ಕೆ.ಆರ್ ಪೇಟೆ ತಾಲೂಕಿನ ಕತ್ತರಘಟ್ಟದಲ್ಲಿ ನಡೆದಿದ್ದ ದಲಿತ ಯುವಕ ಜಯಕುಮಾರ್ ಸಾವಿನ ಪ್ರಕರಣದಲ್ಲಿ ಲೋಪವೆಸಗಿರುವ ಆರೋಪದ ಮೇಲೆ ಎಎಸ್‌ಐ ಕುಮಾರ್ ಅವರನ್ನುಅಮಾನತು ಮಾಡಲಾಗಿದೆ. ಆದರೆ, ಪ್ರಕರಣವನ್ನು ತಿರುಚಿದ್ದು ಎಎಸ್‌ಐ ಕುಮಾರ್ ಅವರಲ್ಲ, ಪ್ರಕರಣದಲ್ಲಿ ಆರೋಪಿಗಳೊಂದಿಗೆ ಶಾಮೀಲಾಗಿ ಪ್ರಕರಣವನ್ನು ತಿರುಚಿರುವ ನೈಜ ಆಪಾದಿತ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ದಲಿತ ಸಂಘಟನೆಗಳು ಆಗ್ರಹಿಸಿವೆ.
ಮೇ 25ರಂದು ಕತ್ತರಘಟ್ಟದಲ್ಲಿ ದಲಿತ ಯುವಕ ಜಯಕುಮಾರ್ ಅವರನ್ನು ಸವರ್ಣೀಯ ದುರುಳನೊಬ್ಬ ಅಮಾನುಷವಾಗಿ ಥಳಿಸಿ, ಹುಲ್ಲಿನ ಮೆದೆಯೊಳಗೆ ಹಾಕಿ ಜೀವಂತವಾಗಿ ಸುಟ್ಟುಹಾಕಿದ್ದ ಎಂದು ಹೇಳಲಾಗಿದೆ. ಆದರೆ, ಈ ಪ್ರಕರಣವನ್ನು ಆತ್ಮಹತ್ಯೆಯೆಂದು ಪೊಲೀಸರು ತಿರುಚಿದ್ದಾರೆ ಎಂದು ಆರೋಪಿಸಲಾಗಿದೆ.
ದಲಿತ ಯುವಕನ ಸಾವು ಪ್ರಕರಣದಲ್ಲಿ ಆರೋಪಿಯೊಂದಿಗೆ ಶಾಮೀಲಾಗಿ, ಲಂಚ ಪಡೆದು, ಪ್ರಕರಣವನ್ನು ಪೊಲೀಸರು ತಿರುಚಿದ್ದಾರೆ ಎಂಬ ಗಂಭೀರ ಆರೋಪಗಳಿವೆ. ಆರೋಪಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ದಲಿತ ಯುವಕನ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿ ಹಲವಾರು ಸಂಘಟನೆಗಳು ‘ಕೆ.ಆರ್ ಪೇಟೆ ಚಲೋ’ ಪ್ರತಿಭಟನೆ ನಡೆಸಿದ್ದವು. ಈ ಬೆನ್ನಲ್ಲೇ, ದಲಿತ ಯುವಕನ ಸಾವಿಗೆ ಸಂಬಂಧಿಸಿದಂತೆ ಎನ್‌ಸಿಆರ್ ದಾಖಲಿಸಿದ್ದ ಎಎಸ್‌ಐ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ಆದರೆ, ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದು, ಎಫ್‌ಐಆರ್‌ನಲ್ಲಿ ಹತ್ಯೆಯನ್ನು ಆತ್ಮಹತ್ಯೆಯೆಂದು ತಿರುಚಿದ್ದು ಎಎಸ್‌ಐ ಕುಮಾರ್ ಅವರಲ್ಲ. ಪ್ರಕರಣ ತಿರುಚುವಲ್ಲಿ ಶಾಮೀಲಾಗಿರುವವರು ಕೆ.ಆರ್.ಪೇಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ (ಸಿಐ) ಆನಂದೇಗೌಡ, ಸಬ್‌ಇನ್ಸ್‌ಪೆಕ್ಟರ್ ಸುಬ್ಬಯ್ಯ, ದಪೇದಾರ್ ವೈರಮುಡಿ, ಡಿವೈಎಸ್ಪಿ ಚಲುವರಾಜು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ದಿವಾಕರ್ ಎಂದು ಆರೋಪಿಸಲಾಗಿದೆ. ಈ ಅಧಿಕಾರಿಗಳು ಲಂಚ ಪಡೆದು ಪ್ರಕರಣವನ್ನು ತಿರುಚಿದ್ದಾರೆ. ಈ ಐವರನ್ನೂ ಅಮಾನತು ಮಾಡಿ, ಕ್ರಮ ಕೈಗೊಳ್ಳಬೇಕು ಎಂದು ದ್ರಾವಿಡ ಕನ್ನಡಿಗರು ಚಳುವಳಿ ಸಂಘಟನೆ ಆಗ್ರಹಿಸಿದೆ.
“ಹತ್ಯೆಯಾದ ದಲಿತ ಯುವಕ ಜಯಕುಮಾರ್ ಅವರು ತಮ್ಮ ಹತ್ಯೆಯ ಹಿಂದಿನ ದಿನವೇ ಪೊಲೀಸರಿಗೆ ದೂರು ನೀಡಿದ್ದರು. ಆದರೂ, ಪೊಲೀಸರು ಕ್ರಮ ಕೈಗೊಳ್ಳದೆ, ಆತನಿಗೆ ರಕ್ಷಣೆ ನೀಡದೆ ಲೋಪವೆಸಗಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಪರಿಹಾರ ನೀಡಿ ಕೈತೊಳೆದುಕೊಳ್ಳುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ದಿವಾಕರ್ ಅವರು ಮೃತದೇಹವನ್ನು ಹೂಳುವ ಬದಲು ಸುಟ್ಟುಹಾಕುವಂತೆ ಒತ್ತಡಹಾಕಿ, ಸುಟ್ಟು ಹಾಕಿಸಿದ್ದಾರೆ. ಮುಂದನ ದಿನಗಳಲ್ಲಿ ಯಾವುದೇ ಪರೀಕ್ಷೆಗೆ ಅಗತ್ಯವಿದ್ದಾಗ ಮೃತದೇಹ ದೊರೆಯದಂತೆ ಮಾಡಿದ್ದಾರೆ” ಎಂದು ಸಂಘಟನೆ ಆರೋಪಿಸಿದೆ.