ಪರಿಸರ ಅಸಮತೋಲನದಿಂದ ಇತ್ತೀಚಿನ ವರ್ಷಗಳಲ್ಲಿ ಎರಡರಿಂದ ಎರಡೂವರೆ ಡಿಗ್ರಿ ಉಷ್ಟಾಂಶ ಹೆಚ್ಚಾಗುತ್ತಿದೆ ಎಂದು ಕೊಡಗು ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಎನ್‌ಎನ್ ಮೂರ್ತಿ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮಡಿಕೇರಿಯ ನೂತನ ನ್ಯಾಯಾಲಯ ಆವರಣದಲ್ಲಿ ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳು ಆಯೋಜಿಸಿದ್ದ ಗಿಡ ನೆಡುವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಅರಣ್ಯ ಮತ್ತು ವನ್ಯ ಸಂಪತ್ತು ಸಂರಕ್ಷಣೆ ಮಾಡಿದ್ದಲ್ಲಿ, ಪರಿಸರ ಸಮತೋಲನ ಕಾಣಲು ಸಾಧ್ಯ” ಎಂದು ಮುಖ್ಯ ಪ್ರತಿಪಾದಿಸಿದರು.
“ವಿಶ್ವದಲ್ಲಿ 400 ರಿಂದ 500 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಬಳಸಿದ ಪ್ಲಾಸ್ಟಿಕ್ ಮರುಬಳಕೆ ಮಾಡಬೇಕು” ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ತಿಳಿಸಿದರು.
“ಭೂಮಂಡಲದಲ್ಲಿ ಭೂಮಿಯ ಮೇಲಿನ ನೀರು ಕಡಿಮೆಯಾಗುತ್ತಿದೆ. ಸಮುದ್ರ ಮಟ್ಟ ಹೆಚ್ಚಾಗುತ್ತಿದೆ. ಆದ್ದರಿಂದ ಮಾನವ ಸಂಕುಲದ ಜೊತೆಗೆ ಅರಣ್ಯ ಮತ್ತು ವನ್ಯ ಸಂಪತ್ತನ್ನು ಉಳಿಸಿ ಬೆಳೆಸುವಂತಾಗಲು. ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ಪರಿಸರ ಸಂರಕ್ಷಣೆಗೆ ಹಿಂದಿಗಿಂತ ಇಂದು ಹೆಚ್ಚಿನ ಕಾಳಜಿ ವಹಿಸಬೇಕು” ಎಂದು ಬಿಎನ್‌ಎನ್ ಮೂರ್ತಿ ಕರೆ ನೀಡಿದರು.
ಜಿಲ್ಲಾಧಿಕಾರಿ ಡಾ. ಬಿ ಸಿ ಸತೀಶ ಅವರು ಮಾತನಾಡಿ, “ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಣ ತೊಡಬೇಕು. ಆ ನಿಟ್ಟಿನಲ್ಲಿ ಅಂಗಡಿ, ಮಾರುಕಟ್ಟೆಗೆ ತೆರಳುವಾಗ ಕಡ್ಡಾಯವಾಗಿ ಬಟ್ಟೆ ಬ್ಯಾಗನ್ನು ಬಳಸಬೇಕು ಎಂದು ಹೇಳಿದರು.
ಏಕ ಬಳಕೆಯ ಪ್ಲಾಸ್ಟಿಕ್‍ಗಳಾಗಿರುವ ತಟ್ಟೆ, ಲೋಟ ಬಳಸುವುದನ್ನು ಈಗಾಗಲೇ ನಿಷೇಧಿಸಲಾಗಿದ್ದು, ಮದುವೆ ಇತರೆ ಕಾರ್ಯಕ್ರಮಗಳಲ್ಲಿ ಬಳಸುವುದು ಕಂಡುಬಂದಲ್ಲಿ ಹತ್ತಿರದ ತಾಲೂಕು ಅಥವಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತಾಗಬೇಕು” ಎಂದು ಕೋರಿದರು.
“ಪರಿಸರ ಅಸಮತೋಲನದಿಂದ ಹಲವು ವೈರುದ್ಯಗಳನ್ನು ಕಾಣುತ್ತೇವೆ. ಮಳೆಗಾಲದಲ್ಲಿ ಮಳೆಯಾಗದಿರುವುದು ಅಥವಾ ಸರಾಸರಿಗಿಂತ ಹೆಚ್ಚು ಮಳೆಯಾಗುವುದು. ಹೀಗೆ ಹಲವು ರೀತಿಯ ವಾತಾವರಣದಲ್ಲಿನ ಅಸಮತೋಲನವನ್ನು ಕಾಣುತ್ತೇವೆ. ಆದ್ದರಿಂದ ಮನೆಯ ಸುತ್ತಮುತ್ತ ಗಿಡ ಮರ ನೆಡಬೇಕು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡುತ್ತೇವೆ, ಪ್ಲಾಸ್ಟಿಕ್ ತ್ಯಜಿಸುತ್ತೇವೆ. ಗಿಡ ನೆಟ್ಟು ಮರ ಬೆಳೆಸುತ್ತೇವೆ ಎನ್ನುವಂತಾಗಬೇಕು” ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ ಅವರು ಒತ್ತಿ ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಡಿ ಟಿ ಪುಟ್ಟರಂಗಸ್ವಾಮಿ ಮಾತನಾಡಿ, “ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಿದೆ. ಪರಿಸರ ಉಳಿದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಬದುಕು ನಡೆಸಲು ಸಾಧ್ಯ” ಎಂದು ಅವರು ತಿಳಿಸಿದರು.
ಈ ಸುದ್ದಿಒ ಓದಿದ್ದೀರಾ? ಚಿತ್ರದುರ್ಗ | ಶುದ್ಧ, ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರೂ ಆಗಿರುವ ಕೆ ಬಿ ಪ್ರಸಾದ್, ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ರಾಘವ, ಎನ್‍ಎಸ್‍ಎಸ್ ಅಧಿಕಾರಿ ಗಾಯತ್ರಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ನಗರದ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.