ಬೆಳಗಾವಿಯಿಂದ ಗೋವಾಗೆ ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಿದ್ದಪ್ಪ ಬೂದ್ನೂರು, ರಾಜು ಬಾಳನಾಯ್ಕ ಎಂದು ಹೆಸರಿಸಲಾಗಿದೆ. ದನದ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದರೂ, ಹಿಂದುತ್ವವಾದಿಗಳು, ಸ್ವತಃ ಘೋಷಿತ ಗೋರಕ್ಷಕರು ಯಾವುದೇ ಪ್ರತಿಭಟನೆ ನಡೆಸದೆ ಕಾಣೆಯಾಗಿದ್ದಾರೆ. ಕಾರಣ, ಬಂಧಿತರು ಹಿಂದುಗಳು ಎಂದು ಹೇಳಲಾಗಿದೆ.
ಬಂಧಿತ ಆರೋಪಿಗಳು ಸರಕು ವಾಹನದಲ್ಲಿ ಸುಮಾರು 6.75 ಲಕ್ಷ ರೂ. ಮೌಲ್ಯದ 1,930 ಕೆ.ಜಿಯಷ್ಟು ದನದ ಮಾಂಸವನ್ನು ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ. ಆರೋಪಿಗಳನ್ನು ಜೊಯಿಡಾ ತಾಲೂಕಿನ ರಾಮನಗರ ಪೊಲೀಸರು ಬಂಧಿಸಿದ್ದಾರೆ. ದನದ ಮಾಂಸ ಮತ್ತು ಸಾಗಣೆಗೆ ಬಳಸಿದ್ದ ಸರಕು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಬೆಳಗಾವಿಯ ಅಮೂಲ್ ಮೋಹನ್‌ದಾಸ್ ಎಂಬಾತನ ಸೂಚನೆಯಂತೆ ದನದ ಮಾಂಸವನ್ನು ಗೋವಾಗೆ ಕೊಂಡೊಯ್ಯುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ, ರಾಮನಗರ ಬಳಿ ಗಸ್ತು ತಿರುಗುತ್ತಿದ್ದ ಎಎಸ್‌ಐ ರಾಜಪ್ಪ ದೊಡ್ಡಮನಿ ಅವರು ವಾಹನವನ್ನು ತಪಾಸಣೆ ಮಾಡಲು, ವಾಹನ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ, ಆರೋಪಿಗಳನ್ನು ವಾಹನವನ್ನು ನಿಲ್ಲಿಸದೆ ವೇಗವಾಗಿ ಮುಂದೆ ಹೋಗಿದ್ದಾರೆ. ಅನುಮಾನಗೊಂಡ ಎಎಸ್‌ಐ ರಾಜಪ್ಪ ಅವರು ವಾಹನವನ್ನು ಬೆನ್ನಟ್ಟಿ ತಡೆದಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಹನವನ್ನು ಪರಿಶೀಲಿಸಿದಾಗ, 1,930 ಕೆ.ಜಿ. ದನದ ಮಾಂಸ ಇರುವುದು ಪತ್ತೆಯಾಗಿದೆ. ಕೂಡಲೇ ಮಾಂಸ, ವಾಹನವನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಲಾಗಿದೆ. ಮಾಂಸ ಸಾಗಣೆಗೆ ಸೂಚಿಸಿದ್ದ ಅಮೂಲ್ ಮೋಹನ್‌ದಾಸ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020 ಮತ್ತು ಬಿಎನ್‌ಎಸ್ ಸೆಕ್ಷನ್ 325, 192(ಎ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ಲೇಖನ ಓದಿದ್ದೀರಾ?: ಬಿಹಾರ ಮತದಾರ ಪಟ್ಟಿ ಪರಿಷ್ಕರಣೆ: ಮೋದಿ ಮಸಲತ್ತು ಬಹಿರಂಗ?
ಅಂದಹಾಗೆ, ಹಸುಗಳ ಹತ್ಯೆಗಳನ್ನು ತಡೆಯಲು ತಾವು ಗೋರಕ್ಷಕರು ಎಂದು ಅಬ್ಬರಿಸುವ ಬಿಜೆಪಿ, ತನ್ನ ಆಡಳಿತದ ಅವಧಿಯಲ್ಲಿ 2020ರಲ್ಲಿ ‘ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020’ಅನ್ನು ಜಾರಿಗೆ ತಂದಿತು. ಈ ಮೂಲಕ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಸುಗಳು, ಎಮ್ಮೆಗಳನ್ನು ಕೊಲ್ಲುವಂತಿಲ್ಲ ಎಂದು ನಿಮಯ ಹೇರಿತು. ಈ ಕಾಯ್ದೆಗಳು ಸ್ವಯಂಘೋಷಿತ ಗೋರಕ್ಷಕರಾದ ಹಿಂದುತ್ವವಾದಿ ಸಂಘಟನೆಗಳಿಗೆ ಪುಷ್ಠಿ ನೀಡಿತು. ಕೃಷಿ ಕಾರಣಕ್ಕಾಗಿಯೂ ದನಗಳನ್ನು ಸಾಗಿಸುವವರನ್ನು ಅಡ್ಡಗಟ್ಟಿ ಹಲ್ಲೆ, ದೌರ್ಜನ್ಯ ಎಸಗುವುದು ಹೆಚ್ಚಾಯಿತು. ಪುನೀತ್ ಕೆರೆಹಳ್ಳಿ ಮತ್ತು ಅತನ ಗುಂಪು ಗೋರಕ್ಷಣೆ ಹೆಸರಿನಲ್ಲಿ ರಾಮನಗರದ ಸಾತನೂರು ಬಳಿ ಇದ್ರಿಷ್ ಪಾಷಾ ಅವರನ್ನು ಹತ್ಯೆಗೈದಿದೆ ಎಂದು ಆರೋಪಿಸಲಾಗಿದೆ. ಇಲ್ಲದಲ್ಲದೆ, ಕರಾವಳಿ ಭಾಗದಲ್ಲಿ ಗೋಸಾಗಣೆ ವಿರುದ್ಧ ಹಿಂದುತ್ವವಾದಿಗಳು ದಾಂಧಲೆ ನಡೆಸುತ್ತಿರುವುದು ಆಗ್ಗಾಗ್ಗೆ ವರದಿಯಾಗುತ್ತದೆ. ಆದಾಗ್ಯೂ, ಇಂದಿನ ರಾಮನಗರ ಪ್ರಕರಣದಲ್ಲಿ ಹಿಂದುತ್ವವಾದಿಗಳು ಮೌನವಾಗಿದ್ದಾರೆ. ಯಾಕೆಂದರೆ, ಆರೋಪಿಗಳು ಕೂಡ ಹಿಂದುಗಳೇ ಆಗಿದ್ದಾರೆ.