ತಮ್ಮ ವಿಭಿನ್ನ ಮಾತು, ನಡೆ-ನುಡಿ, ಹಾರ್ಡ್‌ಕೋರ್ ಹಿಂದುತ್ವದ ಚಿಂತನೆಗಳ ನೆಲೆಯಲ್ಲಿ ಗುರುತಿಸಿಕೊಂಡ ಯತ್ನಾಳ್ ಹೆಸರು ಮೂರು ದಶಕದ ರಾಜ್ಯ ರಾಜಕಾರಣದಲ್ಲಿ ಜನಜನಿತ. ಸಮಯ ಬಂದಾಗಲೆಲ್ಲ ಯತ್ನಾಳ್ ಅವರು ಬಿಎಸ್‌ವೈ ಕುಟುಂಬದ ವಿರುದ್ಧ ಕಾಲು ಕೆದರುತ್ತಾರೆ. ಬಿಎಸ್‌ವೈ ವಿರುದ್ಧ ಯತ್ನಾಳ್ ಮನದಲ್ಲಿ ಹೆಪ್ಪುಗಟ್ಟಿರುವ ಸಂಗತಿಗಳಾವವು?
ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ತಮ್ಮನ್ನು ಚಾಲ್ತಿಯಲ್ಲಿಟ್ಟುಕೊಳ್ಳುವ ರಾಜಕಾರಣಿ ರಾಜ್ಯದಲ್ಲಿ ಯಾರಾದರೂ ಇದ್ದರೆ ಆ ಹೆಸರೇ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!
ತಮ್ಮ ವಿಭಿನ್ನ ಮಾತು, ನಡೆ-ನುಡಿ, ಹಾರ್ಡ್‌ಕೋರ್ ಹಿಂದುತ್ವದ ಚಿಂತನೆಗಳ ನೆಲೆಯಲ್ಲಿ ಗುರುತಿಸಿಕೊಂಡ ಯತ್ನಾಳ್ ಹೆಸರು ಮೂರು ದಶಕದ ರಾಜ್ಯ ರಾಜಕಾರಣದಲ್ಲಿ ಜನಜನಿತ. ಈಗ ಯಡಿಯೂರಪ್ಪ ಕುಟುಂಬದ ವಿರುದ್ಧ ಹೊಸ ಬಾಂಬ್‌ವೊಂದನ್ನು ಸಿಡಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಮೇಲಂತೂ ಯತ್ನಾಳ್ ನಾಲಿಗೆ ಬಿಎಸ್‌ವೈ ಕುಟುಂಬದ ವಿರುದ್ಧ ಮತ್ತಷ್ಟು ಹರಿತಗೊಂಡಿದೆ. ಯಾವ ಮುಲಾಜು ಇಲ್ಲದೇ ಮನಬಂದಂತೆ ಬಿಎಸ್‌ವೈ ಕುಟುಂಬ ವಿರುದ್ಧ ನಾಲಿಗೆ ಹರಿಬಿಡುತ್ತಿದ್ದಾರೆ.
ಮುಡಾ ಹಗರಣ ಇಟ್ಟುಕೊಂಡು ಬೆಂಗಳೂರಿನಿಂದ ಮೈಸೂರಿನವರೆಗೂ ಸಿದ್ದರಾಮಯ್ಯ ಅವರ ರಾಜೀನಾಮಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತೇವೆ ಎಂದು ಘೋಷಿಸಿರುವ ವಿಜಯೇಂದ್ರ ನಡೆ ಬಗ್ಗೆ ಯತ್ನಾಳ್ ಅನುಮಾನ ವ್ಯಕ್ತಪಡಿಸಿ, ಸ್ಫೋಟಕ ಹೇಳಿಕೆ ನೀಡಿದ್ದಾರೆ. “ವಿಜಯೇಂದ್ರ ಪಕ್ಷದ ಹಿತಾಸಕ್ತಿಗಾಗಿ ಪಾದಯಾತ್ರೆ ಮಾಡುತ್ತಿಲ್ಲ. ಡಿ ಕೆ ಶಿವಕುಮಾರ್ ಅಣತಿ ಮೇರೆಗೆ ಸಿದ್ದರಾಮಯ್ಯ ಅವರನ್ನು ಸಿಎಂ ಖುರ್ಚಿಯಿಂದ ಕೆಳಗಿಳಿಸಲು ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ” ಎಂದು ನೇರವಾಗಿ ವಿಜಯೇಂದ್ರ ವಿರುದ್ಧ ಆರೋಪಿಸಿದ್ದಾರೆ.
ವಿಧಾನಸಭೆಯ ಅಧಿವೇಶನದಲ್ಲಿ ಕೂಡ ಸ್ವಪಕ್ಷದ ನಾಯಕರಿಗೆ ಯತ್ನಾಳ್ ಮುಜುಗರ ಸೃಷ್ಟಿಸಿ ಮಾತನಾಡಿದ್ದರು. “ವಾಲ್ಮೀಕಿ, ಮುಡಾ ಹಗರಣದಲ್ಲಿ ಬಿಜೆಪಿ ಪ್ರತಿಭಟನೆ ಏನೋ ಮಾಡುತ್ತಿದೆ. ಆದರೆ ಪ್ರತಿಭಟನೆ ನಂತರ ರಾತ್ರಿ ಅಶೋಕ್ ಸಿದ್ದರಾಮಯ್ಯಗೆ ಕರೆ ಮಾಡಿ, ‘ತಪ್ಪು ತಿಳ್ಕೋಬೇಡಿ ಸರ್, ಮೇಲಿನವರ ಒತ್ತಡ ಇತ್ತು’ ಅಂತಾರೆ. ಯಾವ ಅಪ್ಪ ಮಕ್ಕಳಿಗೂ ಯಾರೂ ಅಂಜಬಾರದು, ಯಾರಿಗೂ ಅಪ್ಪಾಜಿ ಅನ್ನಬಾರದು, ನಮ್ಮ ಅಪ್ಪನಿಗೆ ಮಾತ್ರ ಅಪ್ಪ ಅನ್ನಬೇಕು. ಈ ಅಪ್ಪಾಜಿ ಸಂಸ್ಕೃತಿ ನಮ್ಮ ರಾಜ್ಯದಿಂದ ಹೋಗಬೇಕು” ಎಂದು ಯಡಿಯೂರಪ್ಪ ಹೆಸರು ಹೇಳದೇ ಕುಟುಕಿದ್ದರು.
ಹೀಗೆ ಸಮಯ ಬಂದಾಗಲೆಲ್ಲ ಯತ್ನಾಳ್ ಅವರು ಬಿಎಸ್‌ವೈ ಕುಟುಂಬದ ಮೇಲೆ ಮುಗಿಬೀಳುತ್ತಾರೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿ, “40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿರುವ ಬಗ್ಗೆ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ವೇಳೆ ಸಿಎಂ ಸ್ಥಾನಕ್ಕೆ 2,500 ಕೋಟಿ ರೂಪಾಯಿ, ಮಂತ್ರಿಸ್ಥಾನಕ್ಕೆ 100 ಕೋಟಿ ರೂಪಾಯಿ ಎಂದು ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಸೃಷ್ಟಿಸಿದ್ದರು. ಇವರ ವಿವಾದದ ಮಾತುಗಳು ಪಟ್ಟಿ ಮಾಡುತ್ತ ಹೋದರೆ ಹನುಮಂತನ ಬಾಲದಷ್ಟು ಬೆಳೆಯುತ್ತೆ. ಆದರೆ, ಯತ್ನಾಳ್ ಮಾಡಿರುವ ಆರೋಪಗಳಿಗೆ ಯಾವುದಕ್ಕೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ.
ಸ್ವಪಕ್ಷದ ನಾಯಕರ ವಿರುದ್ಧವೇ ಈ ಪರಿಪ್ರಮಾಣದಲ್ಲಿ ನಾಲಿಗೆ ಹರಿಬಿಡುವ ಯತ್ನಾಳ್ ಆಕ್ರೋಶಕ್ಕೆ ಕಾರಣ ಅವರೇ ಹೇಳಿದಂತೆ ಬಿಎಸ್‌ವೈ ಮತ್ತು ಕುಟುಂಬ ರಾಜಕಾರಣ. ವಿಜಯಪುರ ಜಿಲ್ಲೆಯ ರಾಜಕೀಯ ಕದನ ದಾಟಿ ದಿಲ್ಲಿಯವರೆಗೂ ಪ್ರಯಾಣ ಬೆಳೆಸಿದ ಯತ್ನಾಳ್‌ಗೆ ಕರ್ನಾಟಕದ ರಾಜಕೀಯ ವಲಯದಲ್ಲಿ ಮಾತ್ರ ನಿರೀಕ್ಷಿತ ಸ್ಥಾನಗಳು ಸಿಕ್ಕಿಲ್ಲ. ಎನ್‌ಡಿಎ ಸರ್ಕಾರವಿದ್ದಾಗ ಅನಂತ್ ಕುಮಾರ್ ಬೆಂಬಲದೊಂದಿಗೆ ವಾಜಪೇಯಿ ಸಂಪುಟದಲ್ಲಿ ಯತ್ನಾಳ್ ಎರಡು ವರ್ಷ ಸಚಿವರಾಗಿದ್ದರು. ಆ ಅವಕಾಶ ಬಿಟ್ಟರೆ ಯತ್ನಾಳ್‌ಗೆ ಬಿಜೆಪಿಯಲ್ಲಿ ಪ್ರಮುಖ ಹುದ್ದೆಗಳು ಈವರೆಗೂ ದೊರೆತಿಲ್ಲ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಾಗ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದಾಗ ಯತ್ನಾಳ್ ಹೆಸರು ಪಕ್ಷದೊಳಗೆ ಕೇಳಿಬಂದಿತ್ತು. ಹೈಮಕಾಂಡ್ ನಾಯಕರೇ ಯತ್ನಾಳ್ ಹೆಸರು ಪ್ರಸ್ತಾಪಿಸಿದ್ದರು. ಆದರೆ, ಯಡಿಯೂರಪ್ಪನವರ ಕೆಂಗೆಣ್ಣಿಗೆ ಗುರಿಯಾಗಿ ಅವಕಾಶ ವಂಚಿತರಾದರು. ಬೊಮ್ಮಾಯಿ ಆಗ ಸಿಎಂ ಆದರು. ಆ ಒಂದು ಸಿಟ್ಟು ಯತ್ನಾಳ್ ಮನದಲ್ಲಿ ಹೆಪ್ಪುಗಟ್ಟಿದೆ.
ಕಳೆದ ವಿಧಾನಸಭಾ ಚುನಾವಣೆ ನಂತರ ಪ್ರತಿಪಕ್ಷ ನಾಯಕ ಇಲ್ಲವೇ ಬಿಜೆಪಿ ರಾಜ್ಯಾಧ್ಯಕ್ಷನಾಗುವ ಆಕಾಂಕ್ಷೆಯನ್ನು ಯತ್ನಾಳ್ ವ್ಯಕ್ತಪಡಿಸಿದ್ದರು. ಅಲ್ಲೂ ಅವರಿಗೆ ನಿರಾಸೆಯಾಯಿತು. ಆರ್ ಅಶೋಕ್ ಪ್ರತಿಪಕ್ಷ ನಾಯಕರಾದರು. ಬಿಎಸ್‌ವೈ ಪುತ್ರ ವಿಜಯೇಂದ್ರ ರಾಜ್ಯಾಧ್ಯಕ್ಷರಾದರು. ಬಿಎಸ್‌ವೈ ಕುಟುಂದ ಹಿಡಿತ ಇರೋವರೆಗೂ ತಮಗೆ ಪಕ್ಷದಲ್ಲಿ ಸ್ಥಾನಗಳು ಸಿಗುವುದಿಲ್ಲ ಎಂಬುದು ಯತ್ನಾಳ್‌ಗೆ ಮನವರಿಕೆಯಾದಂತಿದೆ. ಹೀಗಾಗಿ ಬಿಎಸ್‌ವೈ ಹಿಡಿತವನ್ನು ಸಡಿಲಗೊಳಿಸಲು ಅವಿರತ ಪ್ರಯತ್ನಕ್ಕೆ ಅವರು ಮುಂದಾದಂತೆ ಕಾಣುತ್ತಿದೆ. ಇದಕ್ಕಾಗಿ ಬಿಎಸ್‌ವೈ ಕುಟುಂಬದ ವಿರುದ್ಧ ಒಂದಿಲ್ಲಾ ಒಂದು ಕಾರಣವಿಟ್ಟುಕೊಂಡು ಯತ್ನಾಳ್ ಯುದ್ಧ ಸಾರುತ್ತಾರೆ.

ಕರ್ನಾಟಕದಲ್ಲಿ ಜಾತಿ ರಾಜಕಾರಣವೇ ಮುಖ್ಯವಾಗಿರುವಾಗ ಲಿಂಗಾಯತ ಸಮುದಾಯದ ಏಕಮೇವ ನಾಯಕ ಪಟ್ಟ ತಮ್ಮ ಕುಟುಂಬಕ್ಕೆ ಮಾತ್ರ ಇರಲಿ ಎಂಬುದು ಬಿಎಸ್‌ವೈ ರಾಜಕೀಯ ನಡೆ ನೋಡಿಕೊಂಡು ಬಂದವರಿಗೆ ಅರ್ಥವಾಗದೇ ಇರದು. ಲಿಂಗಾಯತ ಸಮುದಾಯದಲ್ಲಿ ತಮ್ಮನ್ನು ಮೀರಿ ಯಾವ ನಾಯಕರೂ ಬೆಳೆಯದಂತೆ ವ್ಯವಸ್ಥಿತವಾಗಿ ಬಿಎಸ್‌ವೈ ನೋಡಿಕೊಂಡು ಬಂದಿದ್ದಾರೆ. ವಿ. ಸೋಮಣ್ಣ, ಜೆ ಸಿ ಮಾಧುಸ್ವಾಮಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ಲೋಕಸಭಾ ಚುನಾವಣೆ ವೇಳೆ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದನ್ನು ಗಮನಿಸಬಹುದು.
ರಾಜ್ಯ ಬಿಜೆಪಿ ಸದಾ ಬಿಎಸ್‌ವೈ ಕುಟುಂಬದ ಹಿಡಿತಕ್ಕೆ ಒಳಪಟ್ಟಿರುತ್ತದೆ ಎಂಬುದು ಕೂಡ ಕೆಲವರ ಕಣ್ಣನ್ನು ಕೆಂಪಾಗಿಸಿರುವ ವಿಷಯ. ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿರುವುದಕ್ಕೆ ಬಹಳಷ್ಟು ನಾಯಕರಿಗೆ ಅಸಮಾಧಾನವಿದೆ. ಅಸಮಾಧಾನ ಹೊರಹಾಕಲು ಸೂಕ್ತ ಸಮಯಕ್ಕಾಗಿ ಎಲ್ಲರೂ ಕಾದು ಕುಳಿತಿದ್ದಾರೆ. ಬಿಎಸ್‌ವೈ ಕುಟುಂಬದ ವಿರುದ್ಧ ಕಿಡಿಹೊತ್ತಿದರೆ ಸಾಕು ಅದನ್ನು ಜ್ವಾಲೆಯನ್ನಾಗಿ ಮಾಡಲು ಕೆ ಎಸ್ ಈಶ್ವರಪ್ಪ, ಯತ್ನಾಳ್ ಅವರಂತೂ ತುದಿಗಾಲಲ್ಲಿ ಇದ್ದಾರೆ.
ಯಡಿಯೂರಪ್ಪ ಕುಟುಂಬದ ಮುಲಾಜಿಗೆ ಒಳಗಾಗಿ ‘ಅಪ್ಪಾಜಿ..’ ಎಂದು ಕಾಲಿಗೆ ಬೀಳುವ ನಾಯಕರಿಗೆ ಯತ್ನಾಳ್ ಕಿವಿಮಾತು ಹೇಳಿ, ‘ಅಪ್ಪಾಜಿ..’ ಸಂಸ್ಕೃತಿಯಿಂದ ಹೊರಬನ್ನಿ ಎಂದು ಹೇಳಿದ್ದು ಇದೇ ಕಾರಣಕ್ಕೆ. ಇನ್ನೂ ಎಷ್ಟು ದಿನ ಅಂತ ಬಿಜೆಪಿ ಪಕ್ಷವನ್ನು ಬಿಎಸ್‌ವೈ ಪಾದಕ್ಕೆ ಅರ್ಪಿಸುತ್ತೀರಿ ಎನ್ನುವ ನ್ಯಾಯಯುತ ಪ್ರಶ್ನೆಯನ್ನು ಯತ್ನಾಳ್ ಎತ್ತುತ್ತಲೇ ಇದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಿ ವೈ ವಿಜಯೇಂದ್ರ ಎಲ್ಲದರಲ್ಲೂ ಹಸ್ತಕ್ಷೇಪ ಕಂಡು ಬಿಜೆಪಿ ನಾಯಕರೇ ರೋಸಿ ಹೋಗಿದ್ದರು. ಯಡಿಯೂರಪ್ಪ ಅವಧಿಯಲ್ಲಿ ವಿಜಯೇಂದ್ರ ಅವರನ್ನು ಶಾಡೋ ಸಿಎಂ ಎಂದೇ ಪಕ್ಷದಲ್ಲಿ ಕೆಲವು ಬಿಂಬಿಸುತ್ತಿದ್ದರು. ಆಗಲೂ ಯತ್ನಾಳ್ ಅವರು ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಆರೋಪಗಳನ್ನು ಮಾಡಿದ್ದರು. ಮಾಜಿ ಶಾಸಕ ಸಿ ಟಿ ರವಿ ಕೂಡಾ ಪರೋಕ್ಷವಾಗಿ ಬಿಎಸ್‌ವೈ ವಿರುದ್ಧ ಟೀಕೆ ಮಾಡಿದ್ದು ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ‘ಕಿಚನ್ ಕ್ಯಾಬಿನೆಟ್’ ಎಂದು ಪದೇಪದೇ ಉಲ್ಲೇಖ ಮಾಡಿ, ಬಿಎಸ್‌ವೈ ಕುಟುಂಬಕ್ಕೆ ಟಾಂಗ್ ಕೊಟ್ಟಿದ್ದರು.
ಯಡಿಯೂರಪ್ಪ ವಿರೋಧಿ ಬಣದ ನಾಯಕರಲ್ಲೇ ಯತ್ನಾಳ್ ʼಅಗ್ರಗಣ್ಯʼ ನಾಯಕ ಎಂಬ ಪಟ್ಟ ಹೊತ್ತಿದ್ದಾರೆ. ಆರ್‌ಎಸ್‌ಎಸ್ ನಾಯಕರ ಬೆಂಬಲ ಮತ್ತು ಬಿಜೆಪಿ ವರಿಷ್ಠರ ಕೃಪೆಯಿಂದಲೇ ಯತ್ನಾಳ್ ಇಷ್ಟು ನಾಲಿಗೆ ಹರಿಬಿಡಲು ಸಾಧ್ಯವಾಗಿದೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ತಿಳಿದ ಸಂಗತಿ. ಬಿಎಸ್‌ವೈ ವಿರೋಧಿ ಬಣದ ನೇತಾರ ಬಿ ಎಲ್ ಸಂತೋಷ್ ಅವರ ಬೆನ್ನುತಟ್ಟುವಿಕೆ ಯತ್ನಾಳ್ ಹಿಂದಿದೆ ಎಂಬುದು ಕೂಡ ಬಿಎಸ್‌ವೈಗೆ ತಿಳಿದ ಸಂಗತಿ. ಹೀಗಾಗಿಯೇ ಯಡಿಯೂರಪ್ಪ ಕುಟುಂಬದ ವಿರುದ್ಧ ಯತ್ನಾಳ್ ಎಷ್ಟೇ ಮಾತನಾಡಿದರೂ ಅವರಿಗೆ ಯಾವುದೇ ‘ಶಿಸ್ತುಕ್ರಮ’ ಜರುಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಹಿಂದೆ ಇದೇ ಯತ್ನಾಳ್ ಪಕ್ಷದಿಂದ ಹೊರ ತಳ್ಳಲ್ಪಟ್ಟಿದ್ದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರವಾದಾಗ ಬಿಜೆಪಿ ಮುಖಂಡರು ಯತ್ನಾಳ್ ಅವರನ್ನು ‘ಸೈಡ್‌ಲೈನ್’ ಮಾಡಲು ನೋಡಿದ್ದರಿಂದ ಬಹಿರಂಗವಾಗಿ ಯಡಿಯೂರಪ್ಪ, ಪ್ರಲ್ಹಾದ್ ಜೋಶಿ, ಜಗದೀಶ ಶೆಟ್ಟರ್ ಅವರನ್ನು ಟೀಕಿಸಿದ್ದರು. 2008ರಲ್ಲಿ ವಿಜಯಪುರ ನಗರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದರಿಂದ ದೇವರ ಹಿಪ್ಪರಗಿ ವಿಧಾನಸಭೆಯಿಂದ ಸ್ಪರ್ಧಿಸಿ ಸೋಲು ಅನುಭವಿಸಿ, ಪುನಃ ಬಿಜೆಪಿ ನಾಯಕರ ವಿರುದ್ಧ ಮನಬಂದಂತೆ ಹೇಳಿಕೆ ನೀಡುವ ಮೂಲಕ 2011ರಲ್ಲಿ ಬಿಜೆಪಿಯಿಂದ ಉಚ್ಚಾಟನೆಗೆ ಒಳಗಾಗಿ ಜೆಡಿಎಸ್ ಸೇರಿದ್ದರು.
ಜೆಡಿಎಸ್ ಸೇರಿದ ನಂತರ ವಿಜಯಪುರ ವಿಧಾನಸಭಾ ಕ್ಷೇತ್ರದಿಂದ 2013ರಲ್ಲೂ ಯತ್ನಾಳ್ ಸೋಲು ಅನುಭವಿಸುತ್ತಾರೆ. ಅಷ್ಟೊತ್ತಿಗೆ ಮೆತ್ತಗಾಗಿದ್ದ ಯತ್ನಾಳ್ 2013ರಲ್ಲಿ ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿ ಜಯ ಸಾಧಿಸುತ್ತಾರೆ. ನಂತರ 2018ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರನ್ನು ಹೊಗಳುವ ಮೂಲಕ ಬಿಜೆಪಿಗೆ ಮರಳಿ, 2018ರ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸುತ್ತಾರೆ.
ಆದರೆ ಈಗ ಮತ್ತೆ ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿ, ಬಹಿರಂಗವಾಗಿ ಯಡಿಯೂರಪ್ಪ ವಿರುದ್ಧ ಮಾತನಾಡುವ ಯತ್ನಾಳ್ ಅವರು ಮುಂದಿನ ಪರಿಣಾಮ ಊಹಿಸಿಯೇ ಮಾತನಾಡಿರುವ ಸಾಧ್ಯತೆ ಇದೆ. ಬಿಎಸ್‌ವೈ ಹಠಕ್ಕೆ ಬಿದ್ದು, ಪಕ್ಷದಿಂದ ಉಚ್ಛಾಟನೆ ಮಾಡಿದರೆ ಮಾಡಲಿ ಎಂಬ ನಿರ್ಧಾರಕ್ಕೆ ಯತ್ನಾಳ್ ಬಂದಂತೆ ಕಾಣುತ್ತದೆ. ಶಾಸನಾತ್ಮಕವಾಗಿ ಈ ಪ್ರಕ್ರಿಯೆಗೆ ಯಾವುದೇ ಮಾನ್ಯತೆಗಳಿಲ್ಲ, ಶಾಸಕತ್ವಕ್ಕೂ ಧಕ್ಕೆ ಆಗುವುದಿಲ್ಲ. ಯಡಿಯೂರಪ್ಪ ವಿರುದ್ಧ ಆಗ ಮತ್ತಷ್ಟು ದಾಳಿ ಮಾಡಬಹುದು ಎಂಬುದು ಯತ್ನಾಳ್ ಯೋಚನೆ ಇರಬಹುದು.
ಈಗಾಗಲೇ ಯತ್ನಾಳ್ ಅವರು ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಕೂಡಲಸಂಗಮ ಶ್ರೀಗಳೊಂದಿಗೆ ಕೂಡಿಕೊಂಡು ಸಮುದಾಯದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಈ ಮೂಲಕ ತಮ್ಮ ಹೋರಾಟವನ್ನು ಇನ್ನಷ್ಟು ಜೀವಂತವಾಗಿಟ್ಟುಕೊಂಡು ತಮ್ಮದೇ ಸಮುದಾಯವಾದ ಪಂಚಮಸಾಲಿ ಲಿಂಗಾಯತರ ಪ್ರಶ್ನಾತೀತ ನಾಯಕನಾಗಿ ಹೊರ ಹೊಮ್ಮುವುದು ಯತ್ನಾಳ್ ತಂತ್ರಗಾರಿಕೆ ಇರಬಹುದು. ಆ ಮೂಲಕ ಯಡಿಯೂರಪ್ಪ ಲಿಂಗಾಯಿತರ ಪ್ರಶ್ನಾತೀತ ನಾಯಕರಲ್ಲ ಎಂಬುದನ್ನು ಬಿಜೆಪಿ ನಾಯಕತ್ವಕ್ಕೆ ಮನದಟ್ಟು ಮಾಡಿಕೊಡುವುದು ಯತ್ನಾಳ್ ಯೋಜನೆಯಾಗಿರಬಹುದು.
ಸ್ಥಳೀಯವಾಗಿಯೂ ಯಡಿಯೂರಪ್ಪ ಯತ್ನಾಳ್ ಅವರನ್ನು ಕಟ್ಟಿಹಾಕಲು ಸಾಕಷ್ಟು ಶ್ರಮಿಸಿದ್ದಾರೆ. ಮುರುಗೇಶ್ ನಿರಾಣಿ ಅವರ ಮೂಲಕ ವಚನಾನಂದ ಸ್ವಾಮಿಯನ್ನು ಮುಂದಿಟ್ಟುಕೊಂಡು ಪಂಚಮಸಾಲಿ ಪೀಠವನ್ನು ಹೊಸದಾಗಿ ಹುಟ್ಟು ಹಾಕಿ ಮೀಸಲಾತಿ ಹೋರಾಟವನ್ನು ಒಡೆಯಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದಾಗ್ಯೂ ಪಂಚಮಸಾಲಿ ಮೀಸಲಾತಿ ಹೋರಾಟ ಕೂಡಲಸಂಗಮ ಶ್ರೀಗಳು ಕೇಂದ್ರಿತವಾಗಿಯೇ ಮುನ್ನಡೆಯುತ್ತಿದೆ. ಬಾಗಲಕೋಟೆ ಮತ್ತು ವಿಜಯಪುರ ಅವಳಿ ಜಿಲ್ಲೆಗಳಲ್ಲಿ ನಿರಾಣಿ ಮತ್ತು ಯತ್ನಾಳ್ ಹಾವು ಮುಂಗುಸಿಯಂತೆ ನಡೆದುಕೊಳ್ಳುತ್ತಾರೆ. ನಿರಾಣಿ ಹಿಂದೆ ಬಿಎಸ್‌ವೈ ಇರುವುದು ಗೊತ್ತಿರುವ ವಿಚಾರವೇ ಆಗಿದೆ.
ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ಯಡಿಯೂರಪ್ಪ ಕುಟುಂಬದ ವಿರುದ್ಧ ಯತ್ನಾಳ್ ಸಂಘರ್ಷ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಯತ್ನಾಳ್ ಮತ್ತು ಬಿಎಸ್‌ವೈ ಕುಟುಂಬ ನಡುವಿನ ಕಾಳಗ ಮುಂದೆ ಯಾವ ಸ್ವರೂಪ ಪಡೆಯುತ್ತೆ ಎಂಬುದು ಕುತೂಹಲ ಮೂಡಿಸಿದೆ. ಯತ್ನಾಳ್ ವಿಚಾರದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಮೌನ ಯಾವಾಗ ಸ್ಫೋಟಗೊಂಡು ಹೇಗೆ ಸಿಡಿಯುತ್ತೋ ಅದು ಗೊತ್ತಿಲ್ಲ. ಒಟ್ಟಾರೆ ಯತ್ನಾಳ್ ನಡೆಯಿಂದ ‘ಬಿಜೆಪಿ ಶಿಸ್ತಿನ ಪಕ್ಷ’ ಎಂಬುದು ಹೆಸರಿಗಷ್ಟೇ ಸೀಮಿತವಾಗಿದೆ. ಜೊತೆಗೆ ಬಿಎಸ್‌ವೈ ಕುಟಂಬದ ಹಿಡಿತದಿಂದ ಬಿಜೆಪಿ ಹೊರಬರಲು ಸಾಧ್ಯವಾಗಿಲ್ಲ. ಹೊಸ ನಾಯಕತ್ವದ ಹುಟ್ಟಿಗೂ ಯಡಿಯೂರಪ್ಪ ಅವಕಾಶ ಕೊಟ್ಟಿಲ್ಲ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.
ಈ ಮನುಷ್ಯ ಯಾವುದಕ್ಕೂ ನಿಯತ್ತಿನವನಲ್ಲ ಕೆಲವು ವರ್ಷಗಳ ಹಿಂದೆ,, ದುಡ್ಡು ಕೊಡಲಿಲ್ಲಾಂದ್ರೆ ಅವರ ಮೇಲೆ ಒದರತೀನಿ ಅಂದಿದ್ದು ಪತ್ರಿಕೆಗಳಲ್ಲಿ ಬಂದಿತ್ತು,,ಬಿ ಎಸ್ ವೈ ವಿರೋಧಿ ಬಣದ ಲೀಡರ್,, ಮುಖ್ಯಮಂತ್ರಿ ಮಾಡುವುದಾಗಿ ಹೂ ಇವನ ಕಿವಿಗೆ ಇಟ್ಟಿದ್ದಾರೆ ಮುಖ್ಯವಾಗಿ ನೂರಾರು ಕೋಟಿ ಆಸ್ತಿ ರಕ್ಷಣೆ ಮಾಡಿಕೊಳ್ಳುವುದು ಅಷ್ಟೇ ಅವಶ್ಯಕ,, ಆವತ್ತಿನಿಂದ ನಾಮಾ ಎಳಕೊಂಡು ಓಡಾಡುವನು,, ಅವರೇನಾದ್ರೂ ಕೈ ಕೊಟ್ಟರೆ ಅವರನ್ನೂ ಬಿಡುವುದಿಲ್ಲ,,,,ಇಂಥವರೂ ಲಿಂಗಾಯತರಿದ್ದಾರೆ