‘ತುಮಕೂರು ದಸರಾ’ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಕುಟುಂಬಸ್ಥರು, ರಾಜಕಾರಣಿಗಳ ಹಿಂಬಾಲಕರು ಕಾಲು ಚಾಚಿದ ಜಾಗದಲ್ಲಿ ಕುಳಿತು ಮಾಧ್ಯಮದವರು ಸುದ್ದಿ ಮಾಡಬೇಕಾದ ಅನಿವಾರ್ಯತ ಸೃಷ್ಟಿಯಾಗಿತ್ತು. ನಟರು, ಗಾಯಕರನ್ನು ಕಾಣಲು ಬಂದ ಜನ ವಿವಿಐಪಿಗಳ ಬೆನ್ನು ನೋಡಿಕೊಂಡು ವಾಪಸ್ ಹೋದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಂಗಳವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಸರಾ ಆಚರಣೆ ರಚಿಸಿದ್ದ ವಿವಿಧ ಸಮಿತಿಗಳ ಸದಸ್ಯರಿಗೂ ಕುಳಿತುಕೊಳ್ಳಲು ಆಸನಗಳು ಇರಲಿಲ್ಲ. ವೇದಿಕೆಯ ಎರಡೂ ಬದಿಯಲ್ಲಿಯೂ ಜನರು ನಿಂತುಕೊಂಡೇ ಇದ್ದರು.

ಪೊಲೀಸರು ಅಧಿಕಾರಿಗಳ ಕುಟುಂಬಸ್ಥರು, ಜನಪ್ರತಿನಿಧಿಗಳ ಬೆಂಬಲಿಗರಿಗೆ ಮಾತ್ರ ವಿಶೇಷ ಆತಿಥ್ಯ ನೀಡಿದರು. ಸಮಿತಿ ಸದಸ್ಯರು ಹೆಸರು ಪಟ್ಟಿಯಲ್ಲಿ ಇದೇಯೋ, ಇಲ್ಲವೋ ಎಂದು ಪರಿಶೀಲಿಸಿ ಒಳಗಡೆ ಬಿಟ್ಟರು. ಪಾಸುಗಳು ಇದ್ದರೂ ಅವಮಾನಿಸಿ, ಅನುಮಾನದಿಂದ ಕಂಡರು.
‘ಅಧಿಕಾರೇತರ ಸದಸ್ಯರನ್ನು ಕರೆದು ಅವಮಾನ ಮಾಡಲಾಗಿದೆ. ಹೀಗಾದರೆ ಸಮಿತಿಗೆ ಸೇರಿಸಿ ಏನು ಪ್ರಯೋಜನ. ಯಾವ ಪುರುಷಾರ್ಥಕ್ಕಾಗಿ, ಯಾರಿಗಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ಸಮಿತಿಯ ಸದಸ್ಯರು ಪಾಡು ಹೀಗಾದರೆ, ಸಾಮಾನ್ಯರು ಇನ್ನು ಯಾವ ಲೆಕ್ಕ’ ಎಂದು ದಸರಾ ಸಮಿತಿಯ ಸದಸ್ಯರೊಬ್ಬರು ಅಸಮಾಧಾನ ಹೊರ ಹಾಕಿದರು.
ವಿವಿಐಪಿಗಳು ಕುಳಿತುಕೊಳ್ಳುವ ಜಾಗ ಎತ್ತರದಲ್ಲಿ ಮಾಡಿದ್ದು, ಅವರ ಹಿಂದೆ ಕುಳಿತಿದ್ದ ಸಾಮಾನ್ಯ ಜನರು ವೇದಿಕೆ ನೋಡಲು ಎದ್ದು ನಿಲ್ಲಬೇಕಾದ ಪರಿಸ್ಥಿತಿ ಇತ್ತು. ಅಧಿಕಾರಿಗಳ ‘ನೆಂಟರು’ ಕಾಲಿನ ಮೇಲೆ ಕಾಲು ಹಾಕಿಕೊಂಡು ಸೋಫಾದ ಮೇಲೆ ಕುಳಿತರೆ, ಸಾರ್ವಜನಿಕರು ಗಂಟೆಗಟ್ಟಲೆ ನಿಂತಲ್ಲಿಯೇ ನಿಂತು ಕಾರ್ಯಕ್ರಮ ಮುಗಿದ ನಂತರ ಕುಂಟುತ್ತಾ ಹೆಜ್ಜೆ ಹಾಕುತ್ತಿದ್ದ ದೃಶ್ಯಗಳು ಕಂಡು ಬಂದವು.
.






