ಚುನಾವಣಾ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರ ನಡೆಯನ್ನು ‘ವೀ ದಿ ಲೀಡರ್ಸ್’ (We the Leaders) ಚಳವಳಿಯ ಕೆ. ಅಣ್ಣಾಮಲೈ ಬೆಂಬಲಿಸಿದ್ದಾರೆ. ಸಿಜೆಪಿಯ ಪ್ರತಿಭಟನಾ ಶೈಲಿಯನ್ನು ಒಪ್ಪದಿದ್ದರೂ, ಅವರು ಎತ್ತಿರುವ ಪ್ರಶ್ನೆಗಳಿಗೆ ತಮ್ಮ ಬೆಂಬಲವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷರಾಗಿರುವ ಅಣ್ಣಾಮಲೈ ಮಂಗಳವಾರ ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. “ಸಿಜೆಪಿಯ ಅನೇಕ ಪ್ರತಿಭಟನಾ ಮಾರ್ಗಗಳು ಹಾಗೂ ಅವರ ವರ್ತನೆಗಳನ್ನು ನಾನು ಒಪ್ಪದಿರಬಹುದು. ಆದರೆ, ಅವರು ಎತ್ತಿರುವ ಪ್ರಶ್ನೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಆ ಪ್ರಶ್ನೆಗಳಿಗೆ ಸರ್ಕಾರವೇ ಉತ್ತರಿಸಬೇಕು” ಎಂದು ಅವರು ಹೇಳಿದರು. ಅಲ್ಲದೆ, ದೆಹಲಿ ಪೊಲೀಸರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ದೆಹಲಿ ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ಕಾನೂನು ಉಲ್ಲಂಘನೆಗಾಗಿ ಅವರನ್ನು ಬಂಧಿಸಿ, ಅವರು ಜೈಲಿನಲ್ಲಿಯೇ ಕಾಲಕಳೆಯುವಂತೆ ಮಾಡುತ್ತಿರುವುದು ಸಿಜೆಪಿ ನಾಯಕರನ್ನು ಮತ್ತಷ್ಟು ಬಲಶಾಲಿಗಳನ್ನಾಗಿ ಮಾಡಲಿದೆಯಷ್ಟೆ. ದೆಹಲಿ ಪೊಲೀಸರು ಈ ಮೂಲಕ ನಿಜಕ್ಕೂ ಅಪಚಾರವೆಸಗುತ್ತಿದ್ದಾರೆ” ಎಂದು ಕಿಡಿಕಾರಿದರು.
ಜಂತರ್ ಮಂತರ್ ಅತಿಕ್ರಮಣ ಪ್ರವೇಶ ಪ್ರಕರಣದಲ್ಲಿ ಸಿಜೆಪಿಯ ನಾಯಕರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋಮವಾರವಷ್ಟೇ ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಿತ್ತು. ಇದರ ಬೆನ್ನಲ್ಲೇ ಅಣ್ಣಾಮಲೈ ಈ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಭಟನಾ ಸ್ಥಳ ಎಂಬ ಮಾನ್ಯತೆ ಕಳೆದುಕೊಂಡಿರುವ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನು ಪ್ರಚೋದಿಸಲಾಗಿದೆ ಎಂಬ ಪೊಲೀಸ್ ತನಿಖೆಯನ್ನು ಉಲ್ಲೇಖಿಸಿದ್ದ ನ್ಯಾಯಾಲಯ, ಆರೋಪಿಗಳಿಗೆ ‘ಕಾನೂನಿನ ಬಗ್ಗೆ ಯಾವುದೇ ಗೌರವವಿಲ್ಲ’ ಎಂದು ತನ್ನ ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿತ್ತು.
ಇನ್ನೊಂದೆಡೆ, ನ್ಯಾಯಾಲಯದ ವಿಚಾರಣೆಯ ಬಳಿಕ ಪೊಲೀಸ್ ವಾಹನದಿಂದಲೇ ಆಕ್ರೋಶ ವ್ಯಕ್ತಪಡಿಸಿದ ಸೌರವ್ ದಾಸ್, ಭದ್ರತಾ ಉಲ್ಲಂಘನೆಯ ಆರೋಪದ ಮೇಲೆ ತಮ್ಮ ಜಾಮೀನು ಶ್ಯೂರಿಟಿಗಳನ್ನು (sureties) ತಿರಸ್ಕರಿಸಿದ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿದರು. “ನಾವೀಗ ತುರ್ತುಪರಿಸ್ಥಿತಿಯಲ್ಲಿದ್ದೇವೆ. ಇಲ್ಲಿ ನ್ಯಾಯವಿಲ್ಲ. ಇದೊಂದು ಪೊಲೀಸ್ ನ್ಯಾಯಾಲಯ, ಇಲ್ಲಿ ಏನಾಗುತ್ತಿದೆ ಎಂಬುದನ್ನು ನೀವೇ ನೋಡಿ” ಎಂದು ಅವರು ಕೂಗುತ್ತಿದ್ದ ದೃಶ್ಯಗಳನ್ನು ‘ಸ್ಮಿತಾ ಶರ್ಮಾ ಜರ್ನಲಿಸ್ಟ್’ ಎಂಬ ಯೂಟ್ಯೂಬ್ ಚಾನೆಲ್ ಸೆರೆಹಿಡಿದಿದೆ.
ಕಳೆದ ವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಇತರ ಸಿಜೆಪಿ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಲು ಯತ್ನಿಸಿದ್ದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ಬಂಧಿಸಿ, ಐದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಅಪರಾಧ ವಿಭಾಗಕ್ಕೆ (ಕ್ರೈಂ ಬ್ರಾಂಚ್) ವರ್ಗಾಯಿಸಲಾಗಿದೆ.





