ರೈತರ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲು ಸರ್ಕಾರ ಜುಲೈ ತಿಂಗಳ ಮುಂಗಾರು ಅಧಿವೇಶನ ಬದಲು ಚಳಿಗಾಲದ ಅಧಿವೇಶನ ನಡೆಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.
ಪತ್ರಿಕಾ ಪ್ರಕಟಣೆಯಲ್ಲಿ ಅವರು ಮಾತನಾಡಿ, ರೈತರು ಡಿಎಪಿ ಗೊಬ್ಬರಕ್ಕಾಗಿ ಪರದಾಡುತ್ತಿರುವ ಸಂದರ್ಭದಲ್ಲಿ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸದೆ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
ತೊಗರಿ ಬೆಳೆ ಬೆಂಬಲ ಬೆಲೆ, ಪ್ರೋತ್ಸಾಹಧನ, ಖರೀದಿ ಕೇಂದ್ರಗಳ ಸಮಸ್ಯೆ, ಬೆಳೆ ವಿಮೆ, ರೈತರ ಆತ್ಮಹತ್ಯೆ ಪ್ರಕರಣಗಳು, ಸಾಲಮನ್ನಾ ಹಾಗೂ ಕಬ್ಬಿನ ಬೆಂಬಲ ಬೆಲೆ ಕುರಿತು ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಬ್ಬು ಕಟಾವು ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತಿರುವುದನ್ನು ತಡೆಯಲು ರೈತರ ಸಮ್ಮುಖದಲ್ಲೇ ಸಕ್ಕರೆ ಇಳುವರಿ ಅಳತೆ ಮಾಡಬೇಕು. ಸರಿಯಾದ ಸಮಯಕ್ಕೆ ಕಬ್ಬು ಕಟಾವು ಮಾಡಬೇಕು ಹಾಗೂ ರೈತರಿಂದ ಅನಧಿಕೃತ ಹಣ ವಸೂಲಿ ತಡೆಯಬೇಕು ಎಂದು ಆಗ್ರಹಿಸಿದರು.
ಮುಂಗಾರು ಬಿತ್ತನೆಗೂ ಮುನ್ನ ಮೇ ತಿಂಗಳಲ್ಲೇ ಅಧಿವೇಶನ ನಡೆಸಿದ್ದರೆ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಇರುತ್ತಿತ್ತು. ಆದರೆ ಈಗ ಜುಲೈನಲ್ಲಿ ಅಧಿವೇಶನ ನಡೆಸುವುದು ರೈತರಿಗೆ ಯಾವುದೇ ಪ್ರಯೋಜನಕಾರಿಯಾಗುವುದಿಲ್ಲ ಎಂದು ಟೀಕಿಸಿದರು.
ಡಿಎಪಿ ಹಾಗೂ ಕಾಂಪ್ಲೆಕ್ಸ್ ಗೊಬ್ಬರ ಕೊರತೆ, ರಸಗೊಬ್ಬರ ಬೆಲೆ ಏರಿಕೆ, ಕಳಪೆ ಗುಣಮಟ್ಟದ ಗೊಬ್ಬರ ಮತ್ತು ಬೀಜಗಳ ಕಾಳಸಂತೆ ಮಾರಾಟವನ್ನು ಸರ್ಕಾರ ತಕ್ಷಣ ತಡೆಯಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಸಮುದಾಯದ ಯುವಜನರಿಗೆ ಆಶಾಕಿರಣವಾದ ವಧು-ವರರ ವೇದಿಕೆ ಸಮಾವೇಶ
ಸರ್ಕಾರ ರೈತರ ಹಿತಕ್ಕಿಂತ ಮಲ್ಟಿನ್ಯಾಷನಲ್ ಹಾಗೂ ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಅವರು ಆರೋಪಿಸಿದರು.





