ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕೆಂಪೂಗೌಡ, ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಶಾಸಕರಾದ ದರ್ಶನ್ ಪುಟ್ಟಣಯ್ಯ ಅವರ ನೇತೃತ್ವದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಯಾವುದೇ ಸರ್ಕಾರ ಬಂದರು ಕೇವಲ ಅಶ್ವಾಸನೆಯಾಗಿ, ಮತಗಳಿಸುವುದಕ್ಕಾಗಿ ಭರವಸೆ ನೀಡುತ್ತಾರೆ ವಿನ್ಹ ಯಾವುದೇ ರೈತಪರ, ರೈತ ಹಿತ ಕಾಯುವ ಕೆಲಸ ಮಾಡುವುದೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ” ರೈತ ವಿರೋಧಿ ನೀತಿಗಳನ್ನು ವಾಪಸ್ ಪಡೆಯುವುದಾಗಿ, ಎಪಿಎಂಸಿ ಮಾರುಕಟ್ಟೆ ಉಳಿಸುವ ಭರವಸೆ ನೀಡಿದ್ದವು. ನಾವುಗಳು ಸಹ ರೈತರಿಗೆ ಎದುರಾಗಿರುವ ಹಲವಾರು ಸಂಕಷ್ಟಗಳ ಕುರಿತಾಗಿ ಒಂದರ ಮೇಲೊಂದರಂತೆ ಮಾಹಿತಿಯೊಡನೆ ಪ್ರತಿಭಟಿಸಿ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ, ಕುರುಡು ಸರ್ಕಾರ, ಜಿಲ್ಲಾಡಳಿತ, ಅಧಿಕಾರಿಗಳು ಜಡ್ಡು ಹಿಡಿದಂತೆ ರೈತರ ಕೆಲಸಗಳನ್ನು ಗಂಭೀರವಾಗಿ ಪರಿಗಣಿಸದೆ ಅಸಡ್ಡೆ ವಹಿಸಿದ್ದಾರೆ “ಎಂದು ಕಿಡಿಕಾರಿದರು.
” ಜಿಲ್ಲೆಯಲ್ಲಿ ಖಾಯಂ ಆಗಿ ಭತ್ತ, ರಾಗಿ, ಕೇಂದ್ರಗಳನ್ನು ತೆರೆದು ರೈತರಿಂದ ಮಿಲ್ ಪಾಯಿಂಟ್ ನಲ್ಲೇ ಖರೀದಿ ಮಾಡಬೇಕು. ಕೆ ಆರ್ ಎಸ್ ಹಾಗೂ ಹೇಮಾವತಿ ಜಾಲಶಯಗಳಿಂದ ಹಾಲಿ ಬೆಳೆದು ನಿಂತಿರುವ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೋಸ್ಕರ ಜೂನ್ ತಿಂಗಳಲ್ಲಿ ನೀರು ಬಿಡಬೇಕು ” ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷರಾದ ಕೆಂಪೂಗೌಡ ಮಾತನಾಡಿ ” ಸರ್ಕಾರಗಳಿಗೆ ಯಾವುದೇ ಬದ್ಧತೆ ಇಲ್ಲ. ರೈತರಿಗೆ ಎಷ್ಟೇ ತೊಂದರೆ ಆದರೂ ಗಮನ ಹರಿಸುವುದು ಇಲ್ಲ. ರೈತರಿದ್ದರೆ ಅನ್ನ, ರೈತ ಇಲ್ಲ ಅಂದಮೇಲೆ ಇನ್ನೇನು ಮಣ್ಣು ತಿನ್ನಲು ಸಾಧ್ಯವೇ? ಯಾವೊಬ್ಬ ಅಧಿಕಾರಿ, ಸರ್ಕಾರ, ಜನ ಪ್ರತಿನಿಧಿ ಜನರ ಕಷ್ಟ, ರೈತನ ಕಷ್ಟ ಕೇಳಲ್ಲ. ಎಲ್ಲಾ ಮಾತು ರಾಜಕೀಯ ಪ್ರೇರಿತ ಹೊರತು ರೈತನಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಒಂದೇ ಒಂದು ಕೆಲಸ ಮಾಡಲ್ಲ ” ಎಂದು ಆಕ್ರೋಶ ವ್ಯಕ್ತಪಡಿಸಿದರು.
” ಈಗಾಗಲೇ ಘೋಷಿಸಿರುವಂತೆ ರೂಪಾಯಿ ₹150 ಗಳ ಕಬ್ಬಿನ ಬಾಕಿ ಮೊಬಲಗನ್ನು ಬೆಳೆಗಾರರಿಗೆ ಪಾವತಿ ಮಾಡಬೇಕು. ಇದರ ಸಂಭಂದ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಕಟ್ಟುನಿಟ್ಟಿನ ಸೂಚನೆಯನ್ನು ನೀಡಬೇಕು. ರಂಗರಾಜನ್ ವರದಿಯಂತೆ ಪ್ರತಿ ವರ್ಷವೂ ಕಬ್ಬಿನ ಉಪ ಉತ್ಪನ್ನಗಳಿಂದ ಬರುವ ಲಾಬಾಂಶವನ್ನು ನೀಡಬೇಕು. ಸರ್ಕಾರ ಆಯಾ ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಬೇಕು ” ಎಂದು ಆಗ್ರಹಿಸಿದರು.
ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ ” ನಾವು ಸಹ ವಿಶ್ವಾಸದಿಂದ, ನಂಬಿಕೆಯಿಂದ ಇವಾಗ, ನಾಳೆ ಸರ್ಕಾರ, ಅಧಿಕಾರಿಗಳು ಸ್ಪಂದಿಸಿ ರೈತರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಕಷ್ಟ ಕೇಳುತ್ತಾರೆ. ಅರ್ಥ ಮಾಡಿಕೊಂಡು ರೈತ ಚಿಂತನೆಯುಳ್ಳ ಬಜೆಟ್ ಮಾಡುತ್ತಾರೆ.ಅದರಿಂದ, ರೈತ ಸಮಸ್ಯೆ ಬಗೆ ಹರಿಯುತ್ತದೆ ಎಂದು ಕಾಯುವುದೇ ಆಯ್ತು ವಿನ್ಹ ಯಾವುದೇ ಪೂರಕ ಕೆಲಸ ಇದುವರೆಗೆ ಆಗಲಿಲ್ಲ. ನಾವು ರೈತರ ಪರವಾದ ನಿಲುವನ್ನು ತಾಳಿ, ರೈತರ ಕಷ್ಟ ಹೋಗಲಾಡಿಸಿ ಅಂತೇಳಿ ಎಷ್ಟೇ ಕೇಳಿದರು ಯಾವ ಸ್ಪಂದನೆಯು ಇಲ್ಲ ಇದು ಸರಿಯಾದ ನಡುವಳಿಕೆಯಲ್ಲ ” ಎಂದರು.

” ಕೃಷಿ ಪಂಪ್ ಸೆಟ್ ಗಳ ಅಕ್ರಮ ಸಕ್ರಮಕ್ಕೆ ನಿಗದಿಪಡಿಸಿರುವ ₹25000 ರೂಪಾಯಿಗಳನ್ನು ರೈತರಿಂದ ಜಮಾ ಮಾಡಿಸಿಕೊಂಡು ಉಳಿದ ಎಲ್ಲಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಕೆ ಆರ್ ಎಸ್ ನಲ್ಲಿ ಪ್ರಾರಂಭಿಸಲು ಹೊರಟಿರುವ ಅಮ್ಯೂಜ್ಮೆಂಟ್ ಪಾರ್ಕ್ ರದ್ದುಪಡಿಸಬೇಕು. ಕಾವೇರಿ ಯೋಜನೆಯನ್ನು ಕೈಬಿಟ್ಟು ಅದಕ್ಕೆ ಮಿಸಲಿಟ್ಟಿರುವ ₹92 ಕೋಟಿ ರೂಪಾಯಿಗಳನ್ನು ಕೆ ಆರ್ ಎಸ್ ಅಚ್ಚುಕಟ್ಟು ವಿತರಣಾ ನಾಳೆಗಳ ಆಧುನಿಕರಣಕ್ಕೆ ಬಳಕೆ ಮಾಡಿಕೊಂಡು ಕೊನೆಯ ಭಾಗದ ಜಮೀನುಗಳಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು.”
” ಕೇಂದ್ರ ಸರ್ಕಾರವು ಕಬ್ಬಿಗೆ ಎಫ್ ಆರ್ ಪಿ ದರ ನಿಗದಿ ಪಡಿಸುವಾಗ ಶೇ% 8.5 ರ ಇಳುವರಿ ಅನುಸಾರ ದರ ನಿಗದಿ ಮಾಡುವಂತೆ ಹಾಗೂ ರಾಜ್ಯ ಸರ್ಕಾರ ಟನ್ ಕಬ್ಬಿಗೆ ಕನಿಷ್ಠ ₹500 ರೂಪಾಯಿಗಳ ಪ್ರೋತ್ಸಾಹ ಧನ ನೀಡಬೇಕು. ರೈತ ವಿರೋಧಿ ಮೂರು ಕಾಯ್ದೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಶ್ವತವಾಗಿ ವಾಪಸ್ ಪಡೆಯಬೇಕು. ತಪ್ಪಿದಲ್ಲಿ ರೈತರು, ಸಾರ್ವಜನಿಕರು, ಸರ್ಕಾರಗಳ ವಿರುದ್ಧ ಜನಾಕ್ರೋಶ ಸಮಾವೇಶ ನಡೆಸುವ ಮೂಲಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ” ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಬೀದಿ ಬದಿ ವ್ಯಾಪಾರಿಗಳಿಗೆ ಕೆಎಸ್ಆರ್ಟಿಸಿ ಆವರಣದೊಳಗೆ ಬಾರದಂತೆ ನಿರ್ಬಂಧ; ಪ್ರತಿಭಟನೆ
ಪ್ರತಿಭಟನೆಯಲ್ಲಿ ಎಸ್. ಕೆ. ರವಿಕುಮಾರ್, ಜಿ. ಎಸ ಲಿಂಗಪ್ಪ, ಬೋರಾಪುರ ಶಂಕರೇಗೌಡ, ಜಯರಾಮೇ ಗೌಡ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.