ಇಂದು ಯುವಕರ ಎದೆಗೆ ಸುಳ್ಳನ್ನು ತುಂಬುವ, ಪ್ರಜಾಪ್ರಭುತ್ವವನ್ನು ಅಡ್ಡದಾರಿಗೆ ಎಳೆಯುವ ಪ್ರಯತ್ನ ಎಗ್ಗಿಲದಂತೆ ನಡೆಯುತ್ತಿದೆ. ನಮ್ಮ ದೇಶದ ಮಾಧ್ಯಮಗಳ ಸ್ಥಿತಿ ತೀರಾ ತಳ್ಳಮಟ್ಟಕ್ಕೆ ಇಳಿದಿದೆ. ಆಳುವ ಪಕ್ಷಗಳ ಪರ ಮಾಧ್ಯಮಗಳು ಕೆಲಸ ಮಾಡುತ್ತ, ಹೊಣೆಗೇಡಿಗಳ ಹಾಗೆ ವರ್ತಿಸುತ್ತಿರುವ ಈ ಕಾಲದಲ್ಲಿ ಈ ದಿನ ಡಾಟ್ ಕಾಮ್ ಭಯವಿಲ್ಲದೆ ನಿಜವನ್ನು ಹೇಳುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ಹಿರಿಯ ಸಾಹಿತಿ ಪ್ರೊ. ಎಸ್ ಜಿ ಸಿದ್ದರಾಮಯ್ಯ ಹೇಳಿದರು.
ನಗರದ ತುಮಕೂರು ವಿವಿಯ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತುಮಕೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಲಾ ಕಾಲೇಜು ಕನ್ನಡ ವಿಭಾಗ ಹಾಗೂ ಈ ದಿನ ಡಾಟ್ ಕಾಮ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಜೈ ಹಿಂದ್ ಜಯ ಕರ್ನಾಟಕ” ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
“ಪ್ರಸ್ತುತ ಸಾಂಸ್ಕೃತಿಕ ದಾಸ್ಯಕ್ಕೆ ನಮ್ಮ ದೇಶ ಬಲಿಯಾಗುತ್ತಿದೆ. ಇಂತಹ ದಾಸ್ಯದಿಂದ ಬಿಡುಗಡೆ ಹೊಂದಲು ನಡೆದ ಅತಿದೊಡ್ಡ ಮತ್ತು ಮಹತ್ವದ ಚಳುವಳಿ ಶರಣ ಚಳುವಳಿ. ಆದರೆ, ನಮಗೆ ಇಂದಿಗೂ ಸಾಂಸ್ಕೃತಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಶರಣರು ಸನಾತನವನ್ನು ತಿರಸ್ಕರಿಸಿ ಪುರಾತನವನ್ನು, ಕರ್ಮಕ್ಕೆ ಬದಲಾಗಿ ಕಾಯಕವನ್ನು, ದಾನಕೆ ಬದಲಾಗಿ ದಾಸೋಹವನ್ನು ತಂದರು. ಇದು ಸಾಂಸ್ಕೃತಿಕ ಬಿಡುಗಡೆಗಾಗಿ ನಡೆದ ಚಳವಳಿ. ಆದರೆ, ಇದು ಇಂದಿಗೂ ಸಾಧ್ಯವಾಗಿಲ್ಲ, ಸಫಲವಾಗಿಲ್ಲ. ನಮ್ಮ ಬದುಕಿನ ತುಂಬಾ ಚಾತುರ್ವರ್ಣದ ಕಸವನ್ನು ತುಂಬಿಕೊಂಡಿದ್ದೇವೆ” ಎಂದರು.

“ನಮಗೆ ಚರಿತ್ರೆ ಅರ್ಥವಾಗದೆ ಸಮಕಾಲೀನ ಸಂದರ್ಭ ಅರ್ಥವಾಗುವುದಿಲ್ಲ. ಅದೇ ರೀತಿ ನಮ್ಮ ಭವಿಷ್ಯವನ್ನು ಕಟ್ಟುವುದಕ್ಕೂ ಸಾಧ್ಯವಿಲ್ಲ. ಹಾಗಾಗಿ ನಮಗೆ ಚರಿತ್ರೆ ಅರ್ಥವಾಗಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳುವ, ಅರ್ಥ ಮಾಡಿಸುವ ಇಂಥ ಕೃತಿಗಳು ಬೇಕು. ಈ ವಿಶೇಷ ಸಂಚಿಕೆಯಲ್ಲಿರುವ ಎಲ್ಲ ಆಲೋಚನೆಗಳು ಹೆಚ್ಚೆಚ್ಚು ಸತ್ಯಕ್ಕೆ ಹತ್ತಿರವಾದ ಆಲೋಚನೆಗಳು. ಈ ಕೃತಿಯಲ್ಲಿ ಅತ್ಯಂತ ಮಹತ್ವದ ಅಂಶಗಳು, ವಾಸ್ತವ ವಿಚಾರಗಳು ಇವೆ. ಈ ನೆಲದಲ್ಲಿ ಅತ್ಯಂತ ಸೌಹಾರ್ದಯುತವಾಗಿ ಬಾಳುತ್ತಿದ್ದ ಎರಡು ಧರ್ಮಗಳನ್ನು ಒಡೆದು ಆಳುವ, ಇಂದಿಗೂ ಆಳುತ್ತಿರುವ ಶಕ್ತಿಗಳ ಬಂಡವಾಳವನ್ನು ಈ ವಿಶೇಷ ಸಂಚಿಕೆ ಬಯಲು ಮಾಡುತ್ತದೆ. ಚಿತ್ರಗಳು, ಭೂಪಟಗಳು, ಟಿಪ್ಪಣಿಗಳು ಇವೆಲ್ಲ ಈ ಕೃತಿಯಲ್ಲಿ ವಿಶೇಷವಾಗಿ ಮೂಡಿಬಂದಿವೆ. ನಿಜಕ್ಕೂ ಇದು ಮತ್ತೆ ಮತ್ತೆ ಓದಬೇಕಾದ ಕೃತಿ” ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರವಿಕುಮಾರ್ ನೀಹ ಮಾತನಾಡಿ, “ನಮ್ಮ ಭಾರತದ ಹುಸಿ ಚರಿತ್ರೆಗಳನ್ನು ಎದುರುಗೊಳ್ಳುವ ಮಹತ್ವದ ಕೆಲಸವನ್ನು ಈ ಕೃತಿ ಮಾಡಿದೆ. ಇದು ಮುಖ್ಯವಾದ ಎರಡು ಪರಿಕಲ್ಪನೆಗಳನ್ನು ಚರ್ಚಿಸುತ್ತಿದೆ. ಒಂದು ರಾಷ್ಟ್ರವಾದ, ಒಂದೊಂದು ಪ್ರಾದೇಶಿಕತೆ, ನಮ್ಮ ದೇಶದಲ್ಲಿ ರಾಷ್ಟ್ರವಾದ ಎಂಬ ಪದವು ಜಾರಿಗೆ ಬಂದದ್ದು, ಬಹಳ ಇತ್ತೀಚೆಗೆ. ನಾವು ಬ್ರಿಟಿಷರನ್ನು ಇಲ್ಲಿಂದ ಕಳುಹಿಸಬೇಕು ಎಂಬ ಚಿಂತನೆ ಬಂದಾಗ ಇಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಬಂತು. ರಾಷ್ಟ್ರೀಯವಾದ ಚಿಂತನೆ ಇಂದು ಮತೀಯವಾದದ ಅರ್ಥಕ್ಕೆ ಬಂದಿದೆ. ಇಂದು ನಮ್ಮ ಮುಂದೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಇಂದು ಒಳಗಿನವರು, ಹೊರಗಿನವರು, ಹಿಂದೂ, ಮುಸ್ಲಿಮರು ಎಂಬ ವಿಭಾಗೀಕರಣವನ್ನೂ ಮಾಡುತ್ತಿವೆ” ಎಂದು ಹೇಳಿದರು.

“ನಮ್ಮ ಭಾರತದ ಹುಸಿ ಚರಿತ್ರೆಗಳನ್ನು ಎದುರುಗೊಳ್ಳುವ ಜರೂರು ಇಂದು ಇದೆ. ನಾವು ಯಾವುದನ್ನು ಚರಿತ್ರೆ ಅಲ್ಲವೆಂದು ಅವಜ್ಞೆಗೆ ಗುರಿ ಮಾಡಿದ್ದೇವೋ ಅದನ್ನು ಗುರುತಿಸುವ ಪ್ರಯತ್ನವನ್ನು ಈ ಕೃತಿ ಮಾಡುತ್ತದ್ದೆ. ನಮ್ಮ ತುಮಕೂರು, ತುಮಕೂರಿನ ಸಾವಿರಾರು ಜನ ಸ್ವಾತಂತ್ರ್ಯದಲ್ಲಿ ಭಾಗಿಯಾಗಿದ್ದರು. ಆದರೆ ಅವರು ಯಾರೂ ಎಲ್ಲೂ ದಾಖಲಾಗಿಲ್ಲ. ಇದನ್ನು ದಾಖಲಿಸುವುದು ಮುಖ್ಯ. ಭಾರತದ ಒಳಗೆ ಹಲವು ಭಾರತಗಳು, ಕರ್ನಾಟಕದ ಒಳಗೆ ನೂರಾರು ಕರ್ನಾಟಕಗಳು ಆಗಿವೆ. ಇವನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ರಾಷ್ಟ್ರವಾದವಾಗಲಿ ಕನ್ನಡ ಪ್ರದೇಶಕವಾದವಾಗಲಿ ಮತ್ತೊಂದನ್ನು ವಿರೋಧಿಸುವ ಅಥವಾ ನಿರಾಕರಿಸುವ ಕೆಲಸವನ್ನು ಎಲ್ಲೂ ಮಾಡುವುದಿಲ್ಲ. ಅಗತ್ಯ ಸಂದರ್ಭದಲ್ಲಿ ಪ್ರತಿರೋಧ ಮಾಡುವುದನ್ನು ಬಿಟ್ಟರೆ ಯಾರನ್ನೂ ಅಲ್ಲಗಳೆಯುವ ಕೆಲಸ ನಮಲ್ಲಿ ಆಗಿಲ್ಲ ಎಂಬುದನ್ನು ಈ ಕೃತಿ ತೋರಿಸುತ್ತದೆ” ಎಂದರು.
ವಿವಿ ಕಲಾ ಕಾಲೇಜಿನ ಪ್ರಾಂಶುಪಾಲೆ ಡಾ.ಜಿ ದಾಕ್ಷಾಯಿಣಿ ಮಾತನಾಡಿ, “ಇತಿಹಾಸವನ್ನು ಓದುವುದು ಬಹಳ ಮುಖ್ಯ. ಅಂಬೇಡ್ಕರ್ ಹೇಳುವುದು ʼನಮ್ಮ ಇತಿಹಾಸವನ್ನು ನಾವು ತಿಳಿದುಕೊಳ್ಳಬೇಕುʼ ಎಂದು. ಇದು ಬಹಳ ಮುಖ್ಯ. ನಮಗೆ ಓದು ಬೇಕು. ಕ್ರಿಟಿಕಲ್ ಆಗಿ ಆಲೋಚಿಸುವುದು ಮುಖ್ಯ. ಅದರಿಂದ ಮಾತ್ರ ಬದಲಾವಣೆ ಸಾಧ್ಯ. ಬದಲಾವಣೆ ನಮ್ಮ ಹಕ್ಕು. ನಾವು ಅದಕ್ಕಾಗಿ ಸದಾ ತುಡಿಯಿತ್ತಿರಬೇಕು. ಇಂತ ಪುಸ್ತಕಗಳನ್ನು ಓದುತ್ತ ನಮ್ಮ ನಿಜವಾದ ಇತಿಹಾಸವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ಇತಿಹಾಸವನ್ನು ಕಟ್ಟಿಕೊಳ್ಳಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? 4 ಬಾರಿ ಇಂಧನ ಬೆಲೆ ಏರಿಕೆ; ಜನಾಕ್ರೋಶಕ್ಕೆ ಬಿಜೆಪಿಯೇ ಹೊಣೆ: ಸಿಎಂ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಡಾ. ಎಚ್ ಎಸ್ ಮೋಹನ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆಶಾರಾಣಿ ಬಗ್ಗನಡು, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಎಚ್ ಆರ್ ರೇಣುಕಾ, ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಹೆತ್ತೇನಹಳ್ಳಿ ಮಂಜುನಾಥ್, ಕರ್ನಾಟಕ ರಾಜ್ಯ ಮುಸ್ಲಿಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್ ಎಸ್ ಶಾಹೀದ್ ಅಫ್ರೀದಿ, ಪ್ರಾಧ್ಯಾಪಕರಾದ ಪ್ರೊ. ನಿತ್ಯಾನಂದ ಬಿ ಶೆಟ್ಟಿ, ಡಾ. ನಾಗಭೂಷಣ ಬಗ್ಗನಡು, ಡಾ ಶಿವಣ್ಣ, ಪ್ರೊ. ಬಿ ಕರಿಯಣ್ಣ, ಡಾ.ಗೀತಾ ವಸಂತ, ವಿವಿ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.




