87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ರಾಜ್ಯದ ವಿವಿಧ ತಾಲೂಕುಗಳಿಗಲ್ಲಿ ಸಂಚರಿಸಿ ಸೋಮವಾರ ಮಧ್ಯಾಹ್ನ ಶಿವಮೊಗ್ಗ ನಗರವನ್ನು ಪ್ರವೇಶಿಸಿತು.
ಜಿಲ್ಲಾಡಳಿತ, ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪಧಾದಿಕಾರಿಗಳು ಜಿಲ್ಲೆಯ ಜನಪ್ರತಿನಿಧಿಗಳು ಭುವನೇಶ್ವರಿ ತಾಯಿಗೆ ಪುಷ್ಪ ನಮನ ಸಲ್ಲಿಸಿ ಕನ್ನಡದ ರಥವನ್ನು ಸಂಭ್ರಮದಿ ಸ್ವಾಗತಿಸಿದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕುವೆಂಪು ರಂಗಮಂದಿರದವರೆಗೆ ಹೊರಟ ರಾಜಬೀದಿ ಉತ್ಸವದಲ್ಲಿ ವಿವಿಧ ಶಾಲೆಗಳ ಮಕ್ಕಳು ಹೆಜ್ಜೆ ಹಾಕಿದರು. ದುರ್ಗಿಗುಡಿ ಪ್ರೌಢಶಾಲೆಯ ಮಕ್ಕಳು ಸ್ವತಃ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ವಿಶೇಷ ಮೆರಗು ನೀಡಿದರು. ಮೆರವಣಿಗೆಯ ಉದ್ದಕ್ಕೂ ಕನ್ನಡಪರ ಜಯಘೋಷ, ನಾದಸ್ವರದೊಂದಿಗೆ ನೆರೆದಿದ್ದ ಕನ್ನಡದ ಮನಸ್ಸುಗಳ ಹೆಜ್ಜೆಗಳು ಮುಂದೆ ಸಾಗಿದವು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ ಮಂಜುನಾಥ ಮಾತನಾಡಿ, “ಸಾಹಿತ್ಯ ಸಮ್ಮೇಳನ ಕನ್ನಡಿಗರ ಅಸ್ಮಿತೆಯಾಗಿದ್ದು, ಕನ್ನಡದ ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಮತ್ತು ನಿರ್ಣಯಗಳು ನಡೆಯಲಿದೆ. ಮಾತೃಭಾಷೆಯಲ್ಲಿ ಪ್ರಬುದ್ಧತೆ ಪಡೆದಾಗ ಯಾವುದೇ ಭಾಷೆಯನ್ನು ಸುಲಲಿತವಾಗಿ ಕಲಿಯಬಹುದಾದ ಶಕ್ತಿ ನಮ್ಮ ಮಕ್ಕಳಿಗೆ ಸಿಗುತ್ತದೆ. ಅದಕ್ಕಾಗಿಯೆ ಪ್ರೌಢಶಾಲಾ ಹಂತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸುವ ಹಾಗೂ ಸೃಜನಶೀಲ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತಾವು ತೆರೆದುಕೊಳ್ಳಲು ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕಿದೆ” ಎಂದು ಹೇಳಿದರು.
ತಹಶೀಲ್ದಾರ್ ಬಿ ಎನ್ ಗಿರೀಶ್ ಮಾತನಾಡಿ, “ಕನ್ನಡ ಭಾಷೆಯಲ್ಲಿ ಮಾತನಾಡಲು ಯಾವುದೇ ಹಿಂಜರಿಕೆ ಬೇಡ. ಯಾವುದೇ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡಿದವರಿಗೆ ದಂಡ ವಿಧಿಸಿದ್ದು ಕಂಡುಬಂದರೆ, ಅಂತಹ ಶಾಲೆಯ ವಿರುದ್ಧ ದಂಡನೆ ನೀಡಲಾಗುವುದು. ಏಕೆಂದರೆ ಅದೆಷ್ಟೋ ಭಾಷೆಗಳಿಗೆ ನಾವು ಒಗ್ಗಿಕೊಂಡರೂ ನಮ್ಮ ಅಂತರಂಗದ ಮಾತು ಕನ್ನಡ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ನಾಲ್ವಡಿಯವರು ಜನಪರ ವ್ಯಕ್ತಿತ್ವದ ಮಹಾನ್ ಚೇತನ: ಪ್ರೊ.ಬಿ. ಜಯಪ್ರಕಾಶ್ ಗೌಡ
ಇದೇ ವೇಳೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್ ಹೇಮಂತ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್ ಪ್ರಸನ್ನಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ ಎಸ್ ಚಂದ್ರಭೂಪಾಲ್, ಬಿಇಒ ರಮೇಶ್, ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್, ಕಸಾಪ ಪದಾಧಿಕಾರಿ ಎಂ ಎಂ ಸ್ವಾಮಿ, ಡಿ ಗಣೇಶ್, ಶಿಕಾರಿಪುರ ಹೆಚ್ ಎಸ್ ರಘು, ಕೆ ಎಸ್ ಹುಚ್ಚರಾಯಪ್ಪ, ಮಹಾದೇವಿ, ಅನುರಾಧ, ಪ್ರತಿಮಾ ಡಾಕಪ್ಪಗೌಡ, ಲಕ್ಷ್ಮೀ ಮಹೇಶ್, ಸಾವಿತ್ರಮ್ಮ, ಕುಬೇರಪ್ಪ, ಸತ್ಯನಾರಾಯಣ ಸೇರಿದಂತೆ ಇತರರು ಇದ್ದರು.
ಕಳೆದ ಎರಡು ದಿನಗಳಿಂದ ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಸಂಚರಿಸಿದ್ದ ರಥವು ಸೋಮವಾರ ಸಂಜೆಯ ವೇಳೆಗೆ ಮಲವಗೊಪ್ಪ, ಭದ್ರಾವತಿ ಸಂಚರಿಸಿ, ಮಂಗಳವಾರ ಬೆಳಿಗ್ಗೆ ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸಲಿದೆ.