ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಆಗ್ರಹಿಸಿದ್ದಾರೆ.
ತಾಲೂಕಿನ ಕೊನಹಳ್ಳಿ ಗ್ರಾಮದಿಂದ ಕಂದಳ್ಳಿ ಗ್ರಾಮದ ಭೀಮಾ ಬ್ರಿಡ್ಜ್‌ವರೆಗೆ ಅಂದಾಜು 4 ಕಿಲೋ ಮೀಟರ್ ಮತ್ತು ತುಮಕೂರಿನಿಂದ ವಡಗೇರಾ ಮತ್ತು ಮಾಚನೂರಿನಿಂದ ಬೆಂಡೆಬೆಂಬಳಿ ವಡಗೇರಾ ಕ್ರಾಸ್ ಬಳಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಕೂಡಲೇ ರಸ್ತೆ ನಿರ್ಮಾಣ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರ ಆಗ್ರಹಿಸಿದ್ದಾರೆ.
“ಈ ರಸ್ತೆಗಳಲ್ಲಿ ಸಂಚರಿಸುವಾಗ ಅತಿ ಹೆಚ್ಚಿನ ಅಪಘಾತಗಳಾಗಿದ್ದು, ಸಾವು ನೋವುಗಳಾದ ಉದಾಹರಣೆಗಳಿವೆ. ಹಲವು ತಾಲೂಕು ಕೇಂದ್ರದಿಂದ ಸೈದಾಪುರ, ರಾಯಚೂರು ಹಾಗೂ ತೆಲಂಗಾಣ ಗಡಿಭಾಗ ಸೇರಿದಂತೆ ಇತರ ಗ್ರಾಮಗಳಿಗೆ ತೆರಳಲು ವಾಹನ ಸವಾರರು ತಮ್ಮ ಸಂಚಾರಕ್ಕೆ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ” ಎಂದು ತಿಳಿಸಿದರು.
“ಈ ರಸ್ತೆಗಳು ಮಳೆಗಾಲದಲ್ಲಂತೂ ನೀರು ತುಂಬಿಕೊಂಡು ಕೆರೆಯಂತಾಗುತ್ತವೆ. ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿಗೆ ಮುಂದಾಗಬೇಕು. ಒಂದು ವೇಳೆ ವಿಳಂಬ ಮಾಡಿದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ತೀವ್ರ ಹೊರಾಟ ಮಾಡಬೇಕಾಗುತ್ತದೆ” ಎಂದು ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಧರ್ಮಸ್ಥಳ ಪ್ರಕರಣ | 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ಸಾಕ್ಷಿ ದೂರುದಾರ
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರ, ಕರವೇ ಮುಖಂಡರಾದ ಸಿದ್ದು ಪೂಜಾರಿ, ಮಲ್ಲು ಜಡಿ, ಬಸಯ್ಯಸ್ವಾಮಿ ಊಳ್ಳೆಸೂಗೂರು, ಪೀರ್ ಸಾಬ್ ಮರಡಿ, ಶ್ರೀನಿವಾಸ್, ಮಡಿವಾಳ್, ಎಸ್ ಜಡಿ, ಬಸವರಾಜ್ ಕೂದ್ದಡ್ಡಿ, ಶರಣು ಅಂಗಡಿ, ಜಾಫರ್ ತುಮಕೂರ್, ಸುರೇಶ್ ಬಾಡದ, ಮಹಮ್ಮದ್ ಕತಾಲಿ, ಮಾಳಪ್ಪ ಹೈಯಾಳ, ಜುಬಲಪ್ಪ ಕಟ್ಟಿಮನಿ, ಹಣಮಂತ ಓಡಾಕರ, ನಿಂಗು ಮುನಮುಟಗಿ ಇತರರು ಇದ್ದರು.