ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ 500 ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮದ ಅಂಗವಾಗಿ ಸೋಮವಾರ ಕೋಲಾರದ ನಗರದ ಹೊಸ ಬಸ್ ನಿಲ್ದಾಣದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ನೇತೃತ್ವದಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಿಸುವ ಮೂಲಕ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಬಳಿಕ ಮಾತನಾಡಿದ ಶಾಸಕ ಮಂಜುನಾಥ್, “ಕಳೆದ 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನೇತೃತ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು ಅದರಂತೆ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಜಾರಿಗೊಳಿಸಲಾಯಿತು. 2023ರ ಜೂನ್ 11 ರಂದು ಶಕ್ತಿ ಯೋಜನೆಗೆ ಚಾಲನೆ ನೀಡಿ ಅಂದಿನಿಂದ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಇದುವರೆಗೂ 500 ಕೋಟಿಗಿಂತ ಹೆಚ್ವಿನ ಮಹಿಳಾ ಪ್ರಯಾಣಿಕರು ಯೋಜನೆಯ ಲಾಭವನ್ನು ಪಡೆದಿದ್ದಾರೆ” ಎಂದರು.
“ಕೋಲಾರ ಜಿಲ್ಲೆಯಲ್ಲಿ ಒಟ್ಟು 10 ಕೋಟಿಗಿಂತ ಹೆಚ್ಚಿನ ಮಹಿಳಾ ಪ್ರಯಾಣಿಕರು ಈ ಯೋಜನೆಯ ಸೌಲಭ್ಯವನ್ನು ಪಡೆದಿದ್ದಾರೆ. ಕೋಲಾರ ತಾಲೂಕಿನಲ್ಲಿ 2.75 ಲಕ್ಷ, ಕೆಜಿಎಫ್ 2.27, ಶ್ರೀನಿವಾಸಪುರ 1.73, ಮುಳಬಾಗಿಲು 1.79, ಮತ್ತು ಮಾಲೂರು 1.73 ಲಕ್ಷದಷ್ಟು ಪ್ರಯಾಣಿಕರು ಸೌಲಭ್ಯ ಪಡೆದಿದ್ದಾರೆ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಎಲ್ಲಿಯವರೆಗೆ ಜನ ಶಕ್ತಿ ಹಾಗೂ ಅಧಿಕಾರ ನೀಡುತ್ತಾರೋ ಅಲ್ಲಿಯ ತನಕ ಯೋಜನೆಗಳು ಮುಂದುವರೆಯುತ್ತವೆ” ಎಂದು ತಿಳಿಸಿದರು.
ಇದನ್ನೂ ಓದಿ: ಕೋಲಾರ | ರಾಜಕಾಲುವೆಗೆ 90 ಕೋಟಿ ಅನುದಾನ; ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ನಗರಸಭೆ ಸದಸ್ಯ
“ಶಕ್ತಿ ಯೋಜನೆಯಿಂದ ರಾಜ್ಯದ ಉದ್ದಗಲಕ್ಕೂ ಮಹಿಳೆಯರು ಉಚಿತವಾಗಿ ಸಂಚಾರ ಮಾಡಬಹುದು. ಯಾವುದೇ ಖರ್ಚು ಇಲ್ಲದೆ ಪ್ರಯಾಣ ಮಾಡಬಹುದು. ಅದು ಕಾಂಗ್ರೆಸ್ ಸರ್ಕಾರ ಬಡವರಿಗೆ ಕೊಟ್ಟಿರುವ ಸೌಲಭ್ಯವಾಗಿದೆ. ಗ್ಯಾರಂಟಿ ಯೋಜನೆ ಬಗ್ಗೆ ಯಾರು ಎಷ್ಟೇ ಟೀಕೆ ಮಾಡಿದರೂ ಅವುಗಳು ಕಾಲಕ್ರಮೇಣ ಸತ್ತು ಹೋಗುತ್ತವೆ. ನಮ್ಮ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿರುವ ಕಾರಣಕ್ಕೆ ಕಾಂಗ್ರೆಸ್ ಯಶಸ್ಸು ಪಡೆದಿದೆ. ಇದೆಲ್ಲವನ್ನು ಜಾರಿ ಮಾಡಲು ಜನ ನೀಡಿರುವ ಶಕ್ತಿಯಿಂದ ಬಲಬಂದಿದೆ” ಎಂದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ತಾಲೂಕು ಅಧ್ಯಕ್ಷ ವೇಮಗಲ್ ಮುನಿಯಪ್ಪ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸದಸ್ಯರಾದ ಅಫ್ಸರ್, ರಫೀಕ್, ಕೆ.ಎಸ್.ಆರ್.ಟಿ.ಸಿ ಡಿಸಿ ಶ್ರೀನಾಥ್, ಮ್ಯಾನೇಜರ್ ಶ್ರೀನಿವಾಸಯ್ಯ, ನಿಲ್ದಾಣಾಧಿಕಾರಿ ಶಿವಕುಮಾರ್, ಕೋಮುಲ್ ನಿರ್ದೇಶಕ ಷಂಷೀರ್, ಗ್ಯಾರಂಟಿ ಸಮಿತಿ ಸದಸ್ಯರಾದ ಭರತ್, ವಿನೋದ್, ಮಂಗಳಾ, ಬಾಬು, ಪುನೀತ್, ಇಮ್ರಾನ್, ವಿಜಯಕುಮಾರ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಕುರಿಗಳ ರಮೇಶ್, ಯಲವಾರ ರಾಜಕುಮಾರ್ ಮುಂತಾದವರು ಇದ್ದರು.