ಮಳೆಗಾಲದಲ್ಲಿ ಹಾವುಗಳ ಸಂಚಾರ ಹೆಚ್ಚಾಗುವುದು ಸಾಮಾನ್ಯ ವಿದ್ಯಮಾನವಾಗಿದ್ದರೂ, ಸೂಕ್ತ ಎಚ್ಚರಿಕೆ ಮತ್ತು ಜಾಗೃತಿಯಿಂದ ಹಾವು ಕಡಿತ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಹಾಗಾಗಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶಗಳು ಮತ್ತು ಕೃಷಿ ತೋಟಗಳ ಸುತ್ತಮುತ್ತ ಜನರು ಕೆಲವು ಮುಖ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯವಾಗಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಾವುಗಳ ಸಂಚಾರ ಹೆಚ್ಚಾಗುತ್ತಿದ್ದು, ಅದರೊಂದಿಗೆ ಹಾವು ಕಡಿತ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ವಿಶೇಷವಾಗಿ ಅರಣ್ಯದ ಅಂಚಿನ ಗ್ರಾಮಗಳು, ಕೃಷಿ ಭೂಮಿ, ಅಡಕೆ ಹಾಗೂ ತೆಂಗಿನ ತೋಟಗಳ ಸುತ್ತಮುತ್ತ ವಾಸಿಸುವ ಜನರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಲಭ್ಯ ಅಂಕಿ ಅಂಶಗಳ ಪ್ರಕಾರ, 2022ರಿಂದ 2026ರ ಮೇ ತಿಂಗಳವರೆಗೆ ಒಟ್ಟು 2,552 ಹಾವು ಕಡಿತ ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷದೊಂದಿಗೆ ಹೋಲಿಸಿದರೆ ಈ ವರ್ಷವೂ ಮಳೆಗಾಲ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತರು ಹಾಗೂ ಅಡವಿ ಅಂಚಿನಲ್ಲಿ ಇರುವವರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜಿಲ್ಲೆಯ ಕರಾವಳಿ ಭಾಗಕ್ಕಿಂತ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ ಹಾಗೂ ಹಳಿಯಾಳ ಸೇರಿದಂತೆ ಮಲೆನಾಡು ಮತ್ತು ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡ ತಾಲೂಕುಗಳಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು, ತೋಟದ ಕಾರ್ಮಿಕರು ಮತ್ತು ಗ್ರಾಮೀಣ ಪ್ರದೇಶದ ನಿವಾಸಿಗಳು ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಿದ್ದಾರೆ.
ಮಳೆಗಾಲದಲ್ಲೇ ಏಕೆ ಹೆಚ್ಚಾಗುತ್ತದೆ?
ತಜ್ಞರ ಪ್ರಕಾರ ಹಾವುಗಳು ಶೀತರಕ್ತ ಜೀವಿಗಳಾಗಿದ್ದು, ಭಾರೀ ಮಳೆ, ನೀರು ತುಂಬುವ ಬಿಲಗಳು ಹಾಗೂ ಆಹಾರಕ್ಕಾಗಿ ಜನವಸತಿ ಪ್ರದೇಶಗಳತ್ತ ಬರುತ್ತವೆ. ಮನೆಗಳ ಸುತ್ತಮುತ್ತ ಇರುವ ಕಸದ ರಾಶಿ, ಮರದ ತುಂಡುಗಳು, ಕಟ್ಟಿಗೆ, ಹಳೆಯ ಸಾಮಗ್ರಿಗಳ ನಡುವೆ ಆಶ್ರಯ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಂದರ್ಭಗಳಲ್ಲಿ ತಿಳಿಯದೆ ಕಾಲಿಡುವುದು ಅಥವಾ ಮುಟ್ಟುವುದರಿಂದ ಹಾವು ಕಡಿತ ಸಂಭವಿಸುತ್ತದೆ ಎನ್ನಲಾಗಿದೆ.
ಚಿಕಿತ್ಸೆಯಲ್ಲಿ ವಿಳಂಬ ಮಾಡಬೇಡಿ: ಹಾವು ಕಡಿತವಾದ ಕೂಡಲೇ ಮೂಢನಂಬಿಕೆಗಳಿಗೆ ಮೊರೆ ಹೋಗದೆ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುವುದು ಅತ್ಯಂತ ಮುಖ್ಯ. ಸಮಯಕ್ಕೆ ಸರಿಯಾಗಿ(Anti Snake Venom – ASV) ಚಿಕಿತ್ಸೆ ದೊರೆತರೆ ಹೆಚ್ಚಿನ ಜೀವಗಳನ್ನು ಉಳಿಸಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಔಷಧ ಲಭ್ಯ: ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತ ಚಿಕಿತ್ಸೆಗೆ ಅಗತ್ಯ ಔಷಧ ಸಂಗ್ರಹ ಇರಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಒಂದು ಕೇಂದ್ರದಲ್ಲಿ ಔಷಧ ಕೊರತೆ ಕಂಡುಬಂದರೂ ಸಮೀಪದ ಆಸ್ಪತ್ರೆಯಿಂದ ತುರ್ತಾಗಿ ಪೂರೈಸುವ ವ್ಯವಸ್ಥೆ ಮಾಡಲಾಗಿದೆ.
ಹಾವು ಕಡಿತವಾದರೆ ಏನು ಮಾಡಬೇಕು?
ಗಾಯಗೊಂಡ ವ್ಯಕ್ತಿಯನ್ನು ಶಾಂತವಾಗಿರಿಸಬೇಕು. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು. ಹಾವು ಕಚ್ಚಿದ ಭಾಗವನ್ನು ಅನಗತ್ಯವಾಗಿ ಅಲುಗಾಡಿಸಬಾರದು. ಹಗ್ಗ ಅಥವಾ ಬಟ್ಟೆಯನ್ನು ಬಿಗಿಯಾಗಿ ಕಟ್ಟಬಾರದು. ಗಾಯದ ಭಾಗವನ್ನು ಕೊಯ್ಯುವುದು, ವಿಷ ಹೀರುವ ಪ್ರಯತ್ನ ಅಥವಾ ಸ್ಥಳೀಯ ಚಿಕಿತ್ಸೆಗೆ ಮೊರೆ ಹೋಗಬಾರದು. ಸಾಧ್ಯವಾದರೆ ಹಾವಿನ ಬಣ್ಣ ಅಥವಾ ರೂಪವನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳಬೇಕು. ಆ ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸಬಾರದು.
ಮುನ್ನೆಚ್ಚರಿಕೆಗಳನ್ನು ಪಾಲಿಸಿ
ರಾತ್ರಿ ವೇಳೆ ಟಾರ್ಚ್ ಬಳಸಿ ಸಂಚರಿಸಬೇಕು. ಹೊಲ, ತೋಟಗಳಲ್ಲಿ ಕೆಲಸ ಮಾಡುವಾಗ ಉದ್ದದ ಬೂಟು ಧರಿಸಬೇಕು. ಮನೆಯ ಸುತ್ತಮುತ್ತ ಕಸ, ಕಟ್ಟಿಗೆ ಹಾಗೂ ಪೊದೆಗಳನ್ನು ತೆರವುಗೊಳಿಸಬೇಕು. ಇಲಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಮಕ್ಕಳನ್ನು ಪೊದೆ, ಕಲ್ಲಿನ ರಾಶಿ ಹಾಗೂ ನಿರ್ಜನ ಪ್ರದೇಶಗಳಲ್ಲಿ ಆಟವಾಡದಂತೆ ಎಚ್ಚರಿಸಿಬೇಕು.
ಹಾವು ಕಂಡ ಕೂಡಲೇ ಅದನ್ನು ಕೊಲ್ಲುವ ಬದಲು ಅರಣ್ಯ ಇಲಾಖೆ ಅಥವಾ ತರಬೇತಿ ಪಡೆದ ಉರಗ ರಕ್ಷಕರಿಗೆ ಮಾಹಿತಿ ನೀಡುವುದು ಸೂಕ್ತ. ಪರಿಸರ ಸಮತೋಲನದಲ್ಲಿ ಹಾವುಗಳ ಪಾತ್ರ ಮಹತ್ವದ್ದಾಗಿದ್ದು, ಅನಗತ್ಯ ಭಯಕ್ಕಿಂತ ಜಾಗೃತಿ ಮತ್ತು ಮುನ್ನೆಚ್ಚರಿಕೆಯೇ ಜೀವ ರಕ್ಷಿಸುವ ಪ್ರಮುಖ ಮಾರ್ಗವಾಗಿದೆ.
ವರ್ಷವಾರು ಹಾವು ಕಡಿತ ಪ್ರಕರಣಗಳ ಅಂಕಿ ಅಂಶಗಳು
2022 – 322
2023 – 595
2024 – 629
2025 – 691
2026 (ಮೇ ಅಂತ್ಯವರೆಗೆ) – 315
ಹಾವು ಕಡಿತವನ್ನು ಸರ್ಕಾರವು ‘ಘೋಷಿತ ಕಾಯಿಲೆ’ ಎಂದು ಪರಿಗಣಿಸಿದ ಬಳಿಕ, ಪ್ರತಿ ಪ್ರಕರಣವನ್ನೂ ಕಡ್ಡಾಯವಾಗಿ ದಾಖಲಿಸಲಾಗುತ್ತಿದೆ. ಈ ಹಿಂದೆ ಇಂತಹ ಅನೇಕ ಪ್ರಕರಣಗಳು ದಾಖಲಾಗದೆ ಮರೆಮಾಚುತ್ತಿದ್ದವು, ಆದರೆ ಈಗ ಆರೋಗ್ಯ ಇಲಾಖೆಯು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಇದನ್ನೂ ಓದಿದ್ದೀರಾ? ಬೀದರ್ | ಕಾರಂಜಾ ಬಲದಂಡೆ ಕಾಲುವೆ ನವೀಕರಣಕ್ಕೆ ₹180 ಕೋಟಿ ಸಂಪುಟ ಸಮ್ಮತಿ : ಈಶ್ವರ ಖಂಡ್ರೆ
ಮಳೆಗಾಲದಲ್ಲಿ ಹಾವುಗಳ ಸಂಚಾರ ಹೆಚ್ಚಾಗುವುದು ಸಾಮಾನ್ಯ ವಿದ್ಯಮಾನವಾಗಿದ್ದರೂ, ಸೂಕ್ತ ಎಚ್ಚರಿಕೆ ಮತ್ತು ಜಾಗೃತಿಯಿಂದ ಹಾವು ಕಡಿತ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಹಾಗಾಗಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶಗಳು ಮತ್ತು ಕೃಷಿ ತೋಟಗಳ ಸುತ್ತಮುತ್ತ ಜನರು ಕೆಲವು ಮುಖ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯವಾಗಿದೆ.
ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ಸ್ಥಳೀಯ ಸಂಘಟನೆಗಳು ಈ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದರೊಟ್ಟಿಗೆ ಪ್ರತಿ ನಾಗರಿಕರೂ ಸಹಕರಿಸಿದರೆ ಮಳೆಗಾಲವನ್ನು ಸುರಕ್ಷಿತವಾಗಿ ಕಳೆಯಬಹುದು. ಜಾಗೃತಿ ಹಾಗೂ ಸುರಕ್ಷತೆಯೇ ಉತ್ತಮ ಔಷಧಿ.





