ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಕಾರ್ಮಿಕೆ ಶ್ರೀಮಂತಿನಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮೃತಳ ಕುಟುಂಬಕ್ಕೆ 2 ಕೋಟಿ ಪರಿಹಾರ ನೀಡಬೇಕು. ಸಾವಿಗೆ ಕಾರಣವಾದ ಅಂಶಗಳು ಹಾಗೂ ಕಂಪನಿಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳ ಕುರಿತು ತನಿಖೆ ನಡೆಸಲು ವಿಶೇಷ ತಂಡ ರಚಿಸಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಸ್ಥಳೀಯ ಕನ್ನಡಿಗರು ಹಾಗೂ ರೈತ ಕುಟುಂಬಗಳ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿ ಹಾಗೂ ಗುತ್ತಿಗೆದಾರರು ಹೊರರಾಜ್ಯದ ಕಾರ್ಮಿಕರಿಗೆ ಉದ್ಯೋಗ ಕೊಡಿಸುವ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ. ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಕೆಲಸ ಕೊಡಿಸುವುದಾಗಿ ಕರೆತಂದು, ನಕಲಿ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳಿದ್ದರೂ, ದಾಖಲೆಗಳನ್ನು ಪರಿಶೀಲಿಸಬೇಕಾದ ಕಂಪನಿ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಕಾರ್ಮಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸದೆ, ಸೌಲಭ್ಯಗಳ ಕುರಿತು ಪ್ರಶ್ನಿಸಿದಾಗ ಕಿರುಕುಳ ನೀಡಲಾಗುತ್ತಿದೆ. ಬರಗಾಲದ ಸಂಕಷ್ಟದ ನಡುವೆಯೂ ಉತ್ತಮ ಶಿಕ್ಷಣ ಪಡೆದ ಅನೇಕ ರೈತ ಕೂಲಿಕಾರ್ಮಿಕರ ಮಕ್ಕಳು ಉದ್ಯೋಗ ಅರಸಿ ರಾಜ್ಯದಿಂದ ರಾಜ್ಯಕ್ಕೆ ತೆರಳಿ ದುಡಿಯುತ್ತಿದ್ದಾರೆ. ಅಂತಹ ಮಹಿಳಾ ಕಾರ್ಮಿಕರ ಸುರಕ್ಷತೆ ಹಾಗೂ ಹಕ್ಕುಗಳನ್ನು ಕಾಪಾಡುವ ಜವಾಬ್ದಾರಿ ಕಂಪನಿಗಳಿಗಿಲ್ಲವೇ ಎಂದು ಪ್ರಶ್ನಿಸಿದರು.
ಗುತ್ತಿಗೆದಾರರ ಮೂಲಕ ಕೆಲಸಕ್ಕೆ ನೇಮಕಗೊಂಡ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ವಂಚಿಸಲಾಗುತ್ತಿದೆ ಎಂಬ ದೂರುಗಳಿದ್ದರೂ, ಕಾರ್ಮಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಕಾರ್ಮಿಕ ಇಲಾಖೆ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ ಹಿತ ಕಾಪಾಡಬೇಕಾದ ಅಧಿಕಾರಿಗಳು ಕಂಪನಿ ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಯುವ ರೈತ ಮುಖಂಡ ಕೆ.ಇ.ಬಿ. ಚಂದ್ರು ಮಾತನಾಡಿ, ಕಂಪನಿಗಳಲ್ಲಿ ಮಹಿಳಾ ಕಾರ್ಮಿಕರನ್ನು ನೇಮಿಸಿಕೊಳ್ಳುವ ಆಡಳಿತ ಮಂಡಳಿ ಹಾಗೂ ಗುತ್ತಿಗೆದಾರರು ಅವರ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಹಿಳಾ ಕಾರ್ಮಿಕರು ವಾಸಿಸುವ ಸ್ಥಳಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಕೆಲಸದ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ಪ್ರಥಮ ಚಿಕಿತ್ಸೆ ಒದಗಿಸಿ, ಅಗತ್ಯವಿದ್ದಲ್ಲಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಸಾವಿರಾರು ಮಹಿಳಾ ಕಾರ್ಮಿಕರು ದುಡಿಯುವ ಕಂಪನಿಯಲ್ಲಿ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸಲಾಗುತ್ತಿದೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು, ಶ್ರೀಮಂತಿನಿ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು. ಮೃತರ ಕುಟುಂಬಕ್ಕೆ 2 ಕೋಟಿ ಪರಿಹಾರ ನೀಡಬೇಕು. ನಿರ್ಲಕ್ಷ್ಯ ತೋರಿದ ಕಂಪನಿ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಕಾರ್ಮಿಕ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಂಪನಿಯಲ್ಲಿ ನಡೆಯುತ್ತಿದೆ ಎನ್ನಲಾದ ಕಾರ್ಮಿಕ ಶೋಷಣೆ, ನೇಮಕಾತಿ ಅಕ್ರಮಗಳು ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಕುರಿತು ತನಿಖೆ ನಡೆಸಲು ವಿಶೇಷ ತಂಡ ರಚಿಸಬೇಕು. ಇಲ್ಲದಿದ್ದರೆ ರೈತ ಸಂಘದ ವತಿಯಿಂದ ಶೀಘ್ರದಲ್ಲೇ ಸೂಕ್ತ ದಾಖಲೆಗಳೊಂದಿಗೆ ಕಂಪನಿಯ ಮುಂದೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ..?ಕೋಲಾರ | ಟಾಟಾ ಎಲೆಕ್ಟ್ರಾನಿಕ್ಸ್‌ನಲ್ಲಿ ಮಹಿಳಾ ಕಾರ್ಮಿಕರ ಸಾವು: ಸಮಗ್ರ ತನಿಖೆಗೆ ಸಿಐಟಿಯು ಒತ್ತಾಯ
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಗಿರೀಶ್, ರೆಹಮಾನ್, ಮಂಜುನಾಥ್ ರೆಡ್ಡಿ, ತಿಮ್ಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.





