ಉದ್ಯೋಗ ಖಾತ್ರಿ ಕೆಲಸ ಸಮರ್ಪಕವಾಗಿ ಜಾರಿ ಮಾಡಲು ಒತ್ತಾಯಿಸಿ ಕನಕಪುರ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಎದುರು ಪ್ರಾಂತ ಕೂಲಿಕಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
2004ರಲ್ಲಿ ಎಡಪಕ್ಷಗಳ ಒತ್ತಾಯದಿಂದ ಜಾರಿಯಾದ ಉದ್ಯೋಗ ಖಾತ್ರಿಯಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡದೇ ಕೆಲಸ ಕೇಳಿದ ಎಲ್ಲ ಕೂಲಿಕಾರ ಕುಟುಂಬಗಳಿಗೆ ಕೆಲಸ ನೀಡದೇ ನಿರಾಕರಿಸುವ ನಡೆಯನ್ನು ಕಂಚನಹಳ್ಳಿ ಗ್ರಾಮ ಘಟಕದ ಪರವಾಗಿ ಪ್ರಾಂತ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷರಾದ ಎಂ.ಪುಟ್ಟಮಾದು ಖಂಡಿಸಿದರು.
ಉದ್ಯೋಗಖಾತ್ರಿ ಕೆಲಸವನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಕೆಲಸ ಕೇಳಿ ನಮೂನೆ 6ರಲ್ಲಿ ಅರ್ಜಿ ಕೊಟ್ಟಿರುವ ಎಲ್ಲ ಕೂಲಿಕಾರ ಕುಟುಂಬಗಳಿಗೆ ಸ್ಥಳದಲ್ಲೇ ಎನ್.ಎಂ.ಆರ್ ತೆಗೆದು ಕೆಲಸ ನೀಡಬೇಕು. ಈಗ ಇರುವ 349 ಕೂಲಿ 100 ದಿನ ಕೆಲಸದ ಬದಲು 600 ರೂ ಕೂಲಿ ಮತ್ತು 200 ಮಾನವ ದಿನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳಿನ ಏರ್ಪಾಟು, ಪ್ರಥಮ ಚಿಕಿತ್ಸಾ ಪೆಟ್ಟಿಗೆಯಂತ ಮೂಲಭೂತ ಸೌಕರ್ಯವನ್ನು ಕಡ್ಡಾಯವಾಗಿ ನೀಡಬೇಕು. ಕಾಯಕ ಬಂಧುವಿಗೆ ಗುರುತಿನ ಚೀಟಿ ನೀಡಿ ಪ್ರೋತ್ಸಾಹಧನವನ್ನು ಅವರ ಖಾತೆಗೆ ಜಮಾ ಮಾಡಬೇಕು. ಉದ್ಯೋಗ ಖಾತ್ರಿ ಕೆಲಸದಲ್ಲಿ ಯಂತ್ರದ ಹಾವಳಿಯನ್ನು ತಪ್ಪಿಸಿ ಗುತ್ತಿಗೆದಾರರನ್ನು ನಿಯಂತ್ರಿಸಬೇಕು ಎಂದರು.
ಮನವಿ ಸ್ವೀಕರಿಸಿ ಕಾರ್ಯನಿರ್ವಾಹಕ ಅಧಿಕಾರಿ ಮಾತನಾಡಿ, ಯಂತ್ರದ ಮೂಲಕ ಉದ್ಯೋಗ ಖಾತ್ರಿಯ ಕೆಲಸವನ್ನು ಗುತ್ತಿಗೆದಾರರ ನಿರ್ವಹಿಸಿದ್ದರೆ ಒಂಬುಡ್ಸ್ಮನ್ ಮುಂದಾಳತ್ವದಲ್ಲಿ ತನಿಖೆ ನಡೆಸಿ, ಬಿಲ್ಲನ್ನು ತಡೆ ಹಿಡಿಯುವ ಕೆಲಸ ಮಾಡಲಾಗುವುದು. ಹೆಚ್ಚಿನ ಕೆಲಸ ಹಾಗೂ ಕೂಲಿ ನೀಡುವ ವಿಚಾರಕ್ಕೆ ಮೇಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಪತ್ರ ಬರೆದು ಕ್ರಮ ವಹಿಸಲಾಗುವುದು ಎಂದರು.
ಇದನ್ನು ಓದಿದ್ದೀರಾ? ತುಮಕೂರು | ಸರ್ವರ್ ಸಮಸ್ಯೆ : ಹಾಸ್ಟೆಲ್ ಪ್ರವೇಶದಿಂದ ವಂಚಿತರಾದ ವಿದ್ಯಾರ್ಥಿಗಳು
ಈ ಸಂದರ್ಭದಲ್ಲಿ ಬಿ.ಎಂ.ಶಿವಮಲ್ಲಯ್ಯ, ಸಹಕಾರ್ಯದರ್ಶಿ, ರಾಜ್ಯ ಸಹಕಾರ್ಯದರ್ಶಿ ಬಿ ಹನುಮೇಶ್, ರಾಮಯ್ಯ ರಾಜ್ಯ ಸಮಿತಿ ಸದಸ್ಯರು ಲಕ್ಷ್ಮೀ ಕಂತೂರು, ರಾಜ್ಯ ಸಮಿತಿ ಸದಸ್ಯರು, ಲಕ್ಷ್ಮಮ್ಮ ಕಂಚನಹಳ್ಳಿ ಗ್ರಾಮ ಘಟಕದ ಅಧ್ಯಕ್ಷರು, ರಾಜಮ್ಮ ಉಪಾಧ್ಯಕ್ಷರು ಮಂಚೇಗೌಡ, ಮಂಗಳಮ್ಮ ಹಾಗೂ ಇನ್ನಿತರ ಮುಖಂಡರು ಹಾಜರಿದ್ದರು.
