ಕಾರವಾರ ತಾಲೂಕಿನ ಕದ್ರಾದ ಕೊಡಸಳ್ಳಿ ಭಾಗದಲ್ಲಿ ಗುಡ್ಡ ಕುಸಿದು ರಸ್ತೆ ಸಂಪರ್ಕವೇ ಕಡಿತವಾಗಿದೆ. ಮತ್ತೊಂದೆಡೆ ಜನರ ರಕ್ಷಣೆಗಾಗಿ ಬೋಟುಗಳನ್ನು ತಂದು ನಿಲ್ಲಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಕೊಡಸಳ್ಳಿ ಜಲಾಶಯದಲ್ಲಿದ್ದ ಸಿಬ್ಬಂದಿಯನ್ನು ಕರೆತರಲು ಹರ ಸಾಹಸ ಪಟ್ಟಿದ್ದಾರೆ.
ಕೊಡಸಳ್ಳಿಯಿಂದ ಬಾಳೆಮನೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದೆ. ರಸ್ತೆಯ ಮೇಲೆ 30 ಮೀಟರ್ ಗೂ ಹೆಚ್ಚು ಪ್ರಮಾಣದ ಗುಡ್ಡ ಕುಸಿದು ಕೊಡಸಳ್ಳಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ಹೋಗುವ ಮಾರ್ಗ ಬಂದ್ ಆಗಿತ್ತು. ವಿದ್ಯುತ್ ಗಾರದಲ್ಲಿ ಕಾರ್ಯ ನಿರ್ವಹಿಸುತಿದ್ದ 25 ಜನ ಸಿಬ್ಬಂದಿ ಹಾಗೂ ಕೊಡಸಳ್ಳಿಗೆ ತೆರಳಿದ್ದ ಬಸ್ ಸಹ ಸಂಚರಿಸಲಾಗದೇ ಸಿಲುಕಿಕೊಂಡಿತು.
ತಕ್ಷಣ ಕಾರ್ಯಾಚರಣೆಗೆ ಇಳಿದ ಜಿಲ್ಲಾಡಳಿತ ಹಾಗೂ ಕೆಪಿಸಿ ಇಲಾಖೆಯವರು ಇಂದು ಓರ್ವ ಕಾಲೇಜು ವಿದ್ಯಾರ್ಥಿನಿ ಸೇರಿ ಆರು ಜನರನ್ನು ರಕ್ಷಿಸಿ ಸ್ಥಳಾಂತರಿಸಿದ್ದಾರೆ. ಇನ್ನು ಇದೇ ಭಾಗದಲ್ಲಿ ಬಾಳೆಮನೆ, ಸುಳಗೇರಿ ಗ್ರಾಮವಿದ್ದು 150 ಕ್ಕೂ ಹೆಚ್ಚು ಜನರಿರುವ ಈ ಊರಿಗೆ ಸಂಪರ್ಕ ಕಡಿತವಾಗಿದ್ದು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೇ ನದಿ ಭಾಗದಲ್ಲಿ ಕಿಲೋಮೀಟರ್ ಗಟ್ಟಲೇ ನಡೆದುಕೊಂಡು ಬಂದು ರಸ್ತೆ ಸಂಪರ್ಕ ಮಾಡಬೇಕಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ: ಗದಗ | ಗ್ರಾಮ ಸಹಾಯಕರ ಸಂಘಕ್ಕೆ ರಾಜ್ಯ ಪ್ರತಿನಿಧಿಯಾಗಿ ಅಮರಪ್ಪ ಎಚ್ ದೊಡ್ಡಮನಿ ಆಯ್ಕೆ