ನೂರರ ನೆನಪು | ಉತ್ಕಟ ಪ್ರೇಮದ ದುರಂತ ನಾಯಕ ಗುರುದತ್

Date:

'ಪ್ರತಿಭಾನ್ವಿತರು ಹುಟ್ಟುವುದು ಮಹಲುಗಳಲ್ಲಲ್ಲ…' ಎನ್ನುವುದಕ್ಕೆ ಗುರುದತ್ ಉತ್ತಮ ಉದಾಹರಣೆ. ಅಮೆರಿಕದ ಪ್ರತಿಷ್ಠಿತ 'ಟೈಮ್' ಪತ್ರಿಕೆ, ಪ್ರಪಂಚದ ನೂರು ಕ್ಲಾಸ್ ಫಿಲ್ಮ್‌ಗಳಲ್ಲಿ ಗುರುದತ್‌ರ 'ಪ್ಯಾಸಾ' ಕೂಡ ಒಂದು ಎಂದು ಹೇಳಿದೆ. ಅಂತಹ ಅಪರೂಪದ ಅದ್ಭುತ ಪ್ರತಿಭೆಯ ಜನ್ಮದಿನವಿಂದು...

‘ಪ್ಯಾಸಾ’ ಚಿತ್ರ ಮಾಡಿದ ಗುರುದತ್, ಆ ಪಾತ್ರವೇ ಅವರಾಗಿದ್ದರು. ಖ್ಯಾತಿ, ಕಾಸು, ಯಶಸ್ಸು ಹೊಂದಿದ್ದರೂ ಅತೃಪ್ತರಾಗಿದ್ದರು. ಉತ್ಕಟ ಪ್ರೇಮ ದುರಂತ ನಾಯಕನನ್ನಾಗಿಸಿತು. ಅಕಾಲಿಕ ಮೃತ್ಯುವನ್ನು ಆಹ್ವಾನಿಸಿತು. ಅನನ್ಯ ಪ್ರತಿಭೆಯ ಅಪರೂಪದ ಚಿತ್ರಜೀವಿ ಗುರುದತ್ ಜನಿಸಿದ್ದು ಜುಲೈ ಒಂಭತ್ತು(9.7.1925).

- Advertisement -

‘ಬದುಕಿನಲ್ಲಿ ಏನಿದೆ? ಇರೋದು ಎರಡೇ- ಒಂದು ಯಶಸ್ಸು, ಇನ್ನೊಂದು ಸೋಲು’ -ಎಂದಿದ್ದ ಗುರುದತ್ ಎರಡನ್ನೂ ಆಸ್ವಾದಿಸಿದ್ದರು, ಅನುಭವಿಸಿದ್ದರು. ಅದನ್ನು ತಮ್ಮ ಸಿನಿಮಾಗಳ ಮೂಲಕ ಸಾಕ್ಷೀಕರಿಸಿಕೊಂಡಿದ್ದರು. ಸಿನಿಮಾ ಅವರ ನರನಾಡಿಗಳಲ್ಲಿ ಇಳಿದುಹೋಗಿತ್ತು. ತಲೆಯಲ್ಲಿ ಇದ್ದದ್ದು ತೆರೆಯ ಮೇಲೆ ಮೂಡಿ ಬಂದಂತೆಲ್ಲ, ಸಿನಿಮಾದ ಬಗೆಗಿನ ವ್ಯಾಮೋಹ ಅತಿಯಾಗಿತ್ತು, ಮೈ ಮನ ತುಂಬಿಕೊಂಡಿತ್ತು. ಈ ವ್ಯಾಮೋಹಕ್ಕೆ ಹೆಣ್ಣು, ಹೆಂಡ, ಸಿಗರೇಟು ತಳಕು ಹಾಕಿಕೊಂಡಿತ್ತು. ಇವೇ ಅವರ ಬದುಕಾಗಿತ್ತು. ಯಾವುದು ಬದುಕಾಗಿತ್ತೋ, ಆ ಅಮಲಿನಲ್ಲಿಯೇ ಬದುಕು ಅಂತರ್ದಾನವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಸಾಮಾನ್ಯವಾಗಿ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು ತಮ್ಮೆಲ್ಲ ಸಾಂಸಾರಿಕ ಜಂಜಾಟಗಳ ನಡುವೆಯೂ ದುರಂತದತ್ತ ಸಾಗಿದ್ದು ಬಹಳ ಕಡಿಮೆ. ಆದರೆ, ಅವರ ಚಿತ್ರಗಳ, ಪಾತ್ರಗಳ ಪ್ರಭಾವಕ್ಕೊಳಗಾದ ಚಿತ್ರಪ್ರೇಮಿಗಳು ಮತ್ತು ಹಲವಾರು ನಾಯಕಿಯರು ನೊಂದು, ಬೆಂದು ದುರಂತದ ಪುಟಗಳಲ್ಲಿ ಸೇರಿಹೋದ ಉದಾಹರಣೆಗಳೇ ಹೆಚ್ಚು. ಹಾಗೆಯೇ ಗುರುದತ್ ಕೂಡ ಅದೇ ಪುಟಗಳಿಗೆ ಸೇರಿಹೋದ ಸಾಧಕ.

ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನ ಹೆಡ್ಡಾಸ್ಟರ್ ಮಗನಾದ ವಸಂತಕುಮಾರ್ ಶಿವಶಂಕರ್ ಪಡುಕೋಣೆ, ಅಮ್ಮ ವಾಸಂತಿ ಪಡುಕೋಣೆಗೆ ಹದಿನಾರು ವರ್ಷವಾಗಿದ್ದಾಗ ಜನಿಸಿದವನು. ಕಷ್ಟವನ್ನು ಕಂಕುಳಲ್ಲಿಯೇ ಕಟ್ಟಿಕೊಂಡು ಬೆಳೆದವನು. ಅಪ್ಪ-ಅಮ್ಮರ ಅತಂತ್ರ ಬದುಕು, ಊರೂರುಗಳ ಅಲೆದಾಟದಲ್ಲಿಯೇ ವಿದ್ಯಾಭ್ಯಾಸ ಮುಗಿಸಿದವನು. ಅನ್ನಕ್ಕಾಗಿ ಅಮ್ಮನ ತಮ್ಮ ಬಾಲಕೃಷ್ಣ ಬೆನಗಲ್(ಶ್ಯಾಂ ಬೆನಗಲ್ ಸಂಬಂಧಿ)ರನ್ನು ಆಶ್ರಯಿಸಿದವನು. ಅವರು ಚಲನಚಿತ್ರ ಪೋಸ್ಟರ್ ಡಿಸೈನರ್ ಆಗಿದ್ದರು. ಆ ಪೋಸ್ಟರ್‌ಗಳು ಗುರುದತ್ ಮನಸ್ಸಿನಲ್ಲಿ ಅದೆಂತಹ ಬೀಜ ಬಿತ್ತಿದವೋ? ಜೊತೆಗೆ ಅಮ್ಮ ಬೆಂಗಾಲಿ ಕತೆಗಳನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದರು. ಆ ಕತೆಗಳು, ಅಮ್ಮ ಮತ್ತು ಕೋಲ್ಕತ್ತಾದ ಬೆಂಗಾಲಿ ಭಾಷೆ ಇನ್ನೆಂತಹ ಸ್ಫೂರ್ತಿ ನೀಡಿದವೋ? ವಸಂತಕುಮಾರ ಎಂಬ ಹೆಸರು ಗುರುದತ್ ಎಂದಾಯಿತು.

guru 3
ಪ್ಯಾಸಾ ಚಿತ್ರದಲ್ಲಿ ಗುರುದತ್

ಇದನ್ನು ಓದಿದ್ದೀರಾ?: ವೇಡನ್ ಎಂಬ ದಲಿತಪ್ರಜ್ಞೆಯ ಪ್ರಖರ ಕಾವ್ಯ ಜ್ವಾಲೆ

‘ಪ್ರತಿಭಾನ್ವಿತರು ಹುಟ್ಟುವುದು ಮಹಲುಗಳಲ್ಲಲ್ಲ…’ ಎನ್ನುವುದಕ್ಕೆ ಗುರುದತ್ ಉತ್ತಮ ಉದಾಹರಣೆ. ಅಮೆರಿಕದ ಪ್ರತಿಷ್ಠಿತ ‘ಟೈಮ್’ ಪತ್ರಿಕೆ, ಪ್ರಪಂಚದ ನೂರು ಕ್ಲಾಸ್ ಫಿಲ್ಮ್‌ಗಳಲ್ಲಿ ಗುರುದತ್‌ರ ‘ಪ್ಯಾಸಾ’ ಕೂಡ ಒಂದು ಎಂದು ಹೇಳಿದೆ. ಅಂದರೆ, ಅದು ಸಾಮಾನ್ಯ ಸಂಗತಿಯಲ್ಲ. ಅಂತಹ ಸಾಧನೆ ಗುರುದತ್‌ರಿಂದ ಭಾರತೀಯ ಸಿನಿಮಾಲೋಕಕ್ಕೆ ಸಂದಾಯವಾಗಿದೆ ಎಂದರೆ, ಗುರುದತ್ ಸಾಮಾನ್ಯರಲ್ಲ.

ಹರೆಯಕ್ಕೆ ಕಾಲಿಟ್ಟ ಗುರುದತ್‌ರ ಚಿತ್ತ ಚಿತ್ರರಂಗದತ್ತ ಇತ್ತೋ ಅಥವಾ ಸಮಯ ಸಂದರ್ಭಗಳು ಗುರುದತ್‌ರನ್ನು ಅಲ್ಲಿ ಗಂಟು ಹಾಕಿದವೋ… ಅಂತೂ ಅಮ್ಮನ ಮೂಲಕ ಗುರುದತ್ ಮುಂಬೈನ ಪ್ರಭಾತ್ ಫಿಲ್ಮ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಕೆಲಸ ಮಾಡುತ್ತಲೇ ‘ಚಾಂದ್’ ಎಂಬ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಹಿಂದಿ ಚಿತ್ರಲೋಕದೊಳಕ್ಕೆ ಜಿಗಿದಿದ್ದರು. ಕೊರಿಯೋಗ್ರಾಫ‌ರ್, ಆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್… ಹೀಗೆ ಕೈಗೆ ಸಿಕ್ಕ ಕೆಲಸವನ್ನೆಲ್ಲ ಮಾಡಿದರು. ಇಷ್ಟಾದರೂ ನಿಲ್ಲಲು ನೆಲೆ ಇಲ್ಲದೆ, ಬದುಕಿಗೊಂದು ಗುರಿಯಿಲ್ಲದೆ ಅನಿಶ್ಚಿತತೆಯನ್ನೇ ಹಾಸಿ ಹೊದ್ದಿದ್ದರು. ಆ ವಯಸ್ಸಿಗೆ, ಅಪ್ಪ-ಅಮ್ಮನ ಒತ್ತಾಯಕ್ಕೆ ಮಣಿದು ಮದುವೆಯಾಗಿ, ಬಿಟ್ಟಿದ್ದೂ ಆಗಿತ್ತು. ಅದೂ ಒಬ್ಬರಲ್ಲ; ಇಬ್ಬರನ್ನು.

ತಲೆ ತುಂಬಾ ಕನಸುಗಳು; ಕೆಲಸಗಳಿಗಾಗಿ ಕಾದ ಕೈಗಳು… ಅಂತಹ ಸಮಯದಲ್ಲಿ ಗುರುದತ್ ಕೈ ಹಿಡಿದವರು ನಟ ದೇವಾನಂದ್. ಇಬ್ಬರೂ ಒಳ್ಳೆಯ ಸ್ನೇಹಿತರಾದರು. ಜೊತೆಯಾಗಿ ಚಿತ್ರಗಳನ್ನು ಮಾಡಿದರು. ಗುರುದತ್ ನಿರ್ದೇಶಿಸಿದ, ದೇವಾನಂದ್ ನಾಯಕ ನಟನಾಗಿ ನಟಿಸಿದ ಮೊದಲ ಚಿತ್ರ ‘ಬಾಝಿ’ ಒಳ್ಳೆಯ ಹೆಸರು ಮತ್ತು ಗಳಿಕೆಯನ್ನು ತಂದುಕೊಟ್ಟಿತು. ಗುರುದತ್‌ ಅಸಲಿ ಪ್ರತಿಭೆಯ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದ ದೇವಾನಂದ್, ಚಿತ್ರನಿರ್ಮಾಣ ಕಾರ್ಯವನ್ನು ಮುಂದುವರೆಸಿದರು. ದೇವಾನಂದ್ ಮತ್ತು ಗುರುದತ್ ಕಾಂಬಿನೇಷನ್‌ನಲ್ಲಿ ‘ಜಾಲ್’, ‘ಸಿಐಡಿ'(ನಿರ್ದೇಶನ-ರಾಜ್ ಕೋಸ್ಲ, ನಿರ್ಮಾಣ-ಗುರುದತ್)ಗಳಂತಹ ಉತ್ತಮ ಚಿತ್ರಗಳು ಹೊರಬಂದವು. ಈ ಮಧ್ಯೆ ಗುರುದತ್ ಖ್ಯಾತ ಗಾಯಕಿ ಗೀತಾರಾಯ್‌ರನ್ನು ಹಲವು ವಿರೋಧಗಳ ನಡುವೆಯೂ ಮದುವೆಯಾದರು.

ಚಿತ್ರರಂಗದಲ್ಲಿ ಗಟ್ಟಿಗೊಳ್ಳುತ್ತ ಸಾಗಿದ ಗುರುದತ್ ನಟರಾಗಿ, ನಿರ್ದೇಶಕರಾಗಿ ‘ಕಾಗಜ್ ಕೆ ಫೂಲ್’, ‘ಪ್ಯಾಸಾ’, ‘ಸಾಹಿಬ್ ಬೀಬಿ ಔರ್ ಗುಲಾಮ್’, ‘ಚೌಂದ್ವಿ ಕಾ ಚಾಂದ್’, ‘ಮಿಸ್ಟರ್ ಅಂಡ್ ಮಿಸೆಸ್ 55’, ‘ಆರ್ ಪಾರ್’ಗಳಂತಹ ಸಾರ್ವಕಾಲಿಕ ಕಲಾತ್ಮಕ ಚಿತ್ರಗಳನ್ನು ಮಾಡಿ ಕೀರ್ತಿಯ ಶಿಖರವೇರಿದರು.

ಇದೇ ಗಳಿಗೆಯಲ್ಲಿ ಗುರುದತ್ ಮತ್ತು ನಟಿ ವಹೀದಾ ರೆಹಮಾನ್ ನಡುವಿನ ಪ್ರೇಮ- ಸುದ್ದಿ ಮಾಧ್ಯಮಗಳಲ್ಲಿ, ಗಾಸಿಪ್ ಕಾಲಂಗಳಲ್ಲಿ ಸದ್ದು ಮಾಡತೊಡಗಿತು. ಇಬ್ಬರ ನಡುವಿನ ಪ್ರೇಮ ಅತಿರೇಕಕ್ಕೆ ಹೋದಾಗ, ಗುರುದತ್ ಕುಡಿತ-ಸಿಗರೇಟಿನ ಮೊರೆ ಹೋಗುತ್ತಿದ್ದರು. ಇವರಿಬ್ಬರ ಪ್ರೇಮಕ್ಕೆ ಸಾಕ್ಷಿಯಾಗಿ, ಸಂಧಾನಕಾರರಾಗಿ ಖ್ಯಾತ ಕ್ಯಾಮರಾಮನ್ ವಿ.ಕೆ. ಮೂರ್ತಿಯವರಿದ್ದರು. ಗುರುದತ್ ಚಿತ್ರಗಳ ಕ್ಯಾಮರಾಮನ್ ಎಂದಾಕ್ಷಣ ಎಲ್ಲರ ಕಣ್ಣು, ಕಿವಿ, ಮನಸ್ಸು ಅರಳುತ್ತದೆ. ‘ಪ್ಯಾಸಾ’ದ ಆ ಕಪ್ಪು ಬಿಳುಪಿನ ನೆರಳು ಬೆಳಕಿನಾಟ, ವಕ್ತ ನೇ ಕಿಯಾ ಹಾಡಿನ ಬಿಸಿಲುಕೋಲು ಕಣ್ಣುಂದೆ ಕುಣಿಯುತ್ತದೆ. ಆ ಕಾಲಕ್ಕೇ, ಸೀಮಿತ ಸಲಕರಣೆಗಳನ್ನು ಇಟ್ಟುಕೊಂಡೇ ಅಂತಹ ವಿನೂತನ ಪ್ರಯೋಗಗಳನ್ನು ಮಾಡಿದ ಅದ್ಭುತ ಕಲ್ಪನಾಶಕ್ತಿಯುಳ್ಳ ಕ್ಯಾಮರಾಮನ್ ವಿ.ಕೆ. ಮೂರ್ತಿ. ಇವರು ಗುರುದತ್‌ರ ಕಣ್ಣು ಕೂಡ. ಕರ್ನಾಟಕದವರು, ಕನ್ನಡಿಗರು. ಗುರುದತ್‌ ಆಪ್ತರು. ಆತನ ಸೃಜನಶೀಲತೆ ಮತ್ತು ತಿಕ್ಕಲುತನವನ್ನು ಸಮಾನವಾಗಿ ಸ್ವೀಕರಿಸಿ, ಸಂಭಾಳಿಸಿದವರು.

ಗುರುದತ್‌ರ ಇಹ-ಪರವೆಲ್ಲ ಮೂರ್ತಿಯವರಿಗೆ ಗೊತ್ತಿತ್ತು. ಗೊತ್ತಿರುವ ಗಳಿಗೆಯಲ್ಲಿಯೇ ಗುರುದತ್‌ರ ಆತ್ಮದಲ್ಲಿ, ಆಂತರ್ಯದಲ್ಲಿ ಮನೆ ಮಾಡಿಕೊಂಡಿದ್ದವರು ವಹೀದಾ ರೆಹಮಾನ್. ಆ ಕಾಲದ ಸುಂದರಿ, ಅನಂತನಾಗ್ ಪಾಲಿನ ಬೆಳದಿಂಗಳ ಬಾಲೆ ವಹೀದಾ ರೆಹಮಾನ್, ಹಿಂದಿ ಸಿನಿ ಜಗತ್ತು ಕಂಡ ಅಸಲಿ ಅಭಿನೇತ್ರಿ. ಗುರುದತ್ ಮತ್ತು ವಹೀದಾ ಜೋಡಿ ಆ ಕಾಲದ ಅದ್ಭುತ. ಅವರ ನಡುವಿನ ಪ್ರೇಮವೇ ದುರಂತಕ್ಕೂ ಕಾರಣವಾಗಿತ್ತು.

unnamed 10
ಚೌಂದ್ವಿ ಕಾ ಚಾಂದ್ ಚಿತ್ರದಲ್ಲಿ ಗುರುದತ್ ಮತ್ತು ವಹೀದಾ ರೆಹಮಾನ್

ಗುರು-ವಹೀದಾ ನಡುವಿನ ಪ್ರೇಮ ಉತ್ಕಟ ಹಂತ ತಲುಪುತ್ತಿರುವಾಗಲೇ, ಗುರು-ಗೀತಾದತ್‌ರ ವೈವಾಹಿಕ ಬದುಕಿನ ದೋಣಿ ದುರಂತದ ದಡ ಮುಟ್ಟಿತ್ತು. ಅಲ್ಲಿಗೆ ಅವರಿಬ್ಬರ ವೈವಾಹಿಕ ಜೀವನಕ್ಕೆ ತೆರೆ ಬಿತ್ತು.

ಅಲ್ಲಿಂದ ಗುರುದತ್‌ರ ಬದುಕು ಕವಲುದಾರಿಗಿಳಿಯಿತು. ವಹೀದಾ ರೆಹಮಾನ್ ಬೇಡಿಕೆಯ ನಟಿಯಾಗಿ, ಭದ್ರವಾಗಿ ಬೇರೂರಲು ಭವಿಷ್ಯದತ್ತ ಗಮನ ಹರಿಸಿದರು. ಇತ್ತ ಗುರುದತ್ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೆ ಉಳಿದರು. ಕುಡಿತ ಕೈ ಹಿಡಿಯಿತು. ತಮ್ಮನ್ನೇ ತಾವು ಮರೆತರು. ಸ್ನೇಹಿತರು, ಮಕ್ಕಳು, ಜನಪ್ರಿಯತೆ, ಖ್ಯಾತಿ, ಕಾಸು ಎಲ್ಲವೂ ಇತ್ತು. ಆದರೆ ಗುರುದತ್‌ರ ಆತ್ಮ ಬಯಸಿದ್ದು, ಆಂತರ್ಯಕ್ಕೆ ಬೇಕಾದ್ದು, ಚೇತನ ಚಿಗುರಿಸುವಂಥದ್ದು ಎಲ್ಲೋ ಕಳೆದುಹೋಗಿತ್ತು. ಅದೇ ಕೊರಗಿನಲ್ಲಿ ಒಂದು ದಿನ ಕುಡಿತದ ಜೊತೆಗೆ ನಿದ್ರೆ ಮಾತ್ರೆಗಳನ್ನು ಅತಿಯಾಗಿ ಸೇವಿಸಿ ಸಾವಿನೊಂದಿಗೆ ಮಲಗಿದ್ದರು.

ಗುರುದತ್ ಉತ್ಕಟಪ್ರೇಮಿ. ಹಾಗೆಯೇ ಅತೃಪ್ತ ಕೂಡ. ಭಗ್ನಪ್ರೇಮಿಯ ಪಾತ್ರಗಳನ್ನು ಮಾಡುತ್ತ ಆ ಪಾತ್ರಗಳೇ ಅವರಾಗಿಹೋಗಿದ್ದ ಗುರುದತ್, ಭಾರತೀಯ ಸಿನಿಮಾಲೋಕದ ಸಾರ್ವಕಾಲಿಕ ದುರಂತನಾಯಕ. ತಮ್ಮ ವಿಶಿಷ್ಟ ಪ್ರತಿಭೆಯನ್ನು ಹತ್ತು ಹಲವು ಅತ್ಯುತ್ತಮ ಚಿತ್ರಗಳ ಮೂಲಕ ಕಟ್ಟಿಕೊಟ್ಟ ಕಲಾತ್ಮಕ ಕಲಾಕಾರ. ಇಂತಹ ಅಪರೂಪದ ಅದ್ಭುತ ಆಸಾಮಿ ಅಕ್ಟೋಬ‌ರ್ ಹತ್ತರಂದು ಕಣ್ಮುಚ್ಚಿದರು. ಅವರ ನೆನಪಿಗಾಗಿ, ನೆನಪು ಜೀವಂತವಾಗಿ ಉಳಿಯಲಿಕ್ಕಾಗಿ- ‘ಪ್ಯಾಸಾ’ ಚಿತ್ರ ನೋಡಿ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...