ದೇಶದಲ್ಲಿ ನಡೆಯುತ್ತಿರುವ ನೀಟ್ ಪರೀಕ್ಷಾ ಅಕ್ರಮಗಳ, ಸೋರಿಕೆ, ನೇಮಕಾತಿ ವಿಳಂಬ ಹಾಗೂ ನಿರುದ್ಯೋಗ ಸಮಸ್ಯೆ ಖಂಡಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ‘ಛಾತ್ರೋನ್ ಕಿ ಗೂಂಜ್’ ಅಭಿಯಾನವನ್ನು ರಾಷ್ಟ್ರವ್ಯಾಪಿ ತೀವ್ರಗೊಳಿಸಿದ ಭಾಗವಾಗಿ ನಗರದ ಮದರ್ ತೆರೇಸಾ ಕಾಲೇಜಿನಲ್ಲಿ ಆಯೋಜನೆ ಮಾಡಲಾಯಿತು
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಕಾರ್ಯಕ್ರಮದ ಜಿಲ್ಲಾ ಉಸ್ತುವಾರಿ ಬಿ.ಆರ್. ನಾಯ್ಡು ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ನ್ಯಾಯಯುತ ವ್ಯವಸ್ಥೆಗೆ ಆಗ್ರಹಿಸಿ ವಿದ್ಯಾರ್ಥಿಗಳು ನಡೆಸಿದ ಶಾಂತಿಯುತ ಪ್ರತಿಭಟನೆಯನ್ನು ಪೊಲೀಸ್ ಬಲದ ಮೂಲಕ ಹತ್ತಿಕ್ಕಿರುವುದು ಖಂಡನೀಯ. ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ, ಬೆದರಿಕೆ ಹಾಗೂ ಕಿರುಕುಳದ ಘಟನೆಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಳೆದ 12 ವರ್ಷಗಳಲ್ಲಿ ದೇಶದಲ್ಲಿ 152ಕ್ಕೂ ಹೆಚ್ಚು ಪೇಪರ್ ಸೋರಿಕೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸುಮಾರು 7.5 ಕೋಟಿಗೂ ಅಧಿಕ ಅಭ್ಯರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ನೀಟ್-ಯುಜಿ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಕಂಡುಬಂದ ಅಕ್ರಮಗಳು ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯ ಕಾರ್ಯವೈಖರಿ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.
ರಾಹುಲ್ ಗಾಂಧಿಯವರು ಯುವಜನರ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದು, ಕೋಟಾ ಹಾಗೂ ಡೆಹ್ರಾಡೂನ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ‘ಛಾತ್ರೋನ್ ಕಿ ಗೂಂಜ್’ ಅಭಿಯಾನದ ಮೂಲಕ ದೇಶದಾದ್ಯಂತ ಯುವಕರ ಧ್ವನಿಯನ್ನು ಸಂಘಟಿಸುವ ಕಾರ್ಯ ನಡೆಯುತ್ತಿದೆ ಎಂದರು.
ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ಎನ್‌ಟಿಎಯನ್ನು ವಿಸರ್ಜಿಸಿ ಹೊಸ ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಬೇಕು, ಪೇಪರ್ ಸೋರಿಕೆ ಪ್ರಕರಣಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು, ವಾರ್ಷಿಕ ಪರೀಕ್ಷೆ ಮತ್ತು ನೇಮಕಾತಿ ವೇಳಾಪಟ್ಟಿಯನ್ನು ಕಡ್ಡಾಯಗೊಳಿಸಬೇಕು ಹಾಗೂ ನೀಟ್ ಪರೀಕ್ಷೆಯ ಮೂಲ ಒಎಂಆರ್ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಜು.22 ರಂದು ನೀಟ್ ವಿರುದ್ದ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಛಾತ್ರೋಂಕಿ ಗುಂಜ್ ಕಾರ್ಯಕ್ರಮ
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷರಾದ ಊರಬಾಗಿಲು ಶ್ರೀನಿವಾಸ್, ಮ್ಯಾಕಲ ನಾರಾಯಣಸ್ವಾಮಿ, ಬ್ಲಾಕ್ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಸೈಯದ್ ಆಫ್ಸರ್, ಮುಖಂಡರಾದ ಖಯ್ಯಾಮ್, ಶ್ರೀಕೃಷ್ಣ, ಅಂಬರೀಷ್ ,ಒಬಿಸಿ ಮಂಜುನಾಥ್, ಜಯದೇವ್, ಷಂಷೀರ್, ಮಹಮ್ಮದ್ ಹನೀಫ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ, ಸೈಯದ್ ಆಫ್ರೀದ್, ಪ್ರಧಾನ ಕಾರ್ಯದರ್ಶಿ ರಿಯಾಜ್ ಗೋರು, ನದೀಂ, ಸುಧೀರ್, ರಾಜಕಲ್ಲಹಳ್ಳಿ ಶ್ರೀನಿವಾಸ್, ವೀರೇಂದ್ರ ಪಾಟೀಲ್ ಮುಂತಾದವರು ಇದ್ದರು.





