ಕೊಡಗು ಜಿಲ್ಲೆ ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಕಳೆದ 17 ದಿನಗಳಿಂದ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ಅವರು ಭೇಟಿ ನೀಡಿದ್ದು, ಸಮಸ್ಯೆಗಳನ್ನು ಪರಿಹರಿಸುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೇ.100ರಷ್ಟು ನೇರ ನೇಮಕಾತಿ ಮಾಡುವಂತೆ ಒತ್ತಾಯಿಸಿ ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಕಳೆದ 17 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ಅವರು ಕೊಡಗಿನ ಬಿಎಸ್‌ಸಿ ಅರಣ್ಯ ಕಾಲೇಜಿಗೆ ಭಾನುವಾರ ಭೇಟಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ವಿನಂತಿಸಿದ್ದು, ಸಿಎಂ ಮತ್ತು ಅರಣ್ಯ ಸಚಿವರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಇಲಾಖೆಯಲ್ಲಿ ಆರ್‌ಎಫ್‌ಒ ಹುದ್ದೆಗಳಿಗೆ ಅರಣ್ಯ ಪದವೀಧರರ ನೇರ ನೇಮಕಾತಿಯ ಶೇಕಡಾವಾರು ಪ್ರಮಾಣವನ್ನು ಕಡಿಮೆ ಮಾಡಲು ಒಲವು ತೋರಿದ ಆಡಳಿತ ಸುಧಾರಣಾ ಆಯೋಗದ ಮುಖ್ಯಸ್ಥ ವಿಜಯ್ ಭಾಸ್ಕರ್ ಅವರ ಶಿಫಾರಸುಗಳಿಗೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ರಾಜ್ಯದ ಮೂರು ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಫ್ರೀಡಂ ಪಾರ್ಕ್‌ನಲ್ಲಿ ಒಟ್ಟುಗೂಡಲು ಯೋಜಿಸಿದ್ದಾರೆ” ಎಂದು ದೃಢಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಮಾ 2ರಂದು ಪಂಚಾಯತ್ ರಾಜ್ ಹಾಗೂ ನಗರಾಡಳಿತ ಪ್ರತಿನಿಧಿಗಳ ಕ್ರೀಡಾಕೂಟ
“ಬಿಎಸ್‌ಸಿ ಅರಣ್ಯ ವಿಶೇಷ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಮುಂದಿಟ್ಟ ಕೆಲವು ಬೇಡಿಕೆಗಳು ಕಾನೂನುಬದ್ಧವಾಗಿವೆ. ಈ ಬಗ್ಗೆ ನಾನು ಸರ್ಕಾರದ ಗಮನಕ್ಕೆ ತರುತ್ತೇನೆ. ಅರಣ್ಯ ಸಚಿವರೊಂದಿಗೆ ಸಭೆ ನಿಗದಿಪಡಿಸುವುದಾಗಿ ನಾನು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದೇನೆ. ತರಗತಿಗಳಿಲ್ಲದೆ ವಿದ್ಯಾರ್ಥಿಗಳು 17 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವುದರಿಂದ ಇದು ಆದ್ಯತೆಯ ವಿಷಯವಾಗಿದೆ. ಅವರ ಸಮಸ್ಯೆಗಳ ಬಗ್ಗೆ ಸಿಎಂ ಗಮನಕ್ಕೆ ತರುತ್ತೇನೆ. ವಿದ್ಯಾರ್ಥಿಗಳು ಇದೀಗ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಬೇಕು” ಎಂದು ವಿನಂತಿಸಿದರು.
