ಸ್ತ್ರೀಶಕ್ತಿ ಸಂಘಗಳ ಮೂಲಕ ಪಡೆದುಕೊಂಡಿದ್ದ ಸಾಲವನ್ನು ಮರುಪಾವತಿ ಮಾಡುವಂತೆ ನೋಟೀಸ್ ನೋಡಲು ತೆರಳಿದ್ದ ಅಧಿಕಾರಿಗಳನ್ನು ಮಹಿಳೆಯರು ತರಾಟೆಗೆ ತೆಗೆಡುಕೊಂಡು, ಸಾಲ ಮನ್ನಾ ಮಾಡಬೇಕೆಂದು ವಾಗ್ವಾದ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ವಟ್ರಕುಂಟೆ ಗ್ರಾಮಕ್ಕೆ ಭೇಟಿ ನೀಡಿದ್ದ ಡಿಡಿಸಿ ಬ್ಯಾಂಕ್ ಅಧಿಕಾರಿ ವೆಂಕಟೇಶ್, ಸ್ರ್ರೀಶಕ್ತಿ ಸಂಘಗಳ ಅಡಿಯಲ್ಲಿ ತೆಗೆದುಕೊಂಡಿರುವ ಸಾಲವನ್ನು ಮರುಪಾವತಿ ಮಾಡಬೇಕೆಂದು ಮಹಿಳೆಯರಿಗೆ ತಿಳಿಸಿದ್ದಾರೆ. ಈ ವೇಳೆ, ಸಿಟ್ಟಾದ ಮಹಿಳೆಯರು, “ಚುನಾವಣಾ ಪೂರ್ವದಲ್ಲಿ ನಡೆದ ಕಾಂಗ್ರೆಸ್ ಪ್ರಜಾಯಾತ್ರೆ ಸಮಾವೇಶದಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಮನ್ನಾಮಾಡುತ್ತೇವೆಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಾಲವನ್ನು ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತೇವೆಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಸಾಲ ಮರುಪಾವತಿ ಮಾಡುವುದಿಲ್ಲ. ಸಾಲ ಮರುಪಾವತಿಗೆ ಅಧಿಕಾರಿಗಳು ನಮ್ಮೂರಿಗೆ ಬರಬಾರದು” ಎಂದು ಮಹಿಳೆಯರು ಗುಡುಗಿದ್ದಾರೆ. ಅಧಿಕಾರಿಗಳು ಎಷ್ಟೇ ಮನವೊಲಿಸಲು ಯತ್ನಿಸಿದರೂ ಮಹಿಳೆಯರು ಸಾಲ ಮನ್ನಾ ಮಾಡಬೇಕೆಂದು ಪಟ್ಟು ಹಿಡಿದ್ದಾರೆ.