ಮಂಡ್ಯ ವಿವಿ(ವಿಶ್ವವಿದ್ಯಾಲಯ)ಯಲ್ಲಿ ಎಂಬಿಎ-ಎಂಸಿಎ ಸ್ನಾತಕೋತ್ತರ ವಿಭಾಗ ತೆರೆಯುವುದು ಹಾಗೂ ವಿವಿಗೆ ರಾಜಮಾತೆ ಕೆಂಪನಂಜಮ್ಮಣಿ ಅವರ ಹೆಸರಿಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ)ಯಿಂದ ಕುಲಪತಿಗಳು ಮತ್ತು ಕುಲಸಚಿವರ ಮೂಲಕ ಉನ್ನತ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
“ಮಂಡ್ಯ ವಿಶ್ವವಿದ್ಯಾಲಯವು ಸರ್ವ ಸಾಮಾನ್ಯ ಸೌಲಭ್ಯ ಹೊಂದಿದ್ದು, ಹಲವಾರು ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಪ್ರಸ್ತುತ ಪ್ರಪಂಚಕ್ಕೆ ಕೌಶಲ್ಯಾಧಾರಿತ ಪದವೀಧರರನ್ನು ನೀಡುತ್ತ ಬರುತ್ತಿರುವುದು ಶ್ಲಾಘನೀಯ” ಎಂದರು.
“ವಿಶ್ವವಿದ್ಯಾಲಯದಲ್ಲಿ ನಮ್ಮ ಸ್ಥಳೀಯ ರೈತರು, ಕಾರ್ಮಿಕರು, ಬಡವರು, ಕಟ್ಟಡ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತಯ್ತಿರುವುದರಿಂದ ಅವರು ಎಂಬಿಎ ಮತ್ತು ಎಂಸಿಎ ಸ್ನಾತಕೋತ್ತರ ಪದವಿ ತರಗತಿಗಳಿಗೆ ಬೆಂಗಳೂರು, ಮೈಸೂರು ಭಾಗದ ಖಾಸಗಿ ವಿವಿಗಳಿಗೆ ತೆರಳಬೇಕಿದೆ. ಅದಲ್ಲದೆ ಅಲ್ಲಿಗೆ ಭರಿಸುವ ಪದವಿ ಶುಲ್ಕ ಲಕ್ಷಾಂತರ ರೂಪಾಯಿಗಳಾಗಿರುತ್ತದೆ. ಆದಕಾರಣ ತರಗತಿಗಳನ್ನು 2024-25ನೇ ಸಾಲಿಗೆ ಪ್ರಾರಂಭವಾಗುವಂತೆ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಎಂಬಿಎ-ಎಂಸಿಎ ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಬೇಕು” ಎಂದು ಸರ್ಕಾರ ಮತ್ತು ವಿಶ್ವವಿದ್ಯಾಲಯಕ್ಕೆ ಒತ್ತಾಯಿಸಿದರು.
“ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪನಂಜಮ್ಮಣಿಯವವರ ಹೆಸರಿನಲ್ಲಿ ಕ್ಷೇಮಾಭಿವೃದ್ಧಿ ಮತ್ತು ಸಮಸ್ತ ಮೈಸೂರು ಸಂಸ್ಥಾನದ ಅಭಿವೃದ್ಧಿಗೂ ಹಿನ್ನೆಲೆಯಾಗಿ ನಿಂತು ಕಾರಣರಾಗಿರುವುದರಿಂದ ಅಲ್ಲದೆ ಮಹಿಳಾ ಸಮಾನತೆಗಾಗಿ ಮತ್ತು ಸಾಧಕಿಯಾಗಿರುವುದರಿಂದ ಮಂಡ್ಯ ವಿಶ್ವವಿದ್ಯಾಲಯಕ್ಕೆ ಮಾತೆ ಕೆಂಪನಂಜಮ್ಮಣ್ಣಿ ಅವರ ಹೆಸರನ್ನು ನಾಮಕರಣ ಮಾಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಜಾತಿ ದೌರ್ಜನ್ಯ | ಸಿಎಂ ತವರಲ್ಲೇ ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
“ಕುಲಪತಿಗಳು, ಕುಲಸಚಿವರು, ಉನ್ನತ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳು ಇದರ ಬಗ್ಗೆ ಸೂಕ್ತ ಕ್ರಮ ವಹಿಸಬೇಕು” ಎಂದು ಕೋರಿದರು.
ಮಂಡ್ಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ, ಶಿವರಾಮೆಗೌಡ, ಮಂಚಶೆಟ್ಟಿ, ಪಲ್ಲವಿ, ಮನು ಸೇರಿದಂತೆ ಪದಾಧಿಕಾರಿಗಳು ಇದ್ದರು.