ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ/ಸಹಾಯಕ ಕುಲಸಚಿವ ಹುದ್ದೆಯ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದಾಗಿ ಗಂಭೀರ ಆರೋಪಗಳು ಕೇಳಿಬಂದಿದ್ದು, ಪ್ರಕರಣವು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲೂ ಗಮನ ಸೆಳೆಯುತ್ತಿದೆ.
ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರ ಆಪ್ತ ಸಹಾಯಕ ಶ್ರೀಕಾಂತ್ ಕುಸೂರ ಅವರಿಗೆ ನೇಮಕಾತಿ ಪತ್ರ ನೀಡಲು ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆ ಹೊರಬಿದ್ದ ಬಳಿಕ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಪ್ರಶ್ನೆಗಳು ಏಳಲು ಆರಂಭವಾಗಿದೆ.
ಇದರ ನಡುವೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ(CUK) ಮೀಸಲಾತಿ ಮತ್ತು ರೋಸ್ಟರ್ ಉಲ್ಲಂಘನೆಗಳ ಕುರಿತು ಕ್ರಮಕ್ಕೆ ಒತ್ತಾಯಿಸಿ ಕಳೆದ ಮಾರ್ಚ್ 14ರಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸುದ್ದಿಗೋಷ್ಠಿ ನಡೆಸಿ, ಜಿಲ್ಲೆಯ ಎಲ್ಲ ಸಂಸದರು, ಶಾಸಕರು ಹಾಗೂ ಸಚಿವರಿಗೆ ಇಮೇಲ್ ಮುಖಾಂತರ ಮನವಿ ಪತ್ರವನ್ನು ಕಳುಹಿಸಿದೆ. ಈ ಬೆಳವಣಿಗೆಗಳ ಹಿನ್ನೆಲೆ ಎಚ್ಚೆತ್ತ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿರುವ ತಮ್ಮ ಗಮನಕ್ಕೆ ತರದೆ ಏಕೆ ನೇಮಕಾತಿ ನಡೆಸಿದ್ದೀರೆಂದು ಪ್ರಶ್ನಿಸಿರುವ ಅವರು, ಈ ಕುರಿತು ಕೇಂದ್ರದ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಿನೀತ್ ಜೋಶಿ ಅವರಿಗೆ ಪತ್ರ ಬರೆದಿದ್ದಾರೆ. ನೇಮಕಾತಿಯ ಪೂರ್ಣ ವಿವರಗಳನ್ನು ಪರಿಶೀಲಿಸಿ, ತಕ್ಷಣ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಇನ್ನೊಂದೆಡೆ, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಆಡಳಿತ ಕ್ರಮಗಳ ಮೇಲೆಯೂ ಟೀಕೆಗಳು ವ್ಯಕ್ತವಾಗಿವೆ. ಹೋರಾಟಗಾರ ಪಿ. ನಂದಕುಮಾರ್ ಅವರು, ಕುಲಪತಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಹಲವು ನೇಮಕಾತಿಗಳಲ್ಲಿ ಶೈಕ್ಷಣಿಕ ಅರ್ಹತೆಗಿಂತ ರಾಜಕೀಯ ಹಿನ್ನೆಲೆಯವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಯ ನೇಮಕಾತಿಯಲ್ಲಿಯೂ ವಿಶ್ವವಿದ್ಯಾಲಯದ ಅಧಿಸೂಚನೆಯಲ್ಲಿ ನಿಗದಿಪಡಿಸಿದ್ದ ಅರ್ಹತಾ ಮಾನದಂಡಗಳನ್ನು ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಪತ್ರಿಕೋದ್ಯಮ ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದು, ಆಡಿಟ್ ಬ್ಯುರೊ ಆಫ್ ಸರ್ಕ್ಯುಲೇಷನ್(ಎಬಿಸಿ)ನಲ್ಲಿ ನೋಂದಾಯಿತ ಮಾಧ್ಯಮ ಸಂಸ್ಥೆಗಳು ಅಥವಾ ಜಾಹೀರಾತು ಏಜೆನ್ಸಿಗಳಲ್ಲಿ ಕನಿಷ್ಠ ಆರು ವರ್ಷಗಳ ಅನುಭವ ಇರಬೇಕೆಂಬ ನಿಯಮವನ್ನು ಕಡೆಗಣಿಸಲಾಗಿದೆ. ಅಲ್ಲದೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಪಕ್ಕಕ್ಕಿಟ್ಟು, ಕಡಿಮೆ ಅಂಕ ಪಡೆದ ಅಭ್ಯರ್ಥಿಗೆ ನೇಮಕಾತಿ ನೀಡಲಾಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ.
ಇದನ್ನೂ ಓದಿದ್ದೀರಾ? ಗದಗ | ಸಂವಿಧಾನ ಪೀಠಿಕೆ ಕಂಠಪಾಠ ಸ್ಪರ್ಧೆ
ಈ ಎಲ್ಲ ಬೆಳವಣಿಗೆಗಳು ವಿಶ್ವವಿದ್ಯಾಲಯದ ನೇಮಕಾತಿ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮತ್ತು ನ್ಯಾಯತೆಯ ಕುರಿತು ಗಂಭೀರ ಅನುಮಾನಗಳನ್ನು ಹುಟ್ಟಿಸಿವೆ. ಪ್ರಕರಣವು ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದ್ದು, ಪಾರದರ್ಶಕ ತನಿಖೆಯ ಮೂಲಕ ಸತ್ಯಾಸತ್ಯತೆ ಬಹಿರಂಗವಾಗಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ.
ಇದೀಗ ಕೇಂದ್ರದ ಉನ್ನತ ಶಿಕ್ಷಣ ಇಲಾಖೆಯ ಮಟ್ಟದಲ್ಲಿ ಪರಿಶೀಲನೆ ನಡೆಯುವ ಸಾಧ್ಯತೆ ಇದ್ದು, ತನಿಖೆಯ ಫಲಿತಾಂಶದತ್ತ ಎಲ್ಲರ ಗಮನ ಹರಿದಿದೆ.





