ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಂದಾಯ ನಿಗದಿ ಆಗದೇ ಇರುವ ಎಲ್ಲ ಬಾಣೆ ಜಮೀನುಗಳಿಗೆ ಕಂದಾಯ ನಿಗದಿಪಡಿಸುವ ಕುರಿತು ಪ್ರಾಯೋಗಿಕವಾಗಿ ಗ್ರಾಮವಾರು ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
“ಕೊಡಗಿನಲ್ಲಿ ಎಲ್ಲ ಬಾಣೆ ಜಾಗಗಳಿಗೆ ಕಂದಾಯ ನಿಗದಿಯಾಗದೆ ಜಿಲ್ಲೆಯ ಜನತೆ ಸಂಕಷ್ಟ ಎದುರಿಸುತ್ತಿದ್ದು, ಜಿಲ್ಲೆಯ ಜನತೆಯ ಕೂಗಿಗೆ ಸ್ಪಂದಿಸಿದ ಸರ್ಕಾರ ಹಾಗೂ ಜಿಲ್ಲಾಡಳಿತ ತಾಲೂಕು ವ್ಯಾಪ್ತಿಯಲ್ಲಿ ಒಂದೊಂದು ಗ್ರಾಮವನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡು ಸದರಿ ಗ್ರಾಮದಲ್ಲಿ ಎಲ್ಲ ಬಾಣೆ ಜಮೀನುಗಳನ್ನು ಕಂದಾಯ ನಿಗದಿಪಡಿಸಲು ತೀರ್ಮಾನಿಸಿ ಜಂಟಿ ಸಮೀಕ್ಷೆ ನಡೆಸಿ ಕ್ರಮ ವಹಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಈಗಾಗಲೇ ಕಾರ್ಯೋನ್ಮುಖರಾಗಿರುವ ಅಧಿಕಾರಿಗಳು ಸಂಪೂರ್ಣವಾಗಿ ಕಂದಾಯಕ್ಕೆ ಒಳಪಡದ ಜಮೀನುಗಳನ್ನು ಗುರುತಿಸಿ ಅಳತೆ ಮಾಡಿ, ಕಂದಾಯ ನಿಗದಿಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಪ್ರಾಯೋಗಿಕವಾಗಿ ಗುರುತಿಸಲಾದ ಗ್ರಾಮಗಳ ನಿವಾಸಿಗಳು ಕಂದಾಯಕ್ಕೆ ಒಳಪಡದ ಜಮೀನುಗಳನ್ನು ಗುರುತಿಸಿ ಸರ್ವೆ ಕಾರ್ಯಕ್ಕೆ ಬರುವ ಅಧಿಕಾರಿಗಳಿಗೆ ಸ್ಥಳವನ್ನು ತೋರಿಸುವ ಕೆಲಸ ಮಾಡಬೇಕಾಗಿದೆ. ಸದ್ಯದಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಇದು ವಿಸ್ತಾರಗೊಂಡು ಮೊದಲ ಹಂತದಲ್ಲಿ ಕಂದಾಯ ನಿಗದಿಗೊಳಿಸುವ ಪ್ರಕ್ರಿಯೆ ನಡೆಯಲಿದ್ದು, ಜಿಲ್ಲೆಯ ಜನತೆಯ ಬಹು ಬೇಡಿಕೆಯನ್ನು ಸರ್ಕಾರ ಇದೀಗ ಸ್ಪಂದಿಸಿ ಜನೋಪಯೋಗಿ ಕಾರ್ಯಕ್ಕೆ ಮುಂದಾಗಿದೆ” ಎಂದರು.
“ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಂದಾಯಕ್ಕೆ ಒಳಪಡದ ಬಾಣೆ ಜಮೀನುಗಳಿಗೆ ಕಂದಾಯ ನಿಗದಿಪಡಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದ್ದು, ಸಂಬಂಧಿಸಿದ ಸರ್ವೆ ನಂಬರ್‌ನ ಹಕ್ಕುದಾರರಿಗೆ ಜಮೀನುಗಳ ಹಕ್ಕು ವರ್ಗಾವಣೆ, ಭೂ ಪರಿವರ್ತನೆ, ಸಿವಿಲ್ ನ್ಯಾಯಾಲಯಗಳಲ್ಲಿ ವ್ಯಾಜ್ಯ ದಾಖಲಿಸುವುದು ಇತ್ಯಾದಿ ಭೂ ಸಂಬಂಧಿತ ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ. ಹೆಚ್ಚಿನ ಪ್ರಕರಣಗಳು ತಾಲೂಕು ಕಚೇರಿ ಮತ್ತು ಭೂಮಾಪನ ಕಚೇರಿಗಳಲ್ಲಿ ಬಾಕಿ ಉಳಿದುಕೊಂಡಿದ್ದು, ಅವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಮತ್ತು ಕಂದಾಯ ನಿಗದಿ ಪ್ರಕರಣಗಳಲ್ಲಿ ಆಗುತ್ತಿರುವ ವಿಳಂಬವನ್ನು ನಿವಾರಿಸುವ ದೃಷ್ಟಿಯಿಂದ ಇಂಥ ಪ್ರಕರಣಗಳನ್ನು ಗ್ರಾಮವಾರು ಆಂದೋಲನದ ಮೂಲಕ ಕ್ರಮ ಜರುಗಿಸಿ ವಿಲೇವಾರಿ ಮಾಡುವ ಅವಶ್ಯಕತೆ ಕಂಡು ಬಂದಿದ್ದರಿಂದ ಜಿಲ್ಲೆಯ ಎಲ್ಲ ತಾಲೂಕು ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕವಿವಿ ಶುಲ್ಕ ಹೆಚ್ಚಳ, ವಿದ್ಯಾರ್ಥಿವೇತನ ವಿಳಂಬಕ್ಕೆ ಎಐಆರ್‌ಎಸ್‌ಒ ವಿರೋಧ
“ಮಡಿಕೇರಿ ತಾಲೂಕಿನ ಭಾಗಮಂಡಲದ ಬೇಗೂರು ಗ್ರಾಮ, ಸೋಮವಾರಪೇಟೆ ತಾಲೂಕಿನ ಕಿರುಗುಂದೂರು ಗ್ರಾಮ, ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ನಕೂರು ಶಿರಂಗಾಲ ಗ್ರಾಮ, ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ, ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮಗಳಲ್ಲಿ ಮೊದಲ ಹಂತದ ಪ್ರಾಯೋಗಿಕ ಸಮೀಕ್ಷೆ ನಡೆಸಿ ಕಂದಾಯ ನಿಗದಿಗೊಳಿಸಲಾಗುವುದು” ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.