ರೇವ್ ಪಾರ್ಟಿ ನೆಪದಲ್ಲಿ ನಿಷೇಧಿತ ಮಾದಕ ವಸ್ತುಗಳ ಮಾರಾಟ-ಬಳಕೆ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಕೊಡಗು ಜಿಲ್ಲಾ ವರಿಷ್ಠಾಧಿಕಾರಿ ಕೆ ರಾಮರಾಜನ್ ಕೋರಿದ್ದಾರೆ.
2024ರ ಹೊಸ ವರ್ಷಾಚರಣೆಯನ್ನು ಸಂಭ್ರಮಿಸುವ ಸಲುವಾಗಿ ಜಿಲ್ಲೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಪ್ರವಾಸದ ನಿಮಿತ್ತ ಆಗಮಿಸಿ ಜಿಲ್ಲಾ ವ್ಯಾಪ್ತಿಯಲ್ಲಿನ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್‌ಗಳಲ್ಲಿ ತಂಗಲು ಬರುವ ಪ್ರವಾಸಿಗರು ರೇವ್ ಪಾರ್ಟಿ ನೆಪದಲ್ಲಿ ನಿಷೇದಿತ ಮಾದಕ ವಸ್ತುಗಳನ್ನು ಮಾರಾಟ ಅಥವಾ ಬಳಕೆ ಮಾಡುವುದು ಕಂಡುಬಂದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ದೂರವಾಣಿ ಸಂಖ್ಯೆ: 08272 228330, 9480804900ಕ್ಕೆ ಕರೆ ಮಾಡಿ ಮಾಹಿತಿ ಒದಗಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಪ್ರಕಟಣೆ ಹೊರಡಿಸಿದ್ದಾರೆ.
“ಹೋಂ ಸ್ಟೇ, ರೆಸಾರ್ಟ್, ಲಾಡ್ಜ್‌ಗಳ ಮಾಲೀಕರು Noise Pollution (Regulation and Control) Rules-2000 ರ ಅನ್ವಯ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಂಗಡಿಸಿರುವ ಪ್ರದೇಶಗಳಲ್ಲಿ ನಿಗದಿಪಡಿಸಿರುವ ಡೆಸಿಬಲ್‌ಗಿಂತ ಹೆಚ್ಚಿನ ಡೆಸಿಬಲ್ ಸೌಂಡ್ ಸಿಸ್ಟಂ, ಧ್ವನಿವರ್ಧಕಗಳನ್ನು ಉಪಯೋಗಿಸಬಾರದು ಹಾಗೂ ಪ್ರವಾಸಿಗರು ಬಳಸಲು ಯಾವುದೇ ರೀತಿಯ ಅವಕಾಶಗಳನ್ನು ನೀಡಬಾರದು” ಎಂದು ತಿಳಿಸಿದ್ದಾರೆ.
“ಹೋಂ ಸ್ಟೇ, ರೆಸಾರ್ಟ್, ಲಾಡ್ಜ್‌ಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ, ಸರಬರಾಜು ಮತ್ತು ಬಳಕೆ ಮಾಡುವುದು ಕಂಡುಬಂದಲ್ಲಿ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್‌ಗಳ ಮಾಲೀಕರು ಹಾಗೂ ಮಧ್ಯವರ್ತಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಮತ್ತು ಮಾಹಿತಿ ನೀಡದೇ ಮಾದಕ ವಸ್ತುಗಳನ್ನು ಮಾರಾಟ ಮತ್ತು ಬಳಕೆ ಮಾಡಲು ಸಹಕರಿಸಿರುವುದು ಕಂಡುಬಂದಲ್ಲಿ ಹೋಂ ಮಾಲೀಕರು ಹಾಗೂ ಮಧ್ಯವರ್ತಿಗಳ ವಿರುದ್ಧ ಕಲಂ: 25 ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡು ಪರವಾನಿಗೆ ರದ್ದುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಧಿಕಾರಿಗಳ ನಿರ್ಲಕ್ಷ್ಯ; ದಸಂಸ ಆಕ್ರೋಶ
“ಯುವಕ-ಯುವತಿಯರು ಮಾದಕ ವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆಎಸ್‌ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸಬೇಕು. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಎಲ್ಲಿಯೂ ಬಹಿರಂಗಪಡಿಸುವುದಿಲ್ಲ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.