ಪಶ್ಚಿಮ ಬಂಗಾಳ: ಮೋದಿಯನ್ನು ‘ಸೋಲಿಲ್ಲದ ಸರದಾರ’ ಮಾಡಿದ ಚುನಾವಣಾ ಆಯೋಗ!

Date:

ಪಶ್ಚಿಮ ಬಂಗಾಳದ ರಾಜಕೀಯ ರಣಾಂಗಣ ಯಾವಾಗಲೂ ಕುತೂಹಲ ಮತ್ತು ಸಂಘರ್ಷಗಳ ಕೇಂದ್ರಬಿಂದು. ಆದರೆ, ಇತ್ತೀಚಿನ ಚುನಾವಣಾ ಫಲಿತಾಂಶಗಳು ಇಡೀ ದೇಶದ ಗಮನ ಸೆಳೆದಿರುವುದು ಕೇವಲ ಅಧಿಕಾರ ಬದಲಾವಣೆಯಿಂದಲ್ಲ, ಬದಲಾಗಿ ಆ ಗೆಲುವಿನ ಹಿಂದೆ ಅಡಗಿರುವ ‘ಕುತಂತ್ರ’ ಮತ್ತು ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆಯಿಂದ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC)ಯ ಭದ್ರಕೋಟೆಯನ್ನು ಬಿಜೆಪಿ ಭೇದಿಸಿದ ರೀತಿಗೆ ಹಲವು ಅನುಮಾನಗಳ ನೆರಳು ಬಿದ್ದಿದೆ. ಮತಗಳ ಚೌರ್ಯದಿಂದ ಹಿಡಿದು ಜನರ ಪೌರತ್ವ ಕಸಿಯುವವರೆಗೆ ನಡೆದಿದೆ ಎನ್ನಲಾದ ಬೆಳವಣಿಗೆಗಳು ಪ್ರಜಾಪ್ರಭುತ್ವದ ಆಶಯಗಳನ್ನೇ ಪ್ರಶ್ನಿಸುವಂತೆ ಮಾಡಿವೆ.

- Advertisement -

ವೋಟ್ ಚೋರಿ ಮತ್ತು ಎಸ್‌ಐಆರ್ (SIR) ವಿವಾದ :-

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ಹಿಂದೆ ಅತ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿರುವುದು ‘ಎಸ್‌ಐಆರ್’ (SIR) ಪ್ರಕ್ರಿಯೆ. ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರು ಬಿಚ್ಚಿಟ್ಟಿರುವ ಅಂಕಿಅಂಶಗಳು ಬೆಚ್ಚಿಬೀಳಿಸುವಂತಿವೆ. ಅವರ ಪ್ರಕಾರ, ಎಸ್‌ಐಆರ್ ಹೆಸರಿನಲ್ಲಿ ಸುಮಾರು 27 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ತೆಗೆದುಹಾಕಲಾಗಿದೆ. ಇದು ಒಟ್ಟು ಮತದಾರರ ಸುಮಾರು 4.3% ರಷ್ಟರ ಭಾಗವಾಗಿದೆ. ಅಚ್ಚರಿಯ ವಿಷಯವೆಂದರೆ, ಬಿಜೆಪಿ ಮತ್ತು ಟಿಎಂಸಿ ನಡುವಿನ ಮತ ಹಂಚಿಕೆಯ ವ್ಯತ್ಯಾಸ (Vote Share Gap) ಕೇವಲ 4.5% ಮಾತ್ರ ಇರುವುದು.

ಯಾವ ಕ್ಷೇತ್ರಗಳಲ್ಲಿ 5 ಸಾವಿರದಿಂದ 25 ಸಾವಿರದವರೆಗೆ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆಯೋ, ಅಂತಹ ಕ್ಷೇತ್ರಗಳಲ್ಲೇ ಬಿಜೆಪಿ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಿದೆ. ಇದು ಕೇವಲ ಕಾಕತಾಳೀಯವಾಗಿರಲು ಸಾಧ್ಯವೇ? ಮತದಾರರ ಪಟ್ಟಿಯಿಂದ ಒಂದು ನಿರ್ದಿಷ್ಟ ಸಮುದಾಯ ಅಥವಾ ಸಿದ್ಧಾಂತದ ಬೆಂಬಲಿಗರನ್ನು ಕೈಬಿಡುವ ಮೂಲಕ ಗೆಲುವಿನ ಹಾದಿಯನ್ನು ಸುಗಮಗೊಳಿಸಲಾಯಿತೇ ಎಂಬ ಪ್ರಶ್ನೆ ಈಗ ಬಲವಾಗಿ ಕೇಳಿಬರುತ್ತಿದೆ. ಅದಕ್ಕೆ ಕಾರಣ ಕೂಡ ಇದೆ. 

Advertisements

ಪಶ್ಚಿಮ ಬಂಗಾಳದಲ್ಲಿ 2011ರಲ್ಲಿ ದಶಕಗಳ ಎಡರಂಗದ ಆಡಳಿತವನ್ನು ಅಂತ್ಯಗೊಳಿಸಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ ಅವರು, 2016 ಮತ್ತು 2021ರ ಚುನಾವಣೆಗಳಲ್ಲೂ ಭರ್ಜರಿ ಜಯ ಸಾಧಿಸಿ ಸತತ ಮೂರು ಬಾರಿ ಮುಖ್ಯಮಂತ್ರಿಯಾದರು. ವಿಶೇಷವೆಂದರೆ, 2016ರಲ್ಲಿ ಕೇವಲ 3 ಸ್ಥಾನ ಗೆದ್ದಿದ್ದ ಬಿಜೆಪಿ, 2021ರ ವೇಳೆಗೆ 77 ಸ್ಥಾನಗಳಿಗೆ ಏರಿಕೆ ಕಂಡು ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಿತು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಕೇವಲ 12 ಸೀಟುಗಳಿಗೆ ಕುಸಿದಿದ್ದ ಬಿಜೆಪಿ, 2026ರ ವಿಧಾನಸಭಾ ಚುನಾವಣೆಯಲ್ಲಿ ದಿಢೀರನೆ 190 ಕ್ಷೇತ್ರಗಳಲ್ಲಿ ಜಯಗಳಿಸಿರುವುದು ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ. ಕೇವಲ ಐದು ವರ್ಷಗಳಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಮಟ್ಟದ ಏರಿಕೆ ಕಾಣಲು ಪಶ್ಚಿಮ ಬಂಗಾಳದಲ್ಲಿ ನಡೆದ ‘ಎಸ್‌ಐಆರ್’ (SIR) ಪ್ರಕ್ರಿಯೆಯೇ ಕಾರಣ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಈ ಪ್ರಕ್ರಿಯೆಯ ಮೂಲಕ ಸುಮಾರು 27 ಲಕ್ಷ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ವಿಶೇಷವಾಗಿ ಕಳೆದ ಬಾರಿ ಟಿಎಂಸಿ ಕಡಿಮೆ ಅಂತರದಿಂದ ಗೆದ್ದಿದ್ದ ಕ್ಷೇತ್ರಗಳನ್ನೇ ಗುರಿಯಾಗಿಸಿ ಅಲ್ಲಿನ ಶೇ. 5 ರಿಂದ ಶೇ. 10 ರಷ್ಟು ಟಿಎಂಸಿ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ 81 ಸ್ಥಾನಗಳನ್ನು ಉಳಿಸಿಕೊಳ್ಳುವ ಮೂಲಕ ಪ್ರಬಲ ಪ್ರತಿರೋಧ ತೋರಿದೆ. 

ಪಶ್ಚಿಮ ಬಂಗಾಳದಲ್ಲಿ ಜಾರಿಯಾದ ಎಸ್‌ಐಆರ್ ಪ್ರಕ್ರಿಯೆಯು ರಾಜ್ಯದ ಮತದಾರರ ಪಟ್ಟಿಯಲ್ಲಿ ಭಾರಿ ಬದಲಾವಣೆ ತಂದಿದ್ದು, ಸುಮಾರು 90 ಲಕ್ಷ (90,62,188) ಹೆಸರುಗಳನ್ನು ಅಳಿಸಿಹಾಕಲಾಗಿದೆ. ಇದು ಒಟ್ಟು ಮತದಾರರ ಸಂಖ್ಯೆಯಲ್ಲಿ ಶೇ. 12 ರಷ್ಟು ದೊಡ್ಡ ಮಟ್ಟದ ಕುಸಿತವಾಗಿದ್ದು, ಚುನಾವಣಾ ಫಲಿತಾಂಶಗಳ ಮೇಲೆ ನೇರ ಪರಿಣಾಮ ಬೀರಿದೆ. ಎಸ್‌ಐಆರ್ ಪ್ರಕ್ರಿಯೆಗಿಂತ ಮೊದಲು 7.66 ಕೋಟಿ ಇದ್ದ ಮತದಾರರ ಸಂಖ್ಯೆಯು ಅಂತಿಮವಾಗಿ 6.75 ಕೋಟಿಗೆ ಇಳಿಕೆಯಾಗಿದೆ. ಗಮನಿಸಬೇಕಾದ ಅಂಶವೆಂದರೆ, ಅಳಿಸಿಹಾಕಲಾದವರಲ್ಲಿ ಶೇ. 63.42 ರಷ್ಟು ಜನರು ಹಿಂದೂಗಳಾಗಿದ್ದರೆ, ಶೇ. 34.32 ರಷ್ಟು ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಬಾಂಗ್ಲಾದೇಶದಿಂದ ಬಂದಿರುವ ಹಿಂದೂ ಮತುವಾ ಸಮುದಾಯದ ಪ್ರಭಾವವಿರುವ ಉತ್ತರ 24 ಪರಗಣ ಮತ್ತು ನಾದಿಯಾ ಜಿಲ್ಲೆಗಳಿಂದಲೇ ಸುಮಾರು 2.42 ಲಕ್ಷ ಹೆಸರುಗಳನ್ನು ತೆಗೆಯಲಾಗಿದೆ. ಒಟ್ಟಾರೆಯಾಗಿ, ಸುಮಾರು 58 ಲಕ್ಷ ಹೆಸರುಗಳನ್ನು ಒಂದು ವರ್ಗದಲ್ಲಿ ಹಾಗೂ ಮತ್ತೊಂದು ಹಂತದಲ್ಲಿ 27 ಲಕ್ಷ ಹೆಸರುಗಳನ್ನು ಅಳಿಸಲಾಗಿದ್ದು, ಈ ಪೈಕಿ ಮುಸ್ಲಿಂ ಮತದಾರರ (ಸುಮಾರು 17 ಲಕ್ಷ) ಸಂಖ್ಯೆ ಗಣನೀಯವಾಗಿದೆ ಎಂದು ಈ ಅಂಕಿಅಂಶಗಳು ವಿವರಿಸುತ್ತವೆ. 

WhatsApp Image 2026 05 05 at 3.54.03 PM

ಅಷ್ಟೇ ಅಲ್ಲ, ಈ ಬಾರಿಯ ಚುನಾವಣಾ ಫಲಿತಾಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದಕ್ಕೂ ಮತ್ತು ಬಿಜೆಪಿಯ ಗೆಲುವಿಗೂ ಒಂದು ಅಚ್ಚರಿಯ ನಂಟಿರುವುದು ಕಂಡುಬರುತ್ತದೆ. ರಾಜ್ಯದಲ್ಲಿ ಜಾರಿಯಾದ ‘SIR’ ಪ್ರಕ್ರಿಯೆಯ ಮೂಲಕ ಸುಮಾರು 90 ಲಕ್ಷ ಅಂದರೆ ಶೇಕಡಾ 12 ರಷ್ಟು ಮತದಾರರನ್ನು ವ್ಯವಸ್ಥಿತವಾಗಿ ಪಟ್ಟಿಯಿಂದ ಹೊರಹಾಕಲಾಗಿದ್ದು, ಇದು ಬಿಜೆಪಿಯ ಹಾದಿಯನ್ನು ಸುಗಮಗೊಳಿಸಿದೆ ಎಂಬ ಗಂಭೀರ ಆರೋಪವಿದೆ. ಅಂಕಿಅಂಶಗಳ ಪ್ರಕಾರ, 25 ಸಾವಿರಕ್ಕೂ ಅಧಿಕ ಮತದಾರರ ಹೆಸರು ಡಿಲೀಟ್ ಆದ 147 ಕ್ಷೇತ್ರಗಳ ಪೈಕಿ ಬಿಜೆಪಿ 87 ಸ್ಥಾನಗಳನ್ನು ಗೆದ್ದುಕೊಂಡಿದೆ. ಹಾಗೆಯೇ, 5 ಸಾವಿರದಿಂದ 25 ಸಾವಿರದವರೆಗೆ ಮತದಾರರನ್ನು ಕೈಬಿಟ್ಟ 133 ಕ್ಷೇತ್ರಗಳಲ್ಲಿ ಬಿಜೆಪಿ 90 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಅಷ್ಟೇ ಅಲ್ಲದೆ, ಕೇವಲ 5 ಸಾವಿರಕ್ಕಿಂತ ಕಡಿಮೆ ಹೆಸರುಗಳನ್ನು ಅಳಿಸಿದ 13 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ನೋಡಿದರೆ ಅಲ್ಪಸಂಖ್ಯಾತ ಮತದಾರರನ್ನು ಗುರಿಯಾಗಿಸಿ ಪಟ್ಟಿಯಿಂದ ಹೊರಹಾಕಿದ ಒಂದು ವ್ಯವಸ್ಥಿತ ಕುತಂತ್ರದ ಫಲ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಾರೆಯಾಗಿ, ಮತದಾರರ ಪಟ್ಟಿಯಲ್ಲಿ ನಡೆದ ಈ ಭಾರಿ ಪ್ರಮಾಣದ ಕಡಿತವೇ ಚುನಾವಣಾ ಸಮೀಕರಣಗಳನ್ನು ಬಿಜೆಪಿಗೆ ಪೂರಕವಾಗಿ ಬದಲಿಸಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 

ಚುನಾವಣಾ ಆಯೋಗದ ಪಾತ್ರ ಮತ್ತು ಪಾರದರ್ಶಕತೆ

ಯಾವುದೇ ಪ್ರಜಾಪ್ರಭುತ್ವದಲ್ಲಿ ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಆದರೆ, ಬಂಗಾಳದ ವಿಷಯದಲ್ಲಿ ಆಯೋಗವು ಬಿಜೆಪಿ ಜೊತೆ ಕೈಜೋಡಿಸಿದೆ ಎಂಬ ಗಂಭೀರ ಆರೋಪಗಳಿವೆ. ಯೋಗೇಂದ್ರ ಯಾದವ್ ಅವರ ವಿಶ್ಲೇಷಣೆಯಂತೆ, ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದು ನಿಜವಾಗಿದ್ದರೂ, ಅವರು ಸೋಲುವ ಹಂತಕ್ಕೆ ಅದು ತಲುಪಿರಲಿಲ್ಲ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆದಿದ್ದರೆ ದೀದಿಯೇ ಮತ್ತೆ ಅಧಿಕಾರಕ್ಕೆ ಬರುತ್ತಿದ್ದರು. ಬಿಜೆಪಿ ಹಾಗೂ ಟಿಎಂಸಿ ನಡುವಿನ ಅಂತರ ಕಡಿಮೆ ಇರ್ತಾ ಇತ್ತು. ಆದರೆ, ಸ್ಟ್ರಾಂಗ್ ರೂಮ್‌ಗಳ ವಿಡಿಯೋಗಳು ಸೋರಿಕೆಯಾದದ್ದು ಮತ್ತು ಇವಿಎಂ ಯಂತ್ರಗಳ ಸುರಕ್ಷತೆಯ ಬಗ್ಗೆ ಎದ್ದಿರುವ ಪ್ರಶ್ನೆಗಳು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಕುಗ್ಗಿಸಿವೆ. ಕೇಂದ್ರ ಸರ್ಕಾರವು ಬಿಜೆಪಿಯೇತರ ರಾಜ್ಯಗಳನ್ನು ಹತ್ತಿಕ್ಕಲು ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ವಾದಕ್ಕೆ ಇದು ಮತ್ತಷ್ಟು ಪುಷ್ಠಿ ನೀಡಿದೆ. ಇನ್ನು ಬಂಗಾಳದಲ್ಲಿ ಬಿಜೆಪಿ ಗೆದ್ದ ಮೇಲೆ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ‘ಗ್ಯಾನೇಶ್ ಕುಮಾರ್’ ಅವರ ಹೆಸರು ಕೇಳಿಬರುತ್ತಿರುವುದು ವಿಪರ್ಯಾಸದ ಸಂಗತಿ. 

ಆರ್ಥಿಕ ದಿಗ್ಬಂಧನ ಮತ್ತು ಅಧಿಕಾರಿಗಳ ನಿಯೋಜನೆ

ಕೇಂದ್ರದ ಬಿಜೆಪಿ ಸರ್ಕಾರವು ಮಮತಾ ಸರ್ಕಾರದ ವಿರುದ್ಧ ಕೇವಲ ಚುನಾವಣಾ ಕಣದಲ್ಲಿ ಮಾತ್ರವಲ್ಲದೆ, ಆಡಳಿತಾತ್ಮಕವಾಗಿಯೂ ಸಮರ ಸಾರಿತ್ತು. ಪಶ್ಚಿಮ ಬಂಗಾಳಕ್ಕೆ ಬರಬೇಕಾದ ಕೇಂದ್ರದ ಅನುದಾನಗಳನ್ನು ತಡೆಹಿಡಿಯುವುದು, ನರೇಗಾ (MGNREGA) ಹಣವನ್ನು ಸರಿಯಾಗಿ ಬಿಡುಗಡೆ ಮಾಡದೆ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಸೃಷ್ಟಿಸುವುದು ಬಿಜೆಪಿಯ ತಂತ್ರಗಾರಿಕೆಯ ಭಾಗವಾಗಿತ್ತು. ಇದರ ಜೊತೆಗೆ ಅಜಯ್ ಪಾಲ್ ಶರ್ಮಾ ಮತ್ತು ಗಂಗಾಧರ್ ಬತ್ತುಲಾ ಅವರಂತಹ ವಿವಾದಿತ ಹಿನ್ನೆಲೆಯ ಅಧಿಕಾರಿಗಳನ್ನು ಬಂಗಾಳಕ್ಕೆ ಕರೆತಂದಿದ್ದರ ಉದ್ದೇಶವೇನು?  ಬಿಜೆಪಿ ಈ ಅಧಿಕಾರಿಗಳನ್ನ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಅಂತಾನೇ ಫೇಮಸ್‌ ಮಾಡಿ, ಇಂತಹವನ್ನ ಬಂಗಾಳಕ್ಕೆ ತಂದಿದ್ದು ಯಾರನ್ನ ಹೆದರಿಸುವ ಸಲುವಾಗಿ?  ಯಾವ ಪ್ರಕ್ರಿಯೆಯನ್ನು ಹಳಿ ತಪ್ಪಿಸಲು ಈ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಅಧಿಕಾರಗಳನ್ನ ಬಳಸಿಕೊಳ್ಳಲಾಯಿತು ಎಂಬುದು ತನಿಖೆಯಾಗಬೇಕಾದ ವಿಷಯ.

4 33

ಒಂದೆಡೆ ಮತಪಟ್ಟಿಯಿಂದ ಹೆಸರುಗಳನ್ನು ತೆಗೆಯುತ್ತಿದ್ದರೆ, ಮತ್ತೊಂದೆಡೆ ಜನರ ಮೂಲ ಪೌರತ್ವವನ್ನು ಕಸಿದುಕೊಳ್ಳುವ ಬೆದರಿಕೆ ಜನರ ಮನಸ್ಸಿನಲ್ಲಿ ಭಯ ಹುಟ್ಟಿಸಿದೆ. ಇದೀಗ ಡಿಲಿಮಿಟೇಷನ್ (ಕ್ಷೇತ್ರ ಪುನರ್ ವಿಂಗಡಣೆ) ಪ್ರಕ್ರಿಯೆಗೆ ಕೈ ಹಾಕುವ ಮೂಲಕ ರಾಜಕೀಯ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ. ಇದು ಕೇವಲ ಚುನಾವಣೆ ಗೆಲ್ಲುವ ತಂತ್ರವಲ್ಲ, ಬದಲಾಗಿ ಒಂದು ರಾಜ್ಯದ ರಾಜಕೀಯ ಅಸ್ಮಿತೆಯನ್ನೇ ಬದಲಿಸುವ ಪ್ರಯತ್ನ. 

ಚುನಾವಣಾ ಫಲಿತಾಂಶದ ನಂತರ ರಾಜ್ಯದಲ್ಲಿ ಶಾಂತಿ ನೆಲೆಸಬೇಕಿತ್ತು. ಆದರೆ, ಬಿಜೆಪಿ ಕಾರ್ಯಕರ್ತರು ಟಿಎಂಸಿ ಕಚೇರಿಗಳ ಮೇಲೆ ದಾಳಿ ಮಾಡುವುದು ಮತ್ತು ಮಮತಾ ಬ್ಯಾನರ್ಜಿ ಅವರ ನಿವಾಸದ ಮುಂದೆ ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗುವ ಮೂಲಕ ಕೆಣಕುತ್ತಿರುವುದು ಕಂಡುಬಂದಿದೆ. ಧಾರ್ಮಿಕ ಘೋಷಣೆಗಳನ್ನು ರಾಜಕೀಯ ಸೇಡಿಗೆ ಬಳಸಿಕೊಳ್ಳುತ್ತಿರುವುದು ವಿಕೃತಿಯ ಪರಾಕಾಷ್ಠೆಯಾಗಿದೆ. ದೀದಿಯ ಈ ಸೋಲು ಜನರ ಇಚ್ಛೆಯಲ್ಲ, ಬದಲಾಗಿ ವ್ಯವಸ್ಥಿತವಾಗಿ ರೂಪಿಸಲಾದ ಸೋಲು ಎಂಬುದು ಸುಳ್ಳಲ್ಲ. 

ಇಲ್ಲಿ ಇನ್ನೊಂದು ವಿಚಾರವನ್ನ ನಾವು ಗಮನಿಸಬೇಕು. ಮೋದಿ ಸರ್ಕಾರವು ಹಠಾತ್ತನೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದು ಮಹಿಳಾ ಮೀಸಲಾತಿ ಬಿಲ್‌ ಮಂಡಿಸಿದ್ದು ಕೇವಲ ಮಹಿಳಾ ಸಬಲೀಕರಣದ ಉದ್ದೇಶಕ್ಕೋ ಅಥವಾ ಪಶ್ಚಿಮ ಬಂಗಾಳದ ಮಹಿಳಾ ಮತದಾರರನ್ನು ಸೆಳೆಯಲು ನಡೆಸಿದ ವ್ಯವಸ್ಥಿತ ರಾಜಕೀಯ ತಂತ್ರವೋ ಎಂಬ ಬಲವಾದ ಪ್ರಶ್ನೆ ಈಗ ಮೂಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಅತಿದೊಡ್ಡ ಶಕ್ತಿಯೇ ಅಲ್ಲಿನ ಮಹಿಳಾ ಮತದಾರರು. ದಶಕಗಳಿಂದ ದೀದಿಯ ಬೆನ್ನಿಗೆ ನಿಂತಿರುವ ಈ ‘ಮಹಿಳಾ ಬ್ಯಾಂಕ್‌’ ಅನ್ನು ಒಡೆಯಲು ಬಿಜೆಪಿ ಈ ಮೀಸಲಾತಿ ಅಸ್ತ್ರವನ್ನು ಪ್ರಯೋಗಿಸಿದಂತಿದೆ. ವರ್ಷಗಳಿಂದ ಧೂಳು ಹಿಡಿಯುತ್ತಿದ್ದ ವಿಧೇಯಕವನ್ನು ಚುನಾವಣೆಗೂ ಮುನ್ನವೇ ಇಷ್ಟು ಅವಸರವಾಗಿ ಜಾರಿಗೆ ತರಲು ಮುಂದಾದದ್ದು ಬಂಗಾಳದ ಮಹಿಳೆಯರನ್ನು ಒಲಿಸಿಕೊಳ್ಳುವ ಒಂದು ನಾಟಕವೇ ಸರಿ ಎಂಬ ಅನುಮಾನಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ. ದೀದಿಯ ಭದ್ರಕೋಟೆಯನ್ನು ಭೇದಿಸಲು ಇಂತಹ ಭಾವನಾತ್ಮಕ ಮತ್ತು ಸಾಂವಿಧಾನಿಕ ದಾಳಗಳನ್ನು ಬಿಜೆಪಿ ಬಳಸಿಕೊಂಡಿದೆ ಎನ್ನುವುದು ಈಗ ದೇಶಾದ್ಯಂತ ಚರ್ಚೆಯಾಗುತ್ತಿರುವ ವಿಚಾರ.

ಇನ್ನು ನಮ್ಮ ಪ್ರಧಾನಿಗಳು ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ ಎಂದು ಕೇಳಿದ್ದೇವೆ. ಆದರೆ, ಆ 18 ಗಂಟೆಗಳಲ್ಲಿ ದೇಶದ ಅಭಿವೃದ್ಧಿಗಿಂತ ಹೆಚ್ಚಾಗಿ “ಮುಂದಿನ ಯಾವ ರಾಜ್ಯದಲ್ಲಿ ಸರ್ಕಾರ ಉರುಳಿಸಬೇಕು?”, “ಯಾವ ರಾಜ್ಯದಲ್ಲಿ ಸುಳ್ಳು ಗ್ಯಾರೆಂಟಿಗಳನ್ನು ಘೋಷಿಸಬೇಕು?” ಮತ್ತು “ಮತಗಳನ್ನು ಹೇಗೆ ಕೊಳ್ಳೆ ಹೊಡೆಯಬೇಕು?” ಎಂಬ ಪ್ಲಾನ್ ಮಾಡುವುದರಲ್ಲೇ ಕಳೆಯುತ್ತಿದ್ದಾರೆ. ಇನ್ನುಳಿದ ಸಮಯದಲ್ಲಿ ವಿದೇಶ ಪ್ರವಾಸ, ಮೋಜು-ಮಸ್ತಿ ಇರಲೇ ಇರುತ್ತದೆ. ಅಧ್ವಾನಗಳ ನಡುವೆಯೂ 30 ವರ್ಷಗಳ ಕಾಲ ಸರ್ಕಾರ ನಡೆಸುವ ಕನಸು ಕಾಣುವುದು ಇವರ ಆತ್ಮವಿಶ್ವಾಸಕ್ಕೆ ಸಾಕ್ಷಿ. ಇದು ಬರೀ ಮೋದಿ ರಾಜಕೀಯವಲ್ಲ, ಒಂದು ದೀರ್ಘಕಾಲೀನ ಬಿಸಿನೆಸ್ ಮಾಡೆಲ್ ಅಂತಾನೇ ಹೇಳಬಹುದು. 

5 24

ಇವಿಎಂ (EVM) ಎಂಬ ಮಷೀನು ಮತ್ತು ಮೇನ್ ಸ್ಟ್ರೀಮ್ ಮೀಡಿಯಾ ಎಂಬ ಭಜನಾ ಮಂಡಳಿ ಇರುವವರೆಗೆ ಮೋದಿಯವರಿಗೆ ಸೋಲು ಎಂಬುದು ಕೇವಲ ಒಂದು ಪದವಷ್ಟೇ. ಮಾಧ್ಯಮಗಳು ವಾಸ್ತವವನ್ನು ಮುಚ್ಚಿಟ್ಟು, ಸುಳ್ಳನ್ನೇ ಸತ್ಯವೆಂದು ಬಿಂಬಿಸುತ್ತಿದ್ದರೆ, ಮಷೀನುಗಳು ಜನರ ನಾಡಿಮಿಡಿತಕ್ಕಿಂತ ಹೆಚ್ಚಾಗಿ ಆಳುವವರ ಇಚ್ಛಾಶಕ್ತಿಯನ್ನು ಪ್ರತಿಬಿಂಬಿಸುತ್ತಿವೆ. ಪ್ರಜಾಪ್ರಭುತ್ವದ ನಾಲ್ಕು ಅಂಗಗಳೂ ಈಗ ಸ್ವಾಧೀನ ಕಳೆದುಕೊಂಡಿವೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ – ಈ ನಾಲ್ಕೂ ಈಗ ಒಂದೇ ಮಾಲೀಕನ ಅಡಿಯಲ್ಲಿ ಕೆಲಸ ಮಾಡುತ್ತಿರುವಂತೆ ತೋರುತ್ತಿದೆ. ಇದರಿಂದ ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತಿದೆ. ಆದರೆ ಇದನ್ನು ನಾವು ಹೇಳಿದರೆ “ನೀವು ದೇಶ ವಿರೋಧಿ, ಇವರು ದೇಶದ್ರೋಹಿಗಳು” ಎಂಬ ಲೇಬಲ್ ಬೀಳುತ್ತದೆ. ಹೀಗೆ ಟೀಕೆಯನ್ನು ತಡೆಯುವ ವ್ಯವಸ್ಥೆ ಬೆಳೆಯುತ್ತಿರುವುದು.

ಒಟ್ಟಾರೆಯಾಗಿ, ಪಶ್ಚಿಮ ಬಂಗಾಳದ ಈ ಚುನಾವಣಾ ಫಲಿತಾಂಶವು ಪ್ರಜಾಪ್ರಭುತ್ವದ ದೃಷ್ಟಿಯಿಂದ ಆಶಾದಾಯಕವಾಗಿಲ್ಲ. ಒಂದು ವೇಳೆ ಸ್ವಾಯತ್ತ ಸಂಸ್ಥೆಗಳೇ ಒಂದು ಪಕ್ಷದ ಪರವಾಗಿ ಕೆಲಸ ಮಾಡಲು ಶುರು ಮಾಡಿದರೆ, ಸಾಮಾನ್ಯ ಮತದಾರನ ಮತಕ್ಕೆ ಮೌಲ್ಯವೇ ಇರುವುದಿಲ್ಲ. ಎಸ್‌ಐಆರ್ ಪ್ರಕ್ರಿಯೆಯ ಅಕ್ರಮಗಳು ಮತ್ತು ಕೇಂದ್ರದ ಹಸ್ತಕ್ಷೇಪದ ಬಗ್ಗೆ ದೇಶದಾದ್ಯಂತ ದೊಡ್ಡ ಮಟ್ಟದ ಚರ್ಚೆ ನಡೆಯುವ ಅಗತ್ಯವಿದೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಲ್ಲೂ ಇದೇ ಮಾದರಿಯನ್ನು ಅನುಸರಿಸುವ ಅಪಾಯವಿದೆ. ಬಂಗಾಳದ ಈ ಗೆಲುವು ಬಿಜೆಪಿಗೆ ಅಧಿಕಾರ ತಂದಿರಬಹುದು. ಆದರೆ, ಅದು ನ್ಯಾಯ ಸಮ್ಮತವೇ ಎಂಬ ಪ್ರಶ್ನೆ ಇತಿಹಾಸದಲ್ಲಿ ಉಳಿಯಲಿದೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ: ಕರ್ನಾಟಕ ಪರ್ವ 2026ಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಎಂಬ...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...