ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ಸರ್ವೆ ನಂಬರ್ 26 ಹಾಗೂ 282 ರ ಮರು ಸರ್ವೆ ನಡೆಸಿ ಇತ್ತೀಚಿನ ವಿವಾದಾತ್ಮಕ ಪೋಡಿ ಪ್ರಕ್ರಿಯೆಯನ್ನು ಪರಿಶೀಲಿಸಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಅಂಬೇಡ್ಕರ್ ಸೇವಾ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗುರುವಾರ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದರು.
ಈ ವೇಳೆ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್ ಮಾತನಾಡಿ, ಕಾಮಸಮುದ್ರ ಗ್ರಾಮದ ಹಳೆ ಸರ್ವೆ ನಂಬರ್ 26 ಮತ್ತು ಹೊಸ ಸರ್ವೆ ನಂಬರ್ 282ಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳ ಬಳಿ ದಶಕಗಳಷ್ಟು ಹಳೆಯದಾದ ಅಧಿಕೃತ ದಾಖಲೆಗಳಿವೆ. ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆ ಹಿಂದೆ ಖಾತೆ, ಮನೆ ಸಂಖ್ಯೆ, ಮೂಲಸೌಕರ್ಯ ಒದಗಿಸಿತ್ತು. ಆದರೆ, ಈಗ ಕಂದಾಯ ಇಲಾಖೆ ತಪ್ಪು ನಿರ್ಧಾರದಿಂದ ನಿವಾಸಿಗಳು ಬೀದಿಗೆ ಬೀಳುವ ಆತಂಕ ಎದುರಾಗಿದೆ.
ಸರ್ವೆ ನಂಬರ್ ಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದಿರುವ ಪೋಡಿ ಪ್ರಕ್ರಿಯೆ, ಸರ್ವೆ ಸ್ಕೆಚ್ ಹಾಗೂ ಮಹಾಜರುಗಳ ಕುರಿತು ಗ್ರಾಮಸ್ಥರಲ್ಲಿ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಹಲವು ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳಿಗೆ ಸಮರ್ಪಕ ನೋಟಿಸ್ ನೀಡದೆ ಹಾಗೂ ಅವರ ಆಕ್ಷೇಪಣೆಗಳನ್ನು ಪರಿಗಣಿಸದೆ ಏಕ ಪಕ್ಷಿಯವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು.
ಈ ಗೊಂದಲದಿಂದ ಸುಮಾರು 80 ರಿಂದ 100 ಕುಟುಂಬಗಳು ತಮ್ಮ ಮನೆ, ಜೀವನೋಪಾಯ ಹಾಗೂ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದು, 22 ವರ್ಷಗಳಿಂದ ಆ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಎಸ್ಎಂ ಶಾಲೆಯ ಅಸ್ತಿತ್ವವೂ ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಫಲಾನುಭವಿಗಳು ಹಲವು ವರ್ಷಗಳಿಂದ ಉಪ ನೋಂದಣಾಧಿಕಾರಿಗಳಿಂದ ನೋಂದಣಿ ಕ್ರಯ ಪತ್ರಗಳನ್ನು ಸರ್ಕಾರಕ್ಕೆ ಕಾಲ ಕಾಲಕ್ಕೆ ತೆರಿಗೆಗಳನ್ನು ಪಾವತಿಸುತ್ತಿರುವ ಈ ನಿವಾಸಿಗಳಿಗೆ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಸರ್ವೇ ನಂಬರ್ 26 ಹಾಗೂ 282 ರನ್ನು ಉನ್ನತ ಮಟ್ಟದ ಅಧಿಕಾರಿಗಳ ತಂಡದಿಂದ ತಕ್ಷಣ ಮರ ಸರ್ವೆ ನಡೆಸಬೇಕು. ಎಲ್ಲಾ ಪೀಡಿತ ಕುಟುಂಬಗಳಿಗೆ ನೋಟಿಸ್ ನೀಡಿ, ಅವರ ದಾಖಲೆಗಳು ಹಾಗೂ ಆಕ್ಷೇಪಣೆಗಳನ್ನು ಪರಿಗಣಿಸಬೇಕು. ಕಳೆದ ಆರು ತಿಂಗಳ ಅವಧಿಯಲ್ಲಿ ಸೃಷ್ಟಿಸಲಾದ ಪೋಡಿ ದಾಖಲೆಗಳು, ಸರ್ವೆ ಸ್ಕೆಚ್ ಗಳು ಹಾಗೂ ಮಹಜರುಗಳನ್ನು ಪರಿಶೀಲಿಸಿ, ಯಾವುದೇ ಅಕ್ರಮ ಅಥವಾ ನೈಸರ್ಗಿಕ ನ್ಯಾಯದ ಉಲ್ಲಂಘನೆ ಕಂಡು ಬಂದಲ್ಲಿ ಅವುಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು. ಜಿಎಸ್ಎಂ ಶಾಲೆ, ಮನೆಗಳು ಹಾಗೂ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿರುವ ಕಟ್ಟಡಗಳನ್ನು ಸ್ಥಳದಲ್ಲಿಯೇ ಗುರುತಿಸಿ ದಾಖಲಿಸಬೇಕು ಹಾಗೂ ಮರು ಸರ್ವೆ ಪೂರ್ಣಗೊಳ್ಳುವವರೆಗೆ ಯಾವುದೇ ಬಲವಂತದ ತೆರವು, ಉಚ್ಛಾಟನೆ, ಪಿಡಿತ ಕುಟುಂಬಗಳ ಹಕ್ಕುಗಳಿಗೆ ಧಕ್ಕೆಯಾಗುವ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ರಸ್ತೆ ಅಭಿವೃದ್ಧಿಗೆ ಶಾಸಕರಿಂದ 80 ಲಕ್ಷ ಅನುದಾನ: ಶೀಘ್ರದಲ್ಲೇ ಗುದ್ದಲಿ ಪೂಜೆ
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಗೌರವಾಧ್ಯಕ್ಷ ಭಟ್ರಹಳ್ಳಿ ನವೀನ್ , ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್, ಬೆಂಗಳೂರು ಗ್ರಾಮಾಂತರ ಅಧ್ಯಕ್ಷ ಮುನಿರಾಜಣ್ಣ, ವೆಂಕಟೇಶ್ ಬೈಪನಹಳ್ಳಿ, ಮುನಿರಾಜು ಕೀಲುಕೋಟೆ, ದರ್ಶನ್ ಅಂಬೇಡ್ಕರ್ ನಗರ ಯುವ ಘಟಕ ಅಧ್ಯಕ್ಷ, ವೆಂಕಟೇಶಮ್ಮ, ಕೃಪಾ ಡ್ಯಾನಿಯಲ್, ನಯನಗೌಡ, ನ್ಯಾನ್ಸಿ ಸೇರಿದಂತೆ ಸಂಘದ ಕಾರ್ಯಕರ್ತರು ಇತರರು ಇದ್ದರು.




