ನ.1ರಂದು ನಡೆಯಲಿರುವ 69ನೇ ಕನ್ನಡ ರಾಜ್ಯೋತ್ಸವ ಆಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 69 ಗಣ್ಯರಿಗೆ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಬೀದರ್ ಜಿಲ್ಲೆಯ ಇಬ್ಬರು ಸಾಧಕರು ಪ್ರಸಕ್ತ ಸಾಲಿನ ಕರ್ನಾಟಕ ರಾಜೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಮಾಜ ಸೇವೆ ಕ್ಷೇತ್ರದಲ್ಲಿ ಹೀರಾಚಂದ್ ವಾಗ್ಮಾರೆ ಹಾಗೂ ಜಾನಪದ ಕ್ಷೇತ್ರದಲ್ಲಿ ಅಂಧ ಕಲಾವಿದ ನರಸಿಂಹಲು ಅವರು ಆಯ್ಕೆಯಾಗಿದ್ದಾರೆ.
ಹೀರಾಚಂದ್ ವಾಗ್ಮಾರೆ ಅವರು ಮೂಲತಃ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದವರು. ವಿದ್ಯಾರ್ಥಿ ಜೀವನದಿಂದಲೇ ಚಳವಳಿಯಲ್ಲಿ ಆಸಕ್ತಿ ಬೆಳೆಸಿಕೊಂಡು ವಿನೋಬಾ ಭಾವೆ ಅವರೊಂದಿಗೆ ಭೂದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಎಂ.ಎ (ಅರ್ಥಶಾಸ್ತ್ರ) ದಲ್ಲಿ ಪದವಿಧರರಾದ ಹೀರಾಚಂದ್ ಅವರಿಗೆ ಇದೀಗ 95 ವರ್ಷ ವಯಸ್ಸು.
ಗಾಂಧೀಜಿ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಮದುವೆ ಆಗದೇ ಒಂಟಿಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನ ಕಳೆಯುತ್ತಿದ್ದಾರೆ. ಈ ಹಿಂದೆ ಭಾಲ್ಕಿಯಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿ ಕೆಲ ಕಾಲ ಉಪನ್ಯಾಸಕರಾಗಿ ದುಡಿದಿದ್ದಾರೆ. ಅಲ್ಲದೇ ಖಾದಿ ಗ್ರಾಮೋದ್ಯೋಗದಲ್ಲಿ ತೊಡಗಿಸಿಕೊಂಡು ಗಾಂಧೀಜಿ ಆದರ್ಶಗಳನ್ನು ಮುನ್ನಡೆಸಿದರು.
ʼನಾನು ಸನ್ಯಾಸಿ ಜೀವನ ನಡೆಸುತ್ತಿದ್ದೇನೆ. ಇಡೀ ಬದುಕು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದೇನೆ, ಎಲ್ಲ ಕ್ಷೇತ್ರದಲ್ಲಿ ದೇಶ ಪ್ರಗತಿ ಸಾಧಿಸಬೇಕು. ರಾಜೋತ್ಸವ ಪ್ರಶಸ್ತಿಗೆ ನಾನು ಅರ್ಜಿ ಹಾಕಲಿಲ್ಲ. ಇಳಿ ವಯಸ್ಸಿನಲ್ಲಿ ನನ್ನನ್ನು ಸರ್ಕಾರ ಗುರುತಿಸಿದೆ. ಆದರೆ, ಮಾನವ ಜನಾಂಗ ನೆಮ್ಮದಿಯಿಂದ ಜೀವನ ನಡೆಸಿದರೆ ಮಾತ್ರ ನನಗೆ ಸಂತಸ ಸಿಗುತ್ತದೆʼ ಎಂದು ಹೀರಾಚಂದ್ ವಾಗ್ಮಾರೆ ಅವರು ಈದಿನ.ಕಾಮ್ ಜೊತೆಗೆ ಮಾತನಾಡಿ ಅಭಿಪ್ರಾಯ ಹಂಚಿಕೊಂಡರು.
ಅಂಧ ಕಲಾವಿದನಿಗೆ ಒಲಿದ ರಾಜೋತ್ಸವ ಗರಿ :
ಅಂಧ ಜಾನಪದ ಕಲಾವಿದ ನರಸಿಂಹಲು ಅವರು 1963ರಲ್ಲಿ ಜನಿಸಿದ್ದಾರೆ. ಸದ್ಯ ಬೀದರ್ ನಗರದ ಗುಂಪಾದಲ್ಲಿ ನೆಲೆಸಿರುವ ನರಸಿಂಹಲು ಬಿ.ಎ ಪದವಿಧರರು. ಕಲಾವಿದ ನರಸಿಂಹಲು ಡಪ್ಪೂರ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದ್ವತ್ ಪಡೆದಿದ್ದಾರೆ. ಸುಮಾರು 30 ವರ್ಷಗಳಿಂದ ಜಾನಪದ ಗಾಯನ, ಮೊಹರಂ ಪದ, ಹಂತಿ ಪದ, ತತ್ವಪದ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ʼನನಗೆ 5 ವರ್ಷ ಇದ್ದಾಗಲೇ ಎರಡು ಕಣ್ಣು ಕಳೆದುಕೊಂಡೆ, ಮುಂದೆ ಕಲಬುರಗಿಯಲ್ಲಿ ಶಿಕ್ಷಣ ಪಡೆದು, ನಂತರ ಜಾನಪದ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಅಭ್ಯಾಸ ನಡೆಸಿ ಅದನ್ನೇ ಪ್ರವೃತ್ತಿಯನ್ನಾಗಿಸಿಕೊಂಡೆ, ಜಾನಪದ ಕಲಾ ಸೇವೆಯೊಂದಿಗೆ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆ, ಬಾಲ ಭವನ ಸೇರಿದಂತೆ ಇನ್ನಿತರ ಕಡೆ ಸಂಗೀತ ಶಿಕ್ಷಕನಾಗಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಇದೀಗ ನನ್ನ ಸೇವೆ ಗುರುತಿಸಿ ಸರ್ಕಾರ ನನ್ನನ್ನು ರಾಜೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆʼ ಎಂದು ಈದಿನ.ಕಾಮ್ ಜೊತೆಗೆ ಮಾತನಾಡಿ ಖುಷಿ ಹಂಚಿಕೊಂಡರು.