ನಾನು ಹಿರೇಬಗನಾಳ ಭೇಟಿ ಮಾಡಿ ಜನರನ್ನು ಮಾತನಾಡಿಸಿದಾಗ ಅವರು, ʼತಮಗೆ ಬಂದ ಜೀವನದ ಅಂತ್ಯ ಕಾಲವಾಗಿದೆʼ ಎಂದು ಕಣ್ಣೀರಿಟ್ಟು, ಮಹಿಳೆಯರು ಗೋಳು ತೋಡಿಕೊಂಡಾಗ ನನಗೂ ಕಣ್ಣೀರು ಬಂದಿತು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಮನನೊಂದು ಮಾತನಾಡಿದರು.
ಬಲ್ಡೋಟ ವಿರೋಧಿ ಹೋರಾಟದ ವೇದಿಕೆಗೆ ಬೆಂಬಲ ನೀಡಲು ಕೊಪ್ಪಳಕ್ಕೆ ಆಗಮಿಸಿದ ಅವರು ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿ, “ಈ ಪ್ರದೇಶಗಳಲ್ಲಿ ತಲೆಯೆತ್ತಿರುವ ಕಾರ್ಖಾನೆಗಳು ಇಲ್ಲಿನ ಸಮಗ್ರ ಅಭಿವೃದ್ಧಿಗೆ ವಿರುದ್ಧವಾಗಿವೆ. ಕಾರ್ಖಾನೆ ಬಿಡುಗಡೆಗೊಳಿಸುವ ತ್ಯಾಜ್ಯ ಮತ್ತು ಹಾರು ಬೂದಿಯಿಂದ ಗಂಭೀರ ಸ್ವರೂಪದ ಕಾಯಿಲೆಗಳು ಬಾಧಿಸುವಾಗಲೂ ಇಲ್ಲಿನ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಜನರ ಬಗ್ಗೆ ಅನುಕಂಪವಿಲ್ಲ. ಹೇಗಾದರೂ ಮಾಡಿ ತಮ್ಮ ಸೇವಾ ಅವಧಿ ಮುಗಿದರಷ್ಟೆ ಸಾಕು ಎನ್ನುವಂತೆ ನಡೆದುಕೊಳ್ಳುತ್ತಾರೆ. ಇಂತಹ ಮನಸ್ಥಿತಿ ಇರುವವರಿಂದ ಇನ್ನೆಂಥ ಸೇವೆ ನಿರೀಕ್ಷೆ ಮಾಡಲು ಸಾಧ್ಯ? ಬಸಾಪುರ ಕೆರೆ 44.35 ಎಕರೆ ವಿಸ್ತೀರ್ಣ ಇದ್ದು, ಇದು ಕೆರೆಯೇ ಅಲ್ಲ ಎನ್ನವ ಕಥೆ ಕಟ್ಟಿದ ಅಧಿಕಾರಿಗಳ ಮೇಲೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು” ಎಂದರು.
ಪರಿಸರ ಇಲಾಖೆ ಅಧ್ಯಕ್ಷ ಎಂ ಪಿ ನರೇಂದ್ರಸ್ವಾಮಿಯವರಿಗೆ ಫೋನ್ ಕರೆ ಮಾಡಿ ಮಾತನಾಡಿದ ದರ್ಶನ್, “ಹಿರೇಬಗನಾಳ ಸುತ್ತಲಿನ ಯಾವುದೇ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಇಲ್ಲಿ ನಡೆಸಬಾರದು. ಇಲ್ಲಿರುವ ಜನರ ಜೀವ, ಆರೋಗ್ಯಕ್ಕಿಂತ ಯಾವುದೂ ದೊಡ್ಡದಲ್ಲವೆಂದು ತಾಕೀತು ಮಾಡಿದ್ದೇನೆ” ಎಂದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ಕೆಲವು ವಿವೇಕವಿಲ್ಲದ ರಾಜಕಾರಣಿಗಳು ಕಾರ್ಖಾನೆ ನಿಷೇಧದ ಬದಲಾಗಿ ಹಳ್ಳಿಗಳನ್ನು ಸ್ಥಳಾಂತರ ಮಾಡಬೇಕೆಂದು ಹೇಳುತ್ತಾರೆ. ಅವರು ಮೊದಲು ತಮ್ಮ ಮನೆಯನ್ನು ತೊರೆದು ಗೊತ್ತುಗುರಿ ಇರದೆಡೆ ಹೋಗಿ ಜೀವನ ಕಟ್ಟಿಕೊಳ್ಳಲಿ. ಮೂಲನಿವಾಸ ಬಿಟ್ಟು ಹೋಗುವುದು ಅಷ್ಟೊಂದು ಸುಲಭದ ಕೆಲಸವೇ? ಈ ಹೋರಾಟ ಮತ್ತೊಂದು ದೇವನಹಳ್ಳಿ ಹೋರಾಟವಾಗಿ ಗೆಲ್ಲುತ್ತದೆ. ಹೋರಾಟದ ಗೆಲುವು ಅಂದರೆ ಜೀವದ ಉಳಿವು, ಬದುಕಿನ ಉಳಿವು” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಚಾಮರಸ ಮಾಲಿ ಪಾಟೀಲ, ಮಲ್ಲಿಕಾರ್ಜುನ ಸತ್ಯಂಪೇಟೆ, ಎಂ ಎಲ್ ಕೆ ನಾಯ್ಡು ಮಾತನಾಡಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಮಲ್ಲಿಕಾರ್ಜುನ ಬಿ ಗೋನಾಳ, ಮಂಜುನಾಥ ಜಿ ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಬಿ ಜಿ ಕರಿಗಾರ, ಗಣೆಶರೆಡ್ಡಿ ಕನಕಗಿರಿ, ಶರಣಷ್ಪ ಕುರುಬರು, ವಜೀರಸಾಬ ತಳಕಲ್, ಈರಪ್ಪ ಗುಳಗಣ್ಣವರ, ಗಿರಿಯಪ್ಪ ಗುಳಗಣ್ಣವರ, ಬಸಪ್ಪ ಮಂಡಲಗೇರಿ, ಚನ್ನವೀರಯ್ಯ ಹಿರೇಮಠ, ರಮೇಶ ಡಂಬ್ರಳ್ಳಿ, ಮಂಜುನಾಥ ಮಾಲಿ ಪಾಟೀಲ, ಶಿವನಗೌಡ ವಿ ಬಿ, ಬಸವರಾಜ ಹಳ್ಳಿಕೇರಿ, ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಬಾವಿ, ಮೋಹನ್ ಅಣ್ಮಿಗೇರಿ, ಮಹಾದೇವಪ್ಪ ಮಾವಿನಮಡು, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಹಲಗೇರಿ ಇದ್ದರು.





