ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಕೊಡಮಾಡುವ 2024ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಮೂರು ಮಂದಿ ಸಾಧಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ.
ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಬೆಂಗಳೂರು ಇದರ ಮಾಜಿ ಅಧ್ಯಕ್ಷ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಬೆಂಗಳೂರಿನ ಡಾ. ಮಕ್ಸೂದ್ ಅಹ್ಮದ್ ಮುಲ್ಕಿ (ಬ್ಯಾರಿ ಭಾಷೆ ಮತ್ತು ಸಂಘಟನೆ), ಬ್ಯಾರಿ ಕವಿ ಮತ್ತು ಬರಹಗಾರ ಹೈದರ್ ಅಲಿ ಕಾಟಿಪಳ್ಳ (ಬ್ಯಾರಿ ಸಾಹಿತ್ಯ) ಹಾಗೂ ಹಿರಿಯ ಬ್ಯಾರಿ ಹಾಡುಗಾರ, ಕವಿ ಹಸನಬ್ಬ ಮೂಡಬಿದರೆ (ಬ್ಯಾರಿ ಸಂಸ್ಕೃತಿ ಮತ್ತು ಕಲೆ) ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅಕಾಡೆಮಿಯ ಮಾಜಿ ಸದಸ್ಯರಾದ ಟಿ.ಕೆ. ಶರೀಫ್, ಮುಹಮ್ಮದ್ ಶರೀಫ್ ನಿರ್ಮುಂಜೆ, ಹಂಝ ಮಲಾರ್, ಮರಿಯಮ್ ಇಸ್ಮಾಯಿಲ್ ಮತ್ತು ಬಹುಭಾಷಾ ಲೇಖಕಿ ಶಮೀಮಾ ಕುತ್ತಾರ್ ಗೌರವ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿದ್ದು ಸಹಕರಿಸಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸ್ಥಾಯಿ ಸಮಿತಿ ಸಭೆ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ಈದಿನ ಯೂಟ್ಯೂಬ್ ಬ್ಲಾಕ್ ತೆರವುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ
ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 10ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಉಮರ್ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
