ನಿಧಿಯ ಆಸೆಗೆ ಜೋತುಬಿದ್ದು ವಾಸದ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಶೋಧಿಸಿದ ಆರು ಮಂದಿಯ ವಿರುದ್ದ ಕೊಡಗು ಜಿಲ್ಲೆಯ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಜಿ. ಕಾಲೋನಿ ನಿವಾಸಿ ಆಸೀಫ್ (30) ಎಂಬಾತ ಹಣದ ಆಸೆಗೆ ತನ್ನ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಇದೀಗ ಸೆರೆಮನೆ ಸೇರಿದ ಆರೋಪಿಯಾಗಿದ್ದಾನೆ.
ಈತನ ಮನೆಯಲ್ಲಿ ಪ್ರತಿನಿತ್ಯ ನಾಗರಹಾವು ಕಾಣಿಸಿಕೊಳ್ಳುತ್ತಿದ್ದು ಈ ವಿಚಾರವನ್ನು ತನ್ನ ಸ್ನೇಹಿತನಾದ ಮೂರ್ನಾಡ್‌ನ ಅತೀಕ್ ಎಂಬಾತನ ಬಳಿ ಹೇಳಿದ್ದಾನೆ. ಆತ ಕಾಸರಗೋಡು ಜಿಲ್ಲೆಯಿಂದ ಓರ್ವ ಮಂತ್ರವಾದಿಯನ್ನು ಕರೆಸಿದ್ದಾನೆ. ಮಂತ್ರವಾದಿ ಮನೆಯ ಮೂರನೇ ಕೋಣೆಯಲ್ಲಿ ನಿಧಿ ಇರುವುದಾಗಿ ಯಂತ್ರದ ಪರಿಶೋಧನೆಯಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾನೆ. ಕೋಣೆಯಲ್ಲಿ ಗುಂಡಿ ತೋಡಲು ಶುರು ಮಾಡಿ, ಯಂತ್ರದಲ್ಲಿ ಪರಿಶೀಲನೆ ಮಾಡಿದಾಗ ನಿಧಿ ಇರುವ ಯಾವುದೇ ಶಬ್ದ ಬಾರದ ಹಿನ್ನೆಲೆಯಲ್ಲಿ ಅವರು ತೆರಳಿದ್ದಾರೆ.
ತದನಂತರ ಆಸೀಫ್ ವಿಚಾರವನ್ನು ಕುಶಾಲನಗರದ ಆರೀಫ್ ಮತ್ತು ಮಡಿಕೇರಿಯ ಫಾಹೀದ್ ಎಂಬುವವರ ಬಳಿ ಹೇಳಿದ ಹಿನ್ನೆಲೆಯಲ್ಲಿ ಮಾಟಮಂತ್ರ ಮಾಡಿಸಿದರೆ ನಿಧಿ ಸಿಗಲಿದೆ ಎಂದು ಅವರನ್ನು ನಂಬಿಸಿದ್ದಾನೆ.
ಮಾಟಮಂತ್ರ ಮಾಡಿಸಲೆಂದು ತಮಿಳುನಾಡಿನಿಂದ ಕರ್ಪಸ್ವಾಮಿ ಎಂಬ ಮಾಂತ್ರಿಕನನ್ನು ಹಾಗೂ ಆತನೊಂದಿಗೆ ಮೂವರನ್ನು ಕರೆಸಿದ್ದಾನೆ. ನಿರಂತರವಾಗಿ 35 ದಿನಗಳ ಕಾಲ ಪೂಜೆ ನೆರವೇರಿಸಿ ನಂತರ ಕೋಳಿ ಬಲಿ ನೀಡಿದರೆ ನಿಧಿ ಸಿಗಲಿದೆ ಎಂದು ಮಾಂತ್ರಿಕ ಹೇಳಿದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮನೆಯಲ್ಲಿ ಪೂಜೆ ನೆರವೇರಿಸಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಿದ್ದಾಪುರ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಕೋಣೆಯಲ್ಲಿ ಗುಂಡಿ ತೋಡಿರುವುದು ಹಾಗೂ ಪೂಜೆ ನಡೆಸಿರುವುದು ಪತ್ತೆಯಾಗಿದೆ. ಆಸಿಫ್‌ನನ್ನು ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ನಿಧಿಯ ಆಸೆಗೆ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ.
ಇದನ್ನು ಓದಿದ್ದೀರಾ? ಸೀಳು ಮಾತಿನಿಂದ ಸ್ಪಷ್ಟ ಮಾತಿನೆಡೆಗೆ
ಈ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆ ಎಸಗಿದ ಪ್ರಕರಣದಲ್ಲಿ ಭಾಗಿಯಾದ 6 ಮಂದಿಯ ವಿರುದ್ದ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಮತ್ತು ವಾಮಾಚಾರ ಇವುಗಳ ಪ್ರತಿಬಂಧಕ ಮತ್ತು ನಿರ್ಮೂಲನೆ ಅಧಿನಿಯಮ 2017ರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಐವರನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
