ಜಿಲ್ಲಾ ಕುರುಬರ ಸಂಘದ ಸರ್ವತೋಮುಖ ಅಭಿವೃದ್ಧಿ, ಕನಕ ಭವನ ನಿರ್ಮಾಣದ ಪ್ರಗತಿ ಹಾಗೂ ಸಮಾಜದ ವಿವಿಧ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಲು ಜುಲೈ 19ರಂದು ನಗರದ ಕುವೆಂಪು ನಗರದಲ್ಲಿರುವ ಕನಕ ಭವನದಲ್ಲಿ ಜಿಲ್ಲಾ ಮಟ್ಟದ ಸಭೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಜೆ.ಕೆ. ಜಯರಾಂ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10.30ಕ್ಕೆ ಆರಂಭವಾಗುವ ಸಭೆಯಲ್ಲಿ ಸಮಾಜದ ರಾಜಕೀಯ ಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು, ಹಿರಿಯರು, ಯುವಕರು ಸೇರಿದಂತೆ ಎಲ್ಲಾ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜದ ಅಭಿವೃದ್ಧಿಗೆ ಸಲಹೆ-ಸೂಚನೆಗಳನ್ನು ನೀಡುವಂತೆ ಮನವಿ ಮಾಡಿದರು.
ಕನಕ ಭವನದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮುಂದಿನ ಕನಕದಾಸರ ಜಯಂತಿಯಂದು ಭವನವನ್ನು ಲೋಕಾರ್ಪಣೆ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಯುವಕರು ಭವನ ನಿರ್ಮಾಣದ ಕಾಮಗಾರಿಯನ್ನು ವೀಕ್ಷಿಸಿ ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ 2 ಕೋಟಿ ರೂ. ಮಂಜೂರಾಗಿದ್ದು, ಇದುವರೆಗೆ 50 ಲಕ್ಷ ರೂ. ಬಿಡುಗಡೆಯಾಗಿದೆ. ಉಳಿದ ಅನುದಾನವನ್ನು ಭವನ ಲೋಕಾರ್ಪಣೆಯ ನಂತರ ಸಮಾಜದ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು
ಭವನ ನಿರ್ಮಾಣಕ್ಕೆ ಮಾಜಿ ಸಂಸದ ಎಸ್. ಮುನಿಸ್ವಾಮಿ 20 ಲಕ್ಷ ರೂ., ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್ ಕುಮಾರ್, ನಸೀರ್ ಅಹ್ಮದ್ ಹಾಗೂ ಇಂಚರ ಗೋವಿಂದರಾಜು ತಲಾ 10 ಲಕ್ಷ ರೂ., ವೈ.ಎ. ನಾರಾಯಣಸ್ವಾಮಿ 5 ಲಕ್ಷ ಅನುದಾನ ನೀಡಿದ್ದಾರೆ. ಸಮಾಜದ ಹಲವು ದಾನಿಗಳ ಸಹಕಾರದಿಂದ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಉದ್ಘಾಟನೆ ನಡೆಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಅವರು ನಗರದ ಹೊರವಲಯದ ಆರ್.ಎಲ್. ಗೋಲ್ಡ್ ಬಡಾವಣೆಯಲ್ಲಿ 36 ಸಾವಿರ ಚದರ ಅಡಿಯ ಸಿಎ ನಿವೇಶನವನ್ನು ಜಿಲ್ಲಾ ಕುರುಬರ ಸಂಘಕ್ಕೆ ಮಂಜೂರು ಮಾಡಿಸಿದ್ದು, 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ 36 ಲಕ್ಷ ರೂ. ಪಾವತಿಸಿ ಸಂಘದ ಹೆಸರಿಗೆ ಖಾತೆ ಮಾಡಿಸಿಕೊಳ್ಳಲಾಗುವುದು. ಭವಿಷ್ಯದಲ್ಲಿ ಅಲ್ಲಿಯೂ ಸಮಾಜದ ಅಭಿವೃದ್ಧಿಗೆ ಮತ್ತೊಂದು ಸುಸಜ್ಜಿತ ಭವನ ನಿರ್ಮಿಸುವ ಯೋಜನೆ ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 51 ಸಾವಿರ ರೂ. ದೇಣಿಗೆಯ ಚೆಕ್ ಅನ್ನು ಸಂಘದ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎ.ಜಿ. ಸುರೇಶ್ ಕುಮಾರ್ ಹಾಗೂ ಖಜಾಂಚಿ ಬಿ.ಎಲ್. ರಾಜೇಂದ್ರ ಸಿಂಹ ಅವರಿಗೆ ಜೆ.ಕೆ. ಜಯರಾಂ ಹಸ್ತಾಂತರಿಸಿದರು.
ಇದನ್ನು ಓದಿದ್ದೀರಾ..? ಕೋಲಾರ | ಅಂಬೇಡ್ಕರ್ ಅವರ 21 ಅಡಿ ಕಂಚಿನ ಪ್ರತಿಮೆ ಕಾಮಗಾರಿ ಪರಿಶೀಲಿಸಿದ ಶಾಸಕ ಕೊತ್ತೂರು ಮಂಜುನಾಥ್
ಸುದ್ದಿಗೋಷ್ಠಿಯಲ್ಲಿ ಕುರುಬ ಸಮಾಜದ ಹಿರಿಯ ಮುಖಂಡರಾದ ಕೆಎಸ್ಆರ್ಟಿಸಿ ಮುನಿಯಪ್ಪ, ಅಂಚೆ ಅಶ್ವಥ್, ಕೆಎಸ್ಆರ್ಟಿಸಿ ನಾರಾಯಣಸ್ವಾಮಿ, ಮುಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




