ಸಾಲಬಾಧೆಯಿಂದ ಮೃತಪಟ್ಟಿದ್ದ ವ್ಯಕ್ತಿ ಅಡಮಾನವಿಟ್ಟಿದ್ದ ಜಮೀನು ಮತ್ತು ಮನೆ ಆಸ್ತಿಗಳ ಮೂಲ ದಾಖಲೆಗಳನ್ನು ಆತನ ತಂದೆಗೆ ಹಿಂದಿರುಗಿಸದ ಕೆನರಾ ಬ್ಯಾಂಕ್‌ಗೆ ಹೈಕೋರ್ಟ್ ದಂಡ ವಿಧಿಸಿದೆ. ಆ 2 ಲಕ್ಷ ರೂ. ದಂಡದ ಹಣವನ್ನುವೃದ್ಧ ತಂದೆಗೆ ನೀಡುವಂತೆ ನಿರ್ದೇಶಿಸಿದೆ.
ದಾವಣಗೆರೆಯ ಎಂಬಿ ಆಗ್ರೋ ಫುಡ್ ಇಂಡಸ್ಟ್ರೀಸ್ ಉದ್ದಿಮೆ ವ್ಯವಸ್ಥಾಪಕ ನಿರ್ದೇಶಕ ಅನಿಮೇಶ್ ಗೌಡ ಎಂಬವರು ಆಸ್ತಿ ಪತ್ರಗಳನ್ನು ಕೆನರಾ ಬ್ಯಾಂಕ್‌ನಲ್ಲಿ ಒತ್ತೆಯಿಟ್ಟು, ಸಾಲ ಪಡೆದುಕೊಂಡಿದ್ದರು. ಬಳಿಕ, ಅವರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡರು. ಅತನ ಸಾವಿನ ಬಳಿಕ, ಆತನ ತಂದೆ ಎಂ.ಬಿ ಶೇಖರಗೌಡ ಅವರೇ ಸಂಪೂರ್ಣ ಸಾಲದ ಮೊತ್ತ 20 ಕೋಟಿ ರೂ.ಗಳನ್ನು ‘ಒನ್ ಟೈಮ್ ಸೆಟಲ್‌ಮೆಂಟ್’ ಮೂಲಕ ಪಾವತಿಸಿದ್ದರು. ಆದರೂ, ಅವರಿಗೆ ಬ್ಯಾಂಕ್ ಆಸ್ತಿ ಪತ್ರಗಳನ್ನು ಹಿಂದಿರುಗಿಸಿರಲಿಲ್ಲ. ಸಾಲ ಪಡೆದಿದ್ದ ಮಗನಿಗೇ ದಾಖಲೆಗಳನ್ನು ಕೊಡುತ್ತೇವೆ. ತಂದೆಗಲ್ಲ ಎಂಬ ವಿಚಿತ್ರ ನಿಲುವನ್ನು ಬ್ಯಾಂಕ್ ತೆಗೆದುಕೊಂಡಿತ್ತು.
ಬ್ಯಾಂಕ್ ವಿರುದ್ಧ ಎಂ.ಬಿ.ಶೇಖರಗೌಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ, ವೃದ್ಧನಿಗೆ 2 ಲಕ್ಷ ರೂ. ಹಣದ ಜೊತೆಗೆ, ದಾಖಲೆಗಳನ್ನು ಹಿಂದಿರುಗಿಸವಂತೆ ಮೂಲ ದಾಖಲೆಗಳನ್ನು ಹಿಂದಿರುಗಿಸುವಂತೆ ಕೆನರಾ ಬ್ಯಾಂಕ್‌ಗೆ ನಿರ್ದೇಶನ ನೀಡಿದೆ.
ವಿಚಾರಣೆಯ ಸಮಯದಲ್ಲಿ ಕೆನರಾ ಬ್ಯಾಂಕ್‌ನ ವಕೀಲರು, “ತಂದೆ ಮೂಲ ಸಾಲಗಾರರಲ್ಲ, ಆದ್ದರಿಂದ ದಾಖಲೆಗಳನ್ನು ಅವರಿಗೆ ಹಿಂತಿರುಗಿಸಲಾಗುವುದಿಲ್ಲ. ಆದರೆ ನ್ಯಾಯಾಲಯವು ನಿರ್ದೇಶನ ನೀಡಿದರೆ ಹಿಂತಿರುಗಿಸಲಾಗುವುದು” ಎಂದು ಹೊಸ ವಾದವನ್ನು ಮುಂದಿಟ್ಟಿದ್ದರು.
ಆದರೆ, ಕೇವಲ ನಿರ್ದೇಶನವನ್ನು ನೀಡಲು ಸಾಧ್ಯವಿಲ್ಲ ಎಂದಿರುವ ನ್ಯಾಯಾಲಯ, “ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತಿಳಿದಿದೆ. ಮಗನ ಸಾವಿನ ಹಿನ್ನೆಲೆಯಲ್ಲಿ ತಂದೆಗೆ ಒಟಿಎಸ್ ನೀಡಿದ ಬ್ಯಾಂಕ್, ದಾಖಲೆಗಳನ್ನು ಮಾತ್ರ ಮೂಲ ಸಾಲಗಾರನಿಗೆ ಹಿಂದಿರುಗಿಸಲು ಬಯಸಿದೆ. ಬ್ಯಾಂಕ್‌ನ ಈ ಕ್ರಮ ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ತಂದಿದೆ” ಎಂದು ಹೇಳಿದೆ.
ಬ್ಯಾಂಕ್‌ನ ವರ್ತನೆಯು ಖಾಸಗಿ ಲೇವಾದೇವಿದಾರನ ವರ್ತನೆಯಂತೆಯೇ ಇದೆ. ಅದೂ ಸಹ, ಸಂಪೂರ್ಣ ಮೊತ್ತವನ್ನು ಸ್ವೀಕರಿಸಿದ ನಂತರವೂ, ಮೂಲ ಸಾಲಗಾರ ಇಲ್ಲವೆಂಬುದು ಗೊತ್ತಿದ್ದರೂ ದಾಖಲೆಗಳನ್ನು ಮೂಲ ಸಾಲಗಾರನಿಗೇ ಹಿಂದಿರುಗಿಸುತ್ತೇವೆ ಎಂಬುದು ಗ್ರಹಿಕೆಗೆ ಮೀರಿದ್ದಾಗಿದೆ ಮತ್ತು ವಿಚಿತ್ರವಾಗಿದೆ” ಎಂದು ನ್ಯಾಯಾಲಯ ಅಸಮಧಾನ ವ್ಯಕ್ತಪಡಿಸಿದೆ.