ಬೀದರ್ ಜಿಲ್ಲೆಯ ರೈತರು ಸತತ ಬರಗಾಲ ಹಾಗೂ ಅತಿವೃಷ್ಟಿಗೆ ತುತ್ತಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಫಲವತ್ತಾದ ಭೂಮಿ ಇದ್ದರೂ ಸರಕಾರದ ತಪ್ಪು ಕೃಷಿ ನೀತಿಗಳಿಂದ ರೈತರು ಉತ್ತಮ ಫಸಲು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರಕಾರ ತ್ವರಿತವಾಗಿ ರೈತರ ನೆರವಿಗೆ ಧಾವಿಸಿ ಕೃಷಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕ ಆಗ್ರಹಿಸಿದೆ.
ಬೀದರ್‌ನಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ ನೇತ್ರತ್ವದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
ʼಜಿಲ್ಲೆಯ ಕೃಷಿ ಅಭಿವೃದ್ಧಿಯಾಗಬೇಕಾದರೆ ಕೃಷಿ ಆಧಾರಿತ ಕಾರ್ಖಾನೆಯಾದ ಬಿ.ಎಸ್.ಎಸ್.ಕೆ. ಕಾರ್ಖಾನೆಯನ್ನು ಮಂಡ್ಯ ಜಿಲ್ಲೆಯ ಕಾರ್ಖಾನೆಯಂತೆ ಸರಕಾರವೇ ಪುನರಾರಂಭಿಸಬೇಕು. ಜಿಲ್ಲೆಯ ರೈತರ ಕಾರ್ಮಿಕರನ್ನು ರಕ್ಷಣೆ ಮಾಡಬೇಕು. ಬಡ ರೈತರಿಗೆ ಅನ್ಯಾಯವಾಗದಂತೆ ಬರ ಪರಿಹಾರದ ಹಣ ಎಲ್ಲ ರೈತರಿಗೆ ಪಾವತಿಸಬೇಕು. ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರಕಾರದ ಎಸ್‌ಡಿಆರ್‌ಎಫ್ ಪಾಲು ಕೊಡಬೇಕುʼ ಎಂದು ಒತ್ತಾಯಿಸಿದರು.
ʼಕಂದಾಯ ಇಲಾಖೆಯಿಂದ ನಡೆಸುವ ಭೂ ಸರ್ವೆಯಲ್ಲಿ ಆಗುತ್ತಿರುವ ಮೋಸ ತಪ್ಪಿಸಬೇಕು. ಬಗರ್ ಹುಕಂ ಸಾಗುವಳಿ ಭೂಮಿಯನ್ನು ರೈತರ ಹೆಸರಿಗೆ ನೋಂದಾಯಿಸಬೇಕು. ಡಿಸಿಸಿ ಬ್ಯಾಂಕಿನಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಐದು ಲಕ್ಷದವರೆಗೆ ಕೃಷಿ ಸಾಲ ನೀಡಬೇಕು. ರೈತರಿಗೆ ಕೃಷಿ ಯಂತ್ರೋಪಕರಣ, ಬೀಜ, ಗೊಬ್ಬರ ಹಾಗೂ ಇತರ ಕೃಷಿ ಸಾಮಾಗ್ರಿಗಳನ್ನು ಜಾತಿ ಆಧಾರಿತ ಹಂಚಿಕೆ ಮಾಡದೆ ಎಲ್ಲ ರೈತರಿಗೆ ರಿಯಾಯಿತಿ ದರದಲ್ಲಿ ಸೌಲಭ್ಯ ನೀಡಬೇಕುʼ ಎಂದರು.
ಕೃಷಿ ಮಾಡುವ ರೈತನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಆದ್ದರಿಂದ ರೈತರ ಮಕ್ಕಳಿಗೆ ಮದುವೆಯಾದ ಹೆಣ್ಣು ಮಕ್ಕಳಿಗೆ ಸರ್ಕಾರ 5 ಲಕ್ಷ ಪ್ರೋತ್ಸಾಹ ಧನ ಕೊಡಬೇಕು. ಐಟಿ ಸೆಟ್‌ಗಳಿಗೆ ಹಿಂದಿನಂತೆ ಸರ್ಕಾರವೇ ವಿದ್ಯುತ್ ನೀಡಬೇಕು. ಖಾಸಗಿ ವಿಮಾ ಕಂಪನಿಗಳಿಂದ ರೈತರಿಗೆ ಮೋಸ ಆಗುತ್ತಿದ್ದು, ರೈತರ ಬೆಳೆ ವಿಮೆಯನ್ನು ಸರಕಾರವೇ ಭರಿಸಬೇಕು ಸೇರಿ ಒಟ್ಟು 12 ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮಳೆಗೆ ಮೈಲೂರ ಸರ್ಕಾರಿ ಶಾಲೆ ಗೋಡೆ ಕುಸಿತ; ಸಚಿವ ರಹೀಂ ಖಾನ್ ಭೇಟಿ
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಮುಖಂಡ ಕೊಂಡಿಬಾರಾವ ಪಾಂಡೆ, ರಾಜ್ಯ ಉಪಾಧ್ಯಕ್ಷ ಖಾಸೀಂ ಅಲಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷ ಶಾಂತಮ್ಮಾ ಮೂಲಗೆ, ಭಾಲ್ಕಿ ತಾಲೂಕಾಧ್ಯಕ್ಷ ಭಾವರಾವ್ ಬೀರಗಿ, ಬೀದರ್ ತಾಲೂಕಾಧ್ಯಕ್ಷ ವಿಠಲರೆಡ್ಡಿ ಆಣದೂರು, ಬಸವಕಲ್ಯಾಣ ತಾಲೂಕಾಧ್ಯಕ್ಷ ರುದ್ರಸ್ವಾಮಿ ಸೇರಿದಂತೆ ಸಂಘದ ಪ್ರಮುಖರಾದ ಸಂತೋಷ ಗುದಗೆ, ಖಾನ್‌ಸಾಬ್, ಸೋಮನಾಥ ಏಣಕೂರ, ಬಸವರಾಜ ಅಷ್ಟೂರೆ, ಗುಂಡೇರಾವ ಕುಲಕರ್ಣಿ, ಕರಬಸಪ್ಪಾ ಹುಡುಗಿ, ಶಿವಕಾಂತ ಖಂಡೆ, ನಾಗಶೆಟ್ಟಿ ಲಂಜವಾಡೆ, ಕಮಳಬಾಯಿ ಹಾಗೂ ಇತರರಿದ್ದರು.