ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಬಹುದಾದ 5,803 ಸ್ಥಳಗಳನ್ನು ಗುರುತಿಸಲಾಗಿದೆ. ಅವುಗಳನ್ನು ಬ್ಲ್ಯಾಕ್ ಸ್ಪಾಟ್ ಎಂದು ಕರೆಯಲಾಗುತ್ತದೆ. ಈ ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಅತಿ ಹೆಚ್ಚು ತಮಿಳುನಾಡಿನಲ್ಲಿ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಗುರವಾರ ನಡೆದ ಚರ್ಚೆಯಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 2018ರಿಂದ 2020ರವೆಗೆ ಸಂಗ್ರಹಿಸಲಾದ ಮಾಹಿತಿ ಪ್ರಕಾರ ಅವರು ಅಂಕಿ-ಅಂಶಗಳನ್ನು ನೀಡಿದ್ದಾರೆ. ಆದರೆ, 2020ರ ನಂತರದಲ್ಲಿ ಗುರುತಿಸಲಾಗಿರುವ ಬ್ಲ್ಯಾಕ್‌ಸ್ಪಾಟ್‌ಗಳ ಬಗ್ಗೆ ಗಡ್ಕರಿ ಅವರು ಮಾಹಿತಿ ನೀಡಿಲ್ಲ.
2020ರ ಹಿಂದಿನ ಅಂಕಿಅಂಶಗಳನ್ನು ಒದಗಿಸಿರುವ ಸಚಿವರು, “ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ 5,803 ಬ್ಲ್ಯಾಕ್‌ಸ್ಪಾಟ್‌ಗಳಿವೆ. ಅತಿ ಹೆಚ್ಚು ಬ್ಲ್ಯಾಕ್‌ಸ್ಪಾಟ್‌ಗಳನ್ನು ತಮಿಳುನಾಡು ಹೊಂದಿದೆ. ಎರಡನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ, ಮೂರನೇ ಸ್ಥಾನದಲ್ಲಿ ಕರ್ನಾಟಕ ಹಾಗೂ ನಾಲ್ಕನೇ ಸ್ಥಾನದಲ್ಲಿ ತೆಲಂಗಾಣ ಇದೆ” ಎಂದು ಹೇಳಿದ್ದಾರೆ.
“ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾವಳಿಗಳಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ನಿರ್ದಿಷ್ಟ 500 ಮೀ. ಉದ್ದದ ರಸ್ತೆಯಲ್ಲಿ ಮೂರು ವರ್ಷಗಳಲ್ಲಿ ಕನಿಷ್ಟ 5 ರಸ್ತೆ ಅಪಘಾತಗಳು ಸಂಭವಿಸಿದ್ದರೆ ಹಾಗೂ 10 ಮಂದಿ ಗಾಯಗೊಂಡಿದ್ದರೆ ಅಥವಾ ಸಾವನ್ನಪ್ಪಿದ್ದರೆ, ಆ ಸ್ಥಳವನ್ನು ಬ್ಲ್ಯಾಕ್‌ಸ್ಪಾಟ್ ಎಂದು ಗುರುತಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಅಂತಹ ಬ್ಲ್ಯಾಕ್‌ಸ್ಪಾಟ್‌ಗಳು ಕರ್ನಾಟಕದಲ್ಲಿ 551 ಇವೆ. ಅವುಗಳ ಪೈಕಿ ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲೇ ನಾಲ್ಕು ಪ್ರಮುಖ ಬ್ಲ್ಯಾಕ್‌ಸ್ಪಾಟ್‌ಗಳಿವೆ. ರಾಮನಗರ ಬಳಿಯ ಅಗರ ಕ್ರಾಸ್, ಮಾಯಗಾನಹಳ್ಳಿ, ಲಕ್ಷ್ಮೀಪುರ ಮಂದಿರ ಹಾಗೂ ಮಂಡ್ಯದ ಪಿಎಸ್ ಕ್ರಾಸ್‌ಅನ್ನು ಬ್ಲ್ಯಾಕ್‌ಸ್ಪಾಟ್ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಗಳ ದುರಸ್ತಿ ಮತ್ತು ನಿರ್ವಹಣೆಗಾಗಿ 2018-19ರಿಂದ 2022-23ರ ನಡುವೆ 15,702.80 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಹಲವು ಬ್ಲ್ಯಾಕ್‌ಸ್ಪಾಟ್‌ಗಳನ್ನೂ ದುರಸ್ತಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕುಟುಂಬ ರಾಜಕಾರಣ ವಿರೋಧಿಸಿ ಮಾತನಾಡುವ ಮೋದಿ ಬೂಟಾಟಿಕೆ ಮನುಷ್ಯ : ಕಾಂಗ್ರೆಸ್ ಟೀಕೆ
‘2018-19ರಿಂದ 2022-23ರ ವರ್ಷದವರೆಗಿನ ಐದು ವರ್ಷದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್ಎಚ್ಎಐ ರಸ್ತೆಗಳ ದುರಸ್ತಿ ಮತ್ತು ಪಾಲನೆಗೆ 15,702.80 ಕೋಟಿ ರೂ ವೆಚ್ಚ ಮಾಡಿದೆ. ಇದರಲ್ಲಿ ಬ್ಲ್ಯಾಕ್ ಸ್ಪಾಟ್ಗಳ ದುರಸ್ತಿಯ ವೆಚ್ಚವೂ ಸೇರಿದೆ’ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಗಡ್ಕರಿ ಅವರು ನೀಡಿರುವ ಮಾಹಿತಿಯಂತೆ, ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ 748 ಬ್ಲ್ಯಾಕ್‌ಸ್ಪಾಟ್‌ಗಳಿವೆ. ಪಶ್ಚಿಮ ಬಂಗಾಳದಲ್ಲಿ 701, ಕರ್ನಾಟಕದಲ್ಲಿ 551 ಹಾಗೂ ತೆಲಂಗಾಣದಲ್ಲಿ 485 ಬ್ಲ್ಯಾಕ್‌ಸ್ಪಾಟ್‌ಗಳಿವೆ.