ರಭುವಿನೊಂದಿಗೆ ನಡೆಸಿದ ಸಂವಾದದಲ್ಲಿ ಮುಕ್ತಾಯಕ್ಕ ಮಹಾಜ್ಞಾನಿಯಾಗಿ ಕಾಣುತ್ತಾಳೆ. ಅನುಭವ ಮಂಟಪ ಅಧ್ಯಕ್ಷರಾಗಿದ್ದ ಅಲ್ಲಮನಿಗೆ ಮುಕ್ತಾಯಕ್ಕ ಸತ್ಯ, ನೇರ ಹಾಗೂ ನಿಷ್ಠುರವಾಗಿ ಪ್ರಶ್ನಿಸಿದ್ದು ಅವರ ವಚನಗಳಲ್ಲಿ ಕಾಣುತ್ತೇವೆ. ಅಲ್ಲಮ ಪ್ರಭು ಮುಕ್ತಾಯಕ್ಕನಿಗೆ ಹೇಳಿದಾಗ ಮುಕ್ತಾಯಕ್ಕ ಹೀಗೆ ಉತ್ತರಿಸುತ್ತಾಳೆ.
ನಡೆದು ನಡೆದು ನಡೆಯ ಕಂಡವರು ನುಡಿದು ನುಡಿದು ಹೇಳುತ್ತಿಹರೆ ? ನುಡಿದು ನುಡಿದು ಹೇಳುವನ್ನಕ್ಕರ ನಡೆದುದೆಲ್ಲಾ ಹುಸಿಯೆಂಬೆನು. ಮಾತಿನ ಮಥನದಿಂದಾದ ಅರಿವು ಕರಣ ಮಥನದಿಂದಾದುದಲ್ಲದೆ, ಅನುಪಮ ಸ್ವರಭೇದವಾದ ಪರಿ ಎಂತು ಹೇಳಾ ? ಇದಿರ ಗೆಲಬೇಕೆಂದು ನುಡಿದುಕೊಂಡಡೇನು, ಮನಕ್ಕೆ ಮನವೆ ಸಾಕ್ಷಿಯಾಗಿ ನಿಃಪತಿಯಲ್ಲ ನೋಡಾ ? ಎನ್ನ ಅಜಗಣ್ಣತಂದೆ ಶಬುದಕ್ಕೆ ಹೇಸಿ ಮುಗುದನಾದನು.
ʼಅರಿವೆ ಗುರುʼ ಎಂಬ ಶರಣ ಪರಂಪರೆಯ ಪ್ರಸಿದ್ಧ ನುಡಿಗಟ್ಟು ಮುಕ್ತಾಯಕ್ಕನ ವಚನಗಳಲ್ಲಿ ಬರುತ್ತದೆ. ವಚನಕಾರರ ದೃಷ್ಟಿಯಲ್ಲಿ ತನ್ನ ಅರಿವೆ ಗುರು, ಗುರು ದರ್ಶನದಿಂದ ಅನುಭಾವ ಮೂಡುವುದು. ಅಂತಹ ಅರಿವಿನಿಂದ ದೂರಸರಿದು ಮರೆವು ಬಂದರೆ ನಷ್ಟವಾಗುವುದು ಎನ್ನುತ್ತಾಳೆ ಮುಕ್ತಾಯಕ್ಕ. ಲಿಂಗಾಂಗ ಸಾಮರಸ್ಯದಿಂದ ಅರಿವು ಬರುವುದು. ಲೋಕಜ್ಞಾನಕ್ಕೆ ಅರಿವಿನ ಅಗತ್ಯವಿದೆ ಎಂದು ಹೇಳುತ್ತಾರೆ.
ನುಡಿಯಲುಬಾರದು ಕೆಟ್ಟನುಡಿಗಳ. ನಡೆಯಲುಬಾರದು ಕೆಟ್ಟನಡೆಗಳ. ನುಡಿದಡೇನು ನುಡಿಯದಿರ್ದಡೇನು? ಹಿಡಿದವ್ರತ ಬಿಡದಿರಲು, ಅದೆ ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣ ತಂದೆ.
ವಚನಕಾರರು ನಡೆ-ನುಡಿ ಸಿದ್ಧಾಂತ ಕುರಿತು ಬಹಳ ಮಾರ್ಮಿಕವಾಗಿ ತಿಳಿಸುತ್ತಾರೆ. ದೈನಂದಿನ ಬದುಕು-ಬರಹ ಸಾಮ್ಯತೆ ಇರಬೇಕು. ಕೆಟ್ಟ ನಡೆ ಹಾಗೂ ಕೆಟ್ಟ ನುಡಿ ಬದುಕಿಗೆ ಕಂಟಕವಾಗುತ್ತದೆ. ನಡೆ-ನುಡಿಯ ಬಗ್ಗೆ ನಮಗೆ ಎಚ್ಚರ ಇರಬೇಕು. ನುಡಿದಂತೆ ನಡೆದರೆ ಅದೇ ನಿತ್ಯನೇಮ, ಆಚರಣೆಯಾಗುವುದು. ಅದು ಮಹಾಜ್ಞಾನಕ್ಕೆ ಸಮ ಎಂದು ಹೇಳುತ್ತಾಳೆ ಮುಕ್ತಾಯಕ್ಕ.
ʼನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು. ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು. ನುಡಿಯೊಳಗಾಗಿ ನಡೆಯದಿದ್ದಡೆ, ಕೂಡಲಸಂಗಮದೇವನೆಂತೊಲಿವನಯ್ಯಾʼ ಎಂದು ಬಸವಣ್ಣನವರು ಹೇಳುತ್ತಾರೆ. ನುಡಿದಂತೆ ನಡೆಯದಿದ್ದರೆ ದೇವರು ಹೇಗೆ ಒಲಿಯುತ್ತಾನೆ ಎಂದು ಪ್ರಶ್ನಿಸುತ್ತಾರೆ.
ತೊರೆಯ ಕಟ್ಟೆಯಕಟ್ಟಿ ನಿಲಿಸಲುಬಹುದೆ ? ನೆರೆ ಮರುಳಿಗೆ ಬುದ್ಧಿಯ ಹೇಳಲುಬಹುದೆ ? ತರಿಸಲುವೋದವನಿದಿರಿಚ್ಫೆಯನರಿಯದೆ ಮರೆದಿದ್ದಡೆ ಹಗೆ ಇರಿವುದ ಮಾಣ್ಬನೆ ? ದೂರದಲ್ಲಿ ಹೋದವ ಊರ ಸುದ್ದಿಯನರಿಯ. ಹೇಳದೆ ಬಯಲಾದ ಕಾಣಾ, ಎನ್ನ ಅಜಗಣ್ಣತಂದೆ.
ಈ ಮೇಲಿನ ವಚನದಲ್ಲಿ ಮುಕ್ತಾಯಕ್ಕ ಅಣ್ಣ ಅಜಗಣ್ಣನ ನಿಧನರಾದಾಗ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಶೋಕದಿಂದ ಹೇಳುತ್ತಾಳೆ. ಇಲ್ಲಿ ಅತ್ಯಂತ ನೋವಿನ ನುಡಿದ ಕೊನೆಯ ಸಾಲು ಅಜಗಣ್ಣನ ಕುರಿತಾಗಿಯೇ ಇದೆ. ನಮ್ಮೆಲ್ಲರನ್ನೂ ಹೇಳದೇ ಬಿಟ್ಟು ದೂರ ಹೋದ ಅಜಗಣ್ಣ ಎಂದು ದುಃಖಿಸುತ್ತಾಳೆ ಮುಕ್ತಾಯಕ್ಕ.
ಇದನ್ನೂ ಓದಿ : ವಚನ ಕಲ್ಯಾಣ | ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ?
12ನೇ ಶತಮಾನ ಮಹಿಳೆಯರನ್ನು ಜಾಗೃತಗೊಳಿಸಿದ ಕಾಲ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಿ ಅವರಲ್ಲಿನ ಆತ್ಮಚೈತನ್ಯ ಶಕ್ತಿಯನ್ನು ಹೊರಹೊಮ್ಮಿಸಿ ನಡೆ-ನುಡಿ ಒಂದಾದ ಸಮ ಸಮಾಜ ನಿರ್ಮಾಣಗೊಂಡ ಸುವರ್ಣ ಕಾಲ. ಮುಕ್ತಾಯಕ್ಕನಂತೆ ಬಹುತೇಕ ಮಹಿಳಾ ವಚನಕಾರರು ಮಹಾಜ್ಞಾನಿಯಾಗಿದ್ದು ಅವರ ವಚನಗಳಿಂದಲೇ ತಿಳಿಯುತ್ತದೆ.
(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



