ಇಡೀ ಸಮಾಜ ಮತ್ತು ಸರ್ಕಾರಗಳು ಯುವ ಜನಾಂಗದ ಮಾನಸಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿವೆ. ಇದು ಯುವ ಸಮುದಾಯದ ಸೋಲಲ್ಲ. ನಾಗರಿಕ ಸಮಾಜದ ಸೋಲು. ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣಗೊಂಡು, ವಿದ್ಯಾರ್ಥಿಗಳು ಹಣ ತಂದು ಕೊಡುವ ಯಂತ್ರಗಳಂತಾಗಿದ್ದಾರೆ. ಶಿಕ್ಷಕರಿಗೆ ವಿದ್ಯಾರ್ಥಿಗಳ ಮನಸ್ಥಿತಿ, ಅವರ ವಯೋಸಹಜ ತುಮುಲಗಳು, ಕೌಟುಂಬಿಕ ಸಮಸ್ಯೆಗಳ ಬಗ್ಗೆ ಅರಿತು ಬೆರೆಯುವ ಪರಿಸ್ಥಿತಿಯಲ್ಲಿಲ್ಲ. ಹೆತ್ತವರಿಗೂ ಅಷ್ಟೇ, ಮಕ್ಕಳಿಗೆ ಸವಲತ್ತುಗಳನ್ನು ಕೊಟ್ಟು ಶಾಲೆ, ಕಾಲೇಜಿಗೆ ಸೇರಿಸಿದರೆ ಮುಗಿಯಿತು. ಅವರದ್ದೂ ಧಾವಂತದ ಬದುಕು. ಹಿರಿಯರ ಧಾವಂತದ ಬದುಕಿನ ಗಾಲಿಗಳು ಓಡುತ್ತಿದ್ದರೆ ಯುವ ಸಮೂಹದ ನೋವುಗಳನ್ನು ಆಲಿಸುವ ಕಿವಿಗಳಿಲ್ಲ.
ಸಾಮಾನ್ಯ ಸುದ್ದಿ ಎಂಬಂತಾಗಿದೆ ಕೊಚ್ಚಿ ಕೊಲೆ ಮಾಡುವ ಪ್ರವೃತ್ತಿ. ಹೆತ್ತವರು, ಒಡ ಹುಟ್ಟಿದವರು, ಬದುಕು ಹಂಚಿಕೊಂಡವರು, ಕಟ್ಟಿಕೊಂಡವರು, ಹೆತ್ತ ಮಕ್ಕಳು ಎಂಬ ಮುಲಾಜು ಇಲ್ಲದೆ ಕೊಚ್ಚಿ ಹಾಕಲಾಗುತ್ತಿದೆ. ಧಾರವಾಡದಲ್ಲಿ ಕಳೆದ ಬುಧವಾರ ವೈದ್ಯಯೊಬ್ಬರನ್ನು ವೈದ್ಯೆ ಪತ್ನಿ ಚುಚ್ಚಿ ಸಾಯಿಸಿದ ಸುದ್ದಿ ಬಂದಿದೆ. ಹತ್ತು ವರ್ಷದ ಮಗನನ್ನೂ ಚುಚ್ಚಿ ಗಾಯಗೊಳಿಸಿದ್ದಾಳೆ. ನಿನ್ನೆ ಗುರುವಾರ ಸಂಜೆ ಬಂಟ್ವಾಳದ ಬಿ ಸಿ ರೋಡ್ ಬಸ್ ನಿಲ್ದಾಣದಲ್ಲಿ ಬಸ್ನಲ್ಲಿ ಕೂತಿದ್ದ ಯುವತಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಯುವಕ ಅಟ್ಟಾಡಿಸಿ ಮಚ್ಚಿನಿಂದ ಕೊಚ್ಚಿ ಹಾಕಿದ್ದಾನೆ. ಬಳ್ಳಾರಿಯಲ್ಲಿ ಬೆಳಿಗ್ಗೆ ಮದುವೆಯಾದ ಯುವಕನನ್ನು ರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕಳೆದ ತಿಂಗಳಷ್ಟೇ ಯುವತಿಯೊಬ್ಬಳು ಅಮ್ಮ, ಅಪ್ಪ, ತಂಗಿಯನ್ನು ತನ್ನ ಫ್ಲ್ಯಾಟ್ಗೆ ಕರೆದು ಗೆಳೆಯನ ಜೊತೆಗೆ ಸೇರಿ ಕೊಂದು ಹಾಕಿದ ಸುದ್ದಿ ಬಂದಿತ್ತು. ಗಂಡನಿಂದ ದೂರಾಗಿದ್ದ ಮಹಿಳೆ ಗೆಳೆಯನ ಜೊತೆಗೆ ಸೇರಿ ತನ್ನ ಸ್ವಂತ ಮಗಳನ್ನೇ ಉಸಿರುಗಟ್ಟಿಸಿ ಕೊಂದು ಅಮ್ಮನೆಂಬ ಸಂಬಂಧಕ್ಕೇ ಮಸಿ ಬಳಿದ ಘಟನೆಯೂ ನಡೆದು ಹೋಯ್ತು. ಆಸ್ತಿಗಾಗಿ, ಅಪ್ಪ ಅಮ್ಮನನ್ನೇ ಮಗ ಮುಗಿಸಿದ್ದಾನೆ. ಮನೆಯವರ ಒತ್ತಾಯಕ್ಕೆ ಶ್ರೀಮಂತ ಉದ್ಯಮಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಯುವತಿ ಭಾವೀ ಪತಿಯನ್ನು ಬೆಟ್ಟದಿಂದ ತಳ್ಳಿ ಸಾಯಿಸಿದ್ದು, ಹನಿಮೂನ್ಗೆ ಹೋಗಿದ್ದ ಮಹಿಳೆ ಪತಿಯನ್ನು ಗೆಳೆಯನ ಜೊತೆ ಸೇರಿ ಸಾಯಿಸಿದ ಘಟನೆ ದೇಶದಲ್ಲಿ ಭಾರೀ ಸುದ್ದಿಯಾಗಿತ್ತು. ಯಾವುದೇ ಸಾಂಸಾರಿಕ ಬಂಧನ ಬೇಡ ಎಂದು ಶುರುವಾದ ʼಲಿವ್ ಇನ್ʼ ಎಂಬ ಹೊಸ ಬದುಕಿನ ಶೈಲಿ ಕೂಡ ಹಳಿ ತಪ್ಪಿದೆ. ಪರಸ್ಪರ ಸಂಗಾತಿಗಳು ಒಬ್ಬರನ್ನೊಬ್ಬರು ಕೊಂದು ಜೈಲು ಸೇರುತ್ತಿದ್ದಾರೆ. ಯುವಜನರಲ್ಲಿ ಇಂತಹ ರಾಕ್ಷಸಿ ಪ್ರವೃತ್ತಿ ಹೆಚ್ಚುತ್ತಿದೆ. ಯಾವುದೇ ಭಯ ಇಲ್ಲದೇ ಇಂತಹ ಪೈಶಾಚಿಕ ಕೃತ್ಯಕ್ಕೆ ಮುಂದಾಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ. ಅದು ವ್ಯಕ್ತಿಗಳ ನಡುವಿನ ಸಮಸ್ಯೆ ಎಂದುಕೊಂಡರೆ ದೇಶದ ಭವಿಷ್ಯ ಕರಾಳವಾಗಲಿದೆ.
ಹಣದ ಹಿಂದೆ ಓಡುವ ಬದುಕು, ದುರಾಸೆ, ವೈಯಕ್ತಿಕ ಪ್ರತಿಷ್ಠೆ, ಸಣ್ಣದೊಂದು ಸಮಸ್ಯೆಯನ್ನೂ ನಿಭಾಯಿಸಲಾಗದ ಮನಸ್ಥಿತಿ. ಒಟ್ಟಾರೆ ಅತಿರೇಕದ ಮಾರ್ಗಗಳನ್ನು ಯುವ ಸಮೂಹ ಆಯ್ಕೆ ಮಾಡಿಕೊಳ್ಳುತ್ತಿರುವುದು ಅಪಾಯಕಾರಿ. ತಮ್ಮ ಸ್ವಾರ್ಥದ ಮುಂದೆ ಮಕ್ಕಳ ಭವಿಷ್ಯಕ್ಕಾಗಿ ಬದುಕನ್ನೇ ತೇದು, ನೂರಾರು ಕನಸುಗಳನ್ನು ಕಂಡ ಹೆತ್ತವರು ಶತ್ರುಗಳಾಗಿ ಕಾಣುವುದು, ತಾವೇ ಹೆತ್ತ ಮಕ್ಕಳನ್ನು ಕೊಲ್ಲುವುದು… ಇವೆಲ್ಲ ಮನುಷ್ಯತ್ವ ಮರೆಯಾಗುತ್ತಿರುವ ಲಕ್ಷಣ. ಹೀಗೇ ಆದರೆ ಒಂದೇ ಮನೆಯಲ್ಲಿ ವಾಸವಾಗಿದ್ದರೂ ಪರಸ್ಪರರನ್ನು ಅನುಮಾನದಿಂದ ಕಾಣುವ ದಿನಗಳು ಬಂದರೆ ಅಚ್ಚರಿಯಿಲ್ಲ.
ಇಡೀ ಸಮಾಜ ಮತ್ತು ಸರ್ಕಾರಗಳು ಯುವ ಜನಾಂಗದ ಮಾನಸಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿವೆ. ಇದು ಯುವ ಸಮುದಾಯದ ಸೋಲಲ್ಲ. ನಾಗರಿಕ ಸಮಾಜದ ಸೋಲು. ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣಗೊಂಡು, ವಿದ್ಯಾರ್ಥಿಗಳು ಹಣ ತಂದು ಕೊಡುವ ಯಂತ್ರಗಳಂತಾಗಿದ್ದಾರೆ. ಶಿಕ್ಷಕರಿಗೆ ವಿದ್ಯಾರ್ಥಿಗಳ ಮನಸ್ಥಿತಿ, ಅವರ ವಯೋಸಹಜ ತುಮುಲಗಳು, ಕೌಟುಂಬಿಕ ಸಮಸ್ಯೆಗಳ ಬಗ್ಗೆ ಅರಿತು ಬೆರೆಯುವ ಪರಿಸ್ಥಿತಿಯಿಲ್ಲ. ಹೆತ್ತವರಿಗೂ ಅಷ್ಟೇ, ಮಕ್ಕಳಿಗೆ ಸವಲತ್ತುಗಳನ್ನು ಕೊಟ್ಟು ಶಾಲೆ, ಕಾಲೇಜಿಗೆ ಸೇರಿಸಿದರೆ ಮುಗಿಯಿತು. ಅವರದ್ದೂ ಧಾವಂತದ ಬದುಕು. ಹಿರಿಯರ ಧಾವಂತದ ಬದುಕಿನ ಗಾಲಿಗಳು ಓಡುತ್ತಿದ್ದರೆ ಯುವ ಸಮೂಹದ ನೋವುಗಳನ್ನು ಆಲಿಸಲು ಕಿವಿಗಳಿಲ್ಲ. ಅಂಗೈ ಕನ್ನಡಿಗೆ ಓತಪ್ರೋತವಾಗಿ ಬಂದು ಬೀಳುವ ಮಾಹಿತಿ ತಂತ್ರಜ್ಞಾನದ ಕಸ, ಮಾನವೀಯತೆ, ಸೂಕ್ಷ್ಮ ಸಂವೇದನೆಯ ಗಂಧ ಗಾಳಿಯೂ ಇಲ್ಲದ ಯಾಂತ್ರಿಕ ಬದುಕು ಮನುಷ್ಯನಲ್ಲಿ ರಾಕ್ಷಸೀಯ ಗುಣವನ್ನು ತುಂಬುತ್ತಿದೆ.
ಆರ್ಥಿಕ ಒತ್ತಡ ಮತ್ತು ಜೀವನಶೈಲಿಯ ಒತ್ತಡಗಳು ಜನರನ್ನು ಸಣ್ಣ ಪ್ರಚೋದನೆಗಳಿಗೆ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುವಂತೆ ಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ. ಎನ್ಸಿಆರ್ಬಿ ಪ್ರಕಾರ ವಿವಾದಗಳು, ವೈಯಕ್ತಿಕ ದ್ವೇಷ ಮತ್ತು ಪ್ರೇಮ/ಅಕ್ರಮ ಸಂಬಂಧಗಳು ಕೊಲೆಗೆ ಮುಖ್ಯ ಕಾರಣ. ಹಿಂಸೆಯನ್ನು ಸಾಮಾನ್ಯಗೊಳಿಸುವ ಸಿನಿಮಾ, ಒಟಿಟಿ ಮತ್ತು ಸುದ್ದಿಗಳು ಅಸಹಿಷ್ಣುತೆ ಹೆಚ್ಚಿಸುತ್ತಿವೆ ಎಂದು NIMHANS ನಂತಹ ಸಂಸ್ಥೆಗಳ ತಜ್ಞರು ಹೇಳುತ್ತಾರೆ. ಸಣ್ಣ ದುಃಖ, ಕೋಪವನ್ನು ನಿರ್ವಹಣೆ ಮಾಡಲಾಗದೇ ಕೋಪದ ಕೈಗೆ ಬುದ್ದಿ ಕೊಟ್ಟು, ಕೊಲೆ ಮಾಡುವ ಉದ್ದೇಶವಿಲ್ಲದಿದ್ದರೂ ಕೆಲವು ಘಟನೆಗಳು ನಡೆದು ಹೋಗುತ್ತವೆ ಎಂದು ಮನೋ ವೈದ್ಯರು ಹೇಳುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಇತ್ತೀಚೆಗೆ ಬೆಂಗಳೂರಿನ ಯುವತಿ ಮಾಡಿದ ತ್ರಿವಳಿ ಕೊಲೆ ಪ್ರಕರಣ. ಅಮ್ಮನ ಅತಿಯಾದ ಕಟ್ಟುನಿಟ್ಟಿನ ನಿಯಮ, ಹಿಡಿತದಿಂದ ಬೇಸತ್ತ ಮಗಳು ತಾನು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ ಅಪಾರ್ಟ್ಮೆಂಟ್ಗೆ ಕರೆಸಿಕೊಂಡು ಅಮ್ಮನನ್ನು ಗೆಳೆಯನ ಜೊತೆಗೂಡಿ ಕೊಲೆ ಮಾಡಿ ಮೃತದೇಹವನ್ನು ದೂರದಲ್ಲಿ ಎಸೆದು ಬರುವ ಯೋಜನೆ ರೂಪಿಸಿದ್ದಳು. ಆದರೆ, ತಾಯಿ ಫೋನ್ ಕರೆ ಸ್ವೀಕರಿಸದ ಕಾರಣ ಯುವತಿಯ ತಂದೆ ಮತ್ತು ತಂಗಿ ಅಪಾರ್ಟ್ ಮೆಂಟ್ಗೆ ಬಂದಿದ್ದರು. ಒಂದು ಕೊಲೆಯನ್ನು ಮುಚ್ಚಲು ಮತ್ತೆರಡು ಕೊಲೆ ಮಾಡುವ ದುಡುಕಿನ ನಿರ್ಧಾರಕ್ಕೆ ಆ ಯುವತಿ ಬಂದಿದ್ದಳು. ಹೀಗೆ ತಾಯಿಯ ಕಾಳಜಿಯನ್ನು ಅಪಾರ್ಥ ಮಾಡಿಕೊಂಡು ತನ್ನ ಸ್ವಾತಂತ್ರ್ಯಕ್ಕೆ ತಾಯಿ ಅಡ್ಡಿಯಾಗಿದ್ದಾಳೆ ಎಂದು ಭಾವಿಸಿ ಮನಸ್ಸಿನ ತುಂಬ ದ್ವೇಷ ತುಂಬಿಕೊಂಡಿದ್ದ ಯುವತಿ ಕೊಲೆಯ ನಿರ್ಧಾರಕ್ಕೆ ಬಂದಿದ್ದಾಳೆ. ಅದು ಮೂರು ಕೊಲೆಯಲ್ಲಿ ಕೊನೆಗೊಂಡಿದೆ. ಆಕೆಯ ಬದುಕೂ ಅಂತ್ಯಗೊಂಡಿದೆ. ಆದರೆ, ಕೊಲೆಯ ಮುಂದಿನ ಪರಿಣಾಮದ ಬಗ್ಗೆ ಯೋಚಿಸುವ ಮನಸ್ಥಿತಿ, ವಿವೇಚನೆ ಕಳೆದುಕೊಂಡ ಬೆಳವಣಿಗೆ ಆಕೆಯ ವೈಯಕ್ತಿಕ ಸಮಸ್ಯೆ ಎಂದು ಲಘುವಾಗಿ ಪರಿಗಣಿಸುವಂತಿಲ್ಲ. ಈಗೋ ಸಮಸ್ಯೆ, ಸಣ್ಣಪುಟ್ಟ ಮನಸ್ತಾಪವನ್ನು ಕೊಲೆಯಲ್ಲಿ ನಿವಾರಿಸಿಕೊಳ್ಳಬಹುದು ಎಂಬ ಹುಂಬ ಧೈರ್ಯ ಕೊಡುವ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಿದೆ. ತಂದೆ ತಾಯಿಯ ಸಂಪರ್ಕ ತೊರೆದು ದೂರ ಹೋಗಿ ಬದುಕಬಹುದಾದ ದಾರಿ ಇದ್ದರೂ ಆಕೆ ಕೊಲೆಯಂತಹ ಅಪಾಯಕಾರಿ ಮಾರ್ಗ ಹಿಡಿಯಲು ಪರಿಸರದ ಪ್ರಭಾವವೂ ಇದೆ. ಸಿನಿಮಾ, ವೆಬ್ ಸೀರೀಸ್ ನಂತಹ ಕ್ರೈಮ್ ಅನ್ನು ಎಂಜಾಯ್ ಮಾಡುವಂತಹ ವಸ್ತು ವಿಷಯಗಳು ಯುವ ಮನಸ್ಸುಗಳನ್ನು ತಲ್ಲಣಗೊಳಿಸುವ ಬದಲು ಆ ಸಂದರ್ಭವನ್ನು ತಂದುಕೊಳ್ಳುವತ್ತ ಹೊರಳುತ್ತಿದೆ ಎಂಬುದನ್ನು ಸಮಾಜ, ಮನರಂಜನಾ ಕ್ಷೇತ್ರ, ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು.




