ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಭಾಗದಲ್ಲಿ ವಿದ್ಯುತ್ ಕಣ್ಣ ಮುಚ್ಚಾಲೆ ಆಟದಂತಾಗಿದ್ದು, ಬಿರುಸಾದ ಮಳೆಯಿಂದ ಓಡಾಟ ಸಾಧ್ಯವಿರದ ಪರಿಸ್ಥಿತಿಯ ನಡುವೆ ವಿದ್ಯುತ್ ಇಲ್ಲದಿರುವುದು ತಲೆ ನೋವಿನ ವಿಚಾರವಾಗಿದೆ.
ವಿದ್ಯುತ್ ಸಮಸ್ಯೆ ತಲೆದೂರಲು ಅಭಿಯಂತರರೇ ಕಾರಣ. ಕೊಡಗಿನಲ್ಲಿ ಗಾಳಿ, ಮಳೆ ಇರುವಾಗ ಸಮರ್ಪಕ ನಿರ್ವಹಣೆಗೆ ಸಿಬ್ಬಂದಿಯನ್ನು ನಿಯೋಜನೆ ಮಾಡದೇ ಇರುವುದು ಇದಕ್ಕೆಲ್ಲ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ದಿನ.ಕಾಮ್ ಜೊತೆ ಮಾತನಾಡಿದ ಸ್ಥಳೀಯ ನಿವಾಸಿ ಮೊಹಮ್ಮದ್ ಕೊಟ್ಟಮುಡಿ, “ನಾಪೋಕ್ಲು ಭಾಗದಲ್ಲಿ ಮೂರ್ನಾಲ್ಕು ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಕಕ್ಕಬೆ, ಎಮ್ಮೆಮಾಡು, ನೆಲಜಿ, ನಾಪೋಕ್ಲು, ಕೊಟ್ಟಮುಡಿ, ಪಾಲೂರು ಸೇರಿದಂತೆ ಹಲವು ಗ್ರಾಮಗಳನ್ನು ನೋಡಿಕೊಳ್ಳಬೇಕು. ಕೊಡಗಿನಂತ ಆಯಕಟ್ಟಿನ ಪ್ರದೇಶದಲ್ಲಿ ನಾಲ್ಕು ಜನರಿಂದ ಇದೆಲ್ಲ ಸಾಧ್ಯವೇ?” ಎಂದು ಕೇಳಿದ್ದಾರೆ.

“ಬೆರಳೆಣಿಕೆಯ ಸಿಬ್ಬಂದಿಗಳು ಸಾಕಾಗುವುದಿಲ್ಲ. ಆದರೂ ನಮ್ಮಗಳ ಫೋನ್ ಕರೆಗೆ ಸ್ಪಂದಿಸಿ ಸಾಧ್ಯವಾದಷ್ಟು ಕೆಲಸ ನಿರ್ವಹಿಸುತ್ತಿದ್ದಾರೆ. ಕಾಫಿ ತೋಟದೊಳಗೆ ಹಾದು ಹೋಗಿರುವ ವಿದ್ಯುತ್ ಲೈನ್‌ಗಳ ಮೇಲೆ ಮರಗಳ ಕೊಂಬೆಗಳು ಬೆಳೆದಿದ್ದು ತೋಟದ ಮಾಲೀಕರಾಗಲಿ, ಊರಿನವರಾಗಲಿ ಸಿಬ್ಬಂದಿಗಳಿಗೆ ಸ್ಪಂದಿಸಿ ತೆರವು ಮಾಡದೆ ಇರುವುದರಿಂದ ವಿದ್ಯುತ್ ತಂತಿ ಆಗಾಗ ತುಂಡಾಗಿ ಗ್ರಾಮಗಳು ಸಮಸ್ಯೆಗೆ ಸಿಲುಕುತ್ತಿವೆ” ಎಂದರು.
ಹಮೀದ್ ಕೊಟ್ಟಮುಡಿ ಮಾತನಾಡಿ, “ಮಳೆಗಾಳಿಯನ್ನು ಲೆಕ್ಕಿಸದೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕೊಡಗಿನ ಮಳೆಯ ಹೊಡೆತಕ್ಕೆ ಸಿಬ್ಬಂದಿಗಳು ಹೈರಾಣು. ಉನ್ನತ ಅಧಿಕಾರಿಗಳು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ಅಗತ್ಯ ಇರುವ ಸಿಬ್ಬಂದಿಗಳ ನಿಯೋಜನೆ ಮಾಡಬೇಕು. ಸಿಬ್ಬಂದಿಗಳು ಸರಿಯಾಗಿಲ್ಲದೆ ಇರುವುದರಿಂದ ಸಾರ್ವಜನಿಕರು, ನಾವುಗಳು ಕತ್ತಲೆಯಲ್ಲಿ ದಿನ ದೂಡುವಂತಾಗಿದೆ” ಎಂದರು.

“ಮಳೆಯಿಂದಾಗಿ ಬೆಟಗೇರಿ, ಕೊಟ್ಟಮುಡಿ, ಹೊದ್ದೂರು ಭಾಗದಲ್ಲಿ ಗ್ರಾಮಗಳು ಜಲಾವೃತವಾಗಿದ್ದು, ಓಡಾಟ ನಿರ್ಬಂಧ. ಇನ್ನು ಸೇತುವೆಗಳು ಮುಳುಗಡೆ ಆಗಿದೆ. ಸ್ಥಳೀಯರಿಗೆ ಸರಿಯಾದ ಯಾವ ನೆರವು ಕೂಡ ಸಿಗುತ್ತಿಲ್ಲ. ಸಂಚಾರ ಇರದ ಕಾರಣ ನಾವುಗಳು ಕೂಡ ಹೊರಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕಾವೇರಿ ಪ್ರವಾಹದಿಂದ ಮುಳುಗಡೆ ಭೀತಿಯಲ್ಲಿ ಎಣ್ಣೆಹೊಳೆ ಗ್ರಾಮ
ಅಹ್ಮದ್ ಕೆ ಎಸ್ ಮಾತನಾಡಿ, “ಈಗಾಗಲೇ ಜೆಇ ಅವರ ಗಮನಕ್ಕೆ ತಂದು ಹೆಚ್ಚಿನ ಸಿಬ್ಬಂದಿಗಳನ್ನು ನಿಯುಕ್ತಿ ಮಾಡಿ ವಿದ್ಯುತ್ ಸಮಸ್ಯೆ ನಿವಾರಣೆ ಮಾಡಿ. ಇಲ್ಲವಾದಲ್ಲಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತೆಂದು ಎಚ್ಚರಿಕೆ ನೀಡಿದ್ದೇವೆ. ಇನ್ನು ಮಳೆಯಿಂದ ಜಲಾವೃತವಾಗಿರುವ ಪ್ರದೇಶಗಳಿಗೆ ಅಗತ್ಯವಿರುವ ನೆರವಿನ ವ್ಯವಸ್ಥೆ ಕೈಗೊಳ್ಳಬೇಕು. ಮಳೆ ಕಡಿಮೆ ಆದರೂ ನೀರು ಇಳಿದಿಲ್ಲ.
ಡೆಂಘೀ ಸಮಸ್ಯೆ ಇರುವುದರಿಂದ ನೀರು ನಿಲ್ಲುವುದು ಒಳ್ಳೆಯದಲ್ಲ. ಸಮರ್ಪಕ ನಿರ್ವಹಣೆ, ಆರೋಗ್ಯದ ಕಾಳಜಿಯ ಕಡೆಗೆ ತಾಲ್ಲೋಕು, ಜಿಲ್ಲಾಡಳಿತ ಗಮನ ಹರಿಸಬೇಕು” ಎಂದು ಮನವಿ ಮಾಡಿದರು.
